ಮಾರಾಟಕ್ಕಿವೆ ಕನಸುಗಳು!

19 ಜನ 14

ಮಾರುತ್ತಿದ್ದೇನೆ
ನಾನನ್ನ ಸುಂದರ
ಕನಸುಗಳನ್ನು;

ಶಕ್ತಿಯಿಲ್ಲ ಯುಕ್ತಿಯಿಲ್ಲ
ನನ್ನಲ್ಲಿ ನನಸಾಗಿಸಲು 
ಈ ಕನಸುಗಳನ್ನು;

ಕೊಳ್ಳುವವರಿದ್ದರೆ
ದಯವಿಟ್ಟು ಸರತಿಯ 
ಸಾಲಿನಲ್ಲಿ ಬನ್ನಿ;

ಕನಸುಗಳಿಗೆ ತಕ್ಕ
ರೂಪವನ್ನು ನೀಡಲು 
ತಯಾರಾಗಿ ಬನ್ನಿ;

ಯಾರ ಕನಸಾದರೇನು
ನನಸಾಗಿಸುವುದಕ್ಕೆ?
ಯಾರ ಬಾಳಾದರೇನು
ಹಸನಾಗಿಸುವುದಕ್ಕೆ?


ಬಂಡಾಯ – ಅಧ್ಯಾತ್ಮ!

19 ಜನ 14

 

ಪರದೂಷಣೆಗಾಗಷ್ಟೇ ಸೀಮಿತವಾಗಿರದ, ಆತ್ಮಾನ್ವೇಷಣೆಯ, ಮಾನವಕುಲದ ಹಿತಬಯಸುವ ಬಂಡಾಯ ನಮ್ಮನ್ನು ಅಧ್ಯಾತ್ಮದತ್ತ ಕೊಂಡೊಯ್ಯುವಷ್ಟು ಸುಲಭವಾಗಿ, ಎಲ್ಲವನ್ನೂ ಒಪ್ಪಿಕೊಂಡು ಬಾಳುವ ಮನಸ್ಥಿತಿ ಅಥವಾ ಒಂದು ಸ್ವಾರ್ಥ ಉದ್ದೇಶವನ್ನಿಟ್ಟುಕೊಂಡು ಎಲ್ಲವನ್ನೂ ವಿರೋಧಿಸುವ ಬಂಡಾಯ ಮನಸ್ಥಿತಿ ಕೊಂಡೊಯ್ಯಲಾರದು!


ವಿಷ ತುಂಬುತ್ತವೆ!

19 ಜನ 14

 

ಸಾಹಿತ್ಯ ಕೃತಿಗಳ ಬಗ್ಗೆ, ಪೂರ್ವಗ್ರಹಪೀಡಿತ ವಿಮರ್ಶೆಗಳು, ಚರ್ಚೆಗಳು ಅಥವಾ ಸಂವಾದಗಳು, ಬರಹಗಾರರ ಅಥವಾ ಆ ಬರಹಗಾರರ ಕೋಮುಗಳ ವಿರುದ್ಧ, ಓದುಗರ ಮನಗಳಲ್ಲಿ, ವಿಷ ತುಂಬುವಲ್ಲಿ ಸಹಕಾರಿಯಾಗುತ್ತವೆಯೇ ಹೊರತು ಯಾವುದೇ ಒಬ್ಬ ಬರಹಗಾರನಿಗೆ ಅಥವಾ ಓದುಗನಿಗೆ ಸಹಕಾರಿಯಾಗುವುದೇ ಇಲ್ಲ.

ಈ ಮಾತನ್ನು ಯಾರು ಎಲ್ಲಿ ಯಾವಾಗ ಹೇಳಿದರು ಅನ್ನುವ ಪ್ರಶ್ನೆಯೋ?

ಈ ಮಾತನ್ನು ಇದೀಗಷ್ಟೇ, ಇಲ್ಲೇ, ನಾನೇ ಹೇಳುತ್ತಿರುವುದು.


ವಿರಮಿಸುವ ಮಾತು ಸಾಕು!

18 ಜನ 14

 

ಅವನು: “ನಾನಾಡುವ ಪ್ರತಿ ಮಾತಿಗೂ ಅರ್ಥ ಹತ್ತಾರು”

ಅವಳು: “ಒಂದರ ಅರಿವಾದರೂ ಸಾಕು ಮಂದಿ ಅತ್ತಾರು”

ಅವನು: “ಅಳಿಸುವ ಮಾತೇಕೆ ನಾನಷ್ಟು ಕ್ರೂರಿಯೇ ಹೇಳು”

ಅವಳು: “ಕ್ರೂರಿ ನೀನಲ್ಲ, ನಿನ್ನ ಮಾತಿನ ಧಾಟಿ ನೀ ಕೇಳು”

ಅವನು: “ನಯವಂಚನೆಯ ರಮಿಸುವ ಮಾತು ಏಕೆ ಬೇಕು?”

ಅವಳು: “ರಮಿಸುವವಲ್ಲ, ಕೆರಳದೇ ವಿರಮಿಸುವ ಮಾತು ಸಾಕು”


ದೂರದಲ್ಲಿಲ್ಲ!

18 ಜನ 14

 

ಸಖೀ,
ನೀನು ದೂರವಾಗಿಹೆ
ಎಂಬ ಯಾವ ದೂರೂ
ಈಗ ನನ್ನಲ್ಲಿ ಇಲ್ಲ;

ಏಕೆಂದರೆ, 
ನನ್ನೊಳಗಿರುವ ನೀನು
ನನ್ನಿಂದ ದೂರದಲ್ಲಿಲ್ಲ!


ಬನ್ನಿ ಬಾಲ್ಯದೊಡನಾಡಿಗಳೇ!

18 ಜನ 14

 

ಬಾಲ್ಯದ ದಿನಗಳ ನೆನಪುಗಳು ಮರೆವಿನ 
ಲೋಕದಲ್ಲಿ ಕಳೆದುಹೋಗುವ ಮೊದಲು
ನಮ್ಮ ಮಕ್ಕಳು ನಮ್ಮ ಮರೆವನ್ನು ನಮಗೆ 
ಆಗಾಗ ನೆನಪಿಸುವಂತಾಗುವ ಮೊದಲು;

ಬಾಲ್ಯದ ಒಡನಾಡಿಗಳೇ ಬನ್ನಿ ಮತ್ತೊಮ್ಮೆ
ಆಡೋಣ ನಮ್ಮ ಅಂಗಳ ಬೀದಿ ಓಣಿಗಳಲ್ಲಿ
ಮಾವಿನ ಮರವನ್ನೇರಿ ಕೂತು ಹರಟೋಣ 
ಗೇರುಬೀಜ ತುಂಬಿಕೊಂಡೀ ಜೇಬುಗಳಲ್ಲಿ!


ಪಂಡಿತನೇ ನಾನು?

18 ಜನ 14

 

ಸಖೀ,
ನಿನ್ನ ಕಣ್ಣ ಭಾಷೆಯನ್ನು ನಾನರಿತಿದ್ದಿದ್ದೇನೆ ಅಂದುಕೊಂಡಿದ್ದೆ
ಆದರೆ ಪದಗಳನ್ನಲ್ಲ ಅಲ್ಲಿ ನೀನು ನೀರನ್ನೇ ತುಂಬಿಕೊಂಡಿದ್ದೆ
ಆಡುವ, ಆಡದ ಪದಗಳಿಗೆ ಅರ್ಥವನು ನೀಡಬಹುದು ನಾನು
ಆದರೆ ಕಣ್ಣೀರಿಗೆ ಅರ್ಥ ನೀಡುವಷ್ಟು ಪಂಡಿತನೇನೇ ನಾನು?


ಅಳಿಯವು!

18 ಜನ 14

 

ಸಖೀ,
ನಮ್ಮಂದವನು ಮೆಚ್ಚಿ ಆಡಿದ ಮಾತುಗಳೆಲ್ಲಾ
ನಮ್ಮಂದದೊಂದಿಗೇ ಅಳಿದಾವು ನೆನಪಿನಿಂದ
ನಮ್ಮನಗಳಂದವನು ಮೆಚ್ಚಿದಾ ಮಾತುಗಳೆಲ್ಲಾ
ಅಳಿಯವು ಎಂದೆಂದಿಗೂ ನಮ್ಮ  ಮನಗಳಿಂದ!


ಇಂದಾಕೆಯೊಂದಿಗೆ ಮೊದಲ ಭೇಟಿ!

15 ಜನ 14

(ಹಿಂದೀ ಗೀತೆಯ ಭಾವಾನುವಾದದ ಯತ್ನ)

ಇಂದಾಕೆಯೊಂದಿಗೆ ಮೊದಲ ಭೇಟಿಯಾಗಲಿಹುದು
ಕಣ್ಣಲ್ಲಿ ಕಣ್ಣಿಟ್ಟು ಕೂತು ಮಾತುಕತೆ ನಡೆಯಲಿಹುದು
ಮುಂದೆ ಏನಾಗಲಿದೆಯೋ ಅಲ್ಲಿ ಯಾರಿಗೆ ತಿಳಿದಿಹುದು

ಎಂದೂ ಕಂಡಿರದ ಅಪರಿಚಿತ ಮುಖ ಎಂತಿಹುದೋ
ಆ ಮುಖ ಕಾಂತಿಭರಿತ ಚಂದ್ರಾರ್ಕದಂತಿರಬಹುದೋ
ನೋಟಗಳ ಒಂದು ವಿನಿಮಯವೇ ಈ ಮನದೊಳಗೆ
ಹಗಲೂರಾತ್ರಿಯ ತುಮುಲಕ್ಕೆ ಕಾರಣವಾಗಬಹುದೋ
ಮುಂದೆ ಏನಾಗಲಿದೆಯೋ ಅಲ್ಲಿ ಯಾರಿಗೆ ತಿಳಿದಿಹುದು

|| ಇಂದಾಕೆಯೊಂದಿಗೆ ಮೊದಲ ಭೇಟಿಯಾಗಲಿಹುದು
ಕಣ್ಣಲ್ಲಿ ಕಣ್ಣಿಟ್ಟು ಕೂತು ಮಾತುಕತೆ ನಡೆಯಲಿಹುದು||

ಹಾದಿಯಲಿ ದೃಷ್ಟಿನೆಟ್ಟು ನನಗಾಗಿ ಕಾಯುತಿರಬಹುದು
ಸದ್ದಾದಾಗೆಲ್ಲಾ ನಾ ಬಂದೆನೆಂದು ತಿಳಿಯುತಿರಬಹುದು 
ಅಲ್ಲೇನಾಗುತ್ತಿದೆಯೆಂದು ನನ್ನನ್ನೇನು ಕೇಳುತಿರುವಿರಿ
ಮನದೊಳಗೆ ಉಲ್ಲಾಸದ ಮೆರವಣಿಗೆ ಸಾಗಿರಬಹುದು
ಮುಂದೆ ಏನಾಗಲಿದೆಯೋ ಅಲ್ಲಿ ಯಾರಿಗೆ ತಿಳಿದಿಹುದು

|| ಇಂದಾಕೆಯೊಂದಿಗೆ ಮೊದಲ ಭೇಟಿಯಾಗಲಿಹುದು
ಕಣ್ಣಲ್ಲಿ ಕಣ್ಣಿಟ್ಟು ಕೂತು ಮಾತುಕತೆ ನಡೆಯಲಿಹುದು||

ಏಕಾಂತದಲ್ಲಿ ಅಳುಕಿಲ್ಲದೇ ಮಾತುಕತೆ ನಡೆಯಬಹುದು
ದಾಹಿ ತನುಮನಗಳ ಮೇಲೆ ಸೋನೆ ತಂಪೆರೆಯಬಹುದು
ನನ್ನ ಮನವೇ ನೀನು ಇದನ್ನೂ ಒಂದು ಬಾರಿ ಯೋಚಿಸು
ಆಕೆಯ ಜೊತೆಗಲ್ಲಾಕೆಯ ಸಖಿಯೂ ಇದ್ದರೇನಾಗಬಹುದು
ಮುಂದೆ ಏನಾಗಲಿದೆಯೋ ಅಲ್ಲಿ ಯಾರಿಗೆ ತಿಳಿದಿಹುದು

|| ಇಂದಾಕೆಯೊಂದಿಗೆ ಮೊದಲ ಭೇಟಿಯಾಗಲಿಹುದು
ಕಣ್ಣಲ್ಲಿ ಕಣ್ಣಿಟ್ಟು ಕೂತು ಮಾತುಕತೆ ನಡೆಯಲಿಹುದು||

आज उन से पहली मुलाकात होगी
फिर आमने सामने बात होगी
फिर होगा क्या, क्या पता, क्या खबर

अनदेखा अन्जाना मुखड़ा कैसा होगा?
ना जाने वो चाँद का टूकड़ा कैसा होगा?
मिलते ही उन से नज़र, हाय दिल में
एक बेकरारी सी दिनरात होगी

बैठे होंगे रस्ते पे वो आँखे बिछाये
हर आहट पे सोचते होंगे, साजन आये
क्या हाल होगा वहा, कुछ ना पूछो
दिल में उमंगों की बारात होगी

खुल के होंगी तनहाई में दिल की बातें
प्यासे तनमन पे होंगी, रिमझिम बरसातें
ए मेरे दिल ये भी तो सोच ले तू
कोई सहेली अगर साथ होगी


ದೇವರೆಂದಾದ ಮೇಲೆ?

12 ಜನ 14

 

“ನಾನು ಕೂಗಿದಾಗಲೆಲ್ಲಾ ನೀನು ಬರಬೇಕು ತಾನೇ?”

“ರೀ… ಮತ್ತೆ ನಮ್ಮ ಪ್ರೀತೀನೇ ದೇವರು, ನಾವು ಪ್ರೀತಿಸುವವರೇ ನಮ್ಮ ದೇವರು ಅಂತೀರಲ್ಲಾ?”

“ಅದಕ್ಕೂ ಇದಕ್ಕೂ ಏನೇ ಸಂಬಂಧ?”

“ನೀವು ದೇವರನ್ನು ಕೂಗಿದಾಗಲೆಲ್ಲಾ ಆ ದೇವರು ಅದೆಷ್ಟು ಪ್ರತ್ಯಕ್ಷರಾಗಿದ್ದಾರೆ ಹೇಳಿ ನೋಡೋಣ!”

“ನಾನಾಡಿದ ಮಾತುಗಳ ಜಾಣ್ಮೆಯಾಯ್ಕೆ ಕಣೇ ನಿಂದು.”