ಲೆಕ್ಕಾಚಾರ ಮುಗಿದಿದೆ ಅಷ್ಟೇ!

23 ಮಾರ್ಚ್ 14

 
ನಮ್ಮ ಬಾಳಿಂದ ದೂರವಾದ ಬಂಧುಗಳ
ನಮ್ಮೊಂದಿಗಿನ ಲೆಕ್ಕಾಚಾರ ಮುಗಿದಿದೆ ಅಷ್ಟೇ
ಸ್ವರ್ಗವಾಸಿಗಳಾದವರದೂ ಅಷ್ಟೇ ಇಲ್ಲಿ
ಬದುಕುಳಿದೂ ದೂರದಲ್ಲಿರುವವರದೂ ಅಷ್ಟೇ;

ಕಾರಣ ಅವರೋ ನಾವೋ ಅನ್ನುವುದು
ಒಮ್ಮೊಮ್ಮೆ ತೀರ ನಗಣ್ಯವೆನಿಸುತ್ತದೆ ನಮಗೆ
ಅವನ ಮೇಲಿನೆಮ್ಮ  ನಂಬಿಕೆ ಅವನನ್ನೇ
ಜವಾಬ್ದಾರನನ್ನಾಗಿಸುತ್ತದೆ ಎಲ್ಲಾ ಘಟನೆಗಳಿಗೆ!


ಒಪ್ಪಿ ಒಪ್ಪಿಸಬಹುದಂತೆ!

23 ಮಾರ್ಚ್ 14

ಮನವೊಂದು ಕುಲುಮೆಯಾಗಿರೆ
ಬುದ್ಧಿ ಭ್ರಮಣೆಯಾದಂತೆ,

ಒಳ್ಳೆಯದೆಮಗೆ ಮೌನವಾಗಿದ್ದರೆ
ಮಾತೆಮ್ಮ ವೈರಿಯಂತೆ,

ವಾತಾವರಣವೆಲ್ಲಾ ಬಿಸಿ ಏರಿದ್ದರೆ
ಮೌನಿಯಾಗಬೇಕಂತೆ,

ವಾತಾವರಣ ತಣಿದು ಬದಲಾದರೆ
ಒಪ್ಪಿ ಒಪ್ಪಿಸಬಹುದಂತೆ!


ಆಕೆಯ ಶಕ್ತಿ!

23 ಮಾರ್ಚ್ 14

ಕರೆಯುವುದಿಲ್ಲ,
ಸದ್ದು ಗದ್ದಲವಿಲ್ಲ,
ಮೆಲ್ಲ ಮೆಲ್ಲನೇರಿ
ಆವರಿಸಿಬಿಡ್ತಾಳೆ;
ನನ್ನ ನನ್ನಿಂದಲೇ
ಕಸಿದುಬಿಡ್ತಾಳೆ,
ಮೈಮರೆಸಿಬಿಡ್ತಾಳೆ;

ಅರಿತೂ ಅರಿತೂ
ಪರವಶನಾಗ್ತೇನೆ;
ನನ್ನನ್ನು ಆಕೆಗೆ
ನಾ ಒಪ್ಪಿಸಿಬಿಡ್ತೇನೆ;

ನಿದ್ರಾರಾಣಿಯ
ಶಕ್ತಿ ಅಂಥಾದ್ದು!


ಯಾರದೋ ಮೇಲಿನ….!

20 ಮಾರ್ಚ್ 14

ಸಖೀ,
ನಾ ಕೋಪಿಸಿಕೊಂಡಾಗ
“ಯಾರದೋ ಮೇಲಿನ
ಕೋಪ ನನ್ನ ಮೇಲ್ಯಾಕೆ?”
ಅನ್ನುವ ನೀನು; 

ನಾನು ಪ್ರೀತಿಸುವಾಗ
“ಅದ್ಯಾರದೋ ಮೇಲಿನ
ಪ್ರೀತಿ ನನ್ನ ಮೇಲ್ಯಾಕೆ?”
ಅಂದದ್ದಿದೆಯೇನು?


ಬೆಳಕು ಹರಿಯುವ ಮೊದಲು…!

20 ಮಾರ್ಚ್ 14

 

ಬೆಳಕು ಹರಿಯುವ ಮುನ್ನ
ಎದ್ದೇಳುವುದು ಚೆನ್ನ
ತಂಪು ಹೊತ್ತಿನಲ್ಲಿ ಒಂದಷ್ಟು
ನಡೆದಾಡುವುದು ಚೆನ್ನ
ಮೌನವಾಗಿ ಮನದೊಂದಿಗೆ
ಮಾತನಾಡಲು ಚೆನ್ನ
ಮನದೊಳಗೆ ಸದ್ವಿಚಾರಗಳ 
ಮನನ ಮಾಡಲು ಚೆನ್ನ
ಉದಯಿಸುವ ರವಿಯನ್ನು
ಸ್ವಾಗತಿಸುವುದು ಚೆನ್ನ
ದಿನವಿಡಿಯ ಹೋರಾಟಕ್ಕೆ
ಸಜ್ಜಾಗುವುದಕೂ ಚೆನ್ನ!


ಆಲಿಸಿದರೆ!

20 ಮಾರ್ಚ್ 14

 

ನೀರವ ರಾತ್ರಿಯಲ್ಲಿ
ಪ್ರೀತಿಯ ಸದ್ದೂ
ಒಮ್ಮೊಮ್ಮೆ
ಕಿವಿ ತುಂಬುತ್ತದೆ;

ಮನದೊಳಗಿನ
ಮಾತೂ ಎದೆ
ಬಡಿತದೊಂದಿಗೆ
ಕೇಳಿಸುತ್ತಿರುತ್ತದೆ!


ಅರಿವೇ ಕನ್ನಡಿ!

20 ಮಾರ್ಚ್ 14

 

ಕನ್ನಡಿಯನು ಕಂಡು ಬೆಚ್ಚಿಬಿದ್ದೆ ತಡಬಡಿಸಿದೆ ನಾ ಗಾಬರಿಯಿಂದ
ನನ್ನನ್ನು ನಾನು ಕಂಡಿರಲೇ ಇಲ್ಲ ಸರಿಯಾಗಿ ಹಲವು ದಿನಗಳಿಂದ;

ನನ್ನನ್ನು ನಾನರಿಯಲು ಯತ್ನಿಸುತ್ತಿದ್ದೆ ಅವರಿವರ ಅನಿಸಿಕೆಗಳಿಂದ
ಅವರಿವರ ಅನಿಸಿಕೆಗಳಲ್ಲೇ ನಾನಿಹೆನೆಂದು ಇದ್ದೆ ನೆಮ್ಮದಿಯಿಂದ:

ನಮ್ಮೊಳಗಿನ ಅರಿವು ಕನ್ನಡಿಯಂತಿದ್ದರಷ್ಟೇ ಈ ಬಾಳಿಗೆ ಆನಂದ
ನಮ್ಮನ್ನು ನಾವು ಅರಿಯುತಲಿರಬೇಕು ನಮ್ಮದಾದ ಅರಿವಿನಿಂದ!


ರಾತ್ರಿಯಾದಾಗ!

20 ಮಾರ್ಚ್ 14

ಕನಸಿನ ಮನೆಗೆ
ಪ್ರಯಾಣ
ನಿದ್ದೆಯ ವಾಹನದಲ್ಲಿ;

ಇಲ್ಲೇ ಇರಲಿ
ಇನ್ನೆಷ್ಟು ಹೊತ್ತು
ನಿಶೆ ಕರೆಯುತಿಹಳಲ್ಲಿ;

ಕರೆಯದೆಲೇ
ಅಪ್ಪಿಕೊಳ್ಳುವುದು
ಬಹುಶಃ ನಿದಿರೆಯನು ಮಾತ್ರ;

ಬೇಡವೆಂದಷ್ಟೂ

ಸೆಳೆಯುವುದು
ಬಹುಶಃ ಮದಿರೆಯದು ಮಾತ್ರ!

 


ನನ್ನ ಪ್ರಾರ್ಥನೆ!

17 ಮಾರ್ಚ್ 14

 

ಸಖೀ,
ಕಣ್ಮುಚ್ಚಿ ಕೂತಲ್ಲೇ ನನ್ನ ದೇವಾಲಯ
ಒಳಗಿನುಸಿರಾಟವೇ ಮಂತ್ರಘೋಷ
ಆನಂದ ಭಾಷ್ಪಗಳಿಂದಲೇ ಅಭಿಷೇಕ
ಧನ್ಯವಾದ ಸಮರ್ಪಣೆಯೇ ಉದ್ದೇಶ;

ನಲವತ್ತು ವರುಷಗಳಿಂದಲೂ ಇದಷ್ಟೇ
ಅನ್ಯ ವಿಧಾನವ ಒಪ್ಪಿದವನಲ್ಲ ನಾನು
ಬದುಕಿದ್ದೇನೆ ಯೋಜನೆಗಳಿಲ್ಲದೇ ಇಲ್ಲಿ
ಎಣಿಸಿದ್ದೆಲ್ಲಾ ದಕ್ಕುತ್ತಲಿದೆ ಸುಖಿ ನಾನು!


ಅಳೆಯುತ್ತಾರಿಲ್ಲಿ!

17 ಮಾರ್ಚ್ 14

 

ಸಖೀ,
ಯಾರೂ ಇಲ್ಲದಾಗ ಸ್ನೇಹಕ್ಕೆ ಸಿಕ್ಕವರೇ ದೇವರು
ದಿನವೂ ಸಂಪರ್ಕಿಸಿ ಗುಣಗಾನ ಮಾಡುತ್ತಿರುವರು
ಮತ್ತೆ ಅಲ್ಲಿನ್ನಾರೋ ಸ್ನೇಹಿತರಾಗಿ ಆತ್ಮೀಯರಾದರೆ
ಅಳೆದು ತುಲನೆಮಾಡಿ ಮೆಲ್ಲ ದೂರ ಮಾಡುತ್ತಾರೆ!