(ಇದು ಮನದೊಳಗಿನ ಒಂದು ಮಂಥನ ಅಷ್ಟೇ. ಅನ್ಯರ ನಂಬಿಕೆಗಳಿಗೆ ಧಕ್ಕೆತರುವ ವ್ಯರ್ಥಯತ್ನವೇನಲ್ಲ)
“ಮೊನ್ನೆಯ ಆ ಘಟನೆಯಿಂದಾಗಿ ನಮ್ಮ ಸ್ನೇಹ ಮುರಿದೇಹೋಯ್ತು ಅಂತ ಅನಿಸಿತ್ತು ಕಣೋ, ರಾಘೂ. ನನಗೆ ತುಂಬಾ ಭಯವಾಗಿತ್ತು. ಅ ಕೆಟ್ಟಗಳಿಗೆಯಲ್ಲಿ ಏನೇನೋ ಯೋಚನೆ ಬಂದು, ಹೇಗೇಗೋ ಆಡಿದೆ. ನೀನು ನನ್ನನ್ನು ಎಚ್ಚರಿಸಿದಾಗ, ಇದು ಸರಿಯಲ್ಲ ಕಣೇ ಎಂದು ತಿಳಿಹೇಳಿದಾಗ, ನನ್ನ ತಪ್ಪಿನ ಅರಿವಾಗಿ, ಚಿಕ್ಕಮಗುವಿನಂತೆ ಅತ್ತುಬಿಟ್ಟೆ ನಾನು. ಬಹುಶಃ ನಿನ್ನ ಮುಖವನ್ನೆಂದೂ ನೋಡಲಾರೆ ಅಂತ ಅನಿಸಿತ್ತು. ನಿನಗೆ ಹೇಳಿದ್ದೆ ಕೂಡ, ನಿನ್ನನ್ನು ಇನ್ನೆಂದೂ ಭೇಟಿ ಮಾಡೋದಿಲ್ಲ ನಾನು ಅಂತ. ಆಕ್ಷಣಗಳಲ್ಲಿ ನನ್ನೊಳಗೆ ಕಾಡಿದ ನೋವು, ನನ್ನನ್ನು ತೀರ ಕುಬ್ಜಳನ್ನಾಗಿಸಿತ್ತು. ಇಷ್ಟು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ಸಂಯಮ ಎಲ್ಲಾ ಹಳಾಗಿಹೋಯ್ತು. ನಾನೇಕೆ ಹೀಗಾದೆ. ನೀನು ಮತ್ತೆ ನನ್ನನ್ನು ಹಿಂದಿನ ಸ್ನೇಹಿತೆಯಾಗಿ ಸ್ವೀಕರಿಸಬಹುದೇ? ನಾವು ಹಿಂದಿನಂತೆ ಬಾಳಬಹುದೇ? ಇಂತಹ ನೂರೆಂಟು ಯೋಚನೆಗಳಿಂದ ಆವರಿಸಲ್ಪಟ್ಟಿದ್ದ ನಾನು ಅದೆಷ್ಟೋ ಹೊತ್ತು ಅಳುತ್ತಾ ಕೂತಿದ್ದೆ. ಮನೆಯಲ್ಲಿ ಒಬ್ಬಳೇ ಇದ್ದೆ. ಹಾಗಾಗಿ ಮನಸ್ಸು ಬಿಚ್ಚಿ ಅಳುವುದೂ ಕಷ್ಟವಾಗಿರಲಿಲ್ಲ ನನಗೆ. ಕಣ್ಣೀರು ಕೋಡಿ ಕೋಡಿಯಾಗಿ ಹರಿದಿತ್ತು. ನಿಧಾನವಾಗಿ ಮನಸ್ಸು ನಿರಾಳವಾಯ್ತು. ಮನದೊಳಗೆ ಅದೇನೋ ಬೆಳಕು ಕಾಣಿಸಿಕೊಂಡಂತಾಯ್ತು. ಆ ಬೆಳಕಿನಲ್ಲಿ ನಿನ್ನ ಮುಖ ಸ್ಪಷ್ಟವಾಗಿ ಗೋಚರಿಸಲುತೊಡಗಿತ್ತು. ನಿನ್ನೊಳಗೆ ನನ್ನನ್ನು ನನ್ನೊಳಗೆ ನಿನ್ನನ್ನು ಮತ್ತೆ ಕಂಡುಕೊಂಡೆ”.
“ಶೈಲಾ, ಇಲ್ಲಿ ನಾನು ಅಥವಾ ನೀನು ಅನ್ನುವುದು ಗೌಣ. ನಾವು ಆಸ್ತಿಕರೋ ನಾಸ್ತಿಕರೋ ಅನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳೋಣ. ಆಸ್ತಿಕರು ಅನ್ನುವುದನ್ನು ನಾವೀರ್ವರೂ ಒಪ್ಪಿಕೊಳ್ಳುತ್ತೇವೆ. ಹಾಗಾಗಿ ದೇವರ ಇರುವನ್ನು, ನಮ್ಮ ನಡೆ, ನುಡಿಗಳ ಮೇಲಿರುವ ಆತನ ಪ್ರಭಾವವನ್ನೂ ಒಪ್ಪಿಕೊಳ್ಳೋಣ”.
“ಅಂದರೆ…?”
“ಆಸ್ತಿಕರಾದವರಿಗೆ ದೇವರ ಮೇಲಿರುವ ನಂಬಿಕೆಯ ಮೇಲೆ ಸಂಪೂರ್ಣ ನಂಬಿಕೆ ಇರಬೇಕು ಕಣೇ”
“ಅದೇನು, ಬಿಡಿಸಿ ಹೇಳೋ ಮಾರಾಯಾ”
“ನೋಡು, ನಾವು ದೇವರ ಇರುವನ್ನು ನಂಬುತ್ತೇವೆ. ಹಾಗಾಗಿ ನಮ್ಮೊಂದಿಗೆ ದೇವರು ಸದಾ ಇರಬೇಕು ಅನ್ನುವುದನ್ನೂ ಬಯಸುತ್ತೇವೆ. ಹಾಗಿದ್ದರೆ ನಮ್ಮೊಳಗೆ ದೇವರು ಸದಾ ಇರುವಂತೆ ನಮ್ಮ ನಡೆ, ನುಡಿ, ಯೋಚನೆಗಳನ್ನು ಪರಿಶುದ್ಧವಾಗಿಸಿಕೊಳ್ಳಬೇಕು. ಅವು ಅಶುದ್ಧವಾಗಿದ್ದಲ್ಲಿ ದೇವರು ನಮ್ಮೊಳಗೆ ನೆಲೆಸಲು ಸಾಧ್ಯವೇನೇ? ನಮ್ಮ ತನು ಮನಗಳು ಅಶುದ್ಧವಾದಾಗ ನಮ್ಮೊಳಗಿನ ಆರು ಮಂದಿ ರಾಕ್ಷಸರು ತಲೆ ಎತ್ತುತ್ತಾರೆ. ಅವರು ಯಾವಾಗಲೂ ತಲೆ ಎತ್ತುವ ಯತ್ನದಲ್ಲಿಯೇ ಇರುತ್ತಾರೆ. ಅದರೆ ದೇವರು ನಮ್ಮೊಳಗಿಂದ ದೂರ ಸರಿದಾಗ, ನಮ್ಮಲ್ಲಿ ದೈವತ್ವದ ಕೊರತೆ ಕಾಣಿಸಿಕೊಂಡಾಗ, ಆ ರಾಕ್ಷಸೀ ಮನೋಭಾವಗಳು ಬಲಶಾಲಿಗಳಾಗಿ ಮೇಲ್ಗೈ ಸಾಧಿಸಿಕೊಳ್ಳುತ್ತವೆ. ಆ ಕೆಟ್ಟಗಳಿಗೆಯಲ್ಲಿ ನಿನ್ನಿಂದ ಅಂತಹ ಆಸೆಗಳು, ಬೇಡಿಕೆಗಳು ಹೊರಬಂದಿರಬಹುದು. ನಾನು ಕಿಂಚಿತ್ತೂ ಅಳುಕದೆ ನಿನ್ನನ್ನು ಸರಿದಾರಿಗೆ ತರುವ ಯತ್ನ ಮಾಡಿದೆ. ನನ್ನೊಳಗಿನ ದೈವತ್ವ ನಿನ್ನೊಳಗಿನ ಆ ರಾಕ್ಷಸರ ಮೇಲೆ ವಿಜಯಸಾಧಿಸಲು ಸಾಧ್ಯವಾಯ್ತು. ನಿನಗೆ ತಪ್ಪಿನ ಅರಿವಾಯ್ತು. ಪಶ್ಚಾತ್ತಾಪದಿಂದ ನೀನು ಹರಿಸಿದ ಕಣ್ಣೀರು ನಿನ್ನನ್ನು ಮನಸ್ಸನ್ನು ಪರಿಶುದ್ಧಗೊಳಿಸಿ, ಅಲ್ಲಿ ದೈವತ್ವದ ಮರುಸ್ಥಾಪನೆಯಾಯ್ತು”
“ಹೂಂ… ನಿಲ್ಲಿಸಬೇಡ ಮಾರಾಯ, ಹೇಳ್ತಾ ಇರು…ಆದರೆ ರಾಘೂ, ಅಂದು ನೀನು ಈ ವಿಷಯದ ಬಗ್ಗೆ ನಾವು ಇನ್ನೆಂದೂ ಮಾತಾಡಬಾರದು, ಇಲ್ಲಿಗೇ ಮರೆತುಬಿಡೋಣ ಅಂತ ಅಂದಿದ್ದೆ, ಈಗ ಆ ವಿಷಯದ ಬಗ್ಗೆ ಲೀಲಾಜಾಲವಾಗಿ ಮಾತಾಡ್ತಾ ಇದ್ದೀಯಲ್ಲಾ?”
“ಶೈಲಾ, ಯಾವುದೋ ಖಾಯಿಲೆಯ ನೋವು ನಮ್ಮನ್ನು ಕಾಡುತ್ತಿರುವಾಗ, ಆ ಬಗ್ಗೆ ಇನ್ನೆಂದೂ ಮಾತಾಡೋದೇ ಬೇಡ ಅನ್ನುವ ಯೋಚನೆ ಬರಬಹುದು. ಯಾಕೆಂದರ ಅದು ಅಷ್ಟು ಅಸಹ್ಯ ಅನಿಸಿರುತ್ತದೆ, ಅಸಹನೀಯವಾಗಿರುತ್ತದೆ. ಮಾತಾಡಿದರೆ ಮತ್ತೆ ಆ ನೋವು ಕಾಡಬಹುದೇನೋ ಅಂತ ಅನುಮಾನ ಇರುತ್ತದೆ. ನಮ್ಮೊಳಗಿನ ದೇವರು ನಮ್ಮನ್ನು ಸದಾ ಪರೀಕ್ಷಿಸುತ್ತಾ ಇರುತ್ತಾನೆ. ಕೊಂಚ ಹೊತ್ತು ದೂರ ಸರಿದು ಮರೆಯಲ್ಲಿ ನಿಂತು ನೋಡುತ್ತಾನೆ. ಆಗ ನಮ್ಮೊಳಗಿನ ಷಡ್ವೈರಿಗಳು ನಮ್ಮ ಮೇಲೆ ಪ್ರಭಾವ ಬೀರಲು ಆರಂಭಿಸುತ್ತಾರೆ. ಅವರ ಪ್ರಭಾವಕ್ಕೆ ಬಲಿಯಾಗದೇ, ಅವರ ಮೇಲೆ ನಾವು ಮೇಲ್ಗೈ ಸಾಧಿಸಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆ. ಆಗ ಆ ಭಗವಂತ ಪ್ರಸನ್ನನಾಗುತ್ತಾನೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಒಂದೋ ನಮ್ಮಲ್ಲಿ ಕುಂದದ ಆತ್ಮಸ್ಥೈರ್ಯ ಇರಬೇಕು. ಇಲ್ಲವೇ, ಸಜ್ಜನರ ಸಂಗ ಅಥವಾ ಸದ್ಗ್ರಂಥಗಳ ಓದು ಅಥವಾ ಸದ್ವಿಚಾರಗಳ ಮನನ ಸದಾ ನಡೆಯುತ್ತಿರಬೇಕು. ಅಂದು ನಾನು ನಿನಗೆ ಆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಸಹಕಾರಿಯಾದೆ, ಅಷ್ಟೇ. ಈಗ ನಾವು ಆ ನೋವಿನಿಂದ ಹೊರಬಂದಿದ್ದೇವೆ. ಈಗ ಆ ವಿಷಯದ ಬಗ್ಗೆ ನಾವು ಎಷ್ಟು ಬೇಕಾದರೂ ಮಾತಾಡಬಹುದು. ಒಂದು ಖಾಯಿಲೆಯ ಬಗ್ಗೆ ಈರ್ವರು ವೈದ್ಯರು ವಿಚಾರವಿನಿಮಯ ನಡೆಸುವಂತೆ. ಈಗ ಆ ವಿಚಾರ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರಲು ಸಾಧ್ಯವಿಲ್ಲ. ಏಕೆಂದರೆ, ನಮ್ಮೀರ್ವರಲ್ಲೂ ಆತ್ಮಸ್ಥೈರ್ಯ ಜಾಗೃತವಾಗಿದೆ, ದೈವತ್ವ ಜೀವಂತವಾಗಿದೆ”.
“ಅಲ್ವೋ ರಾಘೂ, ಈ ಆಸ್ತಿಕತೆ ಅಂದರೆ ಇಷ್ಟೇನಾ? ಪೂಜೆ ಪುನಸ್ಕಾರಗಳ ಅಗತ್ಯ ಇಲ್ಲವೇನೋ?”
“ನೋಡು ಶೈಲಾ, ನಾನು ಮೊದಲೇ ಹೇಳಿದಂತೆ ಅವರವರ ನಂಬಿಕೆಗಳ ಮೇಲೆ ಅವರವರಿಗೆ ಸಂಪೂರ್ಣ ನಂಬಿಕೆ ಇರಬೇಕು. ಸರ್ವಂತರ್ಯಾಮಿಯಾದ ದೇವರನ್ನು ನಂಬುವವನಿಗೆ, ಸರ್ವಕಾಲದಲ್ಲೂ ದೇವರು ತನ್ನೊಂದಿಗೆ ಇರಬೇಕು ಎಂದು ಭಾವಿಸುವವನಿಗೆ, ಅವು ಯಾವುವೂ ಅಗತ್ಯ ಇಲ್ಲ ಕಣೇ. ದೇಹ ಎಂಬ ಮಂದಿರದಲ್ಲಿ ದೇವರನ್ನು ಸ್ಥಾಪಿತಗೊಳಿಸಿ, ತನು-ಮನಗಳನ್ನು ಶುದ್ಧವಾಗಿಸಿರಿಸಲು ಸಹಕಾರಿಯಾಗುವ ನಡೆ-ನುಡಿಗಳಿಂದ ಪೂಜಿಸುತ್ತಾ ಇದ್ದರೆ, ಇನ್ನಾವುದರ ಅಗತ್ಯವೂ ಇರಲಾರದು. ಈ ಆಸ್ತಿಕರೆನಿಸಿಕೊಂಡವರಲ್ಲಿ ಹೆಚ್ಚಿನವರಿಗೆ ಭಕ್ತಿಗಿಂತಲೂ ಭಯವೇ ಜಾಸ್ತಿ ಕಣೇ. ಅವರ ನಂಬಿಕೆಯ ಮೇಲೆ ಪೂರ್ಣವಾದ ನಂಬಿಕೆ ಅವರಿಗೇ ಇರುವುದಿಲ್ಲ. ದೇವಸ್ಥಾನಗಳ ಗರ್ಭಗುಡಿಗಳಲ್ಲಿ ದೇವರಿದ್ದಾನೆ ಎಂದು ನಂಬುವ ಅವರು ದೇವಸ್ಥಾನಗಳ ಹೊರಗೆ ಬಂದಮೇಲೆ, ಆತನ ಇರುವನ್ನೇ ಮರೆತಿರುತ್ತಾರೆ. ಅವರ ಬಾಯಿಯಿಂದ ಬರುವುದು ಕೇವಲ ನಾನು… ನಾನು… ನಾನು. ನಾನು ಹಾಗೆ ಮಾಡಿದೆ… ನಾನು ಅದನ್ನು ಗಳಿಸಿದೆ… ನಾನು ಅಷ್ಟು ಸಂಪಾದಿಸಿದೆ… ನಾನು ಅಲ್ಲಿಗೆ ಹೋಗಿದ್ದೆ… ಅವರ ಪ್ರತಿ ಮಾತಿನಲ್ಲೂ ಆ ’ನಾನು’ ಬಿಟ್ಟರೆ ಅಲ್ಲಿ ದೇವರ ಲವಲೇಶವೂ ಕಾಣಿಸುವುದಿಲ್ಲ. ಹಾಗಾದರೆ, ನೀನೇ ಹೇಳು, ಅವರು ಆಸ್ತಿಕರೋ ನಾಸ್ತಿಕರೋ?”
“ಹೂಂ…”
“ನಮ್ಮೊಳಗಿನ ದೈವತ್ವ ಕಡಿಮೆಯಾದಂತೆಲ್ಲಾ, ನಮ್ಮೊಳಗೆ ರಾಕ್ಷಸೀ ಮನೋಭಾವಗಳು ತುಂಬಿಕೊಳ್ಳುತ್ತವೆ. ಆಗ, ಈ ಕೋಪ, ಕಾಮ, ಮದ ಇವೆಲ್ಲಾ ಕೆರಳಲು ಅರಂಭವಾಗುತ್ತವೆ. ಸರಿಯಾಗಿಯೇ ಇದ್ದವರ ನಡುವೆ ಜಗಳಗಳು ಆಗುತ್ತವೆ. ಯಾರ ಮೇಲೆ ಆ ಭಾವಗಳು ಮೂಡಬಾರದೋ ಅಂತಹವರ ಮೇಲೆಲ್ಲಾ ಮೋಹ, ಕಾಮದ ಭಾವನೆಗಳು ಮೂಡುತ್ತವೆ. ಆಗ ನಾವು ನಾವಾಗಿರುವುದಿಲ್ಲ. ನಾವು ಯಾವುದೋ ರಾಕ್ಷಸೀ ಮನೋಭಾವದ ಗುಲಾಮರಾಗಿರುತ್ತೇವೆ. ನಮ್ಮೊಳಗೆ ಹಾಗೆ ಆದಾಗಲೆಲ್ಲಾ, ದೇವರನ್ನು ನೆನೆದು, ನನ್ನಿಂದ ದೂರವಾಗದಿರು, ಬಾ.. ಬಂದು ಬಿಡು, ಬಂದು ನನ್ನೊಳಗೆ ನೆಲೆಸಿರು, ಎಂದು ಆಹ್ವಾನ ನೀಡುತ್ತಿರಬೇಕು. ಆದಷ್ಟು ಮೌನ ವಹಿಸಬೇಕು. ಸಜ್ಜನರ ಸಹವಾಸ ಮಾಡಬೇಕು, ಸದ್ಗ್ರಂಥಗಳ ಮೊರೆಹೋಗಬೇಕು”.
“ನಾನೂ ಪ್ರಯತ್ನಿಸುತ್ತೇನೆ ಕಣೋ ರಾಘೂ, ನನಗೆ ಸಜ್ಜನನೆಂದರೆ ನೀನೇ ಅಲ್ವೇನೋ? ನಿನ್ನ ಈ ಸಂಗ ನನ್ನ ಜೀವಮಾನವಿಡೀ ಇರಲಿ. ಈ ಸ್ನೇಹ ಬಂಧವನ್ನು ಆ ದೇವರು ಸದಾ ಹರಸಿ ಜೀವಂತವಾಗಿರಿಸಲಿ”.
“ಹೂಂ… ಶೈಲಾ, ನಾವಿಬ್ಬರೂ ಆ ದೇವರನ್ನು ಪ್ರಾರ್ಥಿಸೋಣ… ಪ್ರಾರ್ಥಿಸುತ್ತಾ ಇರೋಣ!”
*****