ದೂರು!

01 ಫೆಬ್ರ 14

ಸಖೀ,
ಪ್ರತಿ ಉಸಿರು
ಉಸುರುತಿದೆ
ನಿನ್ನಯ ಹೆಸರು

ನಾನು ದೂರ
ನೀನೇ ಸನಿಹ
ಮನಕೆನ್ನ ದೂರು!


ಕಣ್ಮುಚ್ಚಿದರೆ!

01 ಫೆಬ್ರ 14

 

ಸಖೀ,
ನನ್ನ ಮನದೊಳೀಗ
ನಿನ್ನ ಒಲವಿನ ಬಣ್ಣ
ನಿನ್ನದೇ ಮೂರುತಿ 
ನೀಡುತದೆ ದರುಶನ 
ಮುಚ್ಚಿ ಕೂತರೆ ಸಾಕು
ನಾನು ನನ್ನ ಈ ಕಣ್ಣ!


ಕಲ್ಪನಾಲೋಕದಲ್ಲಿ!

01 ಫೆಬ್ರ 14

 

ಸಖೀ,
ವಾಸ್ತವಲೋಕದಲ್ಲಿ 
ನೂರೊಂದು ಕಟ್ಟುಕಟ್ಟಳೆಗಳು
ಇಲ್ಲಿ ನಾವು ದೂರದೂರವೇ ಸರಿ

ನಮ್ಮ ಕಲ್ಪನಾಲೋಕದಲ್ಲಿ
ಇರದು ತಡೆವ ನೀತಿನಿಯಮಗಳು
ನೀನೇ ಅನ್ನುವೆ ಹೇ ಸ್ವಲ್ಪ ಅತ್ತ ಸರಿ!


ಸ್ವಂತದ್ದಲ್ಲ!

01 ಫೆಬ್ರ 14

 

ಸ್ವಂತದ್ದೇನಿಲ್ಲ
ಅವರಿವರ
ಮಾತುಗಳೇ
ಕೆಲವರ ಆಸ್ತಿ;

ರೂಢಿಸಿಕೊಂಡು
ಇರುವುದಕ್ಕಿಂತ
ಉದ್ಧರಿಸಿದುದೇ
ಇಲ್ಲಿ ಜಾಸ್ತಿ!


ಜಪ ಬೇಡ!

01 ಫೆಬ್ರ 14

 

ಸಖೀ,
ಒಂದು ಅನ್ನದಗುಳು ನನ್ನ
ನೆತ್ತಿಗೇರಿದ್ದು ಏಕೆಂಬರಿವು 
ಇಲ್ಲಾರಿಗೂ ಆಗಲೇ ಇಲ್ಲ;

ನೀನು ಅಲ್ಲಿ ನನ್ನ ಹೆಸರಿನ 
ಜಪದಲ್ಲಿ ಆ ಪರಿಯಾಗಿ 
ಮಗ್ನಳಾಗಿರುವೆಯಲ್ಲಾ?


ಕ್ರಮಸಂಖ್ಯೆ!

01 ಫೆಬ್ರ 14

 

ಸಖೀ,
ದೂರವಾಣಿ ಸಂಖ್ಯೆ
ಬದಲಾದಾಗ ಅದರ
ಸುದ್ದಿಯನ್ನೇನೋ ನೀ
ನೀಡುತ್ತಿರುವೆ ನನಗೆ;

ಸ್ನೇಹಿತರ ಪಟ್ಟಿಯಲಿ
ನನ್ನ ಕ್ರಮಸಂಖ್ಯೆ
ಬದಲಾದ ಸುದ್ದಿಯನೂ
ನೀಡುವೆಯಾ ನನಗೆ?


ಮಗ್ಗಲು ಬದಲಿಸುತ್ತಾ!

01 ಫೆಬ್ರ 14

 

ಅಲ್ಲೆಲ್ಲೋ
ನಿದ್ದೆಯಲಿ
ನನ್ನ ಹೆಸರ
ಕನವರಿಸುತ್ತಾ
ಇರುವೆ ನೀನು;

ನಿದ್ದೆಯಿಲ್ಲದೇ
ಇಲ್ಲಿ ಮಗ್ಗಲು
ಬದಲಿಸುತ್ತಾ
ಇರುವವನು
ನಾನು!


ಅಡುಗೆ ಬೇಡವೇ?

01 ಫೆಬ್ರ 14

“ದಿನವಿಡೀ ಕಣ್ಣಲ್ಲಿ ಕಣ್ಣಿಟ್ಟು ಕುಳಿತೇ ಇರುವಾಸೆ
ಈ ಮನ ಬರಿದಾಗುವಷ್ಟು ಮಾತನಾಡುವಾಸೆ
ಮಾತುಗಳಲ್ಲೇ ಕವಿತೆಗಳನ್ನು ಹೆಣೆಯುವ ಆಸೆ
ಕವಿತೆಗಳಿಂದಲೇ ನಿನ್ನನ್ನು ಸಿಂಗರಿಸುವ ಆಸೆ!”

“ಹಾಗಾದ್ರೆ ಇವತ್ತು ಅಡುಗೆ ಮಾಡೋದ್ ಬ್ಯಾಡ್ವಾ?”


ಅಹಂ!

01 ಫೆಬ್ರ 14

 

ಸಖೀ,
ಪರೋಕ್ಷವಾಗಿ 
ದಿನವೆಲ್ಲ 
ಮಾತನಾಡುವ 
ನಮಗೆ, 
ನೇರನುಡಿಗಾಗಿ
ಪುರುಸೊತ್ತೇ 
ಇರುವುದಿಲ್ಲ;

ನೇರವಾಗಿ
ಮುಖಾಮುಖಿ
ಆದರೆ ಪರೋಕ್ಷ
ಮಾತುಗಳೆಲ್ಲಾ
ಪರಸ್ಪರರಿಗಾಗಿ
ಇರಲಿಲ್ಲ ಎಂಬ
ಭಾವವಲ್ಲಾ?


ಸೂರಿನಡಿಯಲ್ಲಿ!

01 ಫೆಬ್ರ 14

“ಸದಾ ನನ್ನನ್ನು ಸೂರಿ ಸೂರಿ ಅನ್ನುವೆಯಲ್ಲಾ 
ಆದರೂ, ನಾವು ನಮ್ಮದೇ ಸೂರಿನಡಿಯಲ್ಲಿಲ್ಲ”

“ಹೌದು… ನಾವು ನಮ್ಮದೇ ಸೂರಿನಡಿಯಲ್ಲಿಲ್ಲ
ಆದರೆ ನಾನು ನನ್ನ ಸೂರಿಯೊಳಗಿರುವೆನಲ್ಲಾ?”