(ಜೂಲಿ ಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ)
ಯಾರಿಗಾದರೂ ಯಾರ ಮೇಲಾದರೂ ಒಲವು
ಮೂಡಿದರೆ ಹೃದಯದೇನಿಹುದು ತಪ್ಪು
ಯಾರಿಗೆ ಯಾವಾಗ ಯಾರ ಮೇಲೆ ಒಲವು
ಮೂಡುವುದೋ ಯಾರಿಗೆ ಗೊತ್ತು
ಈ ಸಮಾಜದ ಕಟ್ಟಳೆಗಳು ಎತ್ತರೆತ್ತರಕ್ಕೆ
ನಿಂತಿರುವ ಅಡ್ಡಗೋಡೆಗಳಂತಿವೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ
ಪರ್ವತಶ್ರೇಣಿಯ ಮೇಲೆ
ಮೇಘಮಾಲೆಗಳು ಬಾಗುವಂತೆ
ಸಾಗರಮಧ್ಯದಲ್ಲಿ ಅಲೆಗಳು ಮೇಲೇಳುವಂತೆ
ನನ್ನ ಈ ದೃಷ್ಟಿ ಇಲ್ಲಾರದೋ
ಮುಖಾರವಿಂದದ ಮೇಲೆ ನೆಲೆಕಾಣುತ್ತದೆ
ಸಮಾಜದ ಕಟ್ಟಳೆಗಳು ನನ್ನ ಈ
ದೃಷ್ಟಿಯನ್ನು ಅದೆಲ್ಲಿ ತಡೆದು ನಿಲ್ಲಿಸುತ್ತದೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ
ಬಾ ನಿನ್ನ ನೆನಪಲ್ಲಿ ನಾನು
ಎಲ್ಲರನ್ನೂ ಮರೆತುಬಿಡುವೆ
ಜಗವನ್ನು ನಾನು ನಿನ್ನ ಸುಂದರ
ಚಿತ್ರವನ್ನಾಗಿಸಿಬಿಡುವೆ
ಸಾಧ್ಯವಿದ್ದಿದ್ದರೆ ನನ್ನೀ ಹೃದಯವನ್ನೇ
ತೆರೆದು ತೋರಿಸಿಬಿಡುತ್ತಿದ್ದೆ
ರಕ್ತದೊಂದಿಗೆ ನನ್ನ ನರನಾಡಿಗಳಲ್ಲಿ
ನಿನ್ನದೇ ಒಲವಿನ ಹರಿವೂ ಇದೆ
ನಿನ್ನ ಹಿಡಿತದಲ್ಲಿ ಏನೂ ಇಲ್ಲ, ಒಲವೇ
ಇಲ್ಲಿ ನನ್ನ ಹಿಡಿತದಲ್ಲೂ ಏನೂ ಇಲ್ಲ!