ಕರ್ತವ್ಯ!

DSC_7731

(ದಿನಾಂಕ ೨೪ ಅಕ್ಟೋಬರ ೨೦೧೩ರ “ತರಂಗ ವಾರಪತ್ರಿಕೆಯಲ್ಲಿ” ಪ್ರಕಟವಾಗಿದೆ)

ಅದೊಂದು ಶನಿವಾರ, ಸಾಯಂಕಾಲದ ಹೊತ್ತು. ಕವಿತಾಳ ಮೊಬೈಲು  ಮತ್ತೆ ಸದ್ದು ಮಾಡುತ್ತಿತ್ತು. ಅರ್ಧ ಘಂಟೆಯಲ್ಲಿ ಇದು ನಾಲ್ಕನೇ ಬಾರಿ. ಒಂದೇ ಸಂಖ್ಯೆಯಿಂದ ಕರೆ ಬರುತ್ತಿದೆ. ಅದು ಒಂದು  ಅಪರಿಚಿತ ಸಂಖ್ಯೆ. ಆಕೆ ಅಪರಿಚಿತ ಸಂಖ್ಯೆಗಳಿಂದ  ಬರುವ ಯಾವ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಹಾಗಾಗಿ ಸುಮ್ಮನಿದ್ದಾಳೆ.

ಕವಿತಾಳ ಮಗ ಬಂದು ಕೇಳುತ್ತಾನೆ. “ಅಮ್ಮಾ ಯಾರೋ ಗುರುತು ಪರಿಚಯ ಇರುವವರೇ ಇರಬೇಕು. ಒಮ್ಮೆ ಕೇಳಿ ನೋಡು”.

“ಬೇಕಿದ್ದರೆ ನೀನೇ ಕೇಳು” ಎಂದು ಮಗನಿಗೆ ಫೋನ್ ಕೊಡುತ್ತಾಳೆ.

ಆತ ಫೋನ್ ಎತ್ತಿಕೊಂಡು “ಹಲೋ… ಹಲೋ… ಯಾರು ಮಾತಾಡುವುದು? ಯಾರು ಬೇಕಾಗಿತ್ತು?” 

“ಹಲೋ ರಮೇಶಾ… ನಾನು ಕಣೋ, ಲಲಿತಾ… ನಿನ್ನ ಚಿಕ್ಕಮ್ಮ”

“ಏನ್ ಚಿಕ್ಕಮ್ಮಾ? ಇಂದು ನಮ್ಮ ನೆನಪು ಹೇಗಾಯ್ತು ನಿಮಗೆ? ಏನು ವಿಷಯ?”

“ರಮೇಶಾ… ರಮೇಶಾ… “

ಅಳುವ ಸದ್ದು…

“ನಿಮ್ಮ ಅಪ್ಪನಿಗೆ ಹುಷಾರಿಲ್ಲ ಕಣೋ,  ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದಾರೆ… ಹೆಚ್ಚು ದಿನ ಬದುಕುವ ಹಾಗೆ ಕಾಣ್ತಿಲ್ಲ… ಅಮ್ಮನಿಗೆ ಹೇಳು… ಇಲ್ಲಿ ಯಾರೂ ಇಲ್ಲ ನಾನೊಬ್ಬಳೇ… ದಯವಿಟ್ಟು ಬನ್ನಿ … ಅಮ್ಮನಿಗೂ ಹೇಳು…ಪ್ಲೀಸ್”

“ಅಮ್ಮಾ, ಅದು ಲಲಿತಾ ಚಿಕ್ಕಮ್ಮ. ಅಪ್ಪ ಸೀರಿಯಸ್ ಆಗಿದ್ದಾರಂತೆ.  ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರಂತೆ. ಐಸಿಯುನಲ್ಲಿ ಇದ್ದಾರಂತೆ. ಚಿಕ್ಕಮ್ಮ ಒಬ್ಬಳೇ ಇದ್ದಾಳೆ ಆಸ್ಪತ್ರೆಯಲ್ಲಿ. ನಮ್ಮನ್ನು ಬರ್ಲಿಕ್ಕೆ ಹೇಳ್ತಾ ಇದ್ದಾಳೆ”

“ರಮೇಶ್… ನಿನಗೆ ಗೊತ್ತು ನಾನು ಹೋಗೋಲ್ಲಾ ಅಂತ”.

“ದಟ್ಸ್ ರೈಟ್ ಅಮ್ಮಾ… ಬಟ್…”

“ಬಟ್ … ಗಿಟ್ ಏನೂ ಇಲ್ಲ… ನನ್ನಿಂದ ಆಗೋಲ್ಲ ಕಣೋ… ನಿನ್ನ ಅಪ್ಪ ಹಾಗೂ ನಿನ್ನ ಚಿಕ್ಕಮ್ಮನಿಂದ ನಾನು ಅನುಭವಿಸಿರೋದು ಎಷ್ಟು ಅನ್ನುವುದು ನಿನಗೂ ಗೊತ್ತು ತಾನೇ? ನನ್ನೊಂದಿಗೆ ನೀನು ಮತ್ತು ನಿನ್ನ ತಂಗಿಯೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೀರಿ… ನೋವು ತಿಂದಿದ್ದೀರಿ. ಅವುಗಳನ್ನೆಲ್ಲಾ ಮರೆಯೋದು ಹೇಗೆ? ಈಗ ನಾನ್ಯಾಕೆ ಬೇಕಾಯ್ತು ಅವಳಿಗೆ? ಇಲ್ಲ ಕಣೋ, ನಾನು ಹೋಗೋದಿಲ್ಲ… ನಿನಗೆ ಹೋಗುವ ಮನಸ್ಸಿದ್ದರೆ ನಾಳೆ ಬೆಳಿಗ್ಗೆ ಹೋಗಿ ನೋಡಿಕೊಂಡು ಬಾ. ಈಗ ಘಂಟೆ ಆರೂವರೆ. ಕಮ್ಮನಹಳ್ಳಿಯಿಂದ ಕೋರಮಂಗಲಕ್ಕೆ ಹೋಗುವಷ್ಟರಲ್ಲಿ ಘಂಟೆ ಎಂಟಾಗುತ್ತದೆ. ಮತ್ತೆ ರಾತ್ರಿ ಹೊತ್ತು ವಾಪಸು ಬರುವುದೂ ಕಷ್ಟ. ಬೆಳಿಗ್ಗೆ ಹೋಗು”

“ಅಮ್ಮಾ ನಾಳೆ ಹೇಗೂ ಸಂಡೇ . ನಿನಗೂ ರಜೆ ನಮಗೂ ರಜೆ. ಮೂವರೂ ಹೋಗಿ ನೋಡಿಕೊಂಡು ಬರೋಣ…”

“ಇಲ್ಲ ರಮೇಶ್ ನಿನಗೆ ಹೋಗುವ ಮನಸ್ಸಿದ್ದರೆ ಹೋಗಿ ಬಾ… ಇನ್ನು ಈ ವಿಷಯದಲ್ಲಿ ಮಾತು ಮುಂದುವರಿಸುವುದು ಬೇಡ”

“ಸರಿ… ಆಯ್ತಮ್ಮ… ನಿನ್ನಿಷ್ಟ”

ಮಗನೇನೋ ಸುಮ್ಮನಾದ.

ಆದರೆ ಕವಿತಾಳ ಮನದಲ್ಲಿ ಜನಾರ್ದನನ ಚಿತ್ರಗಳು ಸುಳಿಯತೊಡಗಿದವು. ತನ್ನ ಗತಜೀವನದ ದಿನಗಳು ಒಂದೊಂದಾಗಿ ಮೇಲೆ ಮೇಲೆ ಬಂದು ಕಾಡತೊಡಗಿದವು.

ಆಗಿನ್ನೂ ಕಾಲೇಜು ಮುಗಿಸಿದ್ದ ಕವಿತಾ ಒಂದು ಖಾಸಗಿ ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ತಿಂಗಳಿಗೆ ಎಂಟುನೂರ ಐವತ್ತು ರೂಪಾಯಿ ಸಂಬಳ. ಜನಾರ್ದನನ ಪರಿಚಯ ಅಲ್ಲೇ ಆಗಿದ್ದು. ಜನಾರ್ದನ  ಆ ಕಂಪನಿಯ ಕ್ಯಾಂಟೀನು ನಡೆಸುತ್ತಿದ್ದ. ಆತ ಇಪ್ಪತ್ತೈದರ ಯುವಕ. ಈಕೆ ಸುಂದರ ಮೈಕಟ್ಟಿನ ಯುವಕಿ. ಅವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಕ್ಯಾಂತೀನಿನಲ್ಲಿ ಆಕೆಗೆ ಉಚಿತವಾಗಿ ಊಟ ತಿಂಡಿ ದೊರೆಯುತ್ತಿತ್ತು.  ದಿನವೂ  ಮನೆಯಿಂದ ಬರುವಾಗ, ಆತನೊಂದಿಗೆ ಆತನ ಬೈಕಿನಲ್ಲಿ ಬರುತ್ತಿದ್ದಳು. ಆತನಿಗೆ ಆ ಕಂಪನಿಯಲ್ಲಿ ಇನ್ನೂ ಎರಡು ಕಂಪನಿಗಳಲ್ಲಿ ಕ್ಯಾಂಟೀನುಗಳಿದ್ದವು. ಹಾಗಾಗಿ ಸಂಜೆ ಆತ ಸಿಗುತ್ತಿರಲಿಲ್ಲ. ಒಂದೂವರೆ ವರುಷಗಳ ನಂತರ ಆಕೆಯ ಕಂಪನಿಯಲ್ಲಿನ ಕ್ಯಾಂಟೀನಿನ ಕಂಟ್ರಾಕ್ಟ್ ಮುಗಿದಿತ್ತು. ಇನ್ನು ತಾನು ಇಲ್ಲಿಗೆ ಬರಲಾಗುವುದಿಲ್ಲ ಎಂದು ಅರಿತ ಜನಾರ್ದನ, ಕವಿತಾಳಿಗೆ, ತನ್ನ ಕ್ಯಾಟರಿಂಗ್  ಕಂಪನಿಯಲ್ಲೇ ಕೆಲಸ ಕೊಡಿಸುವುದಾಗಿ ಹೇಳಿದ. ಅವರ  ಸ್ನೇಹ ಪ್ರೀತಿಯಾಗಿ ಮಾರ್ಪಾಟು ಆಗಿತ್ತು ಎನ್ನುವ ಅರಿವು ಇಬ್ಬರಿಗೂ ಇತ್ತು. ಒಬ್ಬರನ್ನೊಬ್ಬರು ಬಿಟ್ಟು ಇರುವುದು ಸಾಧ್ಯವಿರಲಿಲ್ಲ. ಹಾಗಾಗಿ , ಕವಿತಾ ಆತನ ಮಾತಿಗೆ ಒಪ್ಪಿಕೊಂಡು, ಈ ಕೆಲಸಕ್ಕೆ ರಾಜೀನಾಮೆ ನೀಡಿದಳು. ಆತನ ಕ್ಯಾಟರಿಂಗ್ ಕಂಪನಿಯಲ್ಲಿ ಮಾರ್ಕೆಟಿಂಗ್ ಮಾಡಲು ಸೇರಿಕೊಂಡಳು. ಈರ್ವರ ದುಡಿಮೆಯಿಂದ, ಅವರ ಕಂಪನಿ ಆರು ತಿಂಗಳೊಳಗೆ, ದಿನಕ್ಕೆ ಐದು ಸಾವಿರ ಊಟ ತಯಾರಿಸುವಷ್ಟು ದೊಡ್ಡದಾಗಿ ಬೆಳೆಯಿತು.

ಒಂದು ದಿನ ಕವಿತಾ ತನ್ನ ವಿಧವೆ ಅಮ್ಮನ ಅನುಮತಿ ಪಡೆದು ಸಮೀಪದ ದೇವಸ್ಥಾನದಲ್ಲಿ ಜನಾರ್ದನನೊಂದಿಗೆ ಸರಳರೀತಿಯಲ್ಲಿ ಹಸೆಮಣೆ ಏರಿದಳು. ಹೊಸ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಕವಿತಾ ಕೆಲಸ ತೊರೆದು ಮನೆಯಲ್ಲೇ ಇರತೊಡಗಿದ್ದಳು. ಮೂರು ವರುಷಗಳಲ್ಲಿ ಎರಡು ಮಕ್ಕಳಾದವು. ರಮೇಶ್ ಮತ್ತು ಗೀತಾ.

ಆದರೆ, ಅದೊಂದು ದಿನ ಆ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದು ಬಿಟ್ಟಿತು.

ಹೃದಯಾಘಾತದಿಂದ ಕವಿತಾಳ ಅಮ್ಮ ಅಸುನೀಗಿದಾಗ, ಅದುವರೆಗೆ ಅಮ್ಮನೊಂದಿಗೆ ಇದ್ದ, ತಂಗಿ ಲಲಿತಾ ಒಂಟಿಯಾದಳು. ಆಕೆ ಒಬ್ಬಳೇ ಇರುವುದು ಬೇಡವೆಂದು ಕವಿತಾ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು  ಬಂದಳು. ಜನಾರ್ದನ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.  ಲಲಿತಾ ಒಂದು ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದಳು. ಜನಾರ್ದನ ಕೆಲಸಕ್ಕೆ ಹೋಗುವಾಗ ಲಲಿತಾಳನ್ನು ಆಕೆಯ ಕಂಪನಿಯವರೆಗೆ ಬೈಕಿನ ಮೇಲೆ ಕೂರಿಸಿಕೊಂಡು ಕರೆದೊಯ್ಯುತ್ತಿದ್ದ.  ಮೂರು ನಾಲ್ಕು ತಿಂಗಳು ಹೀಗೆಯೇ ಸಾಗಿತ್ತು.

ಒಂದು ರಾತ್ರಿ ಹನ್ನೆರಡರ ಸಮಯ. ಮಗು ಗೀತಾ ಅಳುತ್ತಿದ್ದಳಾದ್ದರಿಂದ ಎಚ್ಚೆತ್ತ ಕವಿತಾಳಿಗೆ ಮಂಚದ ಮೇಲೆ ಜನಾರ್ದನ ಕಾಣಿಸಲಿಲ್ಲ. ಮಗುವಿಗೆ ಹಾಲುಣಿಸಿ, ಮಲಗಿಸಿದ ಕವಿತಾ,  ಹೊರಗೆ ಬಂದು ನೋಡುತ್ತಾಳೆ. ಜನಾರ್ದನ ಎಲ್ಲೂ ಕಾಣಿಸುವುದಿಲ್ಲ.  ಎಲ್ಲಾ ಕಡೆ ಹುಡುಕಿದ ಆಕೆ, ಆತನ ಮೊಬೈಲಿಗೆ ಕರೆ ಮಾಡಿದಳು. ಅವರ ಕೋಣೆಯಲ್ಲೇ ಮೊಬೈಲ್ ರಿಂಗ್ ಆಗುವ ಸದ್ದು ಕೇಳಿಸಿತು. ಮೊಬೈಲ್ ಅವರ ಕೋಣೆಯಲ್ಲೇ ಇತ್ತು. ಹಾಗಾದರೆ ಹೊರಗೆಲ್ಲೂ ಹೋಗಿಲ್ಲ. ಹುಡುಕುತ್ತಾ ಬಂದವಳಿಗೆ ಯಾಕೋ ಅನುಮಾನ ಬಂತು. ತಂಗಿಯ ಕೋಣೆಯ ಒಳಗೆ ಬೆಳಕು ಇರುವಂತೆ ಅನಿಸಿತು. ಬಾಗಿಲಿನ ಕೀಲಿಕೈಯ ರಂಧ್ರದಿಂದ ಇಣುಕಿ ನೋಡಿದರೆ ಒಳಗೆ ಮಂಚದ ಮೇಲೆ ಲಲಿತಾ ಮತ್ತು ಜನಾರ್ದನ. ಕವಿತಾಳಿಗೆ ಅಲ್ಲೇ ಕಣ್ಣುಕತ್ತಲೆ ಕವಿದಂತಾಯ್ತು. ರಾತ್ರಿ ಹೊತ್ತು ಆದ್ದರಿಂದ, ಏನೂ ಹೇಳದೇ ನಿಧಾನವಾಗಿ ತನ್ನ ಕೋಣೆಗೆ ಮರಳಿದಳು. ಏನು ಮಾಡಿದರೂ ನಿದ್ದೆ ಬರಲಿಲ್ಲ. ಒಂದು ಒಂದೂವರೆ ಗಂಟೆಯ ಬಳಿಕ ಜನಾರ್ದನ ಬಂದು ಮಲಗಿದ.

ಮಾರನೆಯ ರಾತ್ರಿ ಕವಿತಾ ನಿದ್ದೆ ಬಂದಂತೆ ನಟಿಸಿದಳು. ಹಿಂದಿನ ದಿನದ ಕತೆ ಇಂದೂ ನಡೆಯಿತು. ನಾಲ್ಕಾರು ದಿನಗಳವರೆಗೆ ಸುಮ್ಮನಿದ್ದ ಕವಿತಾ ಒಂದು ದಿನ ಬಾಯಿಬಿಡಬೇಕಾಯ್ತು.

ರಾತ್ರಿ ಎಲ್ಲ ಸೇರಿ ಊಟ ಮುಗಿಸಿದ ಮೇಲೆ, ಕೇಳಿದಳು. ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ? ಇದರ ಅರ್ಥ ಏನು? ಇಲ್ಲಿ ನನ್ನ ಸ್ಥಾನ ಏನು? ಜನಾರ್ದನ ಲಲಿತಾಳ ಮುಖ ನೋಡಿದ. ಲಲಿತಾಳೇ ಉದ್ವೇಗಗೊಳ್ಳದೇ ನಿಧಾನವಾಗಿ ಉತ್ತರಿಸಿದಳು

“ಅಕ್ಕಾ… ಸುಮ್ಮನೇ ಇದನ್ನೆಲ್ಲಾ ದೊಡ್ಡ ವಿಷಯ ಮಾಡಿ ಎಲ್ಲರಿಗೂ ಗೊತ್ತಾಗುವಂತೆ ಮಾಡಬೇಡ. ನಿನಗೇನೂ ಕೊರತೆ ಇಲ್ಲ ಇಲ್ಲಿ. ನಾವಿಬ್ಬರೂ ದುಡಿದು ತರುತ್ತೇವೆ. ನೀನು ಮನೆ ಮಕ್ಕಳನ್ನು ನೋಡೀಕೊಂಡಿರು. ಎಲ್ಲರೂ ನೆಮ್ಮದಿಯಿಂದ ಇರೋಣ”.

“ಲಲಿತಾ… ನಾನು ನಿನಗೆ ಮಾಡಿದ  ಉಪಕಾರಕ್ಕೆ ಚೆನ್ನಾಗಿ ಪಾಠ ಕಲಿಸುತ್ತಾ ಇದ್ದೀಯಮ್ಮ ನನಗೆ. ಇದು ನನಗೆ ಬೇಕಾಗಿತ್ತಾ? ನಿನ್ನನ್ನು ತನ್ನ ಮನೆಗೆ ಕರೆದುಕೊಂಡುಹೋಗುತ್ತೇನೆ ಅಂದಿದ್ದ ನಮ್ಮ ಸೋದರಮಾವನೊಂದಿಗೆ ಅಂದೇ ಕಳಿಸಿಕೊಡಬೇಕಿತ್ತು, ಕೇರಳಕ್ಕೆ. ನಿನ್ನ ಬಾಳೂ ಚೆನ್ನಾಗಿರಲಿ ಎಂದು ಜೊತೆಗೆ ಇರು ಅಂದರೆ ನನ್ನ ಮನೆಗೇ ಕನ್ನ ಹಾಕಿದ್ದೀಯಲ್ಲಮ್ಮಾ…ಇದು ನನ್ನಿಂದ ಆಗದ ಮಾತು. ನೀನು ಎಲ್ಲಾದರೂ ಬಾಡಿಗೆಮನೆ ಮಾಡಿಕೊಂಡು ಇದ್ದುಬಿಡು. ಇಲ್ಲಿ ಇರುವುದು ಬೇಡ, ನನ್ನಿಂದ ಇದನ್ನೆಲ್ಲಾ ಸಹಿಸಿಕೊಂಡು ಇರಲಾಗದು”.

ಜನಾರ್ದನ ನಡುವೆ ಬಾಯಿಹಾಕಿದ “ಇಲ್ಲ ಆಕೆ ಎಲ್ಲಿಗೂ ಹೋಗುವುದಿಲ್ಲ. ಆಕೆ ಇಲ್ಲೇ ಇರಬೇಕು. ನಾವು ಹಿಂದಿನದನೆಲ್ಲಾ ಮರೆತು ಬಾಳೋಣ. ಇನ್ನು ಮುಂದೆ ಹಿಂದೆ ನಡೆದಂತೆ ಏನೂ ನಡೆಯದು ನನ್ನ ಮತ್ತು ಲಲಿತಾಳ ನಡುವೆ. ನಂಬು ನನ್ನನ್ನು”

ಜಗಳ ಆಡಿದರೆ ಪರಿಣಾಮ ಏನಾಗಬಹುದು ಅನ್ನುವುದರ ಅರಿವು ಇಲ್ಲ. ಪುಟ್ಟ ಪುಟ್ಟ ಮಕ್ಕಳಿಬ್ಬರು ಇದ್ದಾರೆ. ಜನಾರ್ದನನ ವಿರೋಧ ಕಟ್ಟಿಕೊಂಡರೆ ತನಗೆ ಗತಿ ಯಾರು? ಬೇರೆ ಹೋಗಬೇಕಾದೀತು.  ಈ ಪುಟ್ಟ  ಮಕ್ಕಳನ್ನು ಕಟ್ಟಿಕೊಂಡು ಒಬ್ಬಳೇ ಜೀವನ ಸಾಗಿಸುವುದು ಎಷ್ಟು ಕಷ್ಟ ಅನ್ನುವ ಅರಿವು ಕವಿತಾಳಿಗೂ ಇತ್ತು.  ಹಾಗಾಗಿ ಆತನ ಮಾತಿಗೆ ಒಪ್ಪಿಕೊಳ್ಳದೇ ವಿಧಿ ಇರಲಿಲ್ಲ.

ದಿನ ಕಳೆದಂತೆ ಮನೆಯ ವಾತಾವರಣ ಸುಧಾರಿಸಿದಂತೆ ಕಂಡಿತು. ನಿದ್ದೆಗೆಟ್ಟು ಕಾದು ಕೂತರೂ ಅವರಿಬ್ಬರು ಎಂದೂ ಸಿಕ್ಕಿಬಿದ್ದಿರಲಿಲ್ಲ. ಕವಿತಾಳಿಗೆ ಸಮಾಧಾನವಾಗಿತ್ತು. ಇರಲಿ ಬಿಡು. ಆಕೆ ನನ್ನ ತಂಗಿ. ಈತನೋ ನಾನು ಪ್ರೀತಿ ಮಾಡಿ ವರಿಸಿರುವ ಗಂಡ. ತಪ್ಪುಗಳು ನಡೆದು ಹೋಗಿರಬಹುದು. ಮರೆತು ಮುಂದೆ ಸಾಗೋಣ ಎಂದು ನಿರ್ಧರಿಸಿದಳು.

ಆದರೂ ಪ್ರೀತಿಸಿ ಮದುವೆಯಾದವರು ನಾವು. ಆ ಪ್ರೀತಿ ಎಲ್ಲಿ ಮರೆಯಾಯ್ತು? ಜನಾರ್ದನ ಏಕೆ ಹೀಗೆ ಬದಲಾಗಿಬಿಟ್ಟ? ಅನ್ನುವ ಪ್ರಶ್ನೆಗಳು ಆಕೆಯನ್ನು ಕಾಡದೇ ಇರಲಿಲ್ಲ. ಎಷ್ಟು ಸಲೀಸಾಗಿ ಹೇಳಿಬಿಟ್ಟ, ಹಿಂದಿನದನೆಲ್ಲಾ ಮರೆತುಬಿಡೋಣ, ಅಂತ. ಹಾಗಾದರೆ ಹಿಂದೊಮ್ಮೆ ನಾವಿಬ್ಬರೂ ಪ್ರೀತಿಸಿದ್ದನ್ನೂ ಆತ ಮರೆತುಬಿಟ್ಟನೋ? ಪ್ರೀತಿ ಅಂದರೇನು? ಓರ್ವ ಗಂಡಸು ಏಕಕಾಲದಲ್ಲಿ ಎಷ್ಟು ಹೆಂಗಸರನ್ನು ಪ್ರೀತಿಸಬಲ್ಲ? ಅದೆಲ್ಲಾ ನಿಜಾವ ಪ್ರೀತೀನಾ? ಅಥವಾ ಲೈಂಗಿಕ ಆಸಕ್ತಿಯೋ? ಜನಾರ್ದನನಿಗೆ ತನ್ನ ಲೈಂಗಿಕ ವಾಂಛೆಯನ್ನು ತೀರಿಸಿಕೊಳ್ಳಲು ನನ್ನ ಸಹಕಾರ ಕಡೀಮೆಯಾಗಿತ್ತೇ? ನನ್ನಲ್ಲಿ ಏನು ಕೊರತೆಯಿತ್ತು? ಕವಿತಾಳ ತಲೆಯಲ್ಲಿ ನೂರೆಂಟು ಪ್ರಶ್ನೆಗಳು. ಆದರೂ ಆಕೆಯ ಹೃದಯದಲ್ಲಿ ಜನಾರ್ದನನ ಮೇಲಿನ ಪ್ರೀತಿ ಇನ್ನೂ ಜೀವಂತವಾಗಿತ್ತು. ಆಕೆ ಪ್ರೀತಿಸಿದ್ದು ಆತನೋರ್ವನನ್ನೇ.

ದಿನಗಳು ವಾರಗಳಾಗಿ ತಿಂಗಳುಗಳಾಗಿ ಸಾಗುತ್ತಿದ್ದವು. ಜೀವನ ಮಾಮೂಲಿನಂತೆ ಸಾಗುತ್ತಿತ್ತು. ಅದೊಂದು ಮುಂಜಾನೆ ಲಲಿತಾ ಇದ್ದಕ್ಕಿದ್ದಂತೆ ವಾಂತಿ ಮಾಡುತ್ತಿರುವುದನ್ನು ಕಂಡ ಕವಿತಾ ಗಾಬರಿಯಾದಳು. ಕರೆದು ಕೇಳಿದಳು ಏನಾಗಿದೆ ಅಂತ. ಪಿತ್ತ ಜಾಸ್ತಿ ಆಗಿದೆ ಎಂದು ಸಮಜಾಯಿಷಿ ನೀಡಿದ ಲಲಿತಾ, ಮಿಂದುಟ್ಟು ತಯಾರಾಗಿ ಕೆಲಸಕ್ಕೆ ಹೋಗಿದ್ದಳು. ಮಾರನೇ ದಿನ ಮುಂಜಾನೆ ಲಲಿತಾ ಎದ್ದಿರಲೇ ಇಲ್ಲ. ತಡವಾಗಿ ಎದ್ದವಳು, ತಲೆ ಸುತ್ತಿ ಬರುತ್ತಿದೆ, ವಾಂತಿ ಬರುತ್ತಿದೆ ಎಂದು ಹೇಳಿ ರಜೆ ಹಾಕಿದಳು. ಹೀಗೆಯೇ ನಾಲ್ಕಾರು ದಿನಗಳೂ ಆಕೆ ಅನಾರೋಗ್ಯ ಎಂದು ಹೇಳಿಕೊಂಡಾಗ, ಪರಿಚಯದ ಮಹಿಳಾ ವೈದ್ಯರಿಗೆ ತೋರಿಸಲು ಕವಿತಾಳೇ ಸಲಹೆ ನೀಡಿದಳು. ಜನಾರ್ದನನೊಂದಿಗೆ ವೈದ್ಯರಲ್ಲಿಗೆ ಹೋಗಿ ಬಂದಾಕೆ ಮೌನವಾಗಿದ್ದಳು. ಏನೆಂದು ಹೇಳುತ್ತಿರಲಿಲ್ಲ. ಆಮೇಲೆ ಕವಿತಾಳೇ ಆ ವೈದ್ಯರಿಗೆ ಕರೆಮಾಡಿ ವಿಷಯ ತಿಳಿದುಕೊಳ್ಳಬೇಕಾಯ್ತು. ವಿಷಯ ತಿಳಿದ ಕವಿತಾಳಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ತಾನು ಹದ್ದಿನ ಕಣ್ಣಿಟ್ಟು ಕಾದಿದ್ದರೂ ಇವರೀರ್ವರೂ ತನಗೆ ಮೋಸಮಾಡಿದರಲ್ಲಾ ಎನ್ನುವ ಬೇಸರ ಮೂಡಿತು. ಇನ್ನು ಇವರೊಂದಿಗೆ ಇರುವುದು ಸಾಧ್ಯವೇ ಇಲ್ಲ ಎಂದು ನಿರ್ಧಸಿದಳು.

ರಾತ್ರಿ ಮತ್ತದೇ ಕತೆ ಶುರು ಆಯ್ತು. ತನ್ನ ಕಣ್ತಪ್ಪಿಸಿ ಅವರಿಬ್ಬರೂ ಹೀಗೆಲ್ಲಾ ಮಾಡುವುದು ಹೇಗೆ ಸಾಧ್ಯವಾಯ್ತು ಎಂದು ತಿಳಿದುಕೊಳ್ಳುವ ಕುತೂಹಲ ಆಕೆಗೆ. ಲಲಿತಾಳೇ ಎಲ್ಲಾ ತಿಳಿಸಿದಳು.

ಜನಾರ್ದನ ಮತ್ತು ಲಲಿತಾ ಕೆಲಸಕ್ಕೆ ಹೋದ ಮೇಲೆ, ಪುಟ್ಟ ಮಕ್ಕಳೊಂದಿಗೆ ಕವಿತಾ ಒಬ್ಬಳೇ ಮನೆಯಲ್ಲಿ ಉಳಿಯುತ್ತಾಳೆ. ಮಕ್ಕಳನ್ನು ಬಿಟ್ಟು  ಆಕೆಗೆ ಸ್ನಾನ ಮಾಡುವುದು ಕಷ್ಟವಾಗುತ್ತಿತ್ತಾದ್ದರಿಂದ, ಕವಿತಾಳೂ ಮುಂಜಾನೆಯೇ, ಎಲ್ಲರಿಗಿಂತ ಮೊದಲೇ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡಿದ್ದಳು. ಆಕೆ ಸ್ನಾನ ಮುಗಿಸಿದ ನಂತರ, ಅವರೀರ್ವರೂ ಸ್ನಾನ ಮಾಡುತ್ತಿದ್ದರು. ಹಾಗಾಗಿ ಕವಿತಾ ಸ್ನಾನಕ್ಕೆ ಹೋದ ಸಮಯವನ್ನು ಅವರೀರ್ವರೂ ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಾ ಬಂದಿದ್ದರು.

ಏನೋ ಅಚಾತುರ್ಯ ನಡೆದು ಲಲಿತಾ ಗರ್ಭಿಣೀಯಾಗದೇ ಉಳಿದಿದ್ದರೆ, ವಿಷಯ ಹೊರಗೆ ಬರುತ್ತಿರಲೇ ಇಲ್ಲ.

ಎಲ್ಲವನ್ನೂ ಕೇಳಿದ ಕವಿತಾಳಿಗೆ ದುಃಖ ಕೋಪ ಎರಡನ್ನೂ ತಡೆದುಕೊಳ್ಳಲಾಗಲಿಲ್ಲ. ಕೂತಲ್ಲಿಂದ ಎದ್ದವಳೇ, ತಂಗಿಯ ಕೆನ್ನೆಗೆ ಒಂದು ಬಾರಿಸಿದಳು. ಇದರಿಂದ ಕುಪಿತನಾದ ಜನಾರ್ದನ ಕವಿತಾಳ ಕೆನ್ನೆಗೆ ಬಾರಿಸಿದ. “ನಿನಗೆ ಇರಲಿಕ್ಕಾದರೆ ಇರು. ಇಲ್ಲಾಂದ್ರೆ ನಿನ್ನ ದಾರಿ ನೀನು ನೋಡಿಕೋ”  ಅಂತ ಅಂದು ಬಿಟ್ಟ. ಅಲ್ಲಿಗೆ ಎಲ್ಲವೂ ಮುಗಿಯಿತು.

ಮಾರನೇ ದಿನ ಒಂದು ಪೆಟ್ಟಿಗೆಯಲ್ಲಿ ತಮ್ಮ ಬಟ್ಟೆಗಳನ್ನು ತುಂಬಿಸಿಕೊಂಡು, ತನ್ನ ಎರಡು ಚಿಕ್ಕ ಮಕ್ಕಳೊಂದಿಗೆ, ಮನೆಯಿಂದ ಹೊರಟವಳು, ತನ್ನ ಬಾಲ್ಯ ಸ್ನೇಹಿತನಾದ ರವಿರಾಜನ ಸಹಾಯದಿಂದ ಒಂದು ಚಿಕ್ಕ ಮನೆಯನ್ನು ಲೀಸ್ ಮೇಲೆ ಪಡೆದು, ಅಲ್ಲಿ ವಾಸಿಸತೊಡಗಿದಳು. ಮೈಮೇಲಿದ ಚಿನ್ನ ಹಾಗೂ ತನ್ನ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದ್ದ ಒಂದಷ್ಟು ಹಣ ಆಕೆಯ ಸಹಾಯಕ್ಕೆ ಬಂದಿತ್ತು. ಮಕ್ಕಳನ್ನು ಶಿಶು ಕೇಂದ್ರದಲ್ಲಿ ಬಿಟ್ಟು, ಕೆಲಸಕ್ಕೆ ಹೋಗಲು ಆರಂಭಿಸದಳು. ಕ್ಯಾಟರಿಂಗ್ ಕಂಪನಿಗಳಿಗೆ ವ್ಯವಹಾರ ಕುದುರಿಸಿಕೊಟ್ಟು, ಅವರಿಂದ ಕಮಿಷನ್ ಪಡೆಡು ಜೀವನ ಸಾಗಿಸುತ್ತಿದ್ದಳು. ಒಂದಾರು ತಿಂಗಳ ನಂತರ ಒಂದು ಮಾರ್ವಾಡಿಯ ಕ್ಯಾಟರಿಂಗ್ ಕಂಪನಿಯಲ್ಲಿ ಖಾಯಂ ಕೆಲಸಕ್ಕೆ ಸೇರಿಕೊಂಡಳು.

ವರುಷಗಳು ನಿಮಿಷಗಳಂತೆ ಸಾಗಿಹೋದವು. ಕಷ್ಟ ಸುಖಗಳು ಜೊತೆಜೊತೆಯಾಗಿ ಕಣ್ಣಾಮುಚ್ಚಾಲೆ ಆಡುತ್ತಾ, ಕವಿತಾ ಮತ್ತವಳ ಮಕ್ಕಳನ್ನು ಆಡಿಸುತ್ತಾ ಸಾಗಿದವು. ಆದರೂ, ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ನೀಡಿ,  ಅವರಿಗೆ ಯಾವುದೇ ಕೊರತೆಯಾಗದ ರೀತಿಯಲ್ಲಿ ಬೆಳೆಸಿದ ಆಕೆ, ತಕ್ಕ ಮಟ್ಟಿಗೆ, ನೆಮ್ಮದಿಯಾದ ಜೀವನವನ್ನೇ ಸಾಗಿಸಿದಳು. ಆಕೆಗೆ ತನ್ನ ಮೇಲೆ ಮತ್ತು ತನ್ನ ಮಕ್ಕಳ ಮೇಲೆ ಹೆಮ್ಮೆ ಇತ್ತು. ಮಕ್ಕಳೂ ಅಮ್ಮನ ಪರಿಶ್ರಮಕ್ಕೆ ತಕ್ಕುದಾದ ರೀತಿಯಲ್ಲಿ ಬೆಳೆದರು. ಈಗ ಮಗ ಪದವಿಪೂರ್ವ ತರಗತಿಯಲ್ಲಿದ್ದರೆ, ಮಗಳು ಗೀತ ಒಂಭತ್ತನೇ ತರಗತಿಯಲ್ಲಿ. ಆ ಮಕ್ಕಳಿಗೆ ತನ್ನ ಜೀವನದ ಬಗ್ಗೆ, ಅವರ ಅಪ್ಪನ ಬಗ್ಗೆ ಇದ್ದುದನ್ನು ಇದ್ದ ಹಾಗೆ ಎಲ್ಲವನ್ನೂ ಹೇಳಿ ಬೆಳೆಸಿದ್ದಳು.

ಈ ನಡುವಿನ ಹದಿಮೂರು ವರುಷಗಳಲ್ಲಿ ಕವಿತಾಳಿಗೆ ಯಾವುದಾದರೂ ಸಮಾರಂಭಗಳಲ್ಲಿ ಮಾತ್ರ ಜನಾರ್ದನ ಮತ್ತು ಲಲಿತಾರ ಭೇಟಿ ಆಗುತ್ತಿತ್ತು. ಅವರಿಗೆ ಒಂದು ಗಂಡು ಮಗು ಇತ್ತು. ಕವಿತಾಳ ಮಕ್ಕಳೊಂದಿಗೆ ಜನಾರ್ದನ ಸಿಕ್ಕಾಗಲೆಲ್ಲಾ ಚೆನ್ನಾಗಿಯೇ ಮಾತನಾಡುತ್ತಿದ್ದ. ಮಕ್ಕಳಿಗೆ ಆಗಾಗ ತಿಂಡಿ, ಬಟ್ಟೆ ಕೊಡಿಸುತ್ತಾ ಇದ್ದ ಜನಾರ್ದನ. ಕವಿತಾ ಅದನ್ನೆಂದೂ ವಿರೋಧಿಸುತ್ತಿರಲಿಲ್ಲ. ಆದರೆ ಆಕೆಯೊಂದಿಗೆ ಹೆಚ್ಚಿನ ಮಾತಿಗೆ ಅವಕಾಶವನ್ನೇ ನೀಡುತ್ತಿರಲಿಲ್ಲ ಕವಿತಾ. ಕಡ್ಡಿಮುರಿದಂತೆ ಎರಡು ಮಾತುಗಳನ್ನು ಆಡಿ ಮುಗಿಸಿಬಿಡುತ್ತಿದ್ದಳು. ಆತನೂ ಹೆಚ್ಚು ಒತ್ತಾಯಿಸುತ್ತಿರಲಿಲ್ಲ.

ಈಗ ಹಠಾತ್ ಜನಾರ್ದನನ ಅನಾರೋಗ್ಯದ ಸುದ್ದಿ.

ಕವಿತಾಳಿಗೆ ಇಡೀ ರಾತ್ರಿ ಕಣ್ಣು ಮುಚ್ಚಿ ನಿದ್ರಿಸಲಾಗಲಿಲ್ಲ.

ತನ್ನ ಜೀವನದಲ್ಲಿ ಅದೇನೇ ನಡೆದಿದ್ದರೂ, ಹಿಂದೊಮ್ಮೆ ತಮ್ಮ ನಡುವಿದ್ದ ಆ ಪ್ರೀತಿಗೆ ಒಂದು ಅರ್ಥವಿತ್ತು. ಅದರ ನೆನಪು ಇನ್ನೂ ಕವಿತಾಳ ಮನಸ್ಸಿಗೆ ಮುದನೀಡುತ್ತಿದೆ.

ತಾನು ಈಗ ಏನು ಮಾಡುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿತು.

ಕವಿತಾಳಿಗೆ ಏನೇ ಸಮಸ್ಯೆ ಎದುರಾದರೂ ನೆರವಿಗೆ ಬರುತ್ತಿದ್ದವನು ಆಕೆಯ ಬಾಲ್ಯ ಸ್ನೇಹಿತ ರವಿರಾಜ. ಆಕೆಯಲ್ಲಿ ಸದಾ ನೈತಿಕಬಲವನ್ನು ತುಂಬುತ್ತಿದ್ದಾತ. ಅತೀ ಅಗತ್ಯ ಎನಿಸಿದಾಗ ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದ. ಆದರೆ ಅವರ ಸ್ನೇಹ ಎಂದೂ ಎಲ್ಲೆ ಮೀರಿರಲಿಲ್ಲ. ಅವರ ನಡುವೆ ಭೇಟಿ ಆಗುತ್ತಿದ್ದುದೇ ಕಡಿಮೆ, ವರ್ಷಕ್ಕೆ ಒಂದೋ ಎರಡೋ  ಬಾರಿ ಅಷ್ಟೇ. ಏನಿದ್ದರೂ ಫೋನಿನಲ್ಲಿ ಮಾತುಕತೆ. ಯಾವಾಗಲಾದರೂ ತನ್ನ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯುತ್ತಿದ್ದಳು, ಸಲಹೆ ಪಡೆಯುತ್ತಿದ್ದಳು,  ಅಷ್ಟೇ. ರವಿರಾಜನ ಮೇಲೆ ಆಕೆಗೆ ಗೌರವ ಇದ್ದಿತ್ತಾದರೂ, ಆತನನ್ನು ಜನಾರ್ದನನ ಸ್ಥಾನದಲ್ಲಿ ಕೂರಿಸುವುದು ಸಾಧ್ಯವಾಗಿರಲಿಲ್ಲ. ಅದಕ್ಕೆ ಆಕೆಯ ಮನದೊಳಗೆ ಇನ್ನೂ ಜನಾರ್ದನನ ಮೇಲಿದ್ದ ಪ್ರೀತಿಯೂ ಕಾರಣವಾಗಿದ್ದಿರಬಹುದು. ತನ್ನ ಮೊದಲ ಪ್ರೀತಿಯನ್ನು ಕವಿತಾಳಿಂದ ಎಂದಿಗೂ ಮರೆಯಲಾಗಿರಲೇ ಇಲ್ಲ.

ಇಂದೂ ಆತನಿಗೇ ಕರೆಮಾಡಿ ಏನು ಮಾಡಲಿ ಎಂದು ಆತನ ಸಲಹೆ ಕೇಳಿದಳು.

“ಕವಿತಾ, ನಿನ್ನಲ್ಲಿರುವ ಮಾನವೀಯತೆಯ ಪರೀಕ್ಷೆ ನಡೆಯುತ್ತಿದೆ ಇಂದು. ಇಂದು ನೀನು ಏನೂ ಮಾಡದೇ ಇದ್ದು, ನಾಳೆ ಕೊರಗುವುದಕ್ಕಿಂತ, ನಿನ್ನ ಮಕ್ಕಳ ದೃಷ್ಟಿಯಲ್ಲಿ ಚಿಕ್ಕದಾಗುವುದಕ್ಕಿಂತ, ಅವರ ದೃಷ್ಟಿಯಲ್ಲಿ ಮೇಲೇರುವುದು ಒಳ್ಳೆಯದು. ಅವರ ಇಚ್ಛೆಯಂತೆ ಅವರ  ಜೊತೆಗೆ ಆಸ್ಪತ್ರೆಗೆ ಹೋಗಿ ಬಾ. ದುಡ್ಡು ಬರುತ್ತದೆ, ಹೋಗುತ್ತದೆ. ಅದು ಎಲ್ಲಿ ಖರ್ಚಾಗಬೇಕೆಂದಿದೆಯೋ ಅಲ್ಲೇ ಖರ್ಚಾಗಬೇಕು, ಆ ಬಗ್ಗೆ ಚಿಂತಿಸಬೇಡ. ಸಹಾಯ ಬೇಕಿದ್ದರೆ ತಿಳಿಸು” ಅನ್ನುವ ಸಲಹೆ ನೀಡಿದ ರವಿರಾಜ..

ಮುಂಜಾನೆ ಎದ್ದವನೇ ರಮೇಶ್ ಆಸ್ಪತ್ರೆಗೆ ಹೊರಡಲು ಅನುವಾಗಿದ್ದ. ತಂಗಿಯನ್ನೂ ತಯಾರುಗೊಳಿಸಿದ್ದ. ಕವಿತಾಳ ಹತ್ತಿರ ಬಂದವನು  “ಅಮ್ಮಾ, ಒಮ್ಮೆ ಹೋಗಿ ಬರೋಣ. ಡೋಂಟ್ ಸೇ ನೋ. ಏನೇ ಆದರೂ ಹೀ ಈಸ್ ಅವರ್ ಡ್ಯಾಡ್” ಅಂದ.   ಮಾತಿಲ್ಲದೇ ಹೊರಟು ನಿಂತಳು ಕವಿತಾ.

ಆಸ್ಪತ್ರೆಯ ಐಸಿಯು ಹೊರಗಡೆ ಕೂತಿದ್ದ ಲಲಿತಾ, ಎದ್ದು ಅಕ್ಕನನ್ನು ತಬ್ಬಿಕೊಂಡು ಅಳಲು ಆರಂಭಿಸಿದಳು. ಕವಿತಾ “ ಸರಿ ಬಿಡು ಏನಾಗಿದೆ? ವೈದ್ಯರು ಏನು ಹೇಳ್ತಿದಾರೆ?”

ಲಲಿತಾ ಅಂದಳು “ಶ್ವಾಸಕೋಶದಲ್ಲಿ ಕಫ ಹೆಪ್ಪುಗಟ್ಟಿದೆಯಂತೆ.  ಆಪರೇಶನ್ ಮಾಡಬೇಕಂತೆ. ಅದಕ್ಕೆ ಸಹಿ ಮಾಡಿಕೊಡಬೇಕು. ಅವರ ಹೆಂಡತಿ ಎಂದು ನಿನ್ನ ಹೆಸರನ್ನು ಬರೆಸಿದ್ದೇನೆ. ನಿನ್ನ ಅನುಮತಿ ಬೇಕು, ಸಹಿ ಬೇಕು”. 

ವೈದ್ಯರನ್ನು ಭೇಟಿಮಾಡಿದ ಕವಿತಾ ಎಲ್ಲಿ ಹೇಳಿದರೋ ಅಲ್ಲೆಲ್ಲಾ ಸಹಿ ಮಾಡಿಕೊಟ್ಟಳು. ದುಡ್ಡು ಕಟ್ಟಬೇಕು ಅಂದಾಗ, ಡೆಬಿಟ್ ಕಾರ್ಡ್ ಮುಖಾಂತರ ದುಡ್ಡೂ ಕಟ್ಟಿದಳು. ಅಂದೇ ಆಪರೇಶನ್ ಮಾಡಿ ಮುಗಿಸಿದರು. ಶ್ವಾಸಕೋಶದಲ್ಲಿ ಹೆಪ್ಪುಗಟ್ಟಿದ್ದ ಕಫವನ್ನು ಹೊರತೆಗೆದರು. ಮಾರನೇ ದಿನ ಉಸಿರಾಟ ಮಾಮೂಲಿನ ಸ್ಥಿತಿಗೆ ಮರಳಿತು. ಸೋಮವಾರ ನೋಡಲು ಹೋದಾಗ, ಜನಾರ್ದನ ಕಣ್ಣು ಬಿಟ್ಟಿದ್ದ. ಕವಿತಾಳನ್ನು ನೋಡಿ, ಆತನ ಕಣ್ಣುಗಳಿಂದ ಕಣ್ಣೀರು ಹರಿಯತೊಡಗಿತು. ಮಾತಿಲ್ಲ. ಮೌನವಾಗಿಯೇ ತನ್ನ ಕೈಗಳನ್ನು ಜೋಡಿಸಿ ನಮಸ್ಕರಿಸಿದ. ತನ್ನಿಂದ ತಪ್ಪಾಗಿದೆಯೆಂದೂ, ಅಕೆಯ ಉಪಕಾರಕ್ಕಾಗಿ ಧನ್ಯವಾದಗಳನ್ನೂ ತಿಳಿಸುವಂತಿತ್ತು ಆತನ ಭಾವ. ಕವಿತಾಳೂ ಭಾವುಕಳಾದಳು. ಆತನ ಹಸ್ತಗಳನ್ನು ತನ್ನ ಹಸ್ತಗಳಲ್ಲಿ ಇರಿಸಿಕೊಂಡು, ಮೌನವಾಗಿ ಸುರಿಸಿದ ಕಣ್ಣೀರು ಆ ಹಸ್ತಗಳ ಮೇಲೆ ಬಿದ್ದಿತ್ತು.

ಇನ್ನೇನು ಆತ ಸುಧಾರಿಸುತ್ತಿದ್ದಾನೆ. ಎರಡು ದಿನ ಬಿಟ್ಟು ಮನೆಗೆ ಹೋಗಬಹುದು ಎಂದು ತಿಳಿದು ಲಲಿತಾಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು ಮನೆಗೆ ಮರಳಿದಳು.

ಮೂರು ದಿನಗಳ ನಂತರ ಮತ್ತೆ ಲಲಿತಾಳ ಕರೆಬಂತು. ಮಗನೊಂದಿಗೆ ಆಸ್ಪತ್ರೆಗೆ ಹೋದಳು ಕವಿತಾ.  ಜನಾರ್ದನನ ಸ್ಥಿತಿ ತೀರಾ ಹದಗೆಟ್ಟಿತ್ತು. ಪುನಃ ಕೃತಕ ಉಸಿರಾಟದ ಸಾಧನಗಳನ್ನು ಅಳವಡಿಸಿದ್ದರು. ಆತನ ಕಿಡ್ನಿಗಳು ಹಾಗೂ ಲಿವರ್ ಎಲ್ಲಾ ಕೆಟ್ಟುಹೋಗಿವೆ ಅಂದರು ವೈದ್ಯರು. ಯಾವುದೇ ಶಸ್ತ್ರಕ್ರಿಯೆಯಿಂದ ಪ್ರಯೋಜನವಾಗದು. ಬದುಕಿದಷ್ಟು ದಿನ ಬದುಕಬಹುದು, ಅಂದರು. ಅತಿಯಾದ ಮದ್ಯಪಾನದಿಂದಾಗಿ ಈ ಪರಿಸ್ಥಿತಿ ಆಗಿದೆಯಂತೆ. ಅಲ್ಲದೆ ಅಲ್ಲಿ ಉದ್ದದ ಬಿಲ್ ತಯಾರಾಗಿ ಈಕೆಯನ್ನು ಕಾಯುತ್ತಾ ಇತ್ತು. ಮುಂದಿನ ನಾಲ್ಕಾರು ದಿನಗಳಲ್ಲಿ ಇನ್ನಷ್ಟು ಖರ್ಚು ಮಾಡಿಸಿದರು.

ರವಿರಾಜನಿಗೆ ದಿನವೂ ಕರೆಮಾಡಿ ಈ ಎಲ್ಲಾ ವಿಷಯಗಳನ್ನು ತಿಳಿಸುತ್ತಿದ್ದ ಕವಿತಾ, ಈಗ ಏನು ಮಾಡಲಿ ಎಂದು ಆತನನ್ನೇ ಕೇಳಿದಳು.    

“ಜನಾರ್ದನ ಇನ್ನು ಮಾಮೂಲು ಸ್ಥಿತಿಗೆ ಮರಳುವ ಸಾಧ್ಯತೆಗಳಿಲ್ಲ. ಲಿವರ್ ಕೆಟ್ಟಿದೆ, ಕಿಡ್ನಿಗಳು ಕೆಟ್ಟಿವೆ. ಉಸಿರಾಟ ಕಷ್ಟವಾಗುತ್ತಿದೆ. ದಿನದಿಂದ ದಿನಕ್ಕೆ ನಿನ್ನ ಕೈಯಿಂದ ಖರ್ಚು ಮಾಡಿಸಿಯಾರು ಆಸ್ಪತ್ರೆಯವರು. ಬೇರೇನೂ ಸಾಧಿಸಿದಂತಾಗುವುದಿಲ್ಲ. ಉಸಿರಾಟಕ್ಕಾಗಿ ಅಳವಡಿಸಿರುವ ಕೃತಕ ಸಾಧನಗಳನ್ನು  ತೆಗೆಯಲು ಅನುಮತಿ ಪತ್ರ ಸಹಿಮಾಡಿ ಕೊಟ್ಟುಬಿಡು” ಎಂದು ರವಿರಾಜ ಸಲಹೆ ನೀಡಿದ.

ಇಡೀರಾತ್ರಿ ಯೋಚಿಸಿದ ಕವಿತಾ ಮುಂಜಾನೆ ಗಟ್ಟಿಮನಸ್ಸು ಮಾಡಿ ಆಸ್ಪತ್ರೆಗೆ ತೆರಳುತ್ತಾಳೆ. ಜನಾರ್ದನನನ್ನು ನೋಡಲು ಹೋದರೆ, ಸ್ವಲ್ಪವೇ ಕಣ್ಣುಬಿಟ್ಟು, ತಾನು ಜೀವಂತವಾಗಿದ್ದೇನೆ ಅನ್ನುವುದರ ಸೂಚನೆ ನೀಡುತ್ತಿದ್ದ. ಆ ಕಣ್ಣುಗಳಲ್ಲಿ, ತನ್ನ ಯೌವನದ ದಿನಗಳಲ್ಲಿ ಕಂಡಿದ್ದ ಒಲವು ಮತ್ತೆ  ಕಂಡು ಬರುತ್ತಿತ್ತು ಕವಿತಾಳಿಗೆ. ಅನುಮತಿ ಪತ್ರಕ್ಕೆ ಸಹಿ ಹಾಕಲಾಗಲೇ ಇಲ್ಲ. ಹೀಗೆಯೇ ನಾಲ್ಕು ದಿನ ಕಳೆದಳು. ಎಷ್ಟೇ ದೃಢಮನಸ್ಸಿನಿಂದ ತೆರಳಿದರೂ ಆತನ ಕಣ್ಣುಗಳಲ್ಲಿ ಆ ಒಲವನ್ನು, ತನ್ನ ಬಿಂಬವನ್ನು ಕಂಡು, ಸೋತು ಮರಳುತ್ತಿದ್ದಳು.

ಮತ್ತೆ ರವಿರಾಜನಿಗೆ ಕರೆಮಾಡಿ ಸಲಹೆ ಕೇಳಿದಳು.

“ನಾಳೆ ಸೀದಾ ಅಸ್ಪತ್ರೆಯ ಕಚೇರಿಗೆ ಹೋಗು. ಅಲ್ಲಿ ಆ ಅನುಮತಿ ಪತ್ರಕ್ಕೆ ಸಹಿಮಾಡಿ ನಂತರ ಜನಾರ್ದನನನ್ನು  ನೋಡಲು ಹೋಗು” ಅನ್ನುವ ಸಲಹೆ ದೊರೆಯಿತು.

ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ ಕವಿತಾ. ನಾಳೆ ನಾನು ಸಹಿ ಹಾಕಲೇ ಬೇಕು. ತನ್ನಲ್ಲಿರುವ ಹಣವೆಲ್ಲಾ ಖರ್ಚಾಗಿದೆ. ಇನ್ನು ತಡಮಾಡಿದರೆ ಸಾಲ ಮಾಡಬೇಕಾದೀತು. ಸಾಲ ತೀರಿಸುವ ಬಗೆ ಹೇಗೆ? ಇಲ್ಲ. ಇನ್ನು ಸಹಿಸಲು ಸಾಧ್ಯವಿಲ್ಲ. ರವಿರಾಜ ಹೇಳಿದಂತೆಯೇ ಮಾಡುತ್ತೇನೆ ಎಮ್ದು ನಿರ್ಧರಿಸಿದಳು.

ಮಾರನೇ ದಿನ ಸೀದಾ ಆಸ್ಪತ್ರೆಯ ಕಚೇರಿಗೆ ತೆರಳಿದವಳು, ಅನುಮತಿ ಪತ್ರಕ್ಕೆ ಸಹಿಮಾಡಿ, ನಂತರ ಜನಾರ್ದನನನ್ನು ನೋಡಲು ಹೋದಳು. ಆತ ಕಣ್ಮುಚ್ಚಿಕೊಂಡೇ ಇದ್ದ. ಎಚ್ಚರವಿಲ್ಲ. ಸಮಾಧಾನದ ನಿತ್ತುಸಿರುಬಿಟ್ಟಳು ಕವಿತಾ. ಅರ್ಧಗಂಟೆಯ ನಂತರ ವೈದ್ಯರುಗಳು ಬಂದು ಆ ಕೃತಕ ಸಾಧನಗಳನ್ನು ತೆಗೆಯಲು ತೊಡಗಿದರು. ಆಗ ಜನಾರ್ದನ ಕಣ್ಣುಬಿಟ್ಟು “ಏನು ಮಾಡ್ತಿದೀರಿ?” ಅನ್ನುವಂತೆ ಕವಿತಾಳ ಕಡೆ ನೋಡಿ ಸನ್ನೆ ಮಾಡಿ ಕೇಳಿದ. “ನಿನ್ನನ್ನು ಮನೆಗೆ ಕರೆದುಕೊಂಡು ಹೋಗ್ತಾ ಇದ್ದೇವೆ” ಎಂದು ಹೇಳಿದ ಕವಿತಾ ಮುಖ ಮರೆಸಿಕೊಂಡು ಹೊರನಡೆದಳು.

ರವಿರಾಜನಿಗೆ ಸಂದೇಶ ಮಾಡಿದಳು. “ವೆಂಟಿಲೇಟರ್ಸ್ ಅನ್ನು ತೆಗೆಯುತ್ತಿದ್ದೇವೆ L”. ಆತ ಆ ಸಂದೇಶವನ್ನು ಓದಿ, ತಾನು ನೀಡಿದ ಸಲಹೆ ಸೂಕ್ತವಾಗಿತ್ತೋ ಇಲ್ಲವೋ ಅನ್ನುವ ಗೊಂದಲಕ್ಕೆ ಈಡಾದ. ಹತ್ತು ನಿಮಿಷಗಳ ನಂತರ,  ಇನ್ನೂ ಚಿಂತಾಕ್ರಾಂತನಾಗಿದ್ದವನ ಮೊಬೈಲ್ ಸದ್ದು ಮಾಡಿತು.

ಅಲ್ಲಿ ಇನ್ನೊಂದು ಸಂದೇಶ “ಎಲ್ಲಾ ಮುಗಿಯಿತು. ಜನಾರ್ದನ ಇನ್ನಿಲ್ಲ L ಆತನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ನೀನೂ ಪ್ರಾರ್ಥಿಸು”.

ಮರುತ್ತರ ನೀಡಿದ ರವಿರಾಜ “ಹೂಂ… ನಾನು ಪ್ರಾರ್ಥಿಸುತ್ತೇನೆ. ಯಾವುದು ಸರಿ ಯಾವುದು ತಪ್ಪು ಅನ್ನುವುದು ದೇವರಿಗಷ್ಟೇ ಗೊತ್ತು. ಯಾವತ್ತೂ ಒಂಟಿಯೆಂದೆಣಿಸಬೇಡ. ನನ್ನ ಸಹಾಯ ಬೇಕಿದ್ದಾಗ ತಿಳಿಸು. ನಾನು ನಿಮ್ಮ ಜೊತೆಗಿದ್ದೇನೆ”

ಅಂದು ಜನಾರ್ದನನನ್ನು ತನ್ನ ತಂಗಿಯ ಪಾಲಿಗೆ ಬಿಟ್ಟುಕೊಟ್ಟು ಬರುವಾಗ ಅಷ್ಟೊಂದು ನೊಂದಿರಲಿಲ್ಲವೇನೋ ಕವಿತಾ. ಇಂದು ಜನಾರ್ದನನ ಅಂತ್ಯಕ್ರಿಯೆ ಮುಗಿಸಿದಾಗ ಕವಿತಾಳ ಬಳಿ ಬಿಡಿಗಾಸೂ ಉಳಿದಿರಲಿಲ್ಲ. ಈ ನಡುವಿನ ವರುಷಗಳಲ್ಲಿ ಕೂಡಿಸಿಟ್ಟಿದ್ದ ಮೂರು ಲಕ್ಷ ರೂಪಾಯಿಗಳನ್ನು ಆಸ್ಪತ್ರೆಯಲ್ಲಿ ಜನಾರ್ದನನಿಗಾಗಿ ಖರ್ಚುಮಾಡಿದ್ದಳು.

ಆಸ್ಪತ್ರೆಯಲ್ಲಿ ಶವವನ್ನು ಬಿಡಿಸಿಕೊಳ್ಳಲು ಬಾಕಿ ಇದ್ದ  ಇಪ್ಪತ್ತುಸಾವಿರ ರೂಪಾಯಿಗಳನ್ನು ಕಟ್ಟಬೇಕಿತ್ತು. ಅದನ್ನೂ ರವಿರಾಜನೇ ಕಟ್ಟಿ ಬಂದಿದ್ದ.

ಸಾಯಂಕಾಲ ರುದ್ರಭೂಮಿಯಿಂದ ಮನೆಯತ್ತ ಹೊರಟ ಕವಿತಾಳ ಅಕ್ಕ ಪಕ್ಕ  ರಮೇಶ್ ಮತ್ತು ಗೀತಾ ನಡೆಯುತ್ತಿದ್ದರು. ಕವಿತಾಳ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು.

ಅವರಿಂದ ಅನತಿ ದೂರದಲ್ಲಿ ಲಲಿತಾಳೂ ಅಳುತ್ತಾ ತನ್ನ ಮಗನೊಂದಿಗೆ ತನ್ನ ಮನೆಯತ್ತ ನಡೆಯುತ್ತಿದ್ದಳು.

ರಮೇಶ್  ಕೇಳಿದ “ಅಮ್ಮಾ… ಯಾಕೆ ಅಳ್ತೀಯಾ? ನಮ್ಮ ಕರ್ತವ್ಯ ನಾವು ಮಾಡಿದ್ದೇವೆ… ಎಲ್ಲಾ ಮರೆತು ಲೆಟ್ ಅಸ್ ಸ್ಟಾರ್ಟ್ ಅ ನ್ಯೂ ಲೈಫ್ …”

ಆತನ ಮಾತು ಕೇಳಿದ ಕವಿತಾಳಿಗೆ ತನ್ನ ಮಗ ತುಂಬಾ ಬೆಳೆದುಬಿಟ್ಟಿದ್ದಾನೆ ಅಂತ ಅನಿಸಿತು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ತನ್ನ ಸ್ನೇಹಿತ ರವಿರಾಜನಿಗೆ, ಕವಿತಾ ತನ್ನ ಕಣ್ಣಿಂದಲೇ ವಂದಿಸಿ, ಧನ್ಯವಾದಗಳನ್ನು ಅರ್ಪಿಸಿದಳು.

ಕವಿತಾ ಮತ್ತೊಮ್ಮೆ ಶೂನ್ಯದಿಂದ ತನ್ನ ಜೀವನವನ್ನು ಆರಂಭಿಸಬೇಕಾಗಿತ್ತು. ಆದರೆ ಅಲ್ಲಿ ಕತ್ತಲಿರಲಿಲ್ಲ. ಎಲ್ಲವನ್ನೂ ಸ್ಪಷ್ಟವಾಗಿ ತೋರಿಸುವ ಶುಭ್ರ ಬೆಳಕು ಇತ್ತು.

*****

 

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: