ಒಂದೇ ಮಟ್ಟದ ನೀರೀಕ್ಷೆ ಬೇಡ ಬಿಡು!

20 ಫೆಬ್ರ 13
ಸಖೀ,
ಸೃಜನಶೀಲ ಬರಹಗಾರ ವರುಣದೇವನಂತೆ
ಈತನ ಬರಹಗಳು ಆತ ಮಳೆ ಸುರಿಸಿದಂತೆ

ಮನದ ಆಗಸದಲ್ಲಿ ಭಾವನೆಗಳ ಮೋಡಗಳು
ಸಾಮ್ಯವಿಲ್ಲ ಅಲ್ಲಿ ಭಾವಕ್ಕೆ ತಕ್ಕ ಮೋಡಗಳು

ಮೋಡಗಳಿಂದ ಪರಿಪರಿಯಾದ ಮಳೆಯಂತೆ
ಭಿನ್ನ ಭಾವಗಳಿಂದ ವಿಭಿನ್ನವೀ ಬರಹಗಳಂತೆ

ಒಮ್ಮೊಮ್ಮೆ ಧಾರಾಕಾರ ಕೊಚ್ಚಿಹೋಗುವಂತೆ
ಓದುಗರು ಮೈಮರೆತು ಓದುತ್ತಾ ಕೂರುವಂತೆ

ಇನ್ನೊಮ್ಮೆ ಚಿರಿಪಿರಿ ಹಗಲ್ಲೆಲ್ಲಾ ಕಿರಿಕಿರಿಯಂತೆ
ಅದೇ ಬರಹಗಾರನೂ ಕಿರಿಕಿರಿ ಮಾಡುವನಂತೆ

ಮಳೆಗಾಲವಿಡೀ ಒಂದೇ ಮಳೆಯ ನಿರೀಕ್ಷೆಯಿಲ್ಲ
ಒಂದೇ ಮಟ್ಟದ ನಿರೀಕ್ಷೆ ಇಲ್ಲೂ ಇರಬಾರದಲ್ಲ?!


ಆಮೇಲೆ ಹೆಸರಿಡೋಣ! *** ಭಾಗ -೨ ***

19 ಫೆಬ್ರ 13

 

ಅಂದು 1980ರ ಆಗಷ್ಟ್ ತಿಂಗಳ 28ರ ದಿನಾಂಕವಿದ್ದಿರಬೇಕು. ಮುಂಜಾನೆ ಏಳೂವರೆ-ಎಂಟರ ಸಮಯ ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ “ಏರ್ಮೆನ್ ಸೆಲೆಕ್ಷನ್ ಸೆಂಟರ್” ನ ಮುಂದೆ ನೂರಾರು ಮಂದಿ ಹಾಜರಿದ್ದೆವು. ನಾನು ಮುಂಬಯಿಯಿಂದ ಬಂದಿದ್ದೆ. ಕರ್ನಾಟಕದ ಮೂಲೆ ಮೂಲೆಗಳಿಂದ ನನ್ನಂಥ ಇತರ ಹುಡುಗರು ಬಂದಿದ್ದರು. ಅಲ್ಲಿ ಎಲ್ಲರದೂ ಅಪರಿಚಿತ ಮುಖಗಳೇ. ಎದೆಯೊಳಗೆ ಒಂಥರಾ ಭಯ.  ಏನಾಗುತ್ತೋ ಏನೋ ಅನ್ನುವ ಆತಂಕ. ಸಾಲಾಗಿ ನಿಲ್ಲುವಂತೆ ಆದೇಶ ಬಂತು. ಸಾಲಿನಲ್ಲಿ ನಿಂತಿದ್ದವರ ಮೇಲೆ ಕಣ್ಣು ಹಾಯಿಸಿದಾಗ ನನ್ನ ಪ್ರಾಥಮಿಕ ಶಾಲೆಯ ಸಹಪಾಠಿ ಕಾಣಿಸಿದ್ದ. ಓಹ್ ಒಬ್ಬನಾದರೂ ಇದ್ದಾನಲ್ಲಾ ಅನ್ನುವ ಸಮಾಧಾನ ಆಯ್ತು.

ಉಪೇಂದ್ರ ಮತ್ತು ನಾನು ಹಿರಿಯಡಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1972 ರಿಂದ 1974ರವರೆಗೆ, ಆರು ಮತ್ತು ಏಳನೇ ತರಗತಿಗಳಲ್ಲಿ ಒಟ್ಟಿಗೇ ಕಲಿಯುತ್ತಿದ್ದವರು. ಅಂದು ಆತನೂ ವಾಯುಸೇನೆಯ ಕದತಟ್ಟಲು ಬಂದು ನಿಂತಿದ್ದ. ಮುಂದಿನ ಎರಡು ದಿನಗಳಲ್ಲಿ, ದೈಹಿಕ ಪರೀಕ್ಷೆಗಳು, ಲಿಖಿತ ಪರೀಕ್ಷೆಗಳು ಹಾಗೂ ಸಂದರ್ಶನಗಳು ನಡೆದವು. ನನಗಿಂತ ಮುಂದಿದ್ದ ಆತನ ಆಯ್ಕೆ “ಮೆಕ್ಯಾನಿಕಲ್ ಗ್ರೂಫ್” ನಲ್ಲಿ ಆಗಿತ್ತು. ಹಾಗಾಗಿ ನಾನು ಸಂದರ್ಶನಕ್ಕೆ ಹೋದಾಗ, ನನಗೂ “ಮೆಕ್ಯಾನಿಕಲ್ ಗ್ರೂಪ್” ಕೊಡಿ ಎಂದು ಬೇಡಿಕೆ ಸಲ್ಲಿಸಿದ್ದೆ. ಈರ್ವರೂ ಜೊತೆಜೊತೆಗೆ ಒಂದೇ ಕೇಂದ್ರದಲ್ಲಿ ತರಬೇತಿ ಪಡೆಯಬಹುದು ಅನ್ನುವ ದೂರಾಲೋಚನೆ. ಆದರೆ ವಾಯುಸೇನೆಯ ಅಧಿಕಾರಿಗೆ ಅದು ಸರಿಕಾಣಲಿಲ್ಲ. ಲಿಖಿತ ಪರೀಕ್ಷೆಗಳಲ್ಲಿ ನಾನು ಪಡೆದಿದ್ದ ಅಂಕಗಳನ್ನು ಪರಿಶೀಲಿಸಿ, “ಉಹೂಂ ನಿನ್ನನ್ನು ಇಲೆಕ್ಟಾನಿಕ್ ಗ್ರೂಪಿಗೆ ಸೇರಿಸುತ್ತಿದ್ದೇನೆ” ಅಂತ ಅಂದರು. ಮನಸ್ಸಿಗೆ ಬೇಸರವಾಗಿತ್ತು.

ಆಯ್ಕೆಯ ಪ್ರಕ್ರಿಯೆಗಳು ಮುಗಿದ ಮೇಲೆ ನಾನು ಮುಂಬಯಿಗೆ ವಾಪಸ್ಸಾದರೆ ಆತ ನಮ್ಮೂರಿಗೆ ತೆರಳಿದ್ದ. ಮುಂದೆ ನಾಲ್ಕು ತಿಂಗಳ ನಂತರ ಅಂದರೆ 1981ರ ಜನವರಿ ತಿಂಗಳ ಒಂದನೇ ತಾರೀಕಿನಂದು ಬೆಂಗಳೂರಿನ ಅದೇ ಕಛೇರಿಯಲ್ಲಿ ಹಾಜರಿರಬೇಕೆಂದು ಕರೆ ಬಂದಿತ್ತು. ಅಲ್ಲಿನ ಔಪಚಾರಿಕತೆಗಳನ್ನು ಮುಗಿಸಿ ಜಾಲಹಳ್ಳಿಯ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದರು. ಉಪೇಂದ್ರ ಮದರಾಸಿನ ತಾಂಬ್ರಂ ತರಬೇತಿ ಕೇಂದ್ರಕ್ಕೆ ಕಳುಹಿಸಲ್ಪಟ್ಟಿದ್ದ.

೧೫ ತಿಂಗಳ ತರಬೇತಿ ಮುಗಿಸಿ ನಾನು ಪ್ಂಜಾಬ್ ರಾಜ್ಯದ ಪಠಾಣಕೋಟ್‍ಗೆ ಹೋಗಿದ್ದರೆ ಆತ ಹರ್ಯಾಣಾ ರಾಜ್ಯದ ಅಂಬಾಲಾ  ವಾಯುನೆಲೆಯನ್ನು ಸೇರಿದ್ದ. ಲ್ಲಿ ಒಂದೂವರೆ ವರುಷ ಸೇವೆ ಸಲ್ಲಿಸಿ ನಾನು ಮತ್ತೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ತರಬೇತಿ ಕೇಂದ್ರಕ್ಕೆ ಬಂದಿದ್ದೆ. ಅಲ್ಲಿ ಮತ್ತೆ ಒಂದು ವರುಷದ ತರಬೇತಿ ಮುಂದುವರೆದಿತ್ತು. 1985ರ ಮೇ ತಿಂಗಳಲ್ಲಿ ಅಂಬಾಲಾದ ವಾಯುನೆಲೆಗೆ ಹೋದಾಗ, ಉಪೇಂದ್ರ ತಾನೂ ಹೆಚ್ಚಿನ ಪರಬೇತಿ ಪಡೆದು ವಾಪಸಾಗಿದ್ದ.

ನಮ್ಮನ್ನು ಅಂದು ಬೇರೆ ಬೇರೆ ಗ್ರೂಪುಗಳಿಗೆ ಸೇರಿಸಿದುದರಿಂದ ನಮಗೆ  ಪ್ರಯೋಜನವೇ ಆಗಿತ್ತು. ಒಂದೇ ಗ್ರೂಪಿನಲ್ಲಿ ಒಟ್ಟಿಗೇ ತರಬೇತಿ ಪಡೆದಿದ್ದರೆ, ಒಂದೇ ಕಡೆ ಸೇವೆ ಸಲ್ಲಿಸುವ ಅವಕಾಶ ಸಿಗುವುದು ಕಷ್ಟವಿತ್ತು. ಅಲ್ಲಿದ್ದ ನಾಲ್ಕೈದು ವರುಷ ನಾವು, ನಮ್ಮ ಪ್ರಾಥಮಿಕ ಶಾಲೆಯ ಸ್ನೇಹ ಬಂಧವನ್ನು ಮುಂದುವರಿಸಿಕೊಂಡು ಹೋದೆವು. ಇನ್ನೂ ಭದ್ರಗೊಳಿಸಿಕೊಂಡೆವು. ನಮ್ಮ ಚಿಂತನೆಗಳಲ್ಲಿ ಹೆಚ್ಚಿನ ಸಾಮ್ಯ ಹೊಂದಿರುವ ನಾವು, ಒಂದು ರೀತಿಯಲ್ಲಿ ಸಹಮನಸ್ಕರಾಗಿದ್ದರೂ, ನಾನು ನುಡಿವಷ್ಟು ನೇರವಾಗಿ, ನಿಷ್ಠುರವಾಗಿ ನುಡಿಯುವವನಲ್ಲ ಉಪೇಂದ್ರ. ನಮ್ಮ ನಡುವೆ ಯಾವುದೇ ಔಪಚಾರಿಕತೆಗಳಿಗೆ ಆಸ್ಪದವಿರಲಿಲ್ಲ.

ಅಂಬಾಲಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲೇ ಆತನ ವಿವಾಹವಾಗಿತ್ತು. ಆತನ ಪತ್ನಿಯಾಗಿ ಬಂದಾಕೆ, ನಡೆದುಕೊಳ್ಳುತ್ತಿದ್ದ ರೀತಿಯಿಂದಾಗಿ, ನನ್ನ ಪಾಲಿಗೆ ಆಕೆ ಹೊಸಬಳಾಗಿ ಕಂಡಿರಲೇ ಇಲ್ಲ. ಬಹುಶಃ ಆತ ನನ್ನ ಬಗ್ಗೆ ಅದಾಗಲೇ ಹೇಳಿರುವ ವಿಚಾರಗಳು ಅದಕ್ಕೆ ಕಾರಣವಾಗಿರಬಹುದು. ಮುಂದೆ ನಾನು ವಿವಾಹವಾಗಲು ಊರಿಗೆ ಬಂದಿದ್ದಾಗ ಆತ ಅಲ್ಲಿಂದ ಗೋರಖಪುರಕ್ಕೆ ವರ್ಗವಾಗಿ ಹೋಗಿದ್ದ. ಅದಾಗಿ ಮೂರು ವರುಷಗಳ ನಂತರ   1992ರಲ್ಲಿ ನಾನೂ ಗೋರಖಪುರಕ್ಕೆ ತೆರಳಿದೆ. ನಮ್ಮನ್ನು ಆತನೇ ಸ್ವಾಗತಿಸಿ ತನ್ನ ಮನೆಗೆ ಕರೆದೊಯ್ದಿದ್ದ.

ವಾಯುಸೇನೆಯ ವತಿಯಿಂದ ಸಿಗುವ ಮನೆಗಳಲ್ಲಿ ಎರೆಡೆರಡು ಸಂಸಾರಗಳು ಅನ್ಯೋನ್ಯತೆಯಿಂದ ಬಾಳುವುದು ಸಾಧ್ಯವಿತ್ತು ಅನ್ನುವುದರ ಅರಿವು ಬಹುಶಃ ತಮಲ್ಲಾರಿಗೂ ಇರಲಾರದು. ಆತನಿಗೆ ಅದಾಗಲೇ ಮನೆ ದೊರೆತಿತ್ತಾದ್ದರಿಂದ ಆತನ ಜೊತೆಗೇ ನಾವೂ ಇದ್ದೆವು. ಒಂದೂವರೆ ವರುಷಗಳ ಕಾಲ ಜೊತೆಗೇ ಜೀವನ ಸಾಗಿಸಿದ್ದೆವು. ಅಲ್ಲಿಂದ ಆತ ಪೂನಾಕ್ಕೆ ವರ್ಗವಾಗಿ ಹೋದ. ಮುಂದೆ ನಾಲ್ಕು ವರ್ಷ ಕಳೆದು ನಾನು ಬೆಂಗಳೂರಿಗೆ ಬಂದಾಗ ಅತನೂ ಬೆಂಗಳೂರಿಗೆ ಬಂದಿದ್ದ. ಆತನನ್ನು ಸಂಸಾರ ಸಮೇತ ಸ್ವಾಗತಿಸಲು ಈ ಬಾರಿ ನಾವು ಕಾದಿದ್ದೆವು.

ಮೂರು ವರುಷಗಳ ಕಾಲ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದೆವು. ನಡುವೆ ನಾವಿಬ್ಬರೂ ಸಂತ ಜೋಸೇಫರ ಸಂಧ್ಯಾಕಾಲೇಜಿಗೆ ಸೇರಿದೆವು. ನಾನು “ಪಿಜಿಡಿಸಿಎ” ಪೂರ್ತಿಗೊಳಿಸಿದೆ. ಆತನೂ ಪ್ರೋಗ್ರಾಮಿಂಗ್ ಡಿಪ್ಲೋಮಾ ಪೂರೈಸಿದ. ಮುಂದೆ 2001ರ ಜನವರಿ ಮೂವತ್ತೊಂದರಂದು ವಾಯುಸೇನೆಗೆ ಅಂತಿಮ “ಸೆಲ್ಯೂಟ್” ಸಲ್ಲಿಸಿ ನಾವು ನಮ್ಮ ಸಮವಸ್ತ್ರವನ್ನು ಕೆಳಗಿಳಿಸಿದ್ದೆವು. ನಾಗರೀಕ ಜೀವನ ಸಾಗಿಸುವ ಬಗ್ಗೆ ಈರ್ವರಲ್ಲೂ ಉತ್ಸುಕತೆ ಇತ್ತು. ಏನಾದರೂ ಭಿನ್ನವಾದ ಉದ್ಯೋಗ ಮಾಡಬೇಕೆಂಬ ಇಚ್ಛೆ ಇಬ್ಬರಲ್ಲೂ ಇತ್ತು. ಆಗ ಈರ್ವರಲ್ಲೂ ಆಸಕ್ತಿ ಮೂಡಿಸಿದ್ದು, “ಇಂಟರ್ನೆಟ್ ಕೆಫೆ” ಯ ಉದ್ಯಮ.

ಜಂಟಿ ಪಾಲುಗಾರಿಕೆಯಲ್ಲಿ ಮಾರತಹಳ್ಳಿಯಲ್ಲಿ ಒಂದು ಅಂಗಡಿ ಬಾಡಿಗೆಗೆ ಪಡೆದು, ನೆಟ್ ಪಾಯಿಂಟ್ ಅನ್ನುವ ಇಂಟರ್ನೆಟ್ ಸರ್ವೀಸ್ ಸೆಂಟರ್ ಸ್ಥಾಪಿಸಿದೆವು. ಅಲ್ಲಿನ ವ್ಯವಹಾರ ನಮ್ಮೀರ್ವರ ಎರಡು ಸಂಸಾರಗಳನ್ನು ಸಾಗಿಸುವುದಕ್ಕೆ ಸಂಪೂರ್ಣ ಸಹಕಾರಿಯಾಗದು ಅನ್ನುವ ಅರಿವಾದಾಗ ಆತ ನೌಕರಿಗೆ ಸೇರಿಕೊಂಡ. ನಾನು ಅಲ್ಲಿಯೇ ವ್ಯವಹಾರ ನೋಡಿಕೊಳ್ಳುತ್ತಿದ್ದೆ. ಆತ ಭಾನುವಾರಗಳಂದು ಬಂದು ನನಗೆ ರಜೆ ನೀಡುತ್ತಿದ್ದ. ಆತನ ನೌಕರಿ ಚೆನ್ನಾಗಿತ್ತಾದ್ದರಿಂದ, ಹಾಗೂ ಇನ್ನಿತರ ಕಾರಣಗಳಿಂದ,  ಪಾಲುಗಾರಿಕೆಯಿಂದ ಬೇರೆಬೇರೆಯಾದೆವು. ನಮ್ಮನಡುವೆ ಮೂರು ದಶಕಗಳ ಹಿಂದೆ ಬೇರುಬಿಟ್ಟು ಭದ್ರವಾಗಿದ್ದ ನಂಬಿಕೆ ವಿಶ್ವಾಸಗಳು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಯಕ್ಕೆ ಎಡೆಮಾಡಿಕೊಟ್ಟಿರಲಿಲ್ಲ.

ಮುಂದಿನ ಎರಡು ವರುಷ ನಾನು ಆ ವ್ಯವಹಾರವನ್ನು ನಡೆಸಿಕೊಂಡು ಬಂದೆ. 2004 ರ ಮೇ 26ರ ಮುಂಜಾನೆ ಎಂದಿನಂತೆ ಅಂಗಡಿಯ ಬಾಗಿಲು ತೆರೆಯಲು ಹೋದರೆ ಬಾಗಿಲು ತೆರೆದುಕೊಂಡೇ ಇತ್ತು. ಒಳಗಿನ ಎಲ್ಲಾ ಕಂಪ್ಯೂಟರುಗಳೂ ಕಳುವಾಗಿದ್ದವು. ಒಂದು ಕ್ಷಣಕ್ಕೆ ಏನು ಮಾಡುವುದೆಂದೇ ತೋಚಲಿಲ್ಲ. ಪೋಲೀಸರಿಗೆ ದೂರು ಕೊಟ್ಟದ್ದಾಯ್ತು. ಉಪೇಂದ್ರನಿಗೂ ಕರೆ ಮಾಡಿ ತಿಳಿಸಿದೆ. ಕಛೇರಿಯಿಂದ ಕೂಡಲೇ ಬಂದ. ಬಂದು ಮಾಡುವುದಾದರೂ ಏನಿತ್ತು. ಸಾಂತ್ವನದ ಮಾತನಾಡುವುದು ತೀರ ಔಪಚಾರಿಕತೆ ಅನ್ನುವ ಅರಿವು ನನಗಿದ್ದಂತೆ ಆತನಿಗೂ ಇತ್ತು. ಒಂದೆರಡು ಗಂಟೆ ಜೊತೆಗಿದ್ದು ಕೆಲಸಕ್ಕೆ ಮರಳಿದ.

ಮುಂದಿನ ದಿನಗಳಲ್ಲಿ ನಾನು ನೌಕರಿಗೆ ಸೇರಿಕೊಂಡೆ.

ನಮ್ಮ ಸ್ನೇಹ ಹಿಂದಿನಂತೆಯೇ ಇಂದೂ ಇದೆ. ನಮ್ಮ ನಡುವೆ ಮಾತು ಕಡಿಮೆ. ಭೇಟಿಯಂತೂ ಆಗದೇ ವರುಷಗಳೇ ಕಳೆದಿವೆ. ಕರೆ ಮಾಡಿದರೆ, “ಹೂಂ ಹೇಳು” ಅನ್ನುವುದರಿಂದಲೇ ಸಂಭಾಷಣೆ ಶುರುವಾಗುವುದು. ಔಪಚಾರಿಕತೆ ಈಗಲೂ ಇಲ್ಲ. ನಿನ್ನೆ ಬಿಟ್ಟ ಮಾತುಕತೆ ಇಂದು ಮುಂದುವರಿಸಿದಂತೆ. ನನ್ನ ಹೆಚ್ಚಿನೆಲ್ಲ ಸ್ನೇಹಿತರ ಜೊತೆಗಿನ ಸಂಭಾಷಣೆಗಳೂ ಹೀಗೇಯೇ ಇರುತ್ತವೆ. ಆತ ನನ್ನಷ್ಟು ನಿಷ್ಟುರನಲ್ಲ. ನನ್ನಷ್ಟು ಭಾವುಕಜೀವಿಯೂ ಅಲ್ಲ.

ನಮ್ಮ ನಡುವೆ ಸಂಪರ್ಕ ಇಲ್ಲವೆನ್ನಲಾಗದು, ಇದೆ. ಇದೆಯನ್ನಲಾಗದು, ಮಾತುಕತೆ ಆಗದೇ ವರುಷ ಕಳೆದಿದೆ ಆಗಲೇ. ಆದರೂ ಆತ, ಆತನ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಪಾಲಿಗೆ ನಾನೆಂದೂ ದೂರವಾಗಿಲ್ಲ. ಅಂದು ಆ ಮಕ್ಕಳಿಗೆ ಚುರೇಚ್ ಮಾಮನಾಗಿದ್ದ ನಾನು ಇಂದು ಸುರೇಶ್ ಮಾಮನಾಗಿದ್ದೇನೆ ಅಷ್ಟೇ ವ್ಯತ್ಯಾಸ. ಅವರು ನನ್ನ ಮನದಿಂದ ದೂರವಾಗಿಲ್ಲ. ಆಗುವುದೂ ಇಲ್ಲ. ಮಾತಾಡಲು ವಿಷಯ ಇಲ್ಲ. ಆದರೆ ಮಾತಾಡಿಲ್ಲ ಅಂತ ಅನಿಸುವುದೂ ಇಲ್ಲ. ಬಹುಶಃ ನಮ್ಮ ನಡುವೆ, ಸಂಭಾಷಣೆ ನಮಗರಿವಿಲ್ಲದೇ ನಡೆಯುತ್ತಲೇ ಇರುತ್ತದೆ, ಮೌನವಾಗಿ. ಯುವ ಪ್ರೇಮಿಗಳ ನಡುವೆ ಅನವರತ ನಡೆಯುವಂತೆ.

ಇಂತಹ ಬಾಂಧವ್ಯವನ್ನು ಕೊನೆಗೊಳಿಸುವುದಾದರೂ ಹೇಗೆ? ಏಕೆ? ಛೇ…!

ಸ್ನೇಹವನ್ನು ಅರಿಯದವರು ಸ್ನೇಹಕ್ಕೆ ಬೆಲೆಕಟ್ಟಲು ಅಶಕ್ತರಾಗಿರಬಹುದು. ಸ್ನೇಹಕ್ಕೆ ಬೆಲೆಕಟ್ಟಲಾಗದು ಅನ್ನುವುದರ ಅರಿವು ಸ್ನೇಹ ಮಾಡಿದವರಿಗಷ್ಟೇ ಗೊತ್ತು.

(ಮುಂದುವರಿಸಬೇಕಿದೆ)

(ಮುಂದೆ ಯಾರು ನೆನಪಾದಾರು? ನೋಡೋಣ, ಅಲ್ಲವೇ?)

(ತಪ್ಪುಗಳಿದ್ದರೆ ತಿಳಿಸಿ ಉಪಕರಿಸಿ)


ನಿಂತಲ್ಲೇ ನಿಲುವನೇ ಮನುಜ?

19 ಫೆಬ್ರ 13
ಸಖೀ,
ನೀನೀ ಮುನಿಸನಿಂದು ಮರೆತು ಬಿಡು
ನಗುತಲೆನ್ನ ಜೊತೆಗೆ ಮುಂದಡಿಯಿಡುನಕ್ಕು ಬಿಡು ನಗುವುದಕ್ಕಿರಲಿ ಜೀವನ
ಕೋಪಕ್ಕೆ ಇರಲಿ ದಿನದಿನವೂ ಮರಣ

ಈ ಬಿಗುಮಾನದಿಂದ ನಮಗೇ ಕೆಡುಕು
ಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು

ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ ಇಲ್ಲ
ತಪ್ಪು ಎಸಗದವರೆಮ್ಮಲ್ಲಿ ಯಾರೂ ಇಲ್ಲ

ನಡೆದಾಡುವಾಗೆಡವುದು ಜೀವನ ಸಹಜ
ಹಾಗೆಂದು ನಿಂತಲ್ಲೇ ನಿಲುವನೇ ಮನುಜ
********


ಒಂದು ಅವಕಾಶವನ್ನು ನೀಡು!

18 ಫೆಬ್ರ 13
(ಗಝಲ್ ಒಂದರ ಭಾವಾನುವಾದದ ಯತ್ನ)ಅಲೆಮಾರಿಯಂತೆ ನಾನು ನಿನ್ನೂರ ತಲುಪಿಹೆ ನೋಡು
ನಿನ್ನ ಒಂದೇ ಒಂದು ಭೇಟಿಯ ಅವಕಾಶವನ್ನು ನೀಡು

ನನ್ನ ಗಮ್ಯವಿಹುದೆಲ್ಲೋ ನನ್ನ ಠಿಕಾಣಿಯದು ಇನ್ನೆಲ್ಲೋ
ಮುಂಜಾವಿನಲ್ಲಿ ನಿನ್ನನ್ನಗಲಿ ನಾ ಹೋಗುವುದಿನ್ನೆಲ್ಲಿಗೋ
ಯೋಚಿಸಲಾದರೂ ಒಂದು ರಾತ್ರಿಯವಕಾಶವನು ನೀಡು

ನನ್ನೀ ಕಂಗಳಲ್ಲಿ ಮಿಂಚುಳವೊಂದನ್ನು ಅಡಗಿಸಿಟ್ಟಿಹೆ ನಾನು
ಕಣ್ಣೀರ ಹನಿಗಳನೀ ರೆಪ್ಪೆಗಳ ಮೇಲೆ ಓರಣಗೊಳಿಸಿಹೆ ನಾನು
ನನ್ನೀ ಕಂಗಳಿಗೂ ನೀನು ಸೋನೆಯ ಅವಕಾಶವನು ನೀಡು

ಇಂದಿನೀ ಇರುಳು ನೀನು ನನ್ನೊಲವಿನ ನೋವಿನಗಾಥೆ ಕೇಳು
ಅದುರುತಿಹ ನನ್ನೀ ಅಧರಗಳ ದೂರುಗಳಿಗೆ ಕಿವಿಯಾಗಿ ಕೇಳು
ಮನದಿಂಗಿತಗಳನ್ನು ವಿಶದವಾಗರುಹುವ ಅವಕಾಶವನು ನೀಡು

ಹೀಗೆ ಮರೆಯುವುದಾಗಿದ್ದರೆ ಪ್ರೀತಿ ಮಾಡಿದ್ದಾದರೂ ಏಕೆ ನೀನು
ಒಲವಿನ ಬಲೆ ಬೀಸಿದ್ದಾದರೂ ಏಕೆ ಮೋಸ ತುಂಬಿರುವ ನೀನು
ಕೇವಲ ನಾಲ್ಕಾರು ಇಂಥ ಸವಾಲುಗಳಿಗೆ ಅವಕಾಶವನು ನೀಡು


ಯಾರ ಹಿಡಿತವಲ್ಲಿ?

17 ಫೆಬ್ರ 13

ಸಖೀ,
ಬೆರಗಾಗುವಂತಾಗಿದೆ ನಾವು ಈಗ
ಸೃಷ್ಟಿಯಲ್ಲಿನ ಇಂಥ ವಿಸ್ಮಯಗಳಿಗೆ
ಪ್ರತಿದಿನವೂ ಇಲ್ಲಿ ಹೊಸ ಹೊಸತು
ಸವಾಲುಗಳಿವೆ ನಮ್ಮ ವಿಜ್ಞಾನಿಗಳಿಗೆ

ಸೂರ್ಯನಿದ್ದಾನೆ ತನ್ನ ಹಿಡಿತದಲ್ಲಿ
ಇರಿಸಿಕೊಳ್ಳಲು ಬುವಿ-ಚಂದ್ರರನ್ನು
ಯಾರು ಒಯ್ಯುತ್ತಿದ್ದರು ಗತಿ ತುಂಬಿ
ಅದೆಲ್ಲಿಗೋ ನಿನ್ನೆ ಆ ಕ್ಷುದ್ರಗ್ರಹವನ್ನು?


ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

17 ಫೆಬ್ರ 13

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬೈಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).

ಅದರ ಸತ್ಯಾಸತ್ಯತೆಯ ಬಗ್ಗೆ ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳ ಬೇಕಾಗಿಲ್ಲ. ಏಕೆಂದರೆ, ಅದು ನನ್ನ ಈ ಲೇಖನದ ವಿಷಯವೇ ಅಲ್ಲ.

ತರಕಾರಿ ಕೊಂಡುಕೊಳ್ಳುವಾಗ, ಬಟ್ಟೆ ಖರೀದಿಸುವಾಗ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ, ಹೀಗೇ ಎಲ್ಲಾ ಕಡೆಗಳಲ್ಲಿ ಜನರು ಚೌಕಾಸಿ ಮಾಡುವುದನ್ನು ನಾನು ಕಂಡಿದ್ದೇನೆ. ಒಮ್ಮೊಮ್ಮೆ ಆ ಚೌಕಾಸಿಯ ವಾದಗಳಿಂದ ಕಿರಿಕಿರಿಗೊಂಡಿದ್ದೇನೆ. ಇನ್ನು ಕೆಲವೊಮ್ಮೆ, ಕೆಲವರ ಆ ವಾದಗಳ ಧಾಟಿಯನ್ನು ಮೆಚ್ಚಿದ್ದೇನೆ. ಚೌಕಾಸಿ ಮಾಡುವ ಶೈಲಿಯನ್ನು ಕಲಿತಿದ್ದೇನೆ. ಕೆಲವೊಮ್ಮೆ ನಾನು ಕೂಡ, ಹೀಗೆ ಕಲಿತ ಆ ವಿದ್ಯೆಯ ಪ್ರಯೋಗವನ್ನೂ ಮಾಡಿದ್ದೇನೆ.

ನಾನು ಎಷ್ಟೇ ಚೌಕಾಸಿ ಮಾಡಿ ಒಂದು ವಸ್ತುವನ್ನು ಖರೀದಿ ಮಾಡಿದ್ದರೂ, ನನ್ನ ಮನೆಯ ಇನ್ನೊರ್ವ ಸದಸ್ಯ, ನನ್ನ ಪಕ್ಕದ ಮನೆಯವನು, ಓರ್ವ ಸಹೋದ್ಯೋಗಿ ಅಥವಾ ಇನ್ನೊರ್ವ ಗೆಳೆಯ ಅದೇ ವಸ್ತುವನ್ನು ನಾನು ಕೊಟ್ಟ ಬೆಲೆಗಿಂತ ಕಡೆಮೆ ಬೆಲೆಗೆ ಖರೀದಿ ಮಾಡಿದ್ದೇನೆ ಅಂತ ಕೊಚ್ಚಿ ಕೊಂಡದ್ದಿದೆ. ಅಥವಾ ನನಗೆ ಚೌಕಾಸಿ ಮಾಡಲು ಬರುವುದಿಲ್ಲ, ನಾನು ಕೊಟ್ಟ ಬೆಲೆ ತುಂಬಾ ಜಾಸ್ತಿ ಆಯ್ತು ಅಂತ ಹೀಯಾಳಿಸಿದ್ದಿದೆ. ಆಗ ನಾನು ನನ್ನಲ್ಲಿರುವ ಚೌಕಾಸೀಶಕ್ತಿಯ ಕೊರತೆಯ ಬಗ್ಗೆ ಒಳಗೊಳಗೇ ನೊಂದು ಕೊಂಡದ್ದಿದೆ. ನನಗೆ ಚೌಕಾಸೀ ಶಕ್ತಿಯನ್ನು ಕರುಣಿಸುವಾಗ ಏಕೆ ಚೌಕಾಸಿ ಮಾಡಿದೆ ಅಂತ ದೇವರಿಗೆ ಮೊರೆಯಿಟ್ಟದ್ದೂ ಇದೆ. ಈ ತೆರನಾದ ಅನುಭವ ನಿಮಗೂ ಆಗಿರಬಹುದು. ನೀವೂ ನನ್ನಂತೆ ನೊಂದು ಕೊಂಡಿರಬಹುದು.

ಎಲ್ಲಾ ವ್ಯಾಪಾರಿಗಳಿಗೂ ತಮ್ಮಲ್ಲಿಗೆ ಬರುವ ಪ್ರತಿಯೊಬ್ಬ ಗಿರಾಕಿಯೂ ಚೌಕಾಸಿ ಮಾಡಿಯೇ ಮಾಡುತ್ತಾನೆ ಅನ್ನುವುದು ಮನದಟ್ಟವಾಗಿರುತ್ತದೆ. ಹಾಗಾಗಿಯೇ, ವಸ್ತುವಿನ ಬೆಲೆಯನ್ನು ಮೂರು ನಾಲ್ಕು ಪಟ್ಟು ಏರಿಸಿಯೇ ಮಾರಾಟಕ್ಕೆ ಇಟ್ಟಿರುತ್ತಾರೆ. ಇತ್ತ ಕೆಲ ಗ್ರಾಹಕರು ಅದನ್ನು ಅರ್ಧದಷ್ಟಕ್ಕೆ ಇಳಿಸಿ ಶೇಕಡಾ ಐವತ್ತು ಇಳಿಸಿದೆ ಎಂಬ ಸಂತಸದಲ್ಲಿ ಹೋಗಬಹುದು. ಇನ್ನು ಕೆಲ ಘಾಟಿ ಗ್ರಾಹಕರು ತಮ್ಮ ಚೌಕಾಸೀ ಕುಶಲತೆಯಿಂದ ಅದರ ನಿಜವಾದ ಮಾರಾಟ ಬೆಲೆಗೆ ಇಳಿಸುವಲ್ಲಿ ಯಶಸ್ವಿಯಾಗಬಹುದು.

ಒಟ್ಟಾರೆ ನೋಡಿದರೆ ಎಲ್ಲಾ ಗ್ರಾಹಕರಿಗೂ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಖರೀದಿ ಮಾಡಿದೆವೆಂಬ ನೆಮ್ಮದಿ ಇದ್ದರೆ, ವ್ಯಾಪಾರಿಗಳು ತಾವು ನಿಗದಿ ಪಡಿಸಿದ ಮಾರಾಟ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಮಾರಾಟವಾಗಿಲ್ಲ, ತಮಗೆ ನಷ್ಟವೇನೂ ಆಗಿಲ್ಲವಲ್ಲ ಎಂಬ ಸಂತಸದಲ್ಲಿರುತ್ತಾರೆ.

ಎಲ್ಲಾ ಅಂಗಡಿಗಳಲ್ಲಿ, ಎಲ್ಲಾ ವಸ್ತುಗಳ ಖರೀದಿಯಲ್ಲಿ ಚೌಕಾಸಿ ಅಥವಾ ಚರ್ಚೆ ನಡೆಯುತ್ತದೆ. ಕಡಿತಗಳು, ಜೊತೆಗೆ ಉಚಿತ ಕೊಡುಗೆಗಳೂ ಇರುತ್ತವೆ. ಔಷಧಿ ಅಂಗಡಿಗಳಲ್ಲೂ ಚೌಕಾಸಿ ಮಾಡುವವರನ್ನು ಕಂಡಿದ್ದೇನೆ. ಊಟದ ಹೋಟೇಲುಗಳಲ್ಲೂ ಈಗೀಗ ಚೌಕಾಸಿ ನಡೆಯುತ್ತದೆ. ನಾವು ೧೫ ಜನ ಬರುತ್ತಿದ್ದೇವೆ, ನಿಮ್ಮ ಬಫೆ ಊಟದ ಬೆಲೆಯನ್ನು ಪ್ರತಿ ತಲೆಗೆ ಮುನ್ನೂರರಿಂದ ಇನ್ನೊರೈವತ್ತಕ್ಕೆ ಇಳಿಸಿ, ಅಂತ ದುಂಬಾಲು ಬಿದ್ದು, ಅದರಲ್ಲಿ ಸಫಲರಾಗುವವರೂ ಇದ್ದಾರೆ.

ಆದರೆ, ಜನರು ಯಾವುದೇ ರೀತಿಯ ಚೌಕಾಸಿ ಮಾಡದೆ, ವ್ಯಾಪಾರಿ ಹೇಳಿದ ಬೆಲೆ ಕೊಟ್ಟು ಖರೀದಿ ಮಾಡುವುದೂ ಇದೆ. ವಸ್ತುಗಳ ಮೇಲೆ ನಮೂದಿಸಲ್ಪಟ್ಟಿರುವ ಗರಿಷ್ಟ ಮಾರಾಟ ಬೆಲೆಗಿಂತಲೂ ಜಾಸ್ತಿ ಬೆಲೆ ಕೊಟ್ಟು ಕೊಂಡುಕೊಳ್ಳುವ ಜನರೂ ಇದ್ದಾರೆ, ಅಂತಹ ವಸ್ತುಗಳೂ ಇವೆ.

ಆ ವಸ್ತುಗಳು ಯಾವುವು ಅಂತ ಕೇಳ್ತೀರಾ? ಅವು ವಿಷೇಷ ವರ್ಗಕ್ಕೆ ಸೇರಿದವುಗಳು. ಅವುಗಳಿಂದ ಮಾನವ ಶರೀರಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅವುಗಳ ಪಟ್ಟಿಯಲ್ಲಿ ಮಾದಕ ಪದಾರ್ಥಗಳು. ತಂಪು ಪಾನೀಯಗಳು, ಬೀಡಿ, ಸಿಗರೇಟು, ಹೊಗೆಸೊಪ್ಪು ಮಿಶ್ರಿತ ಅಡಿಕೆಪುಡಿಯ ಪೊಟ್ಟಣಗಳು ಮತ್ತು ವಿವಿಧ ರೀತಿಯ ಮದ್ಯಗಳು ಸೇರಿವೆ. ಇವುಗಳ ಬೆಲೆಗಳ ಮೇಲೆ ಚೌಕಾಸಿ ನಡೆಯುವುದೇ ಇಲ್ಲ. ಅಲ್ಲಿ ಯಾವುದೇ ರೀತಿಯ ಚರ್ಚೆಯೇ ಇಲ್ಲ. ಸ್ವದೇಶದಲ್ಲಿ ತಯಾರಾಗುವ ವಿದೇಶೀ ಮದ್ಯಗಳ ಬಾಟಲಿಗಳ ಮೇಲೆ ಅವುಗಳ ಗರಿಷ್ಟ ಮಾರಾಟ ಬೆಲೆ ಕೂಡ ನಮೂದಾಗಿರುವುದಿಲ್ಲ. ಅದರರ್ಥ ಅವುಗಳ ಬೆಲೆಗಳ ಮೇಲೆ ನಿಯಂತ್ರಣವೇ ಇಲ್ಲ.

ವಾಹನಗಳಲ್ಲಿ ಮತ್ತು ವಿಹಾರ ಸ್ಥಳಗಳಲ್ಲಿ, ಇಂತಹ ವಸ್ತುಗಳಿಗೆ ಹೆಚ್ಚಿನ ಬೆಲೆ ತೆರುವುದು ಮಾಮೂಲಾಗಿದೆ. ಅದನ್ನು ನಾವು ನೀವೂ ಒಪ್ಪಿಕೊಂಡೂ ಆಗಿದೆ. ಆದರೆ, ನಮ್ಮ ಊರೊಳಗೂ ಈ ರೀತಿ ಅಧಿಕ ಬೆಲೆ ಕೇಳುವ ವ್ಯಾಪಾರಿಗಳನ್ನು ಮತ್ತು ತುಟಿ ಪಿಟಕ್ಕೆನ್ನದೇ ಆ ಬೆಲೆ ತೆತ್ತು ಖರೀದಿ ಮಾಡುವ ಗ್ರಾಹಕರನ್ನು ಕಾಣಬಹುದು. ಇದೇಕೆ ಹೀಗೆ? ಇನ್ನಿತರ ಎಲ್ಲಾ ಕಡೆ ಇರುವ ಈ ಬಾರ್ಗೇನ್ ಸಂಸ್ಕೃತಿ, ಬಾರ್‌ಗಳಲ್ಲಿ ಇರುವುದೇ ಇಲ್ಲ. ಹೀಗ್ಯಾಕೆ? 

ನಾವು ನಮ್ಮ ಹವ್ಯಾಸಗಳಿಗೆ, ದುರಭ್ಯಾಸಗಳಿಗೆ ಖರ್ಚು ಮಾಡುವಾಗ ಲೆಕ್ಕಾಚಾರ ಮಾಡುವುದೇ ಇಲ್ಲ. ಆ ಖರ್ಚು ಎಷ್ಟೇ ಆದರೂ, ಮಾಡಿಯೇ ಮಾಡುತ್ತೇವೆ. ಒಂದು ವೇಳೆ ಕೈಯಲ್ಲಿ ಕಾಸಿಲ್ಲದಿದ್ದರೂ, ಸ್ನೇಹಿತರಿಂದ ಸಾಲ ಪಡೆದಾದರೂ ಖರ್ಚು ಮಾಡಿಯೇ ತೀರುತ್ತೀವೆ.

ಮನುಷ್ಯ ತನ್ನ ದುರಭ್ಯಾಸಗಳಿಗೆ ಸಾಲ ಮಾಡಿದಷ್ಟು, ಅಗತ್ಯದ ವಸ್ತುಗಳ ಖರೀದಿ ಬಗೆಗಿನ ಖರ್ಚಿಗಾಗಿ ಮಾಡುವುದಿಲ್ಲ. ಆದರೆ ತನ್ನ ಸಂಸಾರದ ಸದಸ್ಯರು ಏನಾದರೂ ಬೇಡಿಕೆ ಮುಂದಿಟ್ಟಾಗ, ಅದರ ಬಗ್ಗೆ ಯೋಚನೆ ಮಾಡಿ, ಗಹನವಾದ ಚಿಂತನೆ ಮಾಡಿ, ಬಹಳಷ್ಟು ಲೆಕ್ಕಾಚಾರ ಮಾಡಿ, ಅತ್ಯಂತ ಕಷ್ಟದಿಂದ ಖರ್ಚು ಮಾಡುತ್ತಾನೆ. ತಾನು ಎಷ್ಟು ಕಷ್ಟದಿಂದ ಖರೀದಿ ಮಾಡುತ್ತಿದ್ದೇನೆ ಅನ್ನುವುದನ್ನು ಬೇಡಿಕೆ ಮುಂದಿಟ್ಟವರಿಗೆ ಮನದಟ್ಟು ಮಾಡುವ ಪ್ರಯತ್ನ ಕೂಡ ಮಾಡಿರುತ್ತಾನೆ. ಇದೇಕೆ ಹೀಗೆ?
***********


ಬಂಧನ ಬಯಸಿದ್ದೆ ಬಿಡುಗಡೆಯ ಬಯಸಿರಲಿಲ್ಲ!

16 ಫೆಬ್ರ 13
(ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಯತ್ನ)

ನಿನ್ನ ಕೇಶರಾಶಿಯಿಂದ ಅಗಲಬೇಕೆಂದು ನಾನು ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನನ್ನಿಂದೇನು ತಪ್ಪಾಯ್ತೆಂದು ಹೀಗೆ ಮುನಿದು ಕೂತಿರುವೆ ನೀನು
ಪ್ರೀತಿಯನ್ನಷ್ಟೇ ಬಯಸಿದ್ದೆ, ದೈವತ್ವವನ್ನು ನಾ ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನಿನ್ನ ಕೇಶರಾಶಿಯಿಂದ ಅಗಲಬೇಕೆಂದು ನಾನು ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನಿನ್ನ ಕಂಗಳಿಂದ ಜಾರುವ ಈ ಹನಿಗಳ ಮೇಲೆ ನನ್ನದೇ ಹಕ್ಕಿತ್ತು
ನನ್ನದಷ್ಟನ್ನೇ ನಾ ಬಯಸಿದ್ದೆ, ಅನ್ಯರದನ್ನು ನಾನು ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನಿನ್ನ ಕೇಶರಾಶಿಯಿಂದ ಅಗಲಬೇಕೆಂದು ನಾನು ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನಿನ್ನಿಂದಲೇ ಬಡವಾಗಿರುವ ನನಗೆ ಇನ್ನೂ ನೋವ ನೀಡಬೇಡ
ನಿನ್ನ ಒಲವಿನಲ್ಲಿ ನಾನಿನಗೆ ಕೇಡನ್ನೆಂದೂ ಬಗೆದಿರಲೇ ಇಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

ನಿನ್ನ ಕೇಶರಾಶಿಯಿಂದ ಅಗಲಬೇಕೆಂದು ನಾನು ಬಯಸಿರಲಿಲ್ಲ
ಬಂಧನವನ್ನು ಬಯಸಿದ್ದೆ, ಬಿಡುಗಡೆಯನ್ನೆಂದೂ ಬಯಸಿರಲಿಲ್ಲ

 
ಮೂಲ ಗೀತೆಯನ್ನು ಇಲಿ ಕೇಳಿ:

ಪ್ರೀತಿ ಕಾಲಾತೀತ!

15 ಫೆಬ್ರ 13
ಸಖೀ,
ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರ
ಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರ

ಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆ
ಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹಾತೊರೆಯುವವರೇ!


ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!

14 ಫೆಬ್ರ 13
“ಸಖೀ,
ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟ
ಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟ
ನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡು
ಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು”

“ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆ
ಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆ
ದಿನವೂ ಸಖೀ ಸಖೀ ಅನ್ನುತ್ತಿರುವಿರಲ್ಲವೇ
ಬರೆಯುವಾಗಲೂ ಆ ರಾಜಕೀಯದ ಬಗ್ಗೆ”

“ಅಯ್ಯೋ ಮಂಕೇ ದಿನವೂ ಬರೆಯುವುದು
ಬರೆವ ಹವ್ಯಾಸಕ್ಕಾಗಿ ಅದು ನಿನಗಲ್ಲ ಕಣೇ
ಇಂದು ಬರೆದರೆ ಎಲ್ಲಾ ಅರ್ಥೈಸಿಕೊಂಬರು
ಇಲ್ಲಿರುವ ಸಖೀ ಬೇರಾರು ಅಲ್ಲ ನನ್ನ ಹೆಣ್ಣೇ

ಮನೆಯೊಳಗಿನ ಪ್ರೀತಿ ಪ್ರೇಮ ಇವೆಲ್ಲವೂ
ಸದಾ ಇರಲಿ ಮನೆಯ ಗೋಡೆಗಳ ನಡುವೆ
ಪ್ರೀತಿ ಭಕ್ತಿಗಳೆಂದಿಗೂ ಖಾಸಗಿಯಾಗಿರಲಿ
ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!”
*****


ಅರ್ಥ ಆಗ್ಬೇಕು ಅಷ್ಟೇ!

14 ಫೆಬ್ರ 13
“ಸಖೀ,
ಈತನ ಮತ್ತಾಕೆಯ
ನಡುವಣ ಪ್ರೀತಿ
ಆಗಲೇ ಮುಗಿದು
ಹೋಗಿದೆಯಂತೆ”“ಯಾಕೆ ಏನಾಯ್ತು?
ಹೇಳಿದ್ರಾ ಜಗಳಕ್ಕೆ
ಕಾರಣ ಏನಂತೆ?”

“ಕಳೆದ ಬಾರಿ ಪ್ರೇಮಿಗಳ
ದಿನದಂದು ಈತ ಆಕೆಗೆ
ಕರೆ ಮಾಡಲಾಗಿಲ್ಲವಂತೆ

ಆ ದಿನದ ನಂತರ ಆಕೆ
ಈತನ ಕರೆಗಳನ್ನೇ
ಸ್ವೀಕರಿಸುತ್ತಿಲ್ಲವಂತೆ;

ಈತ ಕರೆ ಮಾಡಿದಾಗ
ತಾವು ಮಾತನಾಡಲು
ಬಯಸಿರುವವರು ಸದ್ಯ
ಕಾರ್ಯನಿರತರಾಗಿದ್ದಾರೆ
ಎಂಬ ಸಂದೇಶ ಸತತ
ಬರುತ್ತಲೇ ಇಹುದಂತೆ!”

“ಅಲ್ರೀ… ಪ್ರೀತಿ ಅಂತಾರೆ
ಒಬ್ಬರನ್ನೊಬ್ಬರು ಅರ್ಥ
ಮಾಡಿಕೊಳ್ಳಬೇಕು ಅಷ್ಟೇ”

“ಹೂಂ… ಈತನಿಗೆ ಈಗ
ಅರ್ಥವಾಗುತ್ತಿದೆಯಂತೆ
ಆಕೆ ಅಲ್ಲಿನ್ನಾರನ್ನೋ ಅರ್ಥ
ಮಾಡಿಕೊಳ್ತಿದ್ದಾಳೆ ಅಷ್ಟೇ!”
***************