(ಭಾವಾನುವಾದದ ಯತ್ನ)
ನೀನು ನೀಡುವೆಯಾದರೆ ಸದಾ ಜೊತೆಗಿರುವ ಭರವಸೆ
ನಾನು ಹೀಗೆಯೇ ಕವಿತೆ ಬರೆಯುತ್ತಾ ಇರಬೇಕೆಂಬಾಸೆ
ನನ್ನನ್ನು ನೋಡಿ ಇರುವೆಯಾದರೆ ನೀ ಮುಗುಳ್ನಗುತ್ತಾ
ಹಾಡುತ್ತಾ ಇರುವೆ ನಾನು ಸದಾ ನಿನ್ನನ್ನು ನೋಡುತ್ತಾ
ಕಣ್ಮುಂದೆ ಅದೆಷ್ಟೋ ಸುಂದರಿಯರು ಹಾದು ಹೋದರು
ನಾನಿದುವರೆಗೂ ಯಾರನ್ನೂ ಕರೆದಿಲ್ಲ ಜೊತೆ ನೀಡೆಂದು
ನಿನ್ನನ್ನು ನೋಡಿದ ಕ್ಷಣದಿಂದೀ ಕಂಗಳು ನುಡಿಯುತ್ತಲಿವೆ
ನಿನ್ನ ಮೊಗದಿಂದ ದೃಷ್ಟಿ ಕೀಳುವುದಿನ್ನು ಅಸಾಧ್ಯವೆಂದು
ನೀನೆನ್ನ ದೃಷ್ಟಿಯೊಳಗೇ ಲೀನಳಾಗಿ ಕೂರುವೆಯಾದರೆ
ಮಾತು ಕೊಡುವೆ ಅನ್ಯರಿಂದ ಮುಖ ಮರೆಸುವೆನೆಂದು
ನಾನು ವರುಷಗಳಿಂದ ಕನಸುಗಳಲ್ಲಿ ಹುಡುಕಾಡುತ್ತಿದ್ದೆ
ಅರಿತೆನೀಗ ನೀನು ಅದೇ ಅಮೃತಶಿಲಾಮೂರ್ತಿ ಎಂದು
ನೀನು ತಿಳಿಯಬೇಕಾಗಿಲ್ಲ ನಿನ್ನ ಸರ್ವಸ್ವ ನಾನು ಎಂದು
ಆದರೆ ನಾನು ಅರಿತಿರುವೆ ನೀನೇ ನನ್ನ ಅದೃಷ್ಟವೆಂದು
ನೀನು ನನ್ನನ್ನು ನಿನ್ನವನೆಂದು ತಿಳಿವ ಕೃಪೆದೋರಿದರೆ
ವಸಂತದ ತೋರಣ ಕಟ್ಟುತಿರುವೆ ನಿನಗಾಗೆಂದೆಂದೂ
ಏಕಾಂಗಿಯಾಗಿ ಅದೆಷ್ಟು ದೂರ ನಡೆದು ಬಂದಿಹೆ ನಾನು
ಅನಿಸುತಿದೆ ಇನ್ನು ಈ ಒಂಟಿಪಯಣವೇ ಅಸಾಧ್ಯವೆಂದು
ಬಾಳಲ್ಲಿ ಒಲವು ತುಂಬುವ ಆಸರೆ ನಮಗೆ ದಕ್ಕದೇ ಇದ್ದರೆ
ತಿಳಿನೀ ಯೌವನದ ದಿನಗಳ ಕಳೆಯುವುದೆಷ್ಟು ಕಷ್ಟವೆಂದು
ಸದಾ ನೀನನ್ನ ಜೊತೆಜೊತೆಗೆ ಸಾಗುತ್ತಾ ಇರುವೆಯಾದರೆ
ನಕ್ಷತ್ರಗಳ ಹಾಸು ಹಾಸುವೆ ನಾನೀ ಬುವಿಯ ಮೇಲಿಂದು
ಮೂಲ ಗೀತೆ: ತುಮ್ ಅಗರ್ ಸಾಥ್ ದೇನೇ ಕಾ