ಈಗ ನಾಲ್ಕಾಣೆ ಕಾಣಸಿಗುತ್ತಿಲ್ಲ. ನಾಲಕ್ಕಾಣೆ ನಾನೆಲ್ಲೂ ಕಾಣೆ.
ಹಿಂದೆ ಆ ನಾಲ್ಕಾಣೆಗೂ ಅದೆಷ್ಟು ಬೆಲೆ ಇತ್ತು.
ನಮ್ಮ ಬಾಲ್ಯದ ದಿನಗಳು.
ರಾತ್ರಿಹೊತ್ತು ಮಲಗಿದಾಗ, ಅಪ್ಪಯ್ಯನವರ ಕಾಲುಗಳು ಮಂಡಿಯಿಂದ ಕೆಳಗೆ ನೋಯುತ್ತಿದ್ದವು.
ಹಾಗಾಗಿ ಅವರ ಕಾಲುಗಳನ್ನು ಒಂದರ್ಧ ಘಂಟೆ ನಮ್ಮ ಕೈಗಳಿಂದ ಒತ್ತುವ ಕೆಲಸ ನಮಗೆ.
ಒಂದು ಕಾಲು ನನಗೆ. ಇನ್ನೊಂದು ಸತ್ಯಕ್ಕನಿಗೆ.
ಕೊನೆಯಲ್ಲಿ ಇಬ್ಬರಿಗೂ ತಲಾ ನಾಲ್ಕಾಣೆ ದಕ್ಕುತ್ತಿತ್ತು.
ಆ ನಾಲ್ಕಾಣೆ ನಮ್ಮ ಅಗತ್ಯಕ್ಕೆ ಹೇಗೆ ಬರುತ್ತಿತ್ತು ಅಂತೀರಾ?
ನಮ್ಮ ಮನೆಯಲ್ಲಿ ಹಿಂದಿನ ತೋಟದಲ್ಲಿ ಮಾವಿನಮರದ ಕೆಳಗೆ ಪಾಯಿಖಾನೆ ಇತ್ತು.
ರಾತ್ರಿ ಹೊತ್ತು ನಮ್ಮಲ್ಲಿ ಯಾರಿಗಾದರೂ ಪಾಯಿಖಾನೆಗೆ ಹೋಗಬೇಕಾದರೆ ಒಬ್ಬರ ಜೊತೆ ಬೇಕಾಗುತ್ತಿತ್ತು.
ಏಕೆಂದರೆ ಅಲ್ಲಿಗೆ ಒಬ್ಬರೇ ಹೋಗಲು ನಮಗೆ ಭಯವಾಗುತ್ತಿತ್ತು. ವಿದ್ಯುತ್ ಸಂಪರ್ಕವೂ ಇಲ್ಲದ ಕಾಲ.
ಆಗ ಯಾರನ್ನಾದರೂ (ಸತ್ಯಕ್ಕನನ್ನೋ, ತಂಗಿಯನ್ನೋ ಅಥವಾ ತಮ್ಮಂದಿರಲ್ಲಿ ಯಾರೋ ಒಬ್ಬನನ್ನೋ) ನಮ್ಮೊಂದಿಗೆ ಕರೆದೊಯ್ಯಲು ಈ ನಾಲ್ಕಾಣೆ ಉಪಯೋಗಕ್ಕೆ ಬರುತ್ತಿತ್ತು.
ಆ ಕಾರ್ಯದಲ್ಲಿ ನಾನೂ ಸಂಪಾದಿಸಿದ್ದೇನೆ ಬಿಡಿ.
ಆಗ ಬಾಲಿಶ ಮನಸ್ಸು.
ಬುದ್ಧಿಯಂತೂ ಇಲ್ಲವೇ ಇಲ್ಲ.
ಹಾಗಾಗಿ ಯಾವುದೇ ರೀತಿಯ ಅರಿವೂ ಇದ್ದಿರಲಿಲ್ಲ.
ಆದ್ದರಿಂದ ನಾಲ್ಕಾಣೆಯ ಚಲಾವಣೆ ನಮಗೆಲ್ಲಾ ಒಂದು ರೀತಿಯ ಮಜಾ ನೀಡುತ್ತಿತ್ತು.
ಈಗ ಯೋಚಿಸಿದರೆ ನಗು ಬರುತ್ತದೆ.
ಆ ಚಿಕ್ಕ ವಯಸ್ಸಿನಲ್ಲೂ ಯಾವುದೇ ಲಾಭವಿಲ್ಲದೇ ಪರಸ್ಪರರ ನೆರವಿಗೆ ಬಾರದವರಾಗಿದ್ದೆವೇ ನಾವು?
ನಿಸ್ವಾರ್ಥವಾಗಿ ಪರಸ್ಪರರಿಗೆ ನೆರವಾಗಬೇಕೆಂಬ ಅರಿವನ್ನು ಆಗ ಯಾಕೆ ಯಾರೂ ನಮ್ಮಲ್ಲಿ ಮೂಡಿಸಲಿಲ್ಲವೋ ಆ ದೇವರಿಗೇ ಗೊತ್ತು.
ಛೇ…!