ಶಾಂತಿಯಲಿರಬಹುದು!

19 ಮೇ 13

 

ಸಖೀ,
ದೇವರಿಗೆ ಹೆಚ್ಚು ಹೆಚ್ಚು ಲಂಚಕೊಟ್ಟವರು ಜೈಲಿನಲ್ಲಿ
ಅಲ್ಪ ಸ್ವಲ್ಪ ಲಂಚ ತಿನಿಸಿದವರು ಬಂಧಿಗಳೀ ಬಾಳಲ್ಲಿ!
ದೇವರನು ಮನದೊಳಗೇ ತುಂಬಿಕೊಂಡು ಬಾಳಿದರೆ
ಅವರಿವರ ಹಂಗಿಲ್ಲದೆ ಇರಬಹುದು ಸದಾ ಶಾಂತಿಯಲಿ!

ಬಾಳಿ ತೋರಿಸುವೆ!

19 ಮೇ 13

 

ಸಖೀ,
ಆಸ್ತಿಕನಾಗಿದ್ದೂ, ಇಲ್ಲಿ ಯಾವ ಮಧ್ಯವರ್ತಿಗಳ ಹಂಗಿಲ್ಲದೇ,
ಮೈಮೇಲೆ ಅದೃಷ್ಟದ ನಾಮ, ದಾರ, ಕಲ್ಲುಗಳ ಧರಿಸದೇ
ಯಾವ ಕೆಲಸಕ್ಕೂ ಸಮಯಾಸಮಯವೆಂದು ಯೋಚಿಸದೇ
ಬಾಳಲೂ ಆಗುತ್ತದೆಯೆಂದು ತೋರಿಸುವೆ ನಾನು ಅಳುಕದೇ!

ಎಲ್ಲವೂ ಕಳೆದದ್ದೇ!

18 ಮೇ 13

 

ಸಖೀ,
ಅರ್ಧ ಜೀವನವನು ನಾನು ಮಾತಾಡಿ ಕಳೆದೆ
ಇನ್ನರ್ಧವನು ನಾನು ಮೌನದಲ್ಲಿಯೇ ಕಳೆದೆ
ಅರ್ಧ ಬಾಂಧವ್ಯಗಳವರ ಮಾತಿನಿಂದ ಕಳೆದೆ
ಇನ್ನರ್ಧ ಬಾಂಧವ್ಯಗಳ ಮಾತಾಡದೇ ಕಳೆದೆ!


ಶ್ವೇತವಸ್ತ್ರ!

18 ಮೇ 13

 

ಬಾಲ್ಯದಿಂದಲೂ ಬಿಳೀ ಬಟ್ಟೆಗಳ ಮೇಲೆ ಒಲವಿತ್ತು
ಅಪ್ಪಯ್ಯನವರ ದಿರಿಸಿನ ಮೇಲೆನಗೆ ಮೆಚ್ಚುಗೆ ಇತ್ತು
ರಾಜಕಾರಣಿಗಳಿಂದಾಗಿ ಬಿಳಿಯ ಮೇಲೀಗ ವೈರಾಗ್ಯ
ರಾಜಕಾರಣಿಗಳ ನಂತರ, ಹೆಣಗಳಿಗಷ್ಟೇ ಆ ಭಾಗ್ಯ!


ವಿಷಯ ಮುಖ್ಯ!

18 ಮೇ 13

 

 

ಸಖೀ,
ವಿಷಯಕ್ಕಿಂತ ವ್ಯಕ್ತಿ ಹೆಚ್ಚೇನೂ ಮುಖ್ಯವಾಗದಿರಲಿ
ಕಾಲ ಬದಲಾದಂತೆ ವ್ಯಕ್ತಿಯೂ ಬದಲಾಗಬಹುದು
ವಿಷಯವನ್ನು ಗ್ರಹಿಸಿ ಸಾಗುತ್ತಿದ್ದರೆ ನಾವು ಮುಂದೆ
ಬದಲಾದ ವ್ಯಕ್ತಿಯಿಂದ ಮನ ನೋಯದಿರಬಹುದು!


ಭಾಷಣ!

18 ಮೇ 13

 

ಸಖೀ,
ಭಾಷಣ ಮಾಡುವಾಗ ವಿಷಯದ ಮೇಲೆಮ್ಮ ಹಿಡಿತವಿರಬೇಕು
ಕೇಳುಗರನ್ನು ಬಂಧಿಸಿ ಜೊತೆ ಜೊತೆಗೇ ಕೊಂಡೊಯ್ಯಬೇಕು
ನಾವೆಲ್ಲೋ ಅವರೆಲ್ಲೋ ಆದರೆ ಕೆಡುತ್ತದೆ ಆ ಸಭೆಯ ರಂಗು
ಸಭೆಯಿಂದ ತೆರಳುವಾಗ ಉಳಿದಿರಬೇಕು ಭಾಷಣದ ಗುಂಗು!


ಲೆಕ್ಕ ಬೇಡ!

18 ಮೇ 13

 

 

ಸಖೀ,
ಮಾತು ಇಲ್ಲದೆ ಕಳೆದ ದಿನಗಳ ಲೆಕ್ಕ ಬೇಡ
ಮುಸುಕದಿರಲಿ ಮನದ ಆಗಸದಲ್ಲಿ ಮೋಡ
ಆಡಿದ ಮಾತುಗಳ ನೆನಪುಗಳೇ ಸಾಕಷ್ಟಿವೆ
ನೆನಪುಗಳೇ ನಮ್ಮನ್ನು ಈ ಪರಿ ಬಂಧಿಸಿವೆ!


ಮನ್ನಣೆ!

18 ಮೇ 13

 

ಸಖೀ,
ಮನ್ನಣೆ ಪಡೆಯುವುದು ನಮ್ಮ ಪ್ರಾರ್ಥನೆ
ಪೂರಕವಾಗಿದ್ದಾಗ ನಮ್ಮ ಅನ್ಯ ವರ್ತನೆ;
ಮೂರ್ತಿಯ ಮುಂದೆ ನಿಂತಾಗದ ಗಣನೆ
ಅಲ್ಲ, ಆತನದು ಸದಾಕಾಲದ ಪರಿಗಣನೆ!


ಬುದ್ಧಿ ಹೇಳಿದರೆ!

18 ಮೇ 13

 

ಸಖೀ,
ಕೆಲವರು ನಗರಗಳಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಬಳಸುತ್ತಾರೆ
ಇನ್ನು ಕೆಲವರು ರಸ್ತೆಬದಿಯ ಗೋಡೆಬುಡವನ್ನೇ ಶೌಚಾಲಯವಾಗಿಸುತ್ತಾರೆ
ಶೌಚಾಲಯ ಬಳಸುವವರು ಗೋಡೆಬದಿ ನಿಂತವರ ಕರೆದು ಬುದ್ಧಿಹೇಳಿದರೆ
ಇವರೇ ಅವರನ್ನು ತೆಗಳಿ, ಅದಲ್ಲ, ನಿಜವಾಗಿಯೂ ಇದೇ ಸರಿ ಎನ್ನುತ್ತಾರೆ!


ಸಾಬೀತು ಪಡಿಸಲು!

18 ಮೇ 13

 

ಸಖೀ,
ಕೆಟ್ಟದ್ದನ್ನು ಕೆಟ್ಟದ್ದೆಂದು
ಸಾಬೀತು ಪಡಿಸಲಿಲ್ಲಿ
ನೂರು ಕಾರಣಗಳನು
ನೀಡಬಹುದಾದಂತೆ;

ಅದನ್ನೇ ಒಳ್ಳೆಯದೆಂದು
ಸಾಬೀತು ಪಡಿಸಲೂ ನಾ
ನೂರಾರು ಕಾರಣಗಳನು
ನೀಡಬಹುದಾಗಿದೆಯಂತೆ!