ಸಿಂಹಳೀಯರ ಮುಂದೆ ಮಂಡಿಯೂರಲಾಗದು!

01 ಏಪ್ರಿಲ್ 11

 

ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯ
ಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತು
ಆ ಸಂಭ್ರಮದ ಗುಂಗಿನಿಂದ ಹೊರಬಾರದೇ
ಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತು

ವಾನರ ಸೇನೆಯನ್ನು ಕಟ್ಟಿಕೊಂಡು ಶ್ರೀರಾಮ 
ಆ ಲಂಕೆಯಾ ಯುದ್ಧದಲಿ ಜಯಿಸಿರಬಹುದು
ಧೋನಿಯ ಹುಡುಗರು ವಾನರರಾಟ ಆಡದೆ
ಉಳಿದರೆ ಮಾತ್ರ ಈ ಕದನವ ಜಯಿಸಬಹುದು

ತೆಂಡೂಲ್ಕರನಿಗೆ ಶತಕಗಳ ಶತಕವ ಪೂರೈಸಲು
ಕಾದಿಹುದು ವಾಂಖೆಡೆಯಲ್ಲಿ ಸುವರ್ಣ ಅವಕಾಶ
ಯುವ, ಸೆಹವಾಗ, ಗಂಭೀರ, ವಿರಾಟ ಶೌರ್ಯವ
ಮೆರೆಯೆ ಧೋನಿಯ ಜೊತೆ ನೀಡುವನು ಸುರೇಶ

ಜಹೀರ, ಮುನಾಫ, ಹರಭಜನರ ಸೇರಿಕೊಂಡು
ಅಶ್ವಿನನೂ ನಾಳೆ ತಿರುತಿರುವಿ ಎಸೆದರೆ ಚೆಂಡನ್ನು
ನಿಜವಾಗಿಯೂ ಯಾರಿಂದಲೂ ಆಗದದು ಸಾಧ್ಯ
ಸೋಲಿಸಲು ನಮ್ಮ ಮೆಚ್ಚಿನ ಈ ಹುಡುಗರನ್ನು

ತಪ್ಪುಗಳಾದರೆ ಮುಂದೆ ಸುಧಾರಿಸಿಕೊಳ್ಳೋಣ
ಎನ್ನಲು ಇಲ್ಲಿ ಇಲ್ಲವೇ ಇಲ್ಲ  ಇನ್ನೊಂದು ಪಂದ್ಯ
ಪ್ರತಿಯೊಬ್ಬನೂ ತನ್ನ ಕಸುವನ್ನು ಒರೆಗೆ ಹಚ್ಚಿ
ತೋರಿಸಿಕೊಟ್ಟರೆ ನಮ್ಮದಾಗಬಹುದೀ ಪಂದ್ಯ

ಪಾಕಿಸ್ತಾನವನೇ ಮಣಿಸಿದ ವೀರರು ನಮ್ಮವರು
ಸಿಂಹಳೀಯರ ಮುಂದೆ ಮಂಡಿಯೂರಲಾಗದು
ವಿದೇಶೀ ತಂಡದವರು ನಮ್ಮ ನೆಲದಲ್ಲಿ ವಿಜಯ
ಪತಾಕೆ ಹಾರಿಸಲು ಎಂದೆಂದಿಗೂ ಬಿಡಲಾಗದು!
***********************