ಭ್ರಷ್ಟ ಹನಿಗಳು!

30 ಆಕ್ಟೋ 12

ಕಾಂಗ್ರೇಸ್ ಬೆಂಬಲ ವಾದ್ರಾನಿಗೆ
ಭಾಜಪಾ ಬೆಂಬಲ ನಿತಿನ್ ಗಡ್ಕರಿಗೆ
ಹಗಲಿಡೀ ಈ ಮಾಧ್ಯಮದವರಿಂದ
ಕಿರಿಕಿರಿ ಮಾತ್ರ ಅಮಾಯಕ ಜನರಿಗೆ!

*****

ಅಣ್ಣಾನ ಹಿಂದೆ ನಡೆದು ತನ್ನ ವೇದಿಕೆ ಕಟ್ಟಿಕೊಂಡೆ
ವೇದಿಕೆಯೇರಿದವನು ರಾಜಕೀಯ ಪಕ್ಷ ಕಟ್ಟಿಕೊಂಡೆ
ನಿರ್ದಿಷ್ಟ ಧೋರಣೆ ಇಲ್ಲದಿದ್ದರೆ ಜನ ಹಿಡಿಯಲ್ಲ ಬಾಲ
ಬಹಳ ದಿನ ಜೊತೆ ನೀಡೋಲ್ಲ ಕಣೋ ಕೇಜ್ರೀವಾಲ

*****

ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಯಾರಿಗೂ ಇಲ್ಲ ಶಕ್ತಿ
ಮಾತೆತ್ತಿದವರನ್ನು ಕೆಡವುತ್ತಾರೆ ಬಳಸಿ ಯಾವುದೋ ಯುಕ್ತಿ
ಯಾಕೆಂದರೆ ಭ್ರಷ್ಟರಲ್ಲವೆಂದು ಹೇಳಲಾಗದು ನಾವೂ ನೋಡಿ
ಭ್ರಷ್ಟಾಚಾರ ಮನೆ-ಮನದಲ್ಲೂ ಮೇಳೈಸಿದೆ ಒದ್ದು ಹೊರದೂಡಿ!


ಮೂರು ಹನಿಗಳು!

30 ಆಕ್ಟೋ 12

ನೀ ಮೌನಿಯಾದರೆ
ಮಾತು ಇಲ್ಲವೆಂದೇನಲ್ಲ

ಮೌನವೇ ಮಾತಾಗಿ
ನನ್ನ ತಿವಿಯುತಿಹುದಲ್ಲಾ

*****

ಬರೆದ ಮಾತುಗಳೆಲ್ಲಾ
ಕವನವಾಗುವುದಿಲ್ಲ

ಬೆಂಕಿಯಲ್ಲಿ ಸುಟ್ಟಷ್ಟಕ್ಕೇ
ಹವನವಾಗುವುದಿಲ್ಲ

*****

ಗುಂಪಿನಲ್ಲಿ ಒಂಟಿಯಾಗಿ
ಇರುವುದು ಯಾರೂ ಅಲ್ಲದಂತೆ
ಇರುವುದಕ್ಕಿಂತ  ಉತ್ತಮ!

*****


ಆಳುತ್ತಿಲ್ಲ!

30 ಆಕ್ಟೋ 12

ನಿಶ್ಚಯಿಸಿಬಿಟ್ಟಿದ್ದೆ
ಎದೆಗುಂದುವುದಿಲ್ಲ
ನಾನು ಎಂದೂ
ಅಳುವುದಿಲ್ಲ

ಏನು ಮಾಡಲಿ
ಆ ನಿಶ್ಚಯ
ನಿಶ್ಚಯಿಸಿದಲ್ಲೇ
ಉಳಿಯಿತು

ಏಕೆಂದರೆ ನನ್ನ
ಈ ಮನಸ್ಸೀಗ
ನನ್ನ ಮಾತನ್ನೇ
ಕೇಳುತ್ತಿಲ್ಲ
ನನ್ನ ಮನಸ್ಸನ್ನೀಗ
ನಾನೇ ಆಳುತ್ತಿಲ್ಲ!
 **********


ಬಾಳ ಪಯಣ!

30 ಆಕ್ಟೋ 12

ನಮ್ಮೀ ಬಾಳ ಪಯಣದಲಿ
ಕೆಲವರು ಉದ್ದಕ್ಕೂ ಜೊತೆ ಜೊತೆಗೆ ನಡೆವವರು
ಹಲವರು ನಮ್ಮ ಜೊತೆಗೆ ನಾಲ್ಕು ಹೆಜ್ಜೆ ನಡೆವವರು
ಹಲವರು ಹಾದಿಯ ಪಕ್ಕದಲ್ಲಿ ನಿಂತು ಕೈಯಾಡಿಸಿದವರು
ಇನ್ನು ಕೆಲವರು ಮನದ ಬಾಗಿಲನ್ನು ಬರಿದೆ ತಟ್ಟಿಹೋದವರು
ಹೋದವರು ಹೋದವರು ಇನ್ನೆಂದೂ ಬಾರದೂರಿಗೆ ತೆರಳಿದವರು
ಈ ಮನದೊಳಗೆ ಅದ್ಯಾವುದೋ ಅವ್ಯಕ್ತ ನೋವನ್ನು ಉಳಿಸಿ ಹೋದರವರು!


ವಾಜಪೇಯಿಯದಿತ್ತು ಸೋನಿಯಾಗುಪಕಾರ!

30 ಆಕ್ಟೋ 12

ಯಡ್ಡಿಗೆ ತಿಳಿದಿತ್ತು ನಿತಿನ್ ಗಡ್ಕರಿಯ ಗುಟ್ಟು
ಹಾಗಾಗಿ ಹಿಡಿದಿದ್ದ ಬಲವಾಗಿ ಆತನ ಜುಟ್ಟು

ಗಡ್ಕರಿಯ ಜುಟ್ಟು ಈಗ ಆಗಿರುವಾಗ ಸಡಿಲು
ಯಡ್ಡಿಗೆ ತನಗೆ ಯಾರೂ ಇಲ್ಲವೆಂಬ ದಿಗಿಲು

ಪಕ್ಷ ಭೇದವಿಲ್ಲದೇ ಅಧ್ಯಕ್ಷರೆಲ್ಲರೂ ಇಲ್ಲಿ ಭ್ರಷ್ಟರು
ಭಾಜಪಾದಲ್ಲೇ ಇದ್ದನಲ್ಲ ಭ್ರಷ್ಟ ಅಧ್ಯಕ್ಷ ಬಂಗಾರು

ರಾಜಕೀಯ ರಂಗಮಂಚದಲ್ಲಿ ಎಲ್ಲರದೂ ವೇಷ
ನಟಿಸುವವರ ನಡುವೆ ಕೆಲವರದು ಬರೀ ಆವೇಶ

ಒಡಂಬಡಿಕೆಯೊಂದಿಗೆ ಇಲ್ಲಿ ಎಲ್ಲರದೂ ವ್ಯವಹಾರ
ವಾಜಪೇಯಿಯದೂ ಇತ್ತು ಸೋನಿಯಾಗುಪಕಾರ
 ******************************


ಹವಾಮಾನ!

30 ಆಕ್ಟೋ 12

ಸಖೀ,

ಹವಾಮಾನದಂತೆ ಎಲ್ಲವೂ ಬದಲಾಗುತ್ತಿವೆ ನೋಡು ಈ ನಾಡಿನಲ್ಲಿ

ನಿನ್ನೆಯ ತನಕ ದೇವರಂತಿದ್ದವರು ಕಾಲಕಸವಾಗುತ್ತಾರೆ ಬೀದಿಯಲ್ಲಿ

 ಕಣ್ಣ ನೋಟದಲ್ಲೇ ದ್ವೇಷ ಕಾರುತ್ತಿದ್ದವರು ಒಂದಾಗುತ್ತಾರೆ ಕೂಟಗಳಲ್ಲಿ

 ಲಾಭ-ನಷ್ಟದ್ದೇ ವ್ಯವಹಾರ ಅದಲ್ಲದೇ ಯಾರಿಗೆ ಯಾರೂ ಇಲ್ಲ ಬಾಳಿನಲ್ಲಿ!

 ********


ಆಯುಧ ಪೂಜೆ!

30 ಆಕ್ಟೋ 12

ಸಖೀ,
ಬರಹಗಾರನ ಮುಖ್ಯ
ಆಯುಧವೇನೆಂದರೆ
ಆತ ಬಳಸುವ ಪೆನ್ನು

ಧೂಳು ಕೂರದಂತದನು
ಬಳಸುತ್ತಾ ಇರುವುದದರ
ಪೂಜೆಯಲ್ಲದೇ ಮತ್ತೇನು?


ನಾನು-ನೀನು!

30 ಆಕ್ಟೋ 12


ಅದೆಷ್ಟೇ ಆಸೆಯಿಂದ ,
ಅದೆಷ್ಟೇ ಹೊತ್ತು,
ಅದೆಷ್ಟೇ  ದೂರಕ್ಕೆ
ಹಾಯಿಸಿದರೂ ನಾವು
ನಮ್ಮ ದೃಷ್ಟಿಗಳನ್ನು,

ನಿರಾಸೆಗೊಂಡು
ಮರಳಿದ ಮೇಲೆ
ನೋಡುತ್ತಿರಬೇಕು
ಕಣೆ ಇಲ್ಲಿ ಎಂದಿನಂತೆ
ನೀನು ನನ್ನನ್ನು
ನಾನು ನಿನ್ನನ್ನು!


ಚಿಂತೆ ನನಗೂ – ನಿನಗೂ!

30 ಆಕ್ಟೋ 12

ನಿನಗೆ ನಿನ್ನೆದುರಿರುವ ಹೆಜ್ಜೆ ಗುರುತು ಯಾರದು ಎನ್ನುವ ಚಿಂತೆ

ನನಗೆ ಕಣ್ಮುಂದೆ ಸಾಗಿಹೋದ ಆ ಛಾಯೆ ಯಾರದೆನುವ ಚಿಂತೆ!


ಒಂದೇ ತೆರನಾದ ಮುಖ ಛಾಯೆಗಳು!

30 ಆಕ್ಟೋ 12
ಬಾಳಿನ ಮುಸ್ಸಂಜೆಯಲಿ ಈ ಕಣ್ಣುಗಳ ಮುಂದೀಗ

ಮೆರವಣಿಗೆ ನಡೆಸಿವೆ ನನ್ನ ಹಳೆಯ ನೆನಪುಗಳು

ಸುತ್ತ ಮುತ್ತಲೂ ನೋಡಿದರೆ ಮೂಡಿದಂತಿವೆ ಅಂದು
ಜೊತೆ ಜೊತೆಗೆ ಸಾಗಿಹೋದವರ ಹೆಜ್ಜೆ ಗುರುತುಗಳು

ಯಾವ ಹೆಜ್ಜೆ ಯಾರದೋ ಯಾವ ದಿಕ್ಕು ಯಾರದೋ
ಇದ್ದಾಗ ಎಲ್ಲರದೂ ವಿಭಿನ್ನ ರೂಪಗಳು ಭಿನ್ನ ಭಾವಗಳು

ಮರೆಯಾದ ಮೇಲೆ ಈಗಿಲ್ಲಿ ಕೂತು ನೆನೆವಾಗ ಎಲ್ಲರದೂ
ಒಂದೇ ತೆರನಾಗಿ ಕಾಣುವ ಹತ್ತಾರು ಮುಖ ಛಾಯೆಗಳು!
**********************
(ಚಿತ್ರದಲ್ಲಿ: ನನ್ನ ಮಗಳಬ್ಬೆಯ ತೀರ್ಥರೂಪರು  ಮಲ್ಪೆ ಕಡಲ ತೀರ .. ೨೦೧೦ರ ದಶಂಬರದಲ್ಲಿ! !