ಜೀವನದಲ್ಲಿ ಜಿಗುಪ್ಸೆಗೊಂಡು, ಅನ್ಯರಿಂದ ತಿರಸ್ಕೃತರಾಗಿದ್ದೇವೆ ಎಂಬ ವೈರಾಗ್ಯದ ಮಾತುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ, ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಆಡುವವರಿಗೆ, ನಾನು ಅನುಕಂಪವನ್ನು ತೋರಿಸಿ, ಮುಖಸ್ತುತಿಯ ಮಾತನಾಡಿ, ಸಾಂತ್ವನದ ನುಡಿಗಳನ್ನು ಹೇಳಿ, ಪದಬಳಕೆಯ ಜಾಣ್ಮೆಯನ್ನು ಕೊಂಡಾಡಿ, ಕೈತೊಳೆದುಕೊಳ್ಳಬಹುದು.
ಆದರೆ, ಹಾಗೆ ಮಾಡಿದರೆ, ಅದು ನಾನು ಅಂಥವರಿಗೆ ಮಾಡುವ ಅಪಕಾರವಾದೀತು, ಎಂದು ನನ್ನ ಅನಿಸಿಕೆ.
ನನ್ನ ಪ್ರಕಾರ ಅಂಥವರಿಗೂ ಆತ್ಮವಿಮರ್ಶೆಯ ಅಗತ್ಯ ಇದೆ.
ಅನ್ಯರೆಲ್ಲರೂ ದೂರವಾಗಿಹರಾದರೆ, ನಮ್ಮಲ್ಲೇ ಏನೋ ಐಬು ಇರಬಹುದು ಎಂದು ಯೋಚಿಸಬೇಕು.
ಆತ್ಮಸ್ಥೈರ್ಯ ಕಡಿಮೆಯಾಗದ ತೆರದಿ ಧೈರ್ಯದಿಂದ ನಮ್ಮ ಒಳಗಿಣುಕಿ ನೋಡಿ, ನಮ್ಮ ಒಳಗಿಳಿದು, ನಮ್ಮನ್ನೇ ನಾವು ಸರಿಪಡಿಸಿಕೊಳ್ಳಬೇಕು.
ಜಗವನ್ನೇ ಬದಲಿಸ ಹೊರಟರೆ ಬಹುಕಷ್ಟ, ನಮ್ಮನ್ನೇ ಬದಲಿಸಲು ಯತ್ನಿಸುವುದು ಅದಕ್ಕಿಂತ ಕೊಂಚ ಸುಲಭ.
ನಾವ್ಯಾಕೆ ಬದಲಾಗಬೇಕು, ನಾವು ಸರಿಯಾಗಿಯೇ ಇದ್ದೇವೆ ಅನ್ನುವ ಮನೋಭಾವ ಇದೆಯೆಂದಾದರೆ, ಇಂಥ ವೈರಾಗ್ಯದ, ಜಿಗುಪ್ಸೆಭರಿತ, ಬೇಸರದ ಹಾಗೂ ಅನುಕಂಪ ಗಿಟ್ಟಿಸುವ ನುಡಿಗಳೂ ನಮ್ಮಿಂದ ಎಂದೂ ಹೊರಬರಬಾರದು.
ನಾವು ಎದೆಗುಂದಿದ್ದರೂ, ನಾವು ಎದೆಗುಂದಿದ್ದೇವೆ ಎನ್ನುವುದು ಅನ್ಯರ ಅರಿವಿಗೆ ಬರಲೇಬಾರದು!