ಸುದೈವಿ!

20 ಸೆಪ್ಟೆಂ 13

 

ಸಖೀ,
ನಿನ್ನಳುವ ಕಂಡು ನಕ್ಕರೆ ನಾ ನಿರ್ದಯಿ
ನಿನ್ನಳುವ ಕಂಡು ಅತ್ತರೆ ನಾ ಸಹೃದಯಿ
ನಿನ್ನ ನಗುವ ಕಂಡಳುವ ನಾ ದುರ್ದೈವಿ
ನಿನ್ನ ನಗುವಿನೊಂದಿಗೆ ನಕ್ಕರೆ ಸುದೈವಿ!


ಮೆಚ್ಚಿದವರ ಸಂಖ್ಯೆ!

20 ಸೆಪ್ಟೆಂ 13

 

ಸಖೀ,
ಓದಿ ಮೆಚ್ಚಿದವರ
ಸಂಖ್ಯೆಯಿಂದೆಮ್ಮ
ಸೃಜನಶೀಲತೆಯ
ಪರೀಕ್ಷೆಯಲ್ಲವೇ ಅಲ್ಲ;

ಓದುಗರಲ್ಲಿ ಸ್ಪಂದನ
ಮೂಡಿಸಿದರಷ್ಟೇ
ಅದಕೂ ಅರ್ಥ
ಬರಬಹುದಲ್ಲಾ?


ರೀತಿ-ರಿವಾಜು!

20 ಸೆಪ್ಟೆಂ 13

 

ಸಖೀ,
ರೀತಿ ರಿವಾಜುಗಳಲ್ಲಿ ಸದಾ ಬಂಧಿಗಳು ನಾವು
ಕಟ್ಟಿ ಕೂರಿಸಿವೆ ಬಿಟ್ಟುಹೋಗದಂತೆಮ್ಮ ತಾವು,
ಕಲ್ಪನೆಯ ಆಗಸದಲ್ಲಿ ಹಾರಾಡುತಿರಬೇಕು ಅಷ್ಟೆ
ವಾಸ್ತವಕ್ಕಿಳಿಯದೇ ಸದಾ ಅಲೆಯುತ್ತಿರಬೇಕಷ್ಟೆ!


ರೂಢಿಯಾದದ್ದು!

20 ಸೆಪ್ಟೆಂ 13

ಸಖೀ,
ನಿನಗೆ ಹಿಡಿಸಿದ್ದು ನನಗೆ ಹಿಡಿಸಲೇಬೇಕೆಂದೇನಿಲ್ಲ
ನನಗೆ ಹಿಡಿಸಿದ್ದು ನಿನಗೆ ಹಿಡಿಸಲೇಬೇಕೆಂದೇನಿಲ್ಲ
ನಮ್ಮ ನಮ್ಮ ಹಿಡಿತದಲ್ಲಿ ನಮ್ಮ ಹಿಡಿಸುವಿಕೆಗಳಿವೆ
ರೂಢಿಮಾಡಿಕೊಂಡವು ಎಲ್ಲಿ ಬೇಗ ಬದಲಾಗಿವೆ?


ಹೊತ್ತು ನೆನಪಿಸಿದೆ ಮುತ್ತು!

19 ಸೆಪ್ಟೆಂ 13

sunset


ನಿನ್ನನ್ನಿನ್ನಾರು ಪ್ರೀತಿಸಿಯಾರು ಅಷ್ಟೊಂದು?

18 ಸೆಪ್ಟೆಂ 13

 

(ಮುಕೇಶ್ ಹಾಡಿರುವ ಹಿಂದೀ ಚಿತ್ರಗೀತೆಯ ಭಾವಾನುವಾದದ ಯತ್ನ)

ನಾನು ನಿನ್ನನ್ನು ಪ್ರೀತಿಸಿದಷ್ಟು ಒಲವೇ, ಇನ್ನಾರು ಪ್ರೀತಿಸಿಯಾರು ಹೇಳು…

ಮನದೊಳಗೇ ಅಳುತ್ತಿದ್ದರೂ ಸಭೆಗಳಲ್ಲಿ ನಗುತ್ತಿದ್ದವನು
ನೀನೀಡಿದ ನೋವನ್ನು ನಿನ್ನಿಂದಲೇ ಬಚ್ಚಿಟ್ಟುಕೊಳ್ಳುತ್ತಿದ್ದವನು
ನಿನ್ನ ಪ್ರೀತಿಯ ಬೇಗುದಿಯಲ್ಲಿ ಅದೆಷ್ಟು ಬೇಯುತ್ತಿದ್ದೆ ನಾ ಹೇಳು
ಇನ್ನಾರು ಬೇಯಬಹುದು ಅಷ್ಟೊಂದು ನೀ ಹೇಳು

||ನಾನು ನಿನ್ನನ್ನು ಪ್ರೀತಿಸಿದಷ್ಟು ಒಲವೇ, ಇನ್ನಾರು ಪ್ರೀತಿಸಿಯಾರು ಹೇಳು||

ನಮ್ಮೀ ಒಲವಿನ ಮೇಲೆ ನೀ ಹೆಮ್ಮೆಪಡುತ್ತಿದ್ದ ಆ ದಿನಗಳನ್ನು ನೆನೆಯೊಮ್ಮೆ
ನಿನ್ನ ಕೈಯಲ್ಲಿ ನೀ ನನ್ನ ಹೆಸರನ್ನು ಬರೆಯುತ್ತಿದ್ದ ದಿನಗಳನ್ನು ನೆನೆಯೊಮ್ಮೆ
ಮುಗ್ಧತನದ ನಿನ್ನ ಆ ಬಾಲಿಶ ಆಟಗಳಿಗೆ ಮರುಳಾಗುತ್ತಿರಲಿಲ್ಲವೇ ನಾ ಹೇಳು
ಇನ್ನಾರು ಮರುಳಾಗಿಯಾರು ಅಷ್ಟೊಂದು ನೀ ಹೇಳು

||ನಾನು ನಿನ್ನನ್ನು ಪ್ರೀತಿಸಿದಷ್ಟು ಒಲವೇ, ಇನ್ನಾರು ಪ್ರೀತಿಸಿಯಾರು ಹೇಳು||


ಅರ್ಥವೇನಿತ್ತು?

17 ಸೆಪ್ಟೆಂ 13

 

ಸಖೀ,
ನೀನಾರೆಂಬ ಅರಿವಿಲ್ಲದೇ 
ನಾನಾಡಿದ ಮಾತುಗಳನ್ನು 
ನೀನು ಅಪಾರ್ಥ 
ಮಾಡಿಕೊಂಡಿದ್ದರೂ 
ಅವುಗಳಿಗೆಲ್ಲಾ ಅರ್ಥವಿತ್ತು;

ಆದರೆ, ನಾವಿಬ್ಬರೂ
ಒಬ್ಬರನ್ನೊಬ್ಬರು ಅರಿತು 
ಪರಸ್ಪರರನ್ನು ಖುಷಿಪಡಿಸುವ 
ಸಲುವಾಗಿ ಆಡಿದ ಪ್ರತಿ
ಮಾತಿನಲ್ಲಿ ಅರ್ಥವೇನಿತ್ತು?


ನಿನ್ನ ಮೇಲೆ ಕಣ್ಣು!

17 ಸೆಪ್ಟೆಂ 13

ಸಖೀ,
ಅಗಣಿತ ತಾರೆಗಳ 
ನಡುವೆ ಇದ್ದರೂ ಸಹ
ಆ ಚಂದಿರನಿಗೇಕೋ
ನಿನ್ನ ಮೇಲೆಯೇ ಕಣ್ಣು;

ರಾತ್ರಿಯಿಡೀ ಅದೇಕೋ
ತನ್ನ ದೃಷ್ಟಿಯ ಕೋನ 
ಬದಲಿಸುತ್ತಾ ಕಿಟಕಿಯಿಂದ
ನೋಡುತ್ತಿರುತ್ತಾನೆ ನಿನ್ನನ್ನು!


ಅಂತಾಗದಿರಲಿ!

17 ಸೆಪ್ಟೆಂ 13

ಅಣ್ಣಾ ಭ್ರಷ್ಟಾಚಾರದ ವಿರುದ್ಧ ಬಯಲಿಗಿಳಿದಾಗ
ಆತನ ಹಿಂದ್ದಿದ್ದ ಆ ಜನಸಾಗರವನ್ನೇ ಕಂಡಾಗ
ನಾನೂ ಮೆಚ್ಚಿದ್ದೆ, ಮೆಚ್ಚಿ ಲೇಖನವನು ಬರೆದಿದ್ದೆ
ನಿಸ್ವಾರ್ಥ ನಾಯಕತ್ವದ ಕೊರತೆ ನೀಗಿತೆಂದಿದ್ದೆ
ಮುಂದೆ ಆದದ್ದೇ ಬೇರೆ ಎಲ್ಲಿದ್ದಾರೀಗ ಆ ಹಜಾರೆ
ಅಂತಾಗದಿರಲಿಯೆನ್ನದೇ ಈಗ ಇಲ್ಲ ದಾರಿ ಬೇರೆ!


ಅಪವಾದ!

15 ಸೆಪ್ಟೆಂ 13

ಸಖೀ,
ಭಾದ್ರಪದ ಶುಕ್ಲದ 
ಚೌತಿಯಂದು 
ಚಂದಿರನ ಕಂಡಿಲ್ಲ
ತಲೆ ಎತ್ತಿ ಮೇಲೆ,
ಆದರೆ ಚಂದ್ರಮುಖಿ 
ನಿನ್ನನ್ನು ಕದ್ದು ಕದ್ದು
ಕಂಡ ನನ್ನ ಮೇಲೆ 
ಈಗ ಅಪವಾದಗಳ 
ಸರಮಾಲೆ!