ಸಿಂಹಾವಲೋಕನ!

16 ಜುಲೈ 13

ತಾಯ ಗರ್ಭದಲ್ಲಿದ್ದಾಗ ಮಲೆನಾಡ ಸಂಸ್ಕೃತಿಯೇ ಉಪಹಾರ
ಬಾಲ್ಯದಲ್ಲಿ ಕರಾವಳಿಯಲಿ ಅಜ್ಜಯ್ಯನಿಂದ ಶಿಸ್ತುಬದ್ಧ ಸಂಸ್ಕಾರ
ಪ್ರಬುದ್ಧನಾಗುವಾಗ ಅಪ್ಪಯ್ಯನವರ ಪ್ರವಚನಗಳ ಮಹಾಪೂರ
ಸ್ವಂತಿಕೆಯನೆನ್ನಲ್ಲಿ ಉಳಿಸಿ ಬೆಳೆಸಿದ್ದು ಮುಂಬಯಿ ಮಹಾನಗರ

ವಾಯುಸೇನೆಯಲ್ಲಿನ ಸೇವೆಯಲ್ಲಿ ಶಿಸ್ತು ನೈತಿಕತೆಯೇ ಆಧಾರ
ಆ ಇಪ್ಪತ್ತು ವರುಷಗಳಲ್ಲಿ ಭಿನ್ನವಿಭಿನ್ನ ವ್ಯಕ್ತಿತ್ವಗಳ ಸಾಕ್ಷಾತ್ಕಾರ
ಈ ಮನವಾಯ್ತು ನಿಸ್ವಾರ್ಥ ಪ್ರೀತಿ ಪ್ರೇಮದ ಅನುಭವಗಳಾಕರ
ಮನದ ಭಾವ ಸ್ಪಂದನಗಳು ಪಡೆದವು ಅಕ್ಷರಗಳ ರೂಪಾಂತರ

ಮಾಡುವಾಗ ಕಳೆದ ಐವತ್ತೊಂದು ವರುಷಗಳ ಸಿಂಹಾಹಲೋಕನ
ಸುಖ ದುಃಖಗಳ ಸಮ್ಮಿಶ್ರ ಭಾವ ಒಮ್ಮೊಮ್ಮೆ ಹಗುರ-ಭಾರ ಮನ
ಅವಕಾಶ ಬೇಕು ಮಾಡಲು ಬರೆದು ರಾಶಿ ಹಾಕಿದುದರವಲೋಕನ
ಜೊಳ್ಳುಗಳ ಕಳೆದು ಕಾಳುಗಳನ್ನು ಮಾಡಬೇಕಿದೆ ಲೋಕಾರ್ಪಣ!


ದಿಲ್ ತೋ ಹೈ ದಿಲ್ ದಿಲ್ ಕಾ ಐತ್‍ಬಾರ್ ಕ್ಯಾ ಕೀಜೇ…!

07 ಜುಲೈ 13

(ಮುಕದ್ದರ್ ಕಾ ಸಿಕಂದರ್ ಚಿತ್ರದ ಹಾಡಿನ ಭಾವಾನುವಾದದ ಯತ್ನ)

ಈ ಹೃದಯ ಬರೀ ಹೃದಯ ಕಣೋ, ಇದರ ಮೇಲೂ ನಂಬಿಕೆ ಅದೇನೋ?
ಯಾರ ಮೇಲಾದರೂ ಒಲವು ಮೂಡಿದರೆ, ನಾ ಮಾಡಲೇನೋ

ನಿನ್ನ ನೆನಪಲ್ಲೇ ಕಳೆದುಹೋದೆ, ರಾತ್ರಿಗಳ ನಿದ್ದೆಯಿಲ್ಲದೇ ಕಳೆದೆ
ನನ್ನ ಮನದ ಅವಸ್ಥೆಯನ್ನು ಅರಿತವರು ಯಾರೂ ಇಲ್ಲವೇನೋ

ವರುಷಗಳಿಂದ ನಿರೀಕ್ಷೆಯಲ್ಲಿವೆ ಕಂಗಳು, 
ದಾಹ ಹೆಚ್ಚಾಗಿ ಎಚ್ಚರದಲ್ಲಿವೆ ರಾತ್ರಿಗಳು
ಬಂದಿವೆ ತುಟಿಗೆ ನನ್ನ ಮನದ ಮಾತುಗಳು
ನಿನ್ನ ಪ್ರೀತಿಯಲಿ ಈ ಮನದ ಗತಿ ಏನಾದರೇನೋ
ಬೇಗುದಿಯಲ್ಲಿದೆ ನನ್ನ ಒಲವು ನಾ ಮಾಡಲೇನೋ
ಯಾರ ಮೇಲಾದರೂ ಒಲವು ಮೂಡಿದರೆ ನಾ ಮಾಡಲೇನೋ

ನಿನ್ನ ನಶೆಭರಿತ ಕಂಗಳು ನನ್ನ ಮನವನ್ನಾವರಿಸಿವೆ
ನಿನ್ನ ಬಾಹುಗಳು ನನ್ನ ಅಂಗಾಗವನ್ನು ಆಲಂಗಿಸಿವೆ
ಈ ಅಗಲುವಿಕೆಯ ಸಹಿಸಲಾಗದಾಗಿದೆ ಎಲ್ಲೂ ನೆಮ್ಮದಿ ಇಲ್ಲದಾಗಿದೆ
ಈಗಂತೂ ನಾ ನಿನ್ನ ರೆಪ್ಪೆಗಳ ನೆರಳಲ್ಲೇ ನಡೆಯಬೇಕಾಗಿದೆ
ಬೆಳಗಿನಿಂದ ಬೈಗಿನವರೆಗೆ ಈಗ ನಿನ್ನದೇ ಜಪ ನನ್ನದಾಗಿದೆ
ಹೃದಯ ಮತ್ತೆ ಮತ್ತೆ ಕಂಪಿಸುತಿದೆ ನಾ ಮಾಡಲೇನೋ
ಯಾರ ಮೇಲಾದರೂ ಒಲವು ಮೂಡಿದರೆ ನಾ ಮಾಡಲೇನೋ