ಜೊತೆಗಿದ್ದರಷ್ಟೇ!

23 ಏಪ್ರಿಲ್ 14

 
ನಿನ್ನ ಈ
“ಸಿಂಪ್ಲಿಸಿಟಿ”ಯನ್ನು 
ಮೆಚ್ಚುವ ಮಂದಿ 
ನೂರಾರಿರಬಹುದು;

ಅವರು ನನ್ನಂತೆ
ನಿನ್ನ ಜೊತೆಗಿಲ್ಲ,
ನನ್ನ ಕಷ್ಟದರಿವು
ಅವರಿಗೆಂತಿರಬಹುದು!


ಚಂದಿರನೇತಕೆ?

23 ಏಪ್ರಿಲ್ 14

“ಚಂದಿರನೇತಕೆ
ಓಡುವನಮ್ಮ
ಮೋಡಕೆ ಹೆದರಿಹನೇ?”

“ಹೆದರಿಹ
ಕವಿ-ಕವಯಿತ್ರಿಗಳಿಗೆ
ಮೋಡಗಳಿಗಲ್ಲ ಮಗನೇ!”


ತಪ್ಪು-ಒಪ್ಪು!

23 ಏಪ್ರಿಲ್ 14

 

ಸಖೀ,
ತಪ್ಪುಗಳ
ಸಿಂಹಾಸನವನ್ನು
ಏರಿ ಕೂತವರಿಗೆ
ಒಪ್ಪುಗಳ
ಅರಿವಿರುವುದಿಲ್ಲ;


ನೂರು ಮಂದಿ
ಒಪ್ಪಿ ಮೆಚ್ಚಿಹರೆಂದ

ಮಾತ್ರಕ್ಕೆ ತಪ್ಪು
ಒಪ್ಪಾಗಿರುವುದಿಲ್ಲ!


ವಾದವಿಲ್ಲವೆಂದವರೂ!

23 ಏಪ್ರಿಲ್ 14

 

ಸಖೀ,
“ನೀವು ಹೇಳುವುದು ಸರಿ. 
ನಾನು ವಾದ ಮಾಡುವುದಿಲ್ಲ, 
ಅದೂ ನಿಮ್ಮೊಂದಿಗೆ ಇಲ್ಲವೇ ಇಲ್ಲ”

ಎಂದು ನಮ್ಮನ್ನು ಅಟ್ಟಕ್ಕೇರಿಸಿದವರೂ
ನಂತರ ಎಳೆಯುತ್ತಾರೆ ಮಾತುಗಳನ್ನು
ಖಂಡಿಸುತ್ತಾರೆ ನಮ್ಮೆಲ್ಲಾ ಮಾತುಗಳನ್ನು
ಸತತವಾಗಿ ಯತ್ನಿಸುತ್ತಲೇ ಇರುತ್ತಾರೆ
ಸರಿಯೆಂದು ಸಾಧಿಸಲು ತಮ್ಮ ಮಾತುಗಳನ್ನು!


ಸತ್ಸಂಗ!

23 ಏಪ್ರಿಲ್ 14

ಸಖೀ,
ನಮ್ಮ ಅನುಭವಗಳೆಲ್ಲಾ ನಮ್ಮ ಭಾವನೆಗಳಾಗುತ್ತವೆ
ನಮ್ಮ ಭಾವನೆಗಳು ಇಲ್ಲಿ ನಮ್ಮ ಮಾತುಗಳಾಗುತ್ತವೆ
ಭಾವನೆಗಳು ಚೆನ್ನಾಗಿರಲು ಸುಂದರ ಅನುಭವ ಬೇಕು
ಅನುಭವ ಸುಂದರವಾಗಲು ಸಜ್ಜನರ ಸಂಗವಿರಬೇಕು!


ಕಿಚ್ಚು!

23 ಏಪ್ರಿಲ್ 14

 

ಸಖೀ,
ನಾನು ಎಲ್ಲೆಲ್ಲಿ,
ಯಾರ ಯಾರ,
ಬರಹಗಳನ್ನು
ಮೆಚ್ಚಿ ಪ್ರತಿಕ್ರಿಯಿಸಿದ್ದೇನೆ
ಅನ್ನುವುದರ ಲೆಕ್ಕ ನನಗೇ ಇಲ್ಲ; 

ಆದರೂ,
ನೀನು ಚಾಚೂ ತಪ್ಪದೆ
ಅದರ ಪಟ್ಟಿ ಒಪ್ಪಿಸಿ,
ನಿನ್ನ ಹೊಟ್ಟೆಕಿಚ್ಚನ್ನು
ಜಾಹೀರು ಪಡಿಸಿದೆಯಲ್ಲಾ?


ಸುಭಗರೇ!

23 ಏಪ್ರಿಲ್ 14

ಸಖೀ,
ಮಾತನಾಡದೇ ಇದ್ದರೆ,
ನೀನೇನು, ನಾನೇನು,
ನಿಜವಾಗಿಲ್ಲೆಲ್ಲರೂ ಸುಭಗರೇ; 

ಮಾತನಾಡಲು ಬಾಯಿ
ಬಿಟ್ಟಾಗಲೇ ಅರಿವಾಗುವುದು,
ನಾವೂ ಪೂರ್ವಗ್ರಹ ಪೀಡಿತರೇ!


ಇರವು!

23 ಏಪ್ರಿಲ್ 14

 

ಸಖೀ,
ನಮ್ಮ ಇರವಿನ ಕುರುಹು
ಈ ನಮ್ಮ ಉಸಿರು
ಉಸಿರಿನಲ್ಲಿ ತನ್ನ ಇರವ
ತೋರುವನು ಆ ದೇವರು!


ಘಾಸಿ!

23 ಏಪ್ರಿಲ್ 14

 

ಸಖೀ,
ನಮಗೆ ಪ್ರಿಯರಾದವರ
ಅಪೂರ್ಣವಾದ,
ಅನುಮಾನ ಮೂಡಿಸುವ
ಮಾತುಗಳು
ನಮ್ಮ ಮನಗಳನ್ನು
ಘಾಸಿಗೊಳಿಸುವಷ್ಟು
ಪ್ರಿಯರ ಅಗಲಿಕೆಯೂ
ಘಾಸಿಗೊಳಿಸುವುದಿಲ್ಲ!


ಇಷ್ಟವಾದರೂ ಕಷ್ಟ!

18 ಏಪ್ರಿಲ್ 14

ಸಖೀ,
ನನ್ನ ಪ್ರತಿಮಾತನ್ನೂ
ಇಷ್ಟಪಡುವ ನಿನ್ನ ಪರಿ
ನಿಜವಾಗಿಯೂ ನನಗಿಷ್ಟ

ಸದಾ ನೀನು ಇಷ್ಟಪಡುವ
ಮಾತುಗಳನ್ನೇ ಆಡುತ್ತಾ
ಇರುವುದೆನಗೆ ಬಲು ಕಷ್ಟ!