ನಾನೆಲ್ಲರಂತಲ್ಲ!

26 ಜುಲೈ 14

ಸಖೀ,
ಬಾಣವೊಂದು ಬಂದು ನನ್ನೆದೆಯ
ಚುಚ್ಚಿದಾಗ ಕೊಂಚ ನೋವಾಗಿತ್ತು
ಬಿಲ್ಲು ನಿನ್ನ ಕೈಯಲ್ಲಿ ಇರುವುದನ್ನು
ಕಂಡಾಗ ನೋವು ಮಾಯವಾಗಿತ್ತು!


ಸಹಕಾರ ಬೇಡ!

26 ಜುಲೈ 14

ಸಖೀ,
ನಾನು ಗಳಿಸಿದುದನ್ನು
ನಿನಗೂ ಹಂಚುವೆ ನೀ
ಬೇಸರಪಡಬೇಕಾಗಿಲ್ಲ;

ಕಳೆದುಕೊಳ್ಳಬೇಕಾದರೆ
ನಾನೇ ಕಳೆದುಕೊಳ್ಳುವೆ
ನಿನ್ನ ಸಹಕಾರ ಬೇಕಿಲ್ಲ!


ಎಚ್ಚರವಿರಲಿ!

26 ಜುಲೈ 14

ಸಖೀ,
ನೀನು ನನ್ನವಳು ಎಂಬ
ಒಂದೇ ಒಂದು ಕಾರಣ
ನಿನ್ನೆಲ್ಲಾ ನಡತೆಗಳಿಗೆ
ಜವಾಬ್ದಾರನನ್ನಾಗಿ
ಮಾಡಬಹುದು ನನ್ನನ್ನೂ!

ಇದನ್ನು ಅರಿತುಕೊಂಡು
ಸುಧಾರಿಸಿಕೊಂಡೆಯಾದರೆ
ಗೌರವಿಸುವರು ಮಂದಿ
ನನ್ನಂತೆಯೇ ನಿನ್ನನ್ನೂ!


ಕರ್ಮಫಲ!

26 ಜುಲೈ 14

ಸಖೀ,
ತಮ್ಮ ಮಾತಾಪಿತರ
ಹಿರಿಯರ ಮಾತುಗಳಿಗೆ
ಕಿವಿಗೊಟ್ಟು ತಪ್ಪುಗಳನ್ನು
ತಿದ್ದಿಕೊಳ್ಳದ ಮಕ್ಕಳಿಗೆ
ನೆರೆಹೊರೆಯವರು ಕರೆದು
ಕಿವಿಹಿಂಡುವರಂತೆ;
ಅದನ್ನೆಲ್ಲಾ ಕಂಡು
ಕೊರಗುವುದು
ಮಕ್ಕಳ ಮಾತಾಪಿತರ
ಕರ್ಮಫಲವಂತೆ!


ನಾನು ಸರಿ, ನೀನು ತಪ್ಪು!

26 ಜುಲೈ 14

ಸಖೀ,
ನಾನು ಏನು ಮಾಡಿದರೂ ನೀನು ಅದನು ಒಪ್ಪು
ನೀನು ಏನು ಮಾಡಿದರೂ ನೋಡು ಅದೆಲ್ಲಾ ತಪ್ಪು
ಇದು ಇಂದು ನಿನ್ನೆಯದಲ್ಲ ಅನಾದಿಕಾಲದ ನಿಯಮ
ನಿನ್ನನ್ನು ಒಪ್ಪುವುದಕ್ಕೆ ನನಗಿಲ್ಲವೇ ಇಲ್ಲ ಸಂಯಮ;

ಇಲ್ಲಿ ನೀನು ನಾನು ಅನ್ನುವುದು ಬರೀ ಸೂಚಕ ಅಷ್ಟೇ
ಸ್ಥಾನಪಲ್ಲಟವಾದರೆ ನಾನೆಂದೇನು ಇಲ್ಲಿ ನೀನೂ ಅಷ್ಟೇ
ನೀನು ನನ್ನ ತಪ್ಪುಗಳನ್ನೆಲ್ಲಾ ಒಪ್ಪಿ ನಿನ್ನವುಗಳನ್ನು ನಾನು
ಸದಾಕಾಲ ನಾವು ತಪ್ಪುಗಳನ್ನೇ ಮಾಡುತ್ತಿರೋಣವೇನು?


ಪ್ರಶ್ನೆ ಬೇಡ!

26 ಜುಲೈ 14

ಸಖೀ,
ಪ್ರೀತಿ ಹುಟ್ಟುವಾಗ ನಮ್ಮಲ್ಲಿ ಯಾರೂ ಪ್ರಶ್ನೆ ಕೇಳುವುದಿಲ್ಲ
ಸಾಯುವಾಗಲೂ ನಾವು ಯಾರೂ ಪ್ರಶ್ನೆ ಕೇಳಬೇಕಾಗಿಲ್ಲ

ಜನ್ಮ ನೀಡಿ, ಪೋಷಿಸಿ ಅಗಲುವವರ ಬಗ್ಗೆ ಪ್ರಶ್ನೆಯೇ ಇಲ್ಲ
ಪ್ರೀತಿ ಹುಟ್ಟಿಸಿ, ಪೋಷಿಸಿ, ದೂರವಾದರೂ ಪ್ರಶ್ನೆ ಬೇಕಿಲ್ಲ!


ಪ್ರೀತಿಯನಲ್ಲ!

26 ಜುಲೈ 14

ಸಖೀ,
ಪ್ರೀತಿಯ ಆಟವಾಡಿ,
ನಾಟಕವಾಡಿ,
ಪೈಪೋಟಿಯಲ್ಲಿ
ಇತರರನ್ನು
ಸೋಲಿಸಲು
ಯತ್ನಿಸುವವರಿಗೆ,

ಗೆಲುವನ್ನು
ಧಾರೆ ಎರೆದು
ನೀಡಿಬಿಡಬೇಕು,
ಪ್ರೀತಿಯನ್ನಲ್ಲಾ,
ಪ್ರೀತಿಯನ್ನು
ಎಂದಿಗೂ ಅಲ್ಲ!


ಅರಿವು ಮೂಡಿತು!

26 ಜುಲೈ 14

ಸಖೀ,
ಆಣೆಯ ಮೇಲೆ ಆಣೆ ಮಾತುಗಳೇ ಆಗ
ಆ ಆಣೆ ಮಾತುಗಳ ನೆನಪೇ ಇಲ್ಲ ಈಗ;

ನಂಬಿಕೆ ಇರದಾಗ ಆಣೆಗಳದೇ ಆಸರೆ
ಆಗಬೇಕಿತ್ತು ಆಗ ನಾನು ನಿನ್ನ ಕೈಸೆರೆ;

ನಾ ನಿನ್ನ ಗುಲಾಮನಾಗಲಿಲ್ಲ ಕೊನೆಗೂ
ನನ್ನತನವನ್ನು ಅಳಿಸಲಾಗಲಿಲ್ಲ ನಿನಗೂ;

ಪೂರ್ತಿ ಅಳಿಯುವ ಮುನ್ನರಿವು ಮೂಡಿತು
ನನ್ನ ಬಾಳಿಗೆ ಹೊಸ ಅರ್ಥ ದೊರೆಯಿತು!


ದಕ್ಕಿಹುದು ಯೋಗ್ಯತೆಗೂ ಮೀರಿ!

26 ಜುಲೈ 14

ಸಖೀ,
ಅಸ್ಪಷ್ಟ ಹಾದಿಯಲಿ ಸದಾಕಾಲ ಏಳುಬೀಳಿನ ಪಯಣ
ಆತ್ಮಬಲ ಜೊತೆಗೆ ಮಾತಾಪಿತರನುಗ್ರಹವೇ ಪ್ರಧಾನ
ದಕ್ಕಿರುವುದು ಅಪಾರ ನನ್ನ ಯೋಗ್ಯತೆಗೂ ಮೀರಿ ಇಲ್ಲಿ
ಪ್ರತಿಕ್ಷಣವೂ ವಂದನೆಯದಕೆ ಭಗವಂತನ ಸನ್ನಿಧಿಯಲ್ಲಿ

ವರುಷಗಳಿಲ್ಲಿ ಕೂಡುತ್ತಲಿದ್ದರೂ ಒಳಗಿನ ಶಿಶು ಜೀವಂತ
ಹಾಸ್ಯವೇ ಮುಖ್ಯ ಆಹಾರ ಮನಕೆ ನಗುವು ಸದಾಮೃತ
ಚಿಕ್ಕಚಿಕ್ಕ ಸಂತಸವನ್ನೂ ಮನಪೂರ್ತಿ ಸವಿಯುವೆ ನಾನು
ಸಹೃದಯಿ ಸ್ನೇಹಿತರೇ ನನ್ನಯ ಆಸ್ತಿ ಅನ್ನುವವನು ನಾನು

ಐವತ್ತೆರಡು ಕಳೆದು ಐವತ್ತಮೂರಕ್ಕೆ ಪಾದಾರ್ಪಣೆಯಾಯ್ತು
ಇಂದೇಕೋ ಅಮ್ಮ ಅಪ್ಪಯ್ಯನವರ ನೆನಪು ಬಹಳಷ್ಟಾಯ್ತು
ಮಿಕ್ಕೆಲ್ಲ ನಷ್ಟಕ್ಕಿಂತಲೂ ಮೇಲು ನಮ್ಮ ಮಾತಾಪಿತರಗಲಿಕೆ
ಅವರ ಆಶೀರ್ವಾದಬಲದಿಂದ ನನ್ನಲ್ಲಿಹುದಿನ್ನೂ ಜೀವಂತಿಕೆ!


ಕನಸು-ಕಲ್ಪನೆ!

26 ಜುಲೈ 14

ಸಖೀ,
ನನ್ನ ಕಲ್ಪನೆಯ ಸಖೀ ನಿನ್ನನ್ನು ಕನಸಲ್ಲಿ
ಕಾಣುವ ಭಾಗ್ಯವಾದರೂ ನನಗೆಲ್ಲಿಹುದು
ನನ್ನ ಎಲ್ಲಾ ಕನಸುಗಳು ನನ್ನ ಕಲ್ಪನೆಗೂ
ಮೀರಿದವು, ಕಲ್ಪನೆ ಕನಸಿಗೂ ಮೀರಿದ್ದು!