ಎಲ್ಲಿಯ ಬೆಲೆಯಂತೆ?

24 ಡಿಸೆ 12

ಸಖೀ,
ಇನ್ನು ಸದ್ದಿಲ್ಲದೇ ಇದ್ದು ಬಿಡೋಣ
ಸದ್ದಿಲ್ಲದೆಯೇ ನಡೆದು ಬಿಡೋಣ
ನಾವಿಲ್ಲಿ ಸದ್ದು ಮಾಡುತ್ತಿದ್ದರೆಷ್ಟು
ಸದ್ದಿಲದಂಥಿದ್ದೆದ್ದು ಹೋದರೆಷ್ಟು
ಎಲ್ಲವೂ ನಿಜದಿ ನಿರರ್ಥಕವಂತೆ
ಅರ್ಥವನರಸುವುದೇ ಜೀವನವಂತೆ

ಆತನ ಆದಿ ಅಂತ್ಯ ಅರಿಯದ ಈ
ಬ್ರಹ್ಮಾಂಡದಲ್ಲೊಂದೊಂದು ಬಿಂದು
ನೀನು, ನಿನ್ನಂಥೆಯೇ ಇಲ್ಲಿ ನಾನು
ಎಷ್ಟು ಹೋರಾಡಿದರೇನು ಬಿಂದು
ಬ್ರಹ್ಮಾಂಡಕ್ಕೆ ಸಾಟಿ ಎಲ್ಲಿಯದಂತೆ
ಅಲ್ಲಾವ ಬದಲಾವಣೆ ಸಾದ್ಯವಂತೆ?

ರಾಮ, ಕೃಷ್ಣ, ಏಸು, ಬುದ್ಧ, ಎಲ್ಲರೂ
ಉಳಿದಿಹರು ಚಿತ್ರಗಳಾಗಿ ಗೋಡೆಗಳಲ್ಲಿ
ಅವರ ಮಾತುಗಳಿಗೀಗ ಬೆಲೆ ಇಹುದೆಲ್ಲಿ
ಚಿತ್ರಕ್ಕಷ್ಟೇ ಬೆಲೆ ಜೀವನಕ್ಕಿಲ್ಲ ಇನಿತೂ
ಅವರ ನುಡಿಗಳೇ ಅರ್ಥಹೀನವಾಗಿರಲು
ನಮ್ಮ ಮಾತುಗಳಿಗಿಲ್ಲೆಲ್ಲಿಯ ಬೆಲೆಯಂತೆ?
**********************


ಈ ಸ್ಥಿತಿಗೆ ನಾವೂ ಜವಾಬ್ದಾರರು!

24 ಡಿಸೆ 12

ಅತ್ಯಾಚಾರ ನಡೆದಿರುವುದು,  ಒಂದು ಹೆಣ್ಣುಮಗಳ ಮೇಲಲ್ಲ,  ಅತ್ಯಾಚಾರ ನಡೆದಿರುವುದು ಈ ಸಮಾಜದ ಮೇಲೆ. ಇಲ್ಲಿ ಬಲಿಯಾಗಿರುವುದೂ ಸಮಾಜವೇ, ಅಪರಾಧಿ ಸ್ಥಾನದಲ್ಲಿ ನಿಂತಿರುವುದೂ ಸಮಾಜವೇ.

ಕಳೆದ ನಾಲ್ಕೈದು ದಶಕಗಳಿಂದೀಚೆಗೆ ನಮ್ಮ ನಾಡಿನ ಚಿತ್ರರಂಗದವರು ಹಾಗೂ ಮಾಧ್ಯಮದವರು ಮಹಿಳೆಯರನ್ನು ಬಳಸಿಕೊಂಡ ಪರಿಯೇ ಒಂದು ರೀತಿಯಲ್ಲಿ ಸತತ ಅತ್ಯಾಚಾರ ನಡೆಸುತಿರುವಂತಿತ್ತು ಹಾಗೂ ಇನ್ನೂ ಇದೆ. ನೃತ್ಯಗಳು, ಸಿನಿಮಾಗಳಲ್ಲಿ ಜಾಸ್ತಿಯಾಗುತ್ತಾ ಬಂದಂತೆ, ಕಲಾವಿದೆಯರು ತೊಡುವ ಬಟ್ಟೆಗಳು ಕಡಿಮೆಯಾಗುತ್ತಾ ಬಂದವು. ಅವುಗಳನ್ನು ಚಿತ್ರಮಂದಿರದ ಪರದೆಯ ಮೇಲಷ್ಟೇ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಎರಡು – ಎರಡೂವರೆ ದಶಕಗಳಿಂದೀಚೆಗೆ ಯಾವುದೇ ನಿರ್ಬಂಧವಿಲ್ಲವೇ, ಆ ನಗ್ನ ಚಿತ್ರಗಳು ಸುದ್ದಿಮಾಧ್ಯಮಗಳಲ್ಲೂ ಪ್ರಕಟಗೊಳ್ಳತೊಡಗಿದವು. ಮನೆಮನೆಗೂ “ಟಿವಿ”ಗಳು ಬಂದವು. ಅವುಗಳ ಜೊತೆಗೆ, ಗಂಡು ಹೆಣ್ಣುಗಳೆನ್ನುವ ಭೇದ ಇಲ್ಲದೆಯೇ  ನಿರ್ಲಜ್ಜೆಯಿಂದ ಮೈಮಾಟಗಳನ್ನು ಪ್ರದರ್ಶಿಸುವ ಎಲ್ಲರ ಚಿತ್ರಗಳೂ, ದೃಶ್ಯಗಳೂ ಮನೆಮನೆಗಳಿಗೆ ಬಂದವು. ನಾಚಿಕೆ, ಮಾನ ಮರ್ಯಾದೆ ಎನ್ನುವುದು ಎಲ್ಲೆಂದರಲ್ಲಿ ಮೂರಾಬಟ್ಟೆಯಾಗತೊಡಗಿದವು. ಇವುಗಳಿಗೆಲ್ಲಾ ಅನ್ಯರಷ್ಟೇ ನಾವೂ ಜವಾಬ್ದಾರರು. ಜಾಸ್ತಿ ಅಂಗ ಪ್ರದರ್ಶನಮಾಡಿದವರು ವಿಶ್ವ, ಭುವನ ಸುಂದರಿಗಳೆಂಬ ಪ್ರಶಸ್ತಿಗಳಿಗೆ ಭಾಜನರಾದರು. ಮುಂದೆ ಅವರೇ ಚಲನಚಿತ್ರಗಳಲ್ಲಿ ಬೇಕಾಬಿಟ್ಟಿ ನೃತ್ಯಗಳಿಗೆ, ಕಾಮೋತ್ತೇಜಕ ದೃಶ್ಯಗಳಿಗೆ ತಮ್ಮ ಅಂಗಾಂಗಗಳ ಕೊಡುಗೆ ನೀಡತೊಡಗಿದರು. ಉಳಿದ ಕಲಾವಿದರಿಗೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಾಯಿತು. ಹಾಗಾಗಿ ಅನ್ಯರೂ ನಿರ್ಲಜ್ಜರಾದರು.

ಹೀಗಿರುವಾಗ,  ಮದ್ಯಪಾನದ ಹಾಗೂ ತಂಬಾಕಿನ ಉತ್ಪನ್ನಗಳ ಮಾರುಕಟ್ಟೆ ಈ ದೇಶದ ಆರ್ಥಿಕ ಸ್ಥಿಯನ್ನು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ದುಶ್ಚಟಗಳಿಗೆ ಬಲಿಯಾದವರು ಹಾಗೂ ವ್ಯಸನಿಗಳಾದವರು, ಇಂತಹ ಕಾಮೋತ್ತೇಜಕ ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ತಮ್ಮ ತೀಟೆ ತೀರಿಸಿಕೊಳ್ಳಲು ಬೇಟೆಯನ್ನು ಅರಸುವಾಗ, ಅನಾಯಾಸವಾಗಿ ದಕ್ಕುವ, ನಿಸ್ಸಹಾಯಕ ಹೆಣ್ಣುಮಕ್ಕಳು ಇವರಿಗೆ ಬಲಿಯಾಗತೊಡಗಿದರು. ಒಂದು ಘಟನೆ ಇನ್ನೊಂದು ಘಟನೆಗೆ, ಒಂದು ಅಪರಾಧ ಇನ್ನೊಂದು ಅಪರಾಧಕ್ಕೆ ಸ್ಪೂರ್ತಿ ನೀಡುತ್ತಾ ಬಂದಿತು. ಏಕೆಂದರೆ, ಅಪರಾಧಿಗಳು ಕಠಿಣ ಶಿಕ್ಷೆಗೆ ಒಳಗಾಗುವುದಿಲ್ಲ. ಒಂದು ವೇಳೆ ಅಂಥ ಶಿಕ್ಷೆಗೆ ಒಳಗಾದರೂ, ಆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆಯುವುದೇ ಇಲ್ಲ.

ಈ ಸಮಾಜ, ಲಿಂಗ ಭೇದ ಮರೆತು ತನ್ನ ಒಳಗಣ್ಣನ್ನು ತೆರೆದುಕೊಳ್ಳಬೇಕಿದೆ. ತಡವಾಗಿಯಾದರೂ, ಇಂತಹ ಅಪರಾಧಗಳ ನಿಯಂತ್ರಣೆಗಾಗಿ ತಾನೇ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರಲ್ಲಿ ಈ ಸಮಾಜದ  ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿ ಮುಖ್ಯವಾಗಿರುವಂತೆಯೇ, ಮುದ್ರಣ ಹಾಗೂ ದೃಶ್ಯಮಾಧ್ಯಮಗಳ ಜವಾಬ್ದಾರಿಯೂ ಬಹು ಮುಖ್ಯವಾಗಿದೆ.


ಹೆಂಗಸರಿಂದ ಹೆಂಗಸರಿಗೆ!

24 ಡಿಸೆ 12

ದೆಹಲಿಯಲ್ಲಿಹುದು ಹೆಂಗಸರದೇ ರಾಜ್ಯಭಾರ
ಆದರೂ ಹೆಂಗಸರಿಗೆ ರಕ್ಷಣೆ ನೀಡದ ಸರಕಾರ
ಗಣ್ಯರ ರಕ್ಷಣೆಗಷ್ಟೇ ಸದಾ ಪೋಲೀಸರ ಚಿಂತೆ
ಅಪರಾಧಗಳು ಏನಿದ್ದರೂ ದಾಖಲೆಗಳ ಕಂತೆ!


ಸಹಾಯವೆಂದರೆ, ಸಖೀ!

23 ಡಿಸೆ 12

ಸಖೀ,
ನಾನು ನಿನಗೆ ಸಹಾಯ ಮಾಡುವುದೆಂದರೆ
ನಿನ್ನ ಕೆಲಸವನ್ನೇ ನಾನು ಮಾಡಿಬಿಡುವುದಲ್ಲ
ನನ್ನ ಕೃತಿಗೇ ನಿನ್ನ ಹೆಸರನ್ನು ಲಗತ್ತಿಸುವುದಲ್ಲ

ನಿನ್ನಯ ಸೃಜನಶೀಲತೆಗೆ ಉತ್ತೇಜನ ನೀಡುತ್ತಾ
ನಿನ್ನಿಂದಲೂ ಸುಂದರ ಕೃತಿಗೆ ಕಾರಣವಾಗುತ್ತಾ
ನಿನ್ನ ಕೃತಿಯನ್ನು ಕೊಂಡಾಡುವುದು ಮೆಚ್ಚುತ್ತಾ!


ಕಿತ್ತೆಸೆದು ಸಾಗುವೆ!

23 ಡಿಸೆ 12

ಸಖೀ,
ನಮ್ಮ ಪಾದಗಳಡಿಗೆ ಚುಚ್ಚಿಕೊಂಡ
ಮುಳ್ಳುಗಳನ್ನು ಕಿತ್ತೆಸೆದು ನಾವು
ಹಾದಿಯಲಿ ಮುಂದಡಿಯಿಡುವ ತೆರದಿ,

ಮನಸ್ಸಿಗೆ ಘಾಸಿಮಾಡಿದವರನ್ನೆಲ್ಲಾ
ನನ್ನ ಈ ಮನದಿಂದಲೇ ಕಿತ್ತೆಸೆದು, 
ಮುಂದೆ ಸಾಗುತಿರುವೆ ನಾನೀ ಜಗದಿ!
***


ಕೋಲಿಲ್ಲದೇ ಏನಿಲ್ಲ!

23 ಡಿಸೆ 12

ಸಖೀ,
ಕೈಯಲ್ಲಿ ಕೋಲು 
ಹಿಡಿದುಕೊಂಡು 
ಬರುವವರನ್ನು
ಸದಾ ನಗುತಲೇ 
ಸ್ವಾಗತಿಸಬೇಕು;

ಆ ಕೋಲಿಲ್ಲದೇ
ಅವರೇನೂ ಅಲ್ಲ
ಅನ್ನುವುದನ್ನವರಿಗೆ
ನಗುತ ಮನವರಿಕೆ
ಮಾಡಿಸಬೇಕು!


ಜ್ಞಾನ ಜ್ಯೋತಿಯ ಬೆಳಗು!

22 ಡಿಸೆ 12

ನನ್ನ ಕಂಗಳು ಕಂಡದ್ದನ್ನೇ
ನನ್ನ ಮನಸ್ಸೂ ಅರಿತು, 
ಅದಕ್ಕಷ್ಟೇ ನನ್ನೀ ಹೃದಯ 
ಸ್ಪಂದಿಸುವ ತೆರದಿ ನೀನು
ಜ್ಞಾನ ಜ್ಯೋತಿಯ ಬೆಳಗು
ನನ್ನೊಳಗೆ ನನ್ನ ದೇವಾ!


ಬರಬೇಡ ಹತ್ತಿರ!

22 ಡಿಸೆ 12

ಸಖೀ,
ನಿನ್ನೆ ನಿನ್ನ 
ನಡತೆಗೆ
ಪರಿತಪಿಸಿ
“ಕ್ಷಮಿಸಿ”
ಅಂದವಳು,
ಇಂದು
ತನ್ನ ನಡತೆಗೆ
ಸಮಜಾಯಿಷಿ
ನೀಡಿ, ನನ್ನಲ್ಲಿ
ಏಕೆ ಕೇಳುತ್ತಿರುವೆ
ನೀನು ಉತ್ತರ?

ನೀನು ಮಾಡಿದ್ದು
ತಪ್ಪಾಯ್ತೆಂದು
ಒಪ್ಪಿಕೊಂಡವಳು
ಮತ್ತೆ ಇಂದೀಗ
ಇನ್ಯಾರದೋ
ವಕಾಲತ್ತಿನ
ಬಲದೊಂದಿಗೆ
ರಾಗ ಎಳೆಯುತ್ತಾ
ಹೀಗೆ ಬರಬೇಡ
ಕಣೇ ನೀನು 
ನನ್ನ ಹತ್ತಿರ!
******


ಭವಿಷ್ಯದ ನಾಯಕ!

21 ಡಿಸೆ 12

ಉಂಡಾಡಿ ರಾಹುಲ ಗಾಂಧಿಯೇ ನಮ್ಮ
ಈ ದೇಶದ ಭವಿಷ್ಯದ ನಾಯಕನಂತೆ
ಈ ಹೇಳಿಕೆ ನೀಡುವುದು ಅವರ ದಿನ
ನಿತ್ಯದೊಂದೇ ಕಾಯಕವಾಗಿಹುದಂತೆ;

ಪ್ರತಿ ದಿನವೂ ಆತ ಉಳಿದುಬಿಡುತ್ತಾನೆ
ಭವಿಷ್ಯಕ್ಕಾಗಿ ಕಾದಿರಿಸಿದ ನಾಯಕನಾಗಿ 
ಮನೆಗಳಲ್ಲಿ ಕೆಲವು ವಸ್ತುಗಳನ್ನು ಬಳಸದೇ
ಕಾದಿರಿಸುವಂತೆ ಗೃಹಿಣಿಯರತಿಥಿಗಳಿಗಾಗಿ!


ತಣ್ಣಗಿರಲಿ!

21 ಡಿಸೆ 12

“ಸಖೀ,
ಏನಾಗಬಹುದು
ಪ್ರಳಯ ತಪ್ಪಿತೆಂದು
ಸಂತಸದಿಂದ 
ಕುಣಿಯತೊಡಗಿದರೆ
ಈ ಭೂಮಿ?”

“ತಣ್ಣಗಿರಲು ಹೇಳಿ,
ಕುಣಿತದಿಂದಾಗಿ
ಸಾಗರಗಳಲೆಲ್ಲಾ
ಅಬ್ಬರದ ಅಲೆಗಳೆದ್ದು
ಬರಬಹುದು ನೋಡಿ
ಸುನಾಮಿ!