ವ್ಯಕ್ತಿಯ ಚಿಂತನೆ, ಮಾತು ಮತ್ತು ನಡತೆ (ಕೃತಿ) ಇವು ಮೂರೂ ಒಂದೇ ಆಗಿರುವುದು ಬಲು ಅಪರೂಪ.
ಇವು ಮೂರೂ ಒಂದೇ ಆದ್ದಾಗ ಮಾತ್ರ ವ್ಯಕ್ತಿಯ ನಿಜವ್ಯಕ್ತಿತ್ವದ ಪರಿಚಯ ಇತರರಿಗೆ ಆಗುತ್ತದೆ.
ತಮ್ಮ ಚಿಂತನೆ, ಮಾತು ಮತ್ತು ನಡತೆ ಇವು ಮೂರರ ನಡುವೆ ಸಂಬಂಧವೇ ಇಲ್ಲದವರು ಅಧಮರು
ಚಿಂತನೆಯಂತೆ ಮಾತು ಅಥವಾ ಮಾತಿನಂತೆ ನಡತೆ ಇರುವವರು ಮಧ್ಯಮರು.
ಚಿಂತನೆಯಂತೆ, ಮಾತು ಹಾಗೂ ನಡತೆ ಇರುವವರು ಲೋಕದೊಳು ಉತ್ತಮರು.
ಬಹುಶಃ ನಾವೆಲ್ಲರೂ ಅಧಮರಲ್ಲದಿದ್ದರೂ ಮಧ್ಯಮರು ಅನ್ನುವುದನ್ನು ಒಪ್ಪಿಕೊಳ್ಳಬೇಕು.
ಉತ್ತಮರಾಗುವ ಯತ್ನದಲ್ಲಿ ಇರುವವರು, ಅನ್ನಬಹುದೇನೋ ಅಷ್ಟೇ.
*****
ಎಲ್ಲಾ ಬರವಣಿಗೆಗಳೂ ಬರಹಗಾರನ ಚಿಂತನೆಗಳನ್ನೇ ಬಿಂಬಿಸಬೇಕೆಂದೇನಿಲ್ಲ.
ಕೆಲವು ಬರವಣಿಗೆಗಳು ಆತನ ಯೋಚನೆಗಳನ್ನು, ಆಲೋಚನೆಗಳನ್ನು ಮಾತ್ರ ಬಿಂಬಿಸಬಹುದು.
ಚಿಂತನೆಗಳನ್ನು ಬಿಂಬಿಸುವ ಬರವಣಿಗೆಗಳು ವ್ಯಕ್ತಿಯ ಅಂತರ್ಯದ ಪರಿಚಯ ಮಾಡಿಸುತ್ತವೆ.
ಆಲೋಚನೆಗಳನ್ನು ಯೋಚನೆಗಳನ್ನು ಬಿಂಬಿಸುವ ಬರವಣಿಗೆಗಳು ವ್ಯಕ್ತಿಯ ಆ ಕ್ಷಣದ ಮನಸ್ಥಿತಿಯ ಪರಿಚಯ ಮಾಡಿಸುತ್ತವೆ.
*****
ಹತ್ತಾರು ಬರಹಗಾರರ ಬರಹಗಳಲ್ಲಿ ನವರಸಗಳನ್ನು ನಿರೀಕ್ಷಿಸುವುದು, ನೋಡುವುದು ತಪ್ಪಲ್ಲ.
ಕೆಲವರಿಗೆ ಕೆಲವು ರಸಗಳು ಆಪ್ತವೆನಿಸಬಹುದು. ಅದು ತಪ್ಪಲ್ಲ. ಆದರೆ ಬರಹಗಳ ಒಟ್ಟಂದ ಹೇಗಿದೆ ಅನ್ನುವುದು ಮುಖ್ಯವಾಗುತ್ತದೆ.
ಕೇವಲ ಆ ರಸ, ಅಥವಾ ಈ ರಸ ಎಂದು ತಿರಸ್ಕರಿಸುವುದು ಸಲ್ಲ. ಓರ್ವ ಬರಹಗಾರನ ಬರವಣಿಗೆಗಳನ್ನು ಓದುವವನು ಕೇವಲ ಓರ್ವ ಓದುಗನಲ್ಲ.
ವಿಭಿನ್ನ ರಸಗಳನ್ನು ಆಸ್ವಾದಿಸುವ ಓದುಗರು ಇರುತ್ತಾರೆ. ಆರಸ ಜಾಸ್ತಿ ಆಯ್ತು. ಈ ರಸ ಕಡಿಮೆ ಆಯ್ತು ಅನ್ನುವುದು ಪ್ರತಿಕೂಲ ವಿಮರ್ಶೆಯಾದೀತು ಅಥವಾ ಟೀಕೆಯಾದೀತು.
*****