ಮಾತು ಕೊಡಬೇಡ!

21 ಆಗಸ್ಟ್ 14

ಸಖೀ,
ಮಾತು ಕೊಡಬೇಡ,
ಯತ್ನಿಸುವೆನೆಂದು ಹೇಳಿನೋಡು
ಕೊಟ್ಟ ಮಾತನ್ನು ನಿನ್ನಿಂದ
ಉಳಿಸಿಕೊಳ್ಳಲು ಸಾಧ್ಯ
ಆಗದೇ ಹೋಗಬಹುದು

ನಿನ್ನ ಪ್ರತಿಯೊಂದು ಯತ್ನವು
ಸಫಲವಾಗಲೂಬಹುದು!


ಎಲ್ಲವೂ ಬೇರೆ ಬೇರೆ!

21 ಆಗಸ್ಟ್ 14

ಸಖೀ,
ನಿನಗೆ ಕೇಳಿಸದಿರುವುದು ಬೇರೆ
ನೀನು ಕೇಳಿಸದಂತಿರುವುದು ಬೇರೆ
ನೀನು ಓದದೇ ಇರುವುದು ಬೇರೆ
ನೀನು ಓದಿರದಂತಿರುವುದು ಬೇರೆ
ನಾನು ಇಲ್ಲಿ ಬರೆಯುವುದೇ ಬೇರೆ
ನೀನು ಅರ್ಥೈಸಿಕೊಳ್ಳುವುದೇ ಬೇರೆ
ನಾನು ನಿನ್ನನ್ನು ಬಳಿಗೆ ಕರೆಯದಿರುವುದು ಬೇರೆ
ನಿನಗೆ ಬರಲಾಗದೇ ಇರಲಾಗದಿರುವುದು ಬೇರೆ!


ಛಲವೇಕೆ?

21 ಆಗಸ್ಟ್ 14

ಸಖೀ,
ನಿನ್ನದೇ ಭ್ರಮಾಲೋಕದಲಿ ಬಂಧಿಯಾಗಿರುವೆ ನೀನು

ಸಿಕ್ಕಸಿಕ್ಕವವನ್ನೆಲ್ಲಾ ತನ್ನತ್ತ ಸೆಳೆಯುತ್ತಲಿರುವೆ ನೀನು
ನೀನು ಅಸುಖಿ, ಅದು ನಿನ್ನ ಜನ್ಮಾಂತರದ ಕರ್ಮಫಲ
ನಿನಗೇಕೆ ಎಲ್ಲರನೂ ದುಃಖದಲಿ ಮುಳುಗಿಸುವ ಛಲ?

 


ನಾನು ಸಾಯುವುದಿಲ್ಲ!

20 ಆಗಸ್ಟ್ 14

ಸಖೀ,
ಈ “ನಾನು” ಎಂದಿಗೂ ಸಾಯುವುದೇ ಇಲ್ಲ
ನನ್ನೊಳಗಿನ ನಾನು ಸಾಯುತ್ತೇನೆಂದರೂ
ನನ್ನವರು ಅದನ್ನು ಸಾಯಲು ಬಿಡುವುದಿಲ್ಲ;

ಅದೆಷ್ಟೋ ಬಾರಿ ನಾನೇ ಅದರ ಕತ್ತನ್ನು
ಹಿಚುಕಿ ಕೊಲೆಗೈಯಲು ಯತ್ನಿಸಿದ್ದೆನಾದರೂ
ನನ್ನವರೇ ಬಂದು ಅದನು ಬದುಕಿಸಿದ್ದಾರಲ್ಲಾ!?


ಅರಿವು!

20 ಆಗಸ್ಟ್ 14

ಸಖೀ,
ಇತ್ತೀಚೆಗೆ ಅದ್ಯಾಕೋ ಅವರ “ಲೈಕ್”ಗಳೇ ಕಾಣುತ್ತಿಲ್ಲವಲ್ಲಾ, ಎಂದು
ಹುಡುಕ ಹೊರಟವನಿಗೆ ಅರಿವಾದದ್ದು ಅವರೆಂದೋ ಹೇಳದೇ ಕೇಳದೇ
ನನ್ನ ಸ್ನೇಹಿತರ ಪಟ್ಟಿಯಿಂದ ತಾನಾಗಿ ಹೊರನಡೆದುಬಿಟ್ಟಿದ್ದಾರೆ ಎಂದು;

ನೇರ ನಿಷ್ಠುರ ಖಡಕ್ ಎಂದು ಹಲವರಿಂದ ಮೆಚ್ಚಿಸಿಕೊಂಡರೂ ಒಂದೊಮ್ಮೆ
ನಮ್ಮ ಮಾತುಗಳಿಂದ ಮನನೊಂದವರು ಮಾತಾಡದೇ ಮೌನವಾಗಿಯೇ
ನಮ್ಮ ಬಾಳಿನಿಂದ ದೂರವಾಗಿಬಿಡುತ್ತಾರೆ ಅನ್ನುವ ಸತ್ಯದ ಅರಿವಾಯ್ತಿಂದು!


ಅತ್ಯಾಚಾರ!

19 ಆಗಸ್ಟ್ 14

ಸಖೀ,
ಕಲಿಯುವ ಮನಸ್ಸು ಉಳ್ಳವರಿಗೆ ಪ್ರತಿ ಹೆಜ್ಜೆಯಲೂ ಪಾಠವಿದೆ
ಕಲಿತು, ಮರೆಯುವವರಿಗೆ ಕಲಿಸಿದರೂ ಪ್ರಯೋಜನ ಏನಿದೆ?
ತನಗೆ ಪಾಠ ಕಲಿಸಿದವರಿಗೇ ಮಾಡಲಾರಂಭಿಸಿದರೆ ಅಪಚಾರ
ಇದ್ದೂ ಸತ್ತಂತೆ, ಸಹಿಸಲಾದೀತೇ ಈ ಮಾನಸಿಕ ಅತ್ಯಾಚಾರ?


ಮೊದಲ ಶ್ರೋತೃವಾಗು!

19 ಆಗಸ್ಟ್ 14

ಸಖೀ,
“ನೀನೆಲ್ಲವ ನನಗೇ ಹೇಳುವುದೇಕೆ?” ಎಂಬ ಪ್ರಶ್ನೆ ಬೇಡ
ನೀನು ನನ್ನ ಪಾಲಿಗೆ ಇಲ್ಲಿ ಸಂವಹನ ಮಾಧ್ಯಮ ನೋಡ
ನನ್ನ ಮನದ ಮಾತುಗಳಿಗೆ ನೀನೇ ಮೊದಲ ಶ್ರೋತೃವಾಗು
ಏಕೆಂದರೆ ನಿನ್ನ ಒಡನಾಟದಲ್ಲಿಯೇ ನನ್ನ ಬೆಳಗೂ ಬೈಗೂ!


ಇದು ಕಲಿಕಾಲ!

18 ಆಗಸ್ಟ್ 14

ಸಖೀ,
ನಡೆಯಲು ಕಲಿಸದವರನ್ನೇ ಬೀಳಿಸುವ ಹಂಬಲ
ನುಡಿಯಲು ಕಲಿಸಿದವರನ್ನೇ ಬೈಯುವ ಹಂಬಲ
ನಗದೇ ಇನ್ನೇನು ಮಾಡಲಿ ಈಗ ಇದು ಕಲಿಕಾಲ
ಅತ್ತೆಗೆ ಒಂದಾದರೆ ಆಕೆಯ ಸೊಸೆಗೊಂದು ಕಾಲ!


ಜೀವನಪಾಠ!

18 ಆಗಸ್ಟ್ 14

ಸಖೀ,
ನಿನ್ನಾಪ್ತರೋರ್ವರ ಮನಕೆ ನನ್ನಿಂದ ಪರೋಕ್ಷವಾಗಿ ನೋವಾಗಿದೆಯೆಂಬ
ನಿನ್ನ ಮಾತಿನಿಂದ, ನಿನ್ನ ಮನಕಾದ ನೋವಿನ ಅರಿವಾಗಿತ್ತು ನನಗಂದು;
ಮರುಮಾತಿಲ್ಲದೇ ನಾನವರ ಕ್ಷಮೆ ಕೇಳಿ ನಿಮ್ಮೀರ್ವರ ಮನಗಳಿಗೆ ಆಗಿದ್ದ
ನೋವನ್ನು ಅಳಿಸಿದ್ದೆ, ಜೀವನಪಾಠ ಕಲಿಸಿದ್ದೆ, ನೆನಪಿದೆಯೇ ನಿನಗಿಂದು?


ಅಗೌರವ ನಿನಗೂ!

18 ಆಗಸ್ಟ್ 14

ಸಖೀ,
ನಿನ್ನ ಆಪ್ತರಿಗೆಲ್ಲಾ
ನಾನೂ ಗೌರವ
ನೀಡಬೇಕೆಂಬ
ನಿನ್ನ ನಿರೀಕ್ಷೆ
ಸರಿಯಾದುದೇ
ಆಗಿದೆ;

ನನ್ನ ಆಪ್ತರಿಗೂ
ನೀನು ಗೌರವ
ನೀಡಬೇಕು
ಅನ್ನುವುದನ್ನು

ನೀನು ಇನ್ನೂ
ಕಲಿಯಬೇಕಾಗಿದೆ!