ಭಾಷೆಯ ಕಲಿಕೆಗೆ, ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗರ ಪ್ರದೇಶಗಳಿಗೇ ಮಾತ್ರ ಸೀಮಿತ. ಹಳ್ಳಿಗಳಲ್ಲಿ, ಅಥವಾ ಚಿಕ್ಕ ಪಟ್ಟಣಗಳಲ್ಲಿ ಇದು ಹೆಚ್ಚಾಗಿ ಕಂಡುಬರುವುದಿಲ್ಲ.

ನಗರ ಪ್ರದೇಶಗಳಲ್ಲಿ ವಾಸಿಸುವ ನಾವು ಕನ್ನಡಿಗರು ಯಾವ ಪರಭಾಷಿಗರೊಂದಿಗೆ ಇದ್ದರೂ, ಅವರೊಂದಿಗೆ ವ್ಯವಹರಿಸಲು ಬೇಕಾದ ಭಾಷೆಯನ್ನು ಬಳಸುತ್ತೇವೆ. ಇದಕ್ಕೆ ಕಾರಣವೇನೆಂದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಹೆಚ್ಚಿನ ಕನ್ನಡಿಗರು ಪರಭಾಷೆಗಳನ್ನು ಕಲಿಯುವುದರಲ್ಲಿ ನಿಸ್ಸೀಮರು. ಅಲ್ಲದೇ, ಅನ್ಯಭಾಷಿಗರು ನಮ್ಮ ಮಾತೃಭಾಷೆಯನ್ನು ಆಡಲು ಹೋಗಿ, ಅದರ ಮೇಲೆ ಅತ್ಯಾಚಾರ ನಡೆಸುವುವುದನ್ನು ತಪ್ಪಿಸಲು, ಕನ್ನಡಿಗರು ಅವರದೇ ಭಾಷೆಯಲ್ಲಿ ಮಾತಾಡುವ ಯತ್ನ ಮಾಡಿ ತಮ್ಮ ವ್ಯವಹಾರವನ್ನು ಅದಷ್ಟು ಬೇಗ ಮುಗಿಸುವ ಮನಸ್ಸು ಮಾಡುತ್ತೇವೆ. ನಾವು ಅನ್ಯ ಭಾಷೆಯ ಮೇಲೆ ಅತ್ಯಾಚಾರ ನಡೆಸಿದರೂ ಪರವಾಗಿಲ್ಲ, ಆದರೆ, ಅನ್ಯರು ನಮ್ಮ ಭಾಷೆಯ ಮೇಲೆ ಅತ್ಯಾಚಾರ ನಡೆಸುವುದನ್ನು ನಾವು ಸಹಿಸುವುದಿಲ್ಲ, ಎಂದೂ ಹೇಳಬಹುದು.

ಯೋಚಿಸಿ ನೋಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಆಗುವುದೇ ಹೀಗೆ. ಇದನ್ನು ನಾನು ಸರಿಯೆಂದೂ ಅಥವಾ ನಾನು ಕೂಡ ಎಲ್ಲಾ ಸಂದರ್ಭಗಳಲ್ಲೂ ಇದನ್ನೇ ಮಾಡುತ್ತೇನೆ ಎಂದೂ ಅನ್ನಲಾರೆ. ಆದರೆ, ಮನುಜನ ಮಾನಸಿಕ ಸ್ಥಿತಿಯನ್ನು ವಿಭಿನ್ನ ದೃಷ್ಟಿಕೋನದಿಂದ ಅರಿಯುವ ಯತ್ನ ಮಾಡಿದ್ದೇನೆ ಅಷ್ಟೇ. ಹೀಗಾಗುವುದಕ್ಕೆ ನಮಗೆ ನಮ್ಮ ಮಾತೃಭಾಷೆಯ ಮೇಲಿರುವ ಪ್ರೇಮವೇ ಕಾರಣವಾಗಿರಬಹುದು ಅನ್ನುವುದು ನನ್ನ ಅನಿಸಿಕೆ. ಇದನ್ನು ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಅನ್ನುವವರೂ ಇದ್ದಾರೆ. ಆದರೆ, ನನಗೆ ಹಾಗನಿಸದು.

ಇನ್ನು ಕೆಲವೊಮ್ಮೆ, ಇಬ್ಬರು ಕನ್ನಡಿಗರು, ಪರಸ್ಪರರೊಂದಿಗೆ ಕನ್ನಡೇತರ ಭಾಷೆಯಲ್ಲಿ ವ್ಯವಹರಿಸುತ್ತಾರಾದರೆ, ಅಲ್ಲಿ, ಅವರೀರ್ವರಿಗೂ ಮಾತೃಭಾಷೆಯ ಮೇಲಿನ ಪ್ರೇಮದ ಕೊರತೆ ಇದೆ ಅಥವಾ ಕೀಳರಿಮೆಯೇ ಕಾರಣ ಎಂದು ನನ್ನ ಅನಿಸಿಕೆ. ಮಾತೃಭಾಷೆಯಲ್ಲಿ ಮಾತನಾಡಿದರೆ, ಅಕ್ಕಪಕ್ಕದವರು ತಮ್ಮನ್ನು ಅವಿದ್ಯಾವಂತರೆಂದು ಪರಿಗಣಿಸಬಹುದೆನ್ನುವ ಅಳುಕೂ ಇರಬಹುದೇನೋ.

ನಿನ್ನೆ ಅಂತರ್ಜಾಲದ ಸ್ನೇಹಿತರೋರ್ವರು ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆಗಾಗಿ ಏನು ಮಾಡಬಹುದು? ಎನ್ನುವ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಬಹುಷ: ಈ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರವನ್ನು ರಾಷ್ಟ್ರಕವಿ ಕುವೆಂಪುರವರು ದಶಕಗಳಷ್ಟು ಹಿಂದೆಯೇ ನೀಡಿದ್ದಾರೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀನು ಕನ್ನಡವಾಗಿರು” ಎನ್ನುವ ಆ ಕವಿವಾಣಿಯೇ ಸಾರ್ವಕಾಲಿಕ ಸತ್ಯವಾದ ಸೂಕ್ತಿ.   ಕನ್ನಡಿಗ ತನ್ನ ಒಳಗೂ ಹೊರಗೂ ಸದಾ ಕನ್ನಡಿಗನಾಗಿ ಇದ್ದರೆ ಮತ್ತು ಯಾವುದೇ ಕೀಳರಿಮೆ ಹೊಂದಿರದೇ, ಕನ್ನಡವನ್ನು ಬಳಸುತ್ತಾ ಇದ್ದರೆ, ಅಷ್ಟೇ ಸಾಕು. ಕನ್ನಡವನ್ನು ಬಳಸೋಣ, ಕನ್ನಡವನ್ನು ಬೆಳೆಸೋಣ, ಕನ್ನಡವನ್ನು ಉಳಿಸೋಣ ಹಾಗೂ ಸಾಧ್ಯವಾದರೆ ಅನ್ಯರಿಗೂ ಕನ್ನಡವನ್ನು ಕಲಿಸೋಣ ಎಂಬೀ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಕನ್ನಡ ಅಳಿಯುವುದಿಲ್ಲ. ಕನ್ನಡಿಗರೂ ಅಳಿಯುವುದಿಲ್ಲ.

ಸರಕಾರೀ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಹೆಚ್ಚಿನವರು ಬಡವರು. ಆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದರೆ, ಖಾಸಗೀ ಶಾಲೆಗೆ ಹೋಗುವ ಶ್ರೀಮಂತರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ನಡೆಸುತ್ತಾರೆ. ಇದು ಬಡ ಯುವ ಜನತೆಯಲ್ಲಿನ ಕೀಳರಿಮೆಗೆ ಕಾರಣವಾಗುತ್ತದೆ ಹಾಗೂ ಯುವ ಸಮಾಜದಲ್ಲಿನ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಇದನ್ನು ಹೋಗಲಾಡಿಸುವತ್ತ ಸರಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಸರಕಾರೀ ಶಾಲೆಗಳಲ್ಲೂ ಖಾಸಗೀ ಶಾಲೆಗಳಲ್ಲಿ ದೊರೆಯುವ ಶಿಕ್ಷಣ ಮಟ್ಟವನ್ನು ಕಾಯ್ದುಕೊಂಡರೆ, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಜನವಾದೀತು. ಪ್ರೌಢ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ನಡೆಸಿದವರು ಕನ್ನಡ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳಬಲ್ಲರೆಂಬ ಖಾತ್ರಿ ಏನಿಲ್ಲ. ಅದೇ ಮಾತು ಆಂಗ್ಲ ಮಾಧ್ಯಮದಲ್ಲಿ  ಪ್ರೌಢ ಶಿಕ್ಷಣವನ್ನು ಪಡೆದವರ ಬಗ್ಗೆ ಮತ್ತು ಆಂಗ್ಲ ಸಾಹಿತ್ಯದ ಬಗ್ಗೆಯೂ ಹೇಳಬಹುದು. ಭಾಷೆಯಲ್ಲಿ, ಸಾಹಿತ್ಯದ ಓದಿನಲ್ಲಿ ಪ್ರೌಢಿಮತೆ ಸಾಧಿಸಲು, ಮಕ್ಕಳಲ್ಲಿ ಓದಿನ ಪರಿಪಾಠವನ್ನು ಬೆಳೆಸುವ ಪದ್ಧತಿ ಶಾಲೆಗಳಲ್ಲಿ ಇರಬೇಕು. ಸಾಹಿತ್ಯ ರಚನೆಗಳನ್ನು ಓದಿಸುವ, ಅರ್ಥೈಸಿ ಹೇಳುವ ಪರಿಪಾಠವನ್ನು ಪಠ್ಯೇತರ ಚಟುವಟಿಕೆಯಾಗಿ ಎಲ್ಲಾ ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕು.

ಇನ್ನೊಂದು ಮಾತು. ಅಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳ ಕನ್ನಡ ಭಾಷಾ ಜ್ಞಾನ ಸಾಮಾನ್ಯವಾಗಿ ಉತ್ತಮವಾಗಿರುವುದಿಲ್ಲ, ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳ ಆಂಗ್ಲ ಭಾಷಾ ಜ್ಞಾನ ಉತ್ತಮವಾಗಿರುವುದಿಲ್ಲ. ಇತರ ಎಲ್ಲಾ ವಿಷಯಗಳಿಗೆ ನೀಡುವಷ್ಟೇ ಸಮಾನ ಪ್ರಾಧಾನ್ಯವನ್ನು ಭಾಷಾ ವಿಷಯಗಳಿಗೊ ನೀಡಬೇಕು. ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಅನ್ನುವುದಕ್ಕಿಂತಲೂ, ನಮ್ಮ ಭಾಷೆಯ ಅಭ್ಯಾಸ ಯಾವ ಮಟ್ಟದಲ್ಲಿ ಇತ್ತು ಅನ್ನುವುದು ಪ್ರಾಮುಖ್ಯವಾಗುತ್ತದೆ. ಬಾಷಾ ಕಲಿಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಮಹತ್ಕಾರ್ಯಗಳು ನಡೆಯಬೇಕಾಗಿದೆ.  ಈ ಕಾರ್ಯದಲ್ಲಿ ಭಾಷಾ ಅಧ್ಯಾಪಕರುಗಳ ಜವಾಬ್ದಾರಿ ಪ್ರಾಮುಖ್ಯವಾದುದು. ತಮ್ಮದು ಬರಿಯ ನೌಕರಿಯಾಗಿರದೇ, ಒಂದು ಭಾಷೆಯ ಬೆಳವಣಿಗಾಗಿ ತಾವು ನೀಡುತ್ತಿರುವ ಕೊಡುಗೆ ಎಂದು ಪರಿಗಣಿಸಿ, ತಮ್ಮನ್ನು ತಾವು ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಮಾತೃಭಾಷೆಯಾದ ಕನ್ನಡ ಮತ್ತು ವ್ಯಾವಹಾರಿಕವಾಗಿ ಅನಿವಾರ್ಯವಾಗಿರುವ ಆಂಗ್ಲ ಭಾಷೆ ಇವೆರಡರಲ್ಲೂ  ಪ್ರೌಢಿಮತೆ ಸಾಧಿಸುವ ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪರವಾಗಿಲ್ಲ. ಮಾಧ್ಯಮದ ಆಯ್ಕೆಯನ್ನು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಬಿಟ್ಟರೆ ಅನಾಹುತವೇನೂ ಆಗದು. ಆದರೆ ಯಾವುದೇ ಮಾಧ್ಯಮದ ಶಾಲೆಗಳಲ್ಲಿ, ಮಾತೃಭಾಷೆಯನ್ನು ಒಂದು ವಿಷಯವಾಗಿ ಸಮಾನ ಪ್ರಾಧಾನ್ಯ ನೀಡಿ ಕಟ್ಟುನಿಟ್ಟಾಗಿ ಕಲಿಸುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡಬಾರದು. ಒಂದು ಭಾಷೆಯ ಕಲಿಯುವಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು.

*****

 

ನಿರಂತರ ಕರ್ನಾಟಕ ವಾರಪತ್ರಿಕೆಯಲ್ಲಿ ಈ ವಾರ ಪ್ರಕಟವಾಗಿರುವ ಲೇಖನ

 

 

4 Responses to ಭಾಷೆಯ ಕಲಿಕೆಗೆ, ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

 1. parthasarathy ಹೇಳುತ್ತಾರೆ:

  ಆಸುರವರೆ
  ಇಬ್ಬರು ಕನ್ನಡ ಬಾಷಿಕರು ಅಂಗ್ಲದಲ್ಲಿ ಸಂಭಾಷಣೆ ನಡೆಸುವ ಬಗ್ಗೆ ಹೇಳಿದ್ದೀರಿ ಅವರು ದೊಡ್ಡವರಾದರೆ ನೀವು ಹೀಳಿದಂತೆ ಕೀಳಿರಿಮೆ ಅಥ್ವ ಅಳುಕು ದೊಡ್ಡವರಿಗೆ ಸರಿ , ಆದರೆ ದಿನವೂ ಸಂಜೆ ನಾನು ಸಮೀಪದ ಉದ್ಯಾನಕ್ಕೆ ಹೋದಾಗ ಗಮನಿಸಿದ್ದೀನಿ , ಚಿಕ್ಕ ಮಕ್ಕಳು ಅಂಗ್ಲದಲ್ಲಿಯೆ ಸಂಭಾಷಣೆ ನಡಿಸುತ್ತಿರುತ್ತಾರೆ , ಅವರ ಅಮ್ಮಂದಿರು ಸಮೀಪದಲ್ಲಿಯೆ ಕಾವಲು ಕಾಯುತ್ತಿರುತ್ತಾರೆ. ಮಕ್ಕಳಿಗೆ ಕೀಳಿರುಮೆ ಅಥವ ಮೇಲಿರುಮೆಯ ಭಾವನೆ ಇರುವದಿಲ್ಲ , ಇಲ್ಲಿ ಅವರ ಕನ್ನಡ ತಾಯಂದಿರದೆ ತಪ್ಪಲ್ಲವೆ ?

  ಪಾರ್ಥಸಾರಥಿ
  (ಸಂಪದ)

  • ಪಾರ್ಥಸಾರಥಿ,
   ಮಕ್ಕಳ ತಪ್ಪುಗಳಿಗೆ ಮಾತಾಪಿತರೇ ಜವಾಬ್ದಾರರು.
   ಮಕ್ಕಳಲ್ಲಿ ಕೀಳರಿಮೆ ಅಥವಾ ಮೇಲರಿಮೆ ಇರುವುದಿಲ್ಲ ಎನ್ನುವುದು ಪೂರ್ತಿ ನಿಜವೇ?
   ಬಡಮಕ್ಕಳಲ್ಲಿ ಶ್ರೀಮಂತರ ಮಕ್ಕಳೊಡನೆ ವ್ಯವಹರಿಸುವಾಗ ಕೀಳರಿಮೆ ಕಾಡುತ್ತದೆ
   ಎಂದು ನನ್ನ ಅನಿಸಿಕೆ. ಅದು ಕೆಲವೊಮ್ಮೆ ಕ್ರೋಧವಾಗಿ ಕಾಡುವುದೂ ಇದೆ.
   ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

 2. ksraghavendranavada ಹೇಳುತ್ತಾರೆ:

  ಒ೦ದು ವೈಚಾರಿಕ ಲೇಖನ.. ನನ್ನ ಕೆಲವಾರು ಪ್ರಶ್ನೆಗಳಿಗೆ ಉತ್ತರ ದೊರಕಿದವು.
  ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: