ನಮ್ಮೂರಿನಲ್ಲಿ ಓರ್ವ ಹಿರಿಯರು ಯಾವಾಗಲೂ ಹೇಳುತ್ತಿದ್ದರು.
“ನಾವೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಈಗಿನ ಕಾಲದ ಮಕ್ಕಳಿಗೆ ಸ್ವಾತಂತ್ರ್ಯದ ಬೆಲೆ ಏನೆಂಬುದೇ ಗೊತ್ತಿಲ್ಲ”.
“ಸ್ವಾತಂತ್ರ್ಯ ಸಿಕ್ಕುವಾಗ ನಿಮಗೆ ಎಷ್ಟು ವರ್ಷ ಪ್ರಾಯವಾಗಿತ್ತು?”
“ಹೂಂ… ಆಗ ನನಗೆ ಹತ್ತೋ ಹನ್ನೆರಡೋ ವರ್ಷ ಪ್ರಾಯ ಇದ್ದಿರಬಹುದು”
“ಹಾಗಾದರೆ ಆ ಹತ್ತರ ಪ್ರಾಯದಲ್ಲಿ ನಿಮ್ಮದು ಎಂತಹ ಸ್ವಾತಂತ್ರ್ಯಹೋರಾಟ ಅದು”
“ಅದು ಹಾಗಲ್ಲ. ಆಗಿನ ಕಾಲದಲ್ಲಿ ಬ್ರಿಟಿಷರು ಉಡುಪಿಯ ಪೇಟೆಯಲ್ಲಿ ದಾರಿದೀಪ ಹಾಕಿಸಿದ್ದರು. ನಾವು ಅದಕ್ಕೆ ಕಲ್ಲು ಹೊಡೆದು ಒಡೆದು ಹಾಕುತ್ತಿದ್ದೆವು. ಅವರು ಬಲ್ಬ್ ಬದಲಾಯಿಸಿದಾಗಲೆಲ್ಲಾ ನಾವು ಹೇಗಾದರೂ ಮಾಡಿ ಅದನ್ನು ಒಡೆದು ಹಾಕುತ್ತಿದ್ದೆವು. ಅದು ಬ್ರಿಟಿಷ್ ಸರಕಾರದ ವಿರುದ್ಧ ನಮ್ಮ ಹೋರಾಟ ಆಗಿತ್ತು”
“ವಾಹ್… ನಿಮಗೆ ಸ್ವಾತಂತ್ರ್ಯಹೋರಾಟಗಾರರ ಪಿಂಚಣಿಯೂ ಬರ್ತಿರಬೇಕಲ್ಲಾ?”
“ಇಲ್ಲ ಮಗಾ… ಅದಕ್ಕೆ ಜೈಲಿಗೆ ಹೋಗಬೇಕಿತ್ತಂತೆ, ಜೈಲಿಗೆ ಹೋಗಲು ನಮ್ಮ ಅಪ್ಪ-ಅಮ್ಮ ಬಿಡ್ಲಿಲ್ಲ… ಏನು ಮಾಡೋದು ಹೇಳು”
ಹೀಗೂ ಒಂದು ಸ್ವಾತಂತ್ರ್ಯ ಹೋರಾಟದ ಕಥನ.