ದೂಷಿಸುವರು!

08 ಜೂನ್ 14

 

ಸಖೀ,
ಅಂದು ನಮ್ಮ ಜೊತೆಗೆ ಮಾತನಾಡುತ್ತಿದ್ದವರು
ಇಂದು ನಮ್ಮ ಬಗ್ಗೆಯೇ ಮಾತನಾಡುತ್ತಿರುವರು
ಅಂದು ನಮ್ಮನ್ನೇ ಮೆಚ್ಚಿ ಕೊಂಡಾಡುತ್ತಿದ್ದವರು
ನಮ್ಮನ್ನು ಮೆಚ್ಚುವವರನ್ನಿಂದು ದೂಷಿಸುತ್ತಿಹರು!


ಮೋಹ ಸಲ್ಲ!

08 ಜೂನ್ 14

 

ಸಖೀ,
ನಮ್ಮ ದೇಹದ ಅಂಗವೇ ಆದರೂ, 
ನಮಗೇ ನೋವುಂಟು ಮಾಡುತ್ತಾ, 
ಕೊಳೆತು ಅಸಹನೀಯವೆನಿಸಿದಾಗ, 
ಮುಲಾಜಿಲ್ಲದೇ ಕಿತ್ತೊಗೆಯಬೇಕು;

ಮಧುಮೇಹಕ್ಕೆ ನಮ್ಮ ಅಪ್ಪಯ್ಯನವರ
ಒಂದು ಕಾಲನ್ನು ಬಲಿಕೊಡಬೇಕಾದಾಗ
ನಾನು ಅರಿತುಕೊಂಡ ಜೀವನಸತ್ಯ
ನಮ್ಮದ್ದಲ್ಲದ್ದರ ಮೇಲೆ ಮೋಹವೇಕೆ ಬೇಕು?


ಮರಳಲಾಗದು!

08 ಜೂನ್ 14

 

ಸಖೀ,
ನಾವು ಜೊತೆಜೊತೆಯಾಗಿ ಸಾಗಿ ಬಂದಾಗಿದೆ ಬಾಳಲ್ಲಿ ಬಹು ದೂರ
ಇನ್ನು ಮರಳಲಾಗದು ಮೊದಲ ಹೆಜ್ಜೆಯಿಟ್ಟಲ್ಲಿಗೆ ಮನವಾದರೂ ಭಾರ
ಇನ್ನು ಏನಿದ್ದರೂ ಜೊತೆಜೊತೆಗೇ ಮುಂದಡಿಯಿಡುತ್ತಿರಬೇಕು ನಾವು
ನಾಟಕೀಯವಾದರೂ ನಮ್ಮೊಲವ ಕಂಡು ಹಿಂದಡಿಯಿಡಬೇಕು ಸಾವು!


ಕೈ ಜೋಡಿಸೋಣ!

08 ಜೂನ್ 14

ಸಖೀ,
ನಮ್ಮ ಮನದೊಳಗಿನ ಪೂರ್ವಗ್ರಹ ಸಂದೇಹ
ಇತರರಿಗಿಂತ ನಮಗೇ ಮಾಡುತ್ತವೆ ದ್ರೋಹ
ಮಾತು ಮಾತಿಗೂ ಅಳುಕು ಮುಜುಗರ ಒಳಗೆ
ನಿಂತಲ್ಲೇ ಇಳಿದಂತೆ ಭಾಸ ಬಾವಿಯ ಒಳಗೆ;

ಮೂಡಿದನುಮಾನವನು ಪರಿಹರಿಸಿಕೊಳ್ಳಬೇಕು
ಹೆಚ್ಚಿಲ್ಲ ಈ ಜೀವನದ ದಿನಗಳಿನ್ನು ಬರೀ ನಾಲ್ಕು
ಒಣಪ್ರತಿಷ್ಠೆಯ ಬದಿಗೊತ್ತಿ ಮುಂದಡಿಯಿಡೋಣ
ಪೈಪೋಟಿಯನು ಬಿಟ್ಟು ಕೈಗಳ ಜೋಡಿಸೋಣ!