ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

“…ಯಾವ ಸರಕಾರವೂ ಮಾಡಲಾಗದ ಸಾಧನೆ ಮಾಡಿದ್ದ ಮಹಾನ್ ಮನುಷ್ಯ, ಆತ ಮನುಷ್ಯನೇ ಅಲ್ಲ ಆತನೋರ್ವ ಮಹಾನ್ ಸಂತ.  ಅವರಿಂದ ನಾವು ಮತ್ತು ಈ ಸಮಾಜ ಕಲಿಯಲಿಕ್ಕೆ ಬಹಳಷ್ಟಿದೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ…”.

ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ತನ್ನ ಇಹಲೋಕದ ಪಯಣವನ್ನು ಮೊಟಕುಗೊಳಿಸಿ (೯೬ ವರುಷ ಬದುಕುತ್ತೇನೆ ಅಂತ ಅವರೇ ಹೇಳಿದ್ದರಂತೆ, ಹಾಗಾಗಿ ಮೊಟಕುಗೊಳಿಸಿದರೇನೋ ಎನ್ನುವ ಅನುಮಾನ ನನಗೆ) ಪರಲೋಕದತ್ತ ಮುಖಮಾಡಿ ಹೊರಟು ಹೋದ ಮೇಲೆ, ಅವರ ನಿಧನಕ್ಕೆ ಸಂತಾಪ ಸೂಚಿಸಲು ಕ್ಯಾಮೆರಾ ಮುಂದೆ ನಿಂತ ರಾಜಕಾರಣಿಗಳೆಲ್ಲಾ ನುಡಿದ ಮಾತುಗಳಲ್ಲಿ ನನಗೆ ಅದೇಕೋ ಏಕತಾನತೆ ಕಂಡುಬಂದಿತ್ತು.

ನಿಜ, ಈ ಲೋಕದಿಂದ ಮರಳುವ ಯಾವೊಬ್ಬ ವ್ಯಕ್ತಿಯ ಸ್ಥಾನವನ್ನೂ ಇನ್ನೊರ್ವ ವ್ಯಕ್ತಿ ತುಂಬಲು ಸಾಧ್ಯವಿಲ್ಲ. ಆದರೆ, ಸತ್ಯ ಸಾಯಿಬಾಬಾ ಮಾಡಿದ ಜನೋಪಯೋಗಿ ಕೆಲಸಗಳನ್ನು ಯಾವುದೇ ಸರಕಾರವೂ ಮಾಡಲಾಗದು ಅನ್ನುವುದೇಕೆ. ಮಾಡಲಾಗಿಲ್ಲ ನಿಜ. ಏಕೆ ಮಾಡಲಾಗಿಲ್ಲ ಎಂದು ಯೋಚಿಸಬಾರದೇಕೆ? ಏಕೆಂದರೆ, ಮಾಡಬೇಕೆಂಬ ಇಚ್ಛಾಶಕ್ತಿ ಇದ್ದಿರಲೇ ಇಲ್ಲ. ಹಳ್ಳಿಯ ಮನೆಯೊಂದರಲ್ಲಿ ಮಲಗಿ ರಾತ್ರಿ ಕಳೆದು ತಾನು ಮಹಾನ್ ಸಾಧನೆಗೈದೆ ಎಂದು ಹೇಳಿಕೆಯನ್ನು ನೀಡುವ ರಾಜಕಾರಣಿ ನಾಯಕ, ತನ್ನ ಒಂದು ದಿನದ ವಾಸ್ತವ್ಯಕ್ಕಾಗಿ, ಹಳ್ಳಿಗಳಿಗೆ ನಗರದಿಂದ ವಿದ್ಯುತ್ ಬೀಸಣಿಗೆ (ಫ್ಯಾನ್) ಮತ್ತು ಕಕ್ಕಸುಗಳನ್ನೇ ಹೊತ್ತುಕೊಂಡು ಹೋಗಿರುತ್ತಿದ್ದ. ಹಳ್ಳಿಯ ಬಡಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಯಾವುದೇ ಗಮನ ಹರಿಸದೇ, ವೈಯಕ್ತಿಕ ಲಾಭದ ಲೆಕ್ಕ ಮಾತ್ರ ಹಾಕುವ ನಮ್ಮ ರಾಜಕಾರಣಿಗಳು ಸಾಯಿಬಾಬಾರ ನಿಧನಕ್ಕೆ ಕಣ್ಣೀರು ಸುರಿಸಿ ಸಂತಾಪ ವ್ಯಕ್ತಪಡಿಸುವಾಗ ನನಗೇಕೋ ನಗುಬರುತ್ತಿತ್ತು.

ಕಾಡುಗಳ್ಳ ವೀರಪ್ಪನ್ ರಾಜಕುಮಾರರನ್ನು ಅಪಹರಿಸಿದ ಘಟನೆಯ ಹಿಂದಿನ ಸತ್ಯವನ್ನೇ ಈ ನಾಡಿನ ಜನತೆಯಿಂದ ಮರೆಮಾಚಿದ ಮಾಜೀ ಮುಖ್ಯಮಂತ್ರಿಯೋರ್ವರು, ಮೊನ್ನೆ ಸತ್ಯ ಸಾಯಿಬಾಬಾರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದುದನ್ನು ಕಂಡಾಗ, ಶ್ರೀ ಸತ್ಯ ಸಾಯಿಬಾಬಾರ ಹೆಸರಿನಲ್ಲಿನ “ಸತ್ಯ” ಎಂಬ ಪದದ ಅರ್ಥವೇನೆಂದು ಯೋಚಿಸತೊಡಗಿದ್ದೆ.

ಅತಿವೃಷ್ಟಿಯಲ್ಲಿ ಮನೆಕಳೆದುಕೊಂಡವರಿಗೆ ಎರಡು ವರುಷಗಳಾದರೂ ಮನೆಕಟ್ಟಿಸಿಕೊಡಲಾಗದ, ರಾಜ್ಯದ ರಾಜಧಾನಿಯಲ್ಲಿ ಪ್ರತಿ ಮಳೆಗೂ ಮೋರಿಯಲ್ಲಿ ಕೊಚ್ಚಿಹೋಗುವ ಮಕ್ಕಳ ಪ್ರಾಣವನ್ನು ಉಳಿಸಲಾಗದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಶ್ರೀ ಸತ್ಯ ಸಾಯಿಬಾಬಾರ ನಿಧನಕ್ಕೆ ಮರುಗಿದ್ದನ್ನು ಕಂಡಾಗ ಮೈಪರಚಿಕೊಳ್ಳುವಂತಾಗಿತ್ತು.

ಪ್ರತೀ ವರುಷ ಪ್ರಶಾಂತಿನಿಲಯಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ರಾಜಕಾರಣಿಗಳಲ್ಲಿ, ಸಾಯಿಬಾಬಾರ ಸಂದೇಶಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ನಿಷ್ಠೆಯಿಂದ ಜನಸೇವೆಗೈದವರು ಎಷ್ಟು ಮಂದಿ ಇದ್ದಾರೆ? ಆತನ ಕಾಲಿಗೆ ನಮಸ್ಕರಿಸಿ, ಅತನ ಆಶೀರ್ವಾದ ಪಡೆದು ಬಂದಿದ್ದೇವೆ ಎಂದು ಸುದ್ದಿಮಾಧ್ಯಮಗಳ ಮುಂದೆ ತನ್ನ ಬಾಬಾ ಭಕ್ತಿಯನ್ನು ಪ್ರದರ್ಶಿಸಿದವರು ಆತನ ಮನೋಧರ್ಮಕ್ಕೆ ಅಥವಾ ಸಿದ್ಧಾಂತಗಳಿಗೆ ವಿರುದ್ಧವಾಗಿಯೇ ಬದುಕಲು ಅದು ಹೇಗೆ ಸಾಧ್ಯವಾಗುತ್ತದೆ? ಸುಳ್ಳು, ಕಪಟ, ಭ್ರಷ್ಟಾಚಾರ, ಅತ್ಯಾಚಾರ ಎಲ್ಲವನ್ನೂ ಮೈಗೂಡಿಸಿಕೊಂಡು, ತನ್ನ ಅಧಿಕಾರದ ಕಾಲಾವಧಿಯಲ್ಲಿ ತನಗಾದಷ್ಟು ಸಂಪತ್ತನ್ನು ಕ್ರೋಡೀಕರಿಸಿಕೊಳ್ಳಬೇಕು ಎನ್ನುವ ಬರೀ ಒಂದಂಶದ ಕಾರ್ಯಕ್ರಮವನ್ನೇ ನಡೆಸುವ ಈ ರಾಜಕಾರಣಿಗಳು, ಈ ನಾಡಿಗೆ ಪ್ರೇಮದ ಸಂದೇಶ ನೀಡಿದ ಆ ಸತ್ಯಸಾಯಿಬಾಬಾರ ನಿಧನಕ್ಕೆ ಅದ್ಯಾವ ಮುಖ ಹೊತ್ತು ಸಂತಾಪ ಸೂಚಿಸುತ್ತಾರೆ?

ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಆತ್ಮಹತ್ಯೆಗೆ ಯತ್ನಿಸಿದ್ದ ಚಿತ್ರ ನಿರ್ದೇಶಕನೋರ್ವ ಬಾಬಾ ನಿಧನರಾದಂದು ಸುದ್ದಿವಾಹಿನಿಯೊಂದರಲ್ಲಿ ದಿನವಿಡೀ ಆ ಬಾಬಾರನ್ನು ಕೊಂಡಾಡಿದ ಪರಿ, ನಿಜಕ್ಕೂ ವಾಕರಿಕೆ ಬರಿಸುತ್ತಿತ್ತು. ಜೀವನವನ್ನು ಏನೆಂದೇ ಅರ್ಥಮಾಡಿಕೊಳ್ಳದೇ, ಓರ್ವ ಹೇಡಿಯಂತೆ ಆತ್ಮಹತ್ಯೆಗೆ ಯತ್ನಿಸಿದ್ದಾತ, ತಾನು  ಬಾಬಾರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡವನು ಎಂದರೆ ಯಾರು ನಂಬುತ್ತಾರೆ ಹೇಳಿ. ಜೀವನದಲ್ಲಿ ಸಮಸ್ಯೆ ಎದುರಾದಾಗ ಆತ ಪುಟ್ಟಪರ್ತಿಗೇಕೆ ಹೋಗಿ ಬಾಬಾರಿಂದ ಪರಿಹಾರ ಕೇಳಿರಲಿಲ್ಲ? ತಾನು ಆಡುವ ನುಡಿಗೂ ತನ್ನ ನಡೆಗೂ ಅಂತರ ಇರದಂತೆ ಬಾಳಿದರೆ ಮಾತ್ರ ಜನರು ನಂಬಿಯಾರು ಮತ್ತು ಮೆಚ್ಚಿಕೊಂಡಾರು. ಹಣೆಯೊಳಗೂ ಬರಿಯ ಬೂದಿಯೇ ಇರುವುದೆಂದಾದರೆ, ಹಣೆಯ ಮೇಲೆಲ್ಲಾ ವಿಭೂತಿ ಮೆತ್ತಿಕೊಂಡರೆ ಏನು ಪ್ರಯೋಜನ?

ನಾನು ಸಾಯಿಬಾಬಾರನ್ನು ಪೂಜಿಸುವುದಿಲ್ಲ. ಆದರೆ, ಸಾಯಿಬಾಬಾರ ಮಾತುಗಳನ್ನು ಅವರ ಪುಸ್ತಕಗಳಲ್ಲಿ ಓದಿದ್ದೇನೆ. ಅವರ ಸಂದೇಶಗಳನ್ನು ಮೆಚ್ಚಿಕೊಂಡಿದ್ದೇನೆ. ನನಗೆ ವ್ಯಕ್ತಿ ಮುಖ್ಯವಾಗುವುದಿಲ್ಲ. ಯಾವುದೇ ವ್ಯಕ್ತಿ ನೀಡಿದ ಸಂದೇಶಗಳಷ್ಟೇ ಮುಖ್ಯವಾಗುತ್ತವೆ. ಸಾಯಿಬಾಬಾ ತೋರಿಸುತ್ತಿದ್ದ ಪವಾಡಗಳನ್ನು ನಾನು ಒಪ್ಪುವುದಿಲ್ಲ. ಜನ ಮರುಳೋ ಜಾತ್ರೆ ಮರುಳೋ ಅನ್ನುತ್ತಾರೆ. ಹಾಗೆಯೇ, ವಿಭೂತಿ, ಲಿಂಗ, ಚಿನ್ನದ ಸರ, ಇಂತಹ ವಸ್ತುಗಳನ್ನು ಬಾಬಾ ಗಾಳಿಯಲ್ಲಿ ಸೃಷ್ಟಿಸಿ ನೀಡಿದಾಗ ಆತನನ್ನು ಪೂಜಿಸಲು ಆರಂಭಿಸಿದರೇ ವಿನಾ ಸಾಯಿಬಾಬಾರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಹೆಚ್ಚಿನವರು ನಡೆಸಲೇ ಇಲ್ಲ.

ತಾನು ಇಂತಹವರ ಭಕ್ತ, ತಾನು ಇಂತಹವರ ಅನುಯಾಯಿ ಎನ್ನುವುದರ ಪ್ರದರ್ಶನಕ್ಕೆ ನೀಡಿದಷ್ಟು ಪ್ರಾಮುಖ್ಯ ತಾನು ಏನು ಎಂಬುದರ ಬಗ್ಗೆ ನೀಡುವುದೇ ಇಲ್ಲ ಹೆಚ್ಚಿನವರು. ಮಾತಾಪಿತರ ಮೇಲಿನ ಪ್ರೀತಿ ಮತ್ತು ಗೌರವವನ್ನು ಮೆರೆದ ಶ್ರೀರಾಮನ ಭಕ್ತರೆಂದು ಕರೆಸಿಕೊಳ್ಳುವವರ ಮನೆಗಳಲ್ಲಿ ಮುದಿ ಮಾತಾಪಿತರು ಮಕ್ಕಳ ಆರೈಕೆಗಾಗಿ ಹಾತೊರೆಯುತ್ತಲೇ ಇದ್ದರೆ, ಆ ಮನೆಯೊಳಗೆ ಸಹೋದರರು ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಾ ಇರುವುದು ನಮ್ಮ ಕಣ್ಣಿಗೆ ಬಿದ್ದರೆ ಆಶ್ಚರ್ಯವಿಲ್ಲ. ಹಬ್ಬ ಹರಿದಿನಗಳಲ್ಲಿ, ಮುಂಜಾನೆ ದೇವಸ್ಥಾನಗಳಿಗೆ ಸುತ್ತು ಹಾಕಿ ಕಛೇರಿಗೆ ನಿಯಮಿತ ಸಮಯಕ್ಕಿಂತ ಒಂದೆರಡು ಘಂಟೆ ತಡವಾಗಿ ತಲುಪುವುವವರನ್ನು ನನ್ನಂತೆ ನೀವೂ ಕಂಡಿರಬಹುದು. ತನ್ನ ವೃತ್ತಿಧರ್ಮವ ಮರೆತು ಮಾಡಿದ ಪೂಜೆ ಅದ್ಯಾವ ದೇವರಿಗಿಷ್ಟವೋ ನಾನರಿಯೆ. ರಾಮನವಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ವಿನಾಯಕ ಚೌತಿಗಳನ್ನು  ತಪ್ಪದೇ ಆಚರಿಸುವ ನಮಗೆ, ನಮ್ಮ ಕುಟುಂಬದಲ್ಲಿ ಒಂದು ಪೀಳಿಗೆಯ ಹಿಂದಿನವರ ಜನ್ಮದಿನಾಂಕಗಳು ನೆನಪಿವೆಯೇ?

ನಾವು ಯಾರ ಭಕ್ತರು, ಯಾರ ಹಿಂಬಾಲಕರು, ಯಾರನ್ನು ಪೂಜಿಸುತ್ತೇವೆ ಅನ್ನುವುದು ಎಳ್ಳಷ್ಟೂ ಪ್ರಾಮುಖ್ಯವಲ್ಲ. ನಾವು ಯಾರ ಸಂದೇಶಗಳನ್ನು, ನೀತಿ ಪಾಠಗಳನ್ನು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದೇವೆ, ನಮ್ಮ ಜೀವನದಿಂದ ನಮ್ಮ ಕಿರಿಯರಿಗೆ ನಾವು ನೀಡುತ್ತಿರುವ ಸಂದೇಶಗಳೇನು ಅನ್ನುವುದಷ್ಟೇ ಪ್ರಾಮುಖ್ಯವಾಗಬೇಕು.

ಸತ್ಯ ಸಾಯಿಬಾಬಾ ಅಥವಾ ಅಂತಹ ಓರ್ವ ವ್ಯಕ್ತಿಯ ಸಾವಿನಿಂದ ಆತನ ಅನುಯಾಯಿಗಳಿಗೆ, ಆತನ ನೀತಿಪಾಠವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳುವವರಿಗೆ ಹೆಚ್ಚಿನ ನಷ್ಟವೇನೂ ಆಗಲಾರದು. ಆದರೆ ಪ್ರತಿ ವರುಷ ಪುಟ್ಟಪರ್ತಿಗೆ ಭೇಟಿ ನೀಡಿ ಸಾಯಿಬಾಬಾರ ಪಾದಗಳಿಗೆ ನಮಸ್ಕರಿಸಿ, ಅದರ ಪ್ರಚಾರವನ್ನು ನಾಲ್ಕು ಊರುಗಳಲ್ಲಿ ಮಾಡಿ ಬರುತ್ತಿದ್ದವರಿಗೆ ನಿಜವಾಗಿಯೂ ತುಂಬಲಾರದ ನಷ್ಟವಾಗಿರಬಹುದು.

ಸಾಯಿಬಾಬಾರ ಯೋಜನೆಗಳನ್ನು ಈಗಿನ ಗತಿಯಲ್ಲೇ  ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಅಲ್ಲಿನ “ಟ್ರಸ್ಟ್”ನ ಮೇಲೆ ಇದೆ. ಆ “ಟ್ರಸ್ಟ್” ತನ್ನ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಲು ವಿಫಲವಾದರೆ ಅಥವಾ ಬಾಬಾ ಕ್ರೋಡೀಕರಿಸಿರುವ ಆ ಅಪಾರ ಸಂಪತ್ತನ್ನು ಒಂದುವೇಳೆ ಲೂಟಿಮಾಡಿ ತಮ್ಮ ಸ್ವಂತಕ್ಕೆ ಬಳಸುವ ಕೆಟ್ಟ ಮನಸ್ಸು ಮಾಡಿದರೆ, ಆಗ ಸಾಯಿಬಾಬಾರ ಅಗಲಿಕೆಯಿಂದ, ಸಾಯಿಬಾಬಾರ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದ ಜನ ಸಾಮಾನ್ಯರಿಗೆ ನಷ್ಟವಾದೀತು, ಬಡಬಗ್ಗರಿಗೆ ನಷ್ಟವಾದೀತು.

ಮಹಾಮಾತೆ ತೆರೆಸಾ ಅಳಿದ ನಂತರ ಆ ಮಿಷನರಿಗಳ ಬಗ್ಗೆ ಈಚಿನ ದಿನಗಳಲ್ಲಿ ಹೆಚ್ಚಿನ ಸುದ್ದಿಯೇ ಕೇಳಿಬರುತ್ತಿಲ್ಲ. ಹಾಗಾಗಿಯೇ ಓರ್ವ ವ್ಯಕ್ತಿಯಷ್ಟೇ ಪ್ರಾಮುಖ್ಯನಾಗಿಬಿಟ್ಟು, ಆತನ ಅಗಲಿಕೆಯ ನಂತರ ಆತನ ಎಲ್ಲಾ ಯೋಜನೆಗಳೂ ಹಳಿತಪ್ಪಿದಂತಾಗಬಾರದು. ಸಾಯಿಬಾಬಾ ಅಳಿದರೇನಂತೆ, ಆತನ ಸಂದೇಶಗಳು ಆತನ ಅನುಯಾಯಿಗಳಿಗೆ ಸನ್ನಡತೆಯಿಂದ, ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ದಾರಿದೀಪವಾಗಿ ಕಾಪಾಡುತ್ತಿರಲಿ.

ಸಾಯಿಬಾಬಾರ ದೌರ್ಬಲ್ಯಗಳೇನೇ ಇದ್ದಿದ್ದರೂ, ಸಾಮಾಜಿಕ ಸೇವೆಯ ವಿಭಿನ್ನ ಕ್ಷೇತ್ರಗಳಲ್ಲಿ ನಿಸ್ವಾರ್ಥಿಯಾಗಿ ಆತ ಗೈದ ಸಾಧನೆಗಳನ್ನು ಅಲ್ಲಗಳೆಯಲಾಗದು. ಆ ಎಲ್ಲಾ ಯೋಜನೆಗಳನ್ನೂ ಕಿಂಚಿತ್ತೂ ಲೋಪವಾಗದಂತೆ, ಕಿಂಚಿತ್ತೂ ಅನುಮಾನಕ್ಕೆ ಎಡೆಮಾಡಿಕೊಡದಂತೆ, ಪಾರದರ್ಶಕ ರೀತಿಯಲ್ಲಿ, ಮುಂದುವರಿಸಿಕೊಂಡು ಹೋಗಲು ಸಾಯಿಬಾಬಾ “ಟ್ರಸ್ಟ್”ನ ಸದಸ್ಯರು ಪಣತೊಟ್ಟರೆ, ಅಗಲಿದ ಆತ್ಮಕ್ಕೆ ನಾವೆಲ್ಲರೂ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎನಿಸುವುದು.
**********

ಈ ಲೇಖನ ಇಂದು ಉದಯವಾಣಿಯ ಮಣಿಪಾಲ ಮತ್ತು ಮುಂಬಯಿ ಆವೃತ್ತಿಗಳಲ್ಲಿ ಪ್ರಕಟವಾಗಿರುತ್ತದೆ.

6 Responses to ಯೋಜನೆಗಳ ಮುಂದುವರಿಕೆಯೇ ಸತ್ಯಸಾಯಿಬಾಬಾರಿಗೆ ನಿಜವಾದ ಶ್ರದ್ಧಾಂಜಲಿ!

 1. vikas ಹೇಳುತ್ತಾರೆ:

  ಹೌದು.
  ನಿಮ್ಮ ವಿಚಾರಗಳನ್ನು ಒಪ್ಪುತ್ತೇನೆ.
  ಒಳ್ಳೆಯ ಬರಹ.

 2. P.Ramachandra, Ras Laffan- Qatar ಹೇಳುತ್ತಾರೆ:

  ಅತ್ಯುತ್ತಮ ಲೇಖನ .

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್

 3. ksraghavendranavada ಹೇಳುತ್ತಾರೆ:

  ಈಗೀಗ ನಿಮ್ಮ ಲೇಖನಕ್ಕಾಗಿ ಉದಯವಾಣಿಯನ್ನು ನೋಡುವುದು ಮಾಮೂಲಾಗಿ ಬಿಟ್ಟಿದೆ!ಪತ್ರಿಕೆಯಲ್ಲಿ ಸ೦ಪೂರ್ಣ ಲೇಖನ ಓದಿ ನಿಮ್ಮ ಬಗ್ಗೆ ಹಾಗೂ ನಿಮ್ಮ ಚಿ೦ತನೆಯ ಬಗ್ಗೆ ಅತೀವ ಸ೦ತಸ ಹಾಗೂ ಹೆಮ್ಮೆ ಮೂಡಿತು.
  ಬಹಳ ನಿಷ್ಟುರವಾದ ಚಿ೦ತನೆ ಆದರೆ ಆದರಣೀಯ ಹಾಗೂ ಅಭಿನ೦ದನಾರ್ಹ! ಹೌದು.. ನೀವು ಹೇಳಿದ ಹಾಗೆ ವ್ಯಕ್ತಿ ಮುಖ್ಯವಾಗಬಾರದು.. ಆತನ ಕಾರ್ಯಗಳು ಹಾಗೂ ಆದರ್ಶಗಳು ಮುಖ್ಯವಾಗಬೇಕು.. ದುರದೃಷ್ಟವಶಾತ್ ಆದು ಆಗುತ್ತಿಲ್ಲ… ಕಡೇಪಕ್ಷ ಅದರತ್ತ ಚಿ೦ತನೆಗಳೂ ನದೆಯುತ್ತಿಲ್ಲವೆ೦ಬುದು ನನ್ನ ಕೊರಗಿಗೆ ಕಾರಣ..
  ಚೆನ್ನಾಗಿದೆ.. ಓದಿ ಚಿ೦ತಿಸುತ್ತಾ ಕುಳಿತೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ಅವರಿವರು ಅಂತಹ ಚಿಂತನೆ ನಡೆಸುತ್ತಿದ್ದಾರೋ ಇಲ್ಲವೋ, ನಾವಂತೂ ನಡೆಸುತ್ತಿದ್ದೇವೆ ಅನ್ನುವ ತೃಪ್ತಿ ಇದ್ದರೆ ಸಾಕು.
   ನಮ್ಮ ಚಿಂತನೆಗಳನ್ನು ಹಂಚಿಕೊಂಡಾಗ, ಅವುಗಳಿಂದ ಹತ್ತಾರು ಓದುಗರಾದರೂ ಆ ನಿಟ್ಟಿನಲ್ಲಿ ಯೋಚಿಸುವಂತಾದರೆ ಸಾಕು.

   ತಮ್ಮ ಅಭಿಮಾನಕ್ಕೆ ನಾನು ಕೃತಜ್ಞ!

   ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: