ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!

13 ಫೆಬ್ರ 11

 

ಆಸುಮನ ಇಂದು ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂದಿಸಿದಾಗಲೆಲ್ಲಾ, ಆ ಸ್ಪಂದನಗಳು ಆಸುಮನದಲ್ಲಿ ಮಾತುಗಳಾಗಿ ಅಕ್ಷರಗಳ ರೂಪತಾಳುತ್ತಾ ಬಂದಿವೆ.

ಮೊದಲನೇ ವರುಷ ಆಸುಮನದ ಮಾತುಗಳ ೨೦೦ ಪುಟಗಳು ಪ್ರಕಟಗೊಂಡಿದ್ದರೆ ಎರಡನೇ ವರುಷ ೧೮೯ ಪುಟಗಳು ಪ್ರಕಟಗೊಂಡಿವೆ.

ಇದೀಗ ನೀವು ಓದುತ್ತಿರುವುದು ಮೂರನೇ ವರುಷದ ಮೊದಲನೆಯ ಹಾಗೂ ಆಸುಮನದ ಮಾತುಗಳ ಒಟ್ಟಾರೆ ಮುನ್ನೂರ ತೊಂಭತ್ತನೇ ಪುಟ.

ಇದನ್ನು ಒಂದು ಸಾಧನೆಯೆಂದು ದಾಖಲಿಸಬೇಕೋ ಅಥವಾ ಒಂದು ಸಾಮಾನ್ಯ ವಿಷಯವೆಂದು ದಾಖಲಿಸಬೇಕೋ ಅರಿವಾಗುತ್ತಿಲ್ಲ.

ಇವು ಎಣಿಕೆಗಾಗಿ, ಮೂರನ್ನು ನೂರಾಗಿಸಿ, ನೂರನ್ನು ನಾಲ್ಕುನೂರಾಗಿಸಲಷ್ಟೇ ಬರೆದ ಮಾತುಗಳಲ್ಲ.

ನನ್ನ ಮನದ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು, ದಾಖಲಿಸಿ, ತಮ್ಮೊಂದಿಗೆ ಹಂಚಿಕೊಳ್ಳುವುದೊಂದೇ ಈ ಮಾತುಗಳ ಪ್ರಕಟಣೆಯ ಹಿಂದಡಗಿರುವ ಉದ್ದೇಶ.

ಮನುಜ ಸದಾಕಾಲ ಕ್ರಿಯಾಶೀಲನಾಗಿರುತ್ತಾನೆ. ತಾನು ಕೇಳುವ ಮತ್ತು ನೋಡುವ ವಿಷಯಗಳಿಗೆ ಸದಾ ಸ್ಪಂದಿಸುತ್ತಿರುತ್ತಾನೆ.

ಆದರೆ, ಎಲ್ಲರೂ ಆ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು ಬಹಿರಂಗ ಪಡಿಸಲಾರರು.

ನನ್ನ ಮನದೊಳಗಿನ ಸ್ಪಂದನಗಳಿಗೆಲ್ಲಾ ಅಕ್ಷರರೂಪಕೊಟ್ಟು ಬಹಿರಂಗಗೊಳಿಸುವ ಈ ಒಂದು ಹವ್ಯಾಸ ನನ್ನಲ್ಲಿ ರಕ್ತಗತವಾಗಿರುವುದಕ್ಕೆ ನಾನು ನನ್ನ ಅಜ್ಜಯ್ಯ ಮತ್ತು ಅಪ್ಪಯ್ಯನವರಿಗೆ ಸದಾ ಋಣಿಯಾಗಿದ್ದೇನೆ.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಮ್ಮ ಅಜ್ಜಯ್ಯ, ದಿ. ಮುದ್ರಾಡಿ ಕೃಷ್ಣಯ್ಯ ಶೆಟ್ಟಿಯವರು ಕವಿತೆಗಳನ್ನು ಮತ್ತು ನೀಳ್ಗತೆಳನ್ನು ಬರೆಯುತ್ತಿದ್ದವರು.

ಆಯುರ್ವೇದ ತಜ್ಞ, ಪ್ರವಚನಕಾರ, ರಂಗಭೂಮಿ ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಕೃಷಿಕರೂ ಆಗಿದ್ದ ನನ್ನ ಅಪ್ಪಯ್ಯ ಡಾ. ಯು. ಚಂದ್ರಶೇಖರ್  ಅವರೂ ಕವನಗಳನ್ನು, ನುಡಿಮುತ್ತುಗಳನ್ನು  ಮತ್ತು ಲೇಖನಗಳನ್ನು ಬರೆಯುತ್ತಿದ್ದವರು.

ಹಾಗಾಗಿ, ಈ ಹವ್ಯಾಸ ನನಗೆ ಅನುವಂಶೀಯವಾಗಿ ಬಂದಿದೆಯೆಂದೆನ್ನಬಹುದೇನೋ.

ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಯೊಂದು ಘಟನಾವಳಿಗೂ, ಆಯಾ ಸಂದರ್ಭಕ್ಕೆ ಸಂಬಂಧಿಸಿದ ಉಪಕತೆಗಳನ್ನು ಹೇಳಿ ಎಚ್ಚರಿಸುತ್ತಿದ್ದವರು ಮತ್ತು ಜೀವನದ ಪಾಠ ಮಾಡುತ್ತಿದ್ದವರು ನಮ್ಮ ಅಪ್ಪಯ್ಯನವರು.

ಹಾಸ್ಯ ಪ್ರಜ್ಞೆಯನ್ನು ತನ್ನ ಕೊನೆಯುಸಿರು ಇರುವವರೆಗೂ ಜೀವಂತ ಇರಿಸಿಕೊಂಡು ಬಾಳಿದವರು ಅವರು.

ಯಾವುದೇ ಗಂಭೀರ ಸನ್ನಿವೇಶಗಳಲ್ಲೂ ಹಾಸ್ಯಪ್ರಜ್ಞೆಯನ್ನು ಕಾಯ್ದುಕೊಳ್ಳುವ ಜಾಣ್ಮೆಯನ್ನು ಹಾಗೂ ಯಾವುದೇ ಅಪ್ರಮುಖ ಸನ್ನಿವೇಶಗಳಲ್ಲೂ ಗಂಭೀರವಾದ ಜೀವನ ಪಾಠವನ್ನು ಅರಿತುಕೊಳ್ಳುವ ಜಾಣ್ಮೆಯನ್ನೂ ನಮಗೆ ಕಲಿಸಿಕೊಟ್ಟವರು ಅವರು.

ಇಂದು ಆಸುಮನ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಅವರೀರ್ವರನ್ನು ನೆನೆಯುತ್ತಾ  ಮತ್ತು ಅವರೀರ್ವರ ಅಮರಾತ್ಮಗಳಿಗೂ ನಮಿಸಿ, ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಾ  ಮುಂದುವರಿಯುತ್ತಿದ್ದೇನೆ. 

ಅಲ್ಲದೇ, ಅಂತರ್ಜಾಲದಲ್ಲಿ ನಾನು ನನ್ನದೇ ಛಾಪು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದಕ್ಕೆ ಸಹಕಾರಿಯಾದ, ನಾನು ಎಡವಿದಾಗ ತಿದ್ದುವ, ಮಾತುಗಳು ಮೆಚ್ಚುಗೆಯಾದಾಗ ಬಾಯ್ಬಿಟ್ಟು ಪ್ರೋತ್ಸಾಹದ ಮಾತುಗಳನ್ನು ನುಡಿದು, ನನ್ನ ಬೆನ್ನುತಟ್ಟಿ ಸ್ಪೂರ್ತಿ ತುಂಬುವ, ಇನ್ನೆಲ್ಲೋ ಹೋಗಿ, ಇನ್ಯಾರದೋ ಮುಂದೆ, ಆಸುಮನದ ಬಗ್ಗೆ ಒಳ್ಳೆಯ ನಾಲ್ಕು ನಿಸ್ವಾರ್ಥ ಮಾತುಗಳನ್ನು ಆಡುವ ಹಾಗೂ ಸದಾ ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿ ಮುನ್ನಡೆಸುವ, ನನ್ನ ಅಪಾರ ಓದುಗ ಬಳಗಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಹಾಗೆಯೇ ಇನ್ನು ಮುಂದೆಯೂ ತಮ್ಮಿಂದ ಇದೇ ರೀತಿಯ ಪ್ರೋತ್ಸಾಹವನ್ನು ಸದಾ ನಿರೀಕ್ಷಿಸುತ್ತಾ ಇರುತ್ತೇನೆ.

****


ಉದಯ ಸೂರ್ಯ ನನಗೆ ನನ್ನಮ್ಮನಂತೆ!

11 ಫೆಬ್ರ 11

ಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,
ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆ
ಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾ
ಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನಂತೆ
ಒಮ್ಮೆಗೇ ಬಡಿದೆಬ್ಬಿಸದೇ, ತಲೆಯ ಮೇಲೆ ಕೈಸವರುತ್ತಾ
ಮೈದಡವಿ ದಿನಾ ನಿದ್ದೆಯಿಂದ ಎಚ್ಚರಿಸುತ್ತಿದ್ದೆನ್ನಮ್ಮನಂತೆ
ಇರಬೇಕೆನ್ನುವರು ಜೀವನದಲಿ ಎಲ್ಲವೂ ನಿಧಾನದಿ ದಕ್ಕುತ್ತಾ
ಅತೀ ಹೆಚ್ಚು ಅತೀ ಶೀಘ್ರದಲಿ ದಕ್ಕಿದರದು ಉಳಿಯದಂತೆ
ಸೂರ್ಯನ ನಡೆಯೂ ಕೂಡ ಸಾರುವಂತಿಹುದು ವೇದಾಂತ
ಎಷ್ಟೇ ದಕ್ಕಿಸಿಕೊಂಡರೂ ಕತ್ತಲ ಶೂನ್ಯದತ್ತಲೇ ಪಯಣವಂತೆ

********************


ಕಲಿಯುಗದ ಮಹಿಮೆ…!?

11 ಫೆಬ್ರ 11

ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ
ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ
ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರಿ ಇರ್ದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ಲಂಗು ಲಗಾಮಿಲ್ಲದೇ ಸ್ವೇಚ್ಛಾಚಾರ ಮೆರೆಯುತ್ತ ಇರ್ದೊಡೆ
ಸ್ವಂತದಲಿ ನೈತಿಕತೆ, ಹಿರಿಯರಲಿ ಭಯ ಭಕುತಿ ಇಲ್ಲದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

ನೈತಿಕತೆ ಅನೈತಿಕತೆಯ ಅಂತರ ಕಾಣೆಯಾಗತೊಡಗಿದೊಡೆ
ಹೆತ್ತಬ್ಬೆಯ ಅತ್ಯಾಚಾರಕ್ಕೆ ಮಗನೇ ಮನ ಮಾಡಿ ನಿಂದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!

**********************


ಅಮೂಲ್ಯ ನಾಲ್ಕು ಕ್ಷಣಗಳು!

09 ಫೆಬ್ರ 11

೭೭ನೇ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ನಾನು ಹಾಜರಾಗಿದ್ದೆ. ಮುಂಜಾನೆಯ ಹಾಸ್ಯಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಶ್ರೀ ಕಬ್ಬಿನಾಲೆ, ಶ್ರೀಮತಿ ಭುವನೇಶ್ವರಿ ಹೆಗಡೆ, ಶ್ರೀ ಪ್ರಾಣೇಶ್ ಮತ್ತು ಶ್ರೀ ಕೃಷ್ಣೇ ಗೌಡರು ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿದರಾದರೂ, ನಿರೂಪಕರು “ಆಸ್ಯ ಗೋಷ್ಟಿ … ಆಸ್ಯ ಕಲಾವಿದ … ಆಸ್ಯ ಆಸ್ಯ ” ಎನ್ನುತ್ತಾ ಪದೇ ಪದೇ ಹಾಸ್ಯಾಸ್ಪದರಾಗಿ, ಸಾಕಷ್ಟು ಕಿರಿಕಿರಿಯುಂಟುಮಾಡಿದ್ದರು.

ಸನ್ಮಾನ ಸಮಾರಂಭ ನೀರಸವೆನಿಸಿತ್ತಾದರೂ ನನ್ನ ಪರಿಚಯದ ಡಾ. ನಾ. ಸೋಮೇಶ್ವರ ಮತ್ತು ಡಾ. ಭಾಸ್ಕರಾನಂದ ಕುಮಾರ ಅವರ ಸನ್ಮಾನ ಮನಕ್ಕೆ ಮುದ ನೀಡಿತ್ತು.

ಶ್ರೀ ಸಾ.ರಾ.ಗೋವಿಂದು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಯಾಕೆ ಮಾಡಿದ್ರು ಅನ್ನುವುದೇ ನನಗೆ ಕೊನೆಗೂ ಅರ್ಥ ಆಗಲಿಲ್ಲ.

ಇನ್ನು ನಿರೂಪಕಿ ಭಾನುಮತಿ ಸೋಮಶೇಕರ್ ಅವರಿಂದ ಶ್ರೀಮತಿ ಗಿರಿಜಾ ಲೋಕೇಶ್ ಅವರ ಪರಿಚಯ ಕೇಳಿ ಸುಸ್ತಾಗಿ ಬಿಟ್ಟೆ. “ಹತ್ತು ಹಲವು ದಶಕಗಳ ಕಾಲ ಚಿತ್ರರಂಗ ಮತ್ತು ಕಿರುತೆರೆಗಳಲ್ಲಿ ನಟಿಸಿರುವ….” ಅಂದಾಗ ಗಿರಿಜಾ ಲೋಕೇಶ್ ರಿಗೆ ನೂರು ವರುಷಗಳಿಗೂ ಹೆಚ್ಚು ಪ್ರಾಯ ಆಗಿದೆಯೇ ಅನ್ನುವ ಪ್ರಶ್ನೆ ನನ್ನ ಮನದಲ್ಲಿ ಮೂಡಿತು.

ಅಲ್ಲದೇ ಧನ್ಯವಾದ ಸಮರ್ಪಣೆ ಮಾಡುವಾಗ, ಸನ್ಮಾನ ಸಮಾರಂಭದಲ್ಲಿ ತಮ್ಮ ದಿವ್ಯ ಸಾನಿಧ್ಯವನ್ನು ನೆರವೇರಿಸಿಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರ್ಶ್ರೀ ವಿರೇಂದ್ರ ಹೆಗ್ಗಡೆಯವರಿಗೆ ಧನ್ಯವಾದಗಳು ಅಂತ ಅಂದರು.  ಯಾರೇ ಆದರೂ ತಮ್ಮ ಸಾನಿಧ್ಯವನ್ನು ನೆರವೇರಿಸಿಕೊಡುವುದು ಹೇಗೋ ಅರ್ಥವೇ ಆಗಲಿಲ್ಲ.

ಜನಗಣಮನ  ಬ್ಲಾಗ್ ನ ಶ್ರೀ ರಾಕೇಶ್ ಶೆಟ್ಟಿಯವರನ್ನು ಪತ್ತೆ ಮಾಡಿ ಅವರೊಡನೆ ಭೋಜನಕ್ಕೆಂದು ಹೊರ ನಡೆದಾಗ ಸಂಪದಿಗ ಜಯಂತ್ ರಾಮಾಚಾರ್ ಬಂದು ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ನೀಡಿ “ಖಂಡಿತ ಕುಟುಂಬ ಸಮೇತ ಬರಬೇಕು ಸಾರ್” ಎಂದು ಕರೆದು ಹೊದರು.

ಸಣ್ಣ ಉಪಾಹಾರಗೃದಲ್ಲಿ ಮೊಸರನ್ನ ತಿಂದು ವಾಪಸ್ಸಾದಾಗ ಸನ್ಮಾನ ಸಮಾರಂಭ ಇನ್ನೂ ಮುಂದುವರಿದಿತ್ತು. ನಾನು ಕೂತಲ್ಲೇ ತೂಕಡಿಸುತ್ತಾ, ಹಲವಾರು ನೀರಸ ಭಾಷಣಗಳಿಗೆ ಕಿವಿಯಾದೆ. ಅಂತೂ ಇಂತೂ ಸನ್ಮಾನ ಕಾರ್ಯಕ್ರಮ ಮುಗಿಯಿತು.

ಅಪರಾಹ್ನ ಮೂರೂವರೆಯ ಸಮಯ. ಬಹಿರಂಗ ಅಧಿವೇಷನದಲ್ಲಿ ಶ್ರೀ ಪುಂಡಲೀಕ ಹಾಲಂಬಿಯವರಿಂದ ನಿರ್ಣಯಗಳ  ಮಂಡನಾಕಾರ್ಯ ನಡೆಯುತ್ತಿತ್ತು. ಸಭಾಂಗಣದಿಂದ ಹಾಗೇ ಹೊರನಡೆದು ಬಂದಾಗ, ಮಾಧ್ಯಮ ಕೇಂದ್ರದ ಪಕ್ಕದಲ್ಲಿ ಸಾಲು ಸಾಲಾಗಿ ನಿಂತಿದ್ದ ರೋಗಿ ವಾಹನಗಳ (೧೦೮) ಎದುರುಗಡೆ ವಿಜಯಕರ್ನಾಟಕದ ತಾಂತ್ರಿಕ ಅಂಕಣ ಬರಹಗಾರ ಶ್ರೀಯುತ ಹಾಲ್ದೊಡ್ಡೇರಿ ಸುಧೀಂದ್ರ, ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್ ನ ಸಂಪಾದಕ ಶ್ರೀಯುತ ಶ್ಯಾಮ್ ಸುಂದರ್, ಸಂಸತ್ ಸದಸ್ಯ ಶ್ರೀಯುತ ಜನಾರ್ದನ ಸ್ವಾಮಿ ಮತ್ತು ಓರ್ವ ಮಹಿಳೆ ನಿಂತಿದ್ದರು.

ಹಾಲ್ದೊಡ್ಡೇರಿಯವರನ್ನು ಮೊದಲೊಮ್ಮೆ ಭೇಟಿಯಾಗಿ ಪರಿಚಯಿಸಿಕೊಂಡಿದ್ದೆ. ಹಾಗಾಗಿ ಅವರತ್ತ ಮುಗುಳ್ನಗೆ ಬೀರಿ “ನಮಸ್ಕಾರ” ಅಂದೆ. ಶ್ಯಾಮಸುಂದರ್ ರಿಗೆ ಕೈಕೊಟ್ಟು ಕುಲುಕಿ, ಕಿವಿಯಲ್ಲಿ “ನಾನು ಆಸು ಹೆಗ್ಡೆ” ಎಂದುಸಿರಿ ಪರಿಚಯಿಸಿಕೊಂಡೆ. ಆಗ ಸುಧೀಂದ್ರ “ಯಾರು ಅಂತ ಗೊತ್ತಾಗ್ಲಿಲ್ಲ” ಅಂದ್ರು. “ನಾವು ಮೊದಲೇ ಭೇಟಿ ಆಗಿದ್ದೀವೆ, ನಾನು ಆಸುಮನ ಬ್ಲಾಗ್‍ನ  ಆಸು ಹೆಗ್ಡೆ” ಅಂದೆ. “ಓಹ್ ಗೊತ್ತಾಯ್ತು ಗೊತ್ತಾಯ್ತು ನೀವು ಆತ್ರಾಡಿ ಸುರೇಶ ಹೆಗ್ಡೆಯವರು” ಅಂದ್ರು. “ಹೌದು” ಎಂದು ನಕ್ಕು ತಲೆಯಾಡಿಸಿದೆ. ಜನಾರ್ದನ ಸ್ವಾಮಿಯವರಿಗೂ ನಮಸ್ಕಾರ ಮಾಡಿ ಕೈಕೊಟ್ಟು ಕುಲುಕಿ, “ನಾನೀಗ ನೀವು ಹಿಂದೆ ಇದ್ದ ಸಂಸ್ಥೆಯಲ್ಲಿ ದುಡಿಯುತ್ತಿರುವವನು” ಅಂದೆ. “ಯಾವುದದು? ನಾನು ಹಲವಾರು ಸಂಸ್ಥೆಗಳಲ್ಲಿ ದುಡಿದಿದ್ದೆ” ಅಂದರು. ಆಗ ನಾನು ಈಗಿರುವ ಸಂಸ್ಥೆಯ ಹೆಸರನ್ನೂ ಹೇಳಿದೆ. “ಹಾಂ… ಹೌದು ಹೌದು ಒಳ್ಳೆಯದು” ಅಂದರು.

ಆಗ ಪಕ್ಕದಲ್ಲಿ ಇದುವರೆಗೆ ಮೌನಿಯಾಗಿ ನಿಂತಿದ್ದ ಆ ಅಪರಿಚಿತ ಮಹಿಳೆಯ ಸ್ವರ ಕೇಳಿಸಿತು “ತಮ್ಮನ್ನು ಮೂಡಬಿದರೆಯ ಆಳ್ವಾಸ್ ನುಡಿಸಿರಿಯಲ್ಲಿ ಭೇಟಿ ಮಾಡಿಸಬೇಕೆಂದು ಪ್ರಕಾಶ ಶೆಟ್ಟಿಯವರು ಬಹಳ ಪ್ರಯತ್ನಿಸಿದ್ದರು, ನೀವು ಅಂದು ಅಲ್ಲಿ ಅವರಿಗೆ ಸಿಗುವಾಗ ನಾನು ಅಲ್ಲಿಂದ ತೆರಳಿಯಾಗಿತ್ತು” ಅಂದರು. ಆಗ ಥಟ್ಟನೇ ನೆನಪಾಯ್ತು ನನಗೆ. ಅಂದು ದ ಸಂಡೇ ಇಂಡಿಯನ್ ನ ವಿನ್ಯಾಸ ಕಲಾವಿದ ಪ್ರಕಾಶ್ ಶೆಟ್ಟಿ ಉಳೆಪಾಡಿಯವರು, ಸುಪ್ತ ದೀಪ್ತಿ ಬ್ಲಾಗ್ ನ ಜ್ಯೋತಿ ಮಹಾದೇವ ಅವರನ್ನು ನನಗೆ ಭೇಟಿ ಮಾಡಿಸುವ ಬಗ್ಗೆ ಮಾತಾಡಿದ್ದರು ಎಂಬುದು. “ಓಹ್ ನೀವು ಜ್ಯೋತಿ ಮಹಾದೇವ ಅಲ್ವೇ?” ಎಂದು ನಮಸ್ಕರಿಸಿದೆ. ಹೌದು ಎಂದು ಪ್ರತಿ ನಮಸ್ಕರಿಸಿದರು.

ಶ್ಯಾಮ್ ಸುಂದರ್ ಅವರು “ನೋಡಿ ನಿಮಗೆಲ್ಲಾ ಏನನ್ನಿಸುತ್ತೋ ಗೊತ್ತಿಲ್ಲ. ನನಗನಿಸುವುದು ಏನೆಂದರೆ, ಈ ನಾಲ್ಕು ಕ್ಷಣಗಳನ್ನು ನಾವು ಇಲ್ಲಿ ಈ ರೀತಿ ಒಂದಾಗಿ ಮಾತಾಡಿ ಕಳೆಯುತ್ತ ಇದ್ದೇವೆ. ಇವು ನಮ್ಮ ಜೀವನದ ಅಮೂಲ್ಯ ಕ್ಷಣಗಳಾಗಿ ನಮ್ಮ ನೆನಪಿನಲ್ಲಿ ದಾಖಲಾಗಿ ಉಳಿದು ಬಿಡುತ್ತವೆ. ಏನಂತೀರಾ?” ಅಂದರು. ಜನಾರ್ದನ ಸ್ವಾಮಿ, ಸುಧೀಂದ್ರ ಹಾಗೂ ನಾನು “ಹೌದು ಹೌದು ನಿಮ್ಮ ಮಾತು ನಿಜ” ಎಂದು ಒಫ್ಪಿಕೊಂಡೆವು. ಜ್ಯೋತಿಯವರು “ಈ ಕ್ಷಣಗಳಷ್ಟೇ ಅಲ್ಲ ಸಾರ್, ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ ನೆನಪಾಗಿ ದಾಖಲಾಗಿ ಉಳಿದುಬಿಡುತ್ತದೆ” ಎಂದು ದನಿಗೂಡಿಸಿದರು. ಹೌದೆನಿಸಿತು. ಹೀಗೆಯೇ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ಹೊರಬಂದ ನಂತರದ ವಿಜಯ ಕರ್ನಾಟಕ ಹೇಗಿದೆ ಎನ್ನುವ ಬಗ್ಗೆ , ಹಾಗೂ ಭಟ್ಟರ ಮತ್ತು ಬೆಳಗೆರೆಯವರ ನಡುವಿನ ಸಮರದ ಬಗ್ಗೆ,  ಅಲ್ಲದೆ ಇನ್ನಿತರ ಹಲವು ವಿಷಯಯಗಳ ಬಗ್ಗೆ ಸ್ವಲ್ಪ ಮಾತಾಡಿದೆವು.

ಪುಸ್ತಕ ಮಳಿಗೆಗಳತ್ತ ಹೋಗೋಣ ಎಂದು ಹೊರಟರೆ ಜನಜಂಗುಳಿ ನೋಡಿ ಭಯವಾಯ್ತು. ಅಂತೆಯೇ ಹಿಂತಿರುಗಿದೆವು. ಅಲ್ಲದೇ ಅಲ್ಲಿನ ಆ ಧೂಳಿನಿಂದಾಗಿ ಮುಂದಿನ ಒಂದು ವಾರ ನನ್ನ ನಾಸಿಕ ಮುಷ್ಕರ ಹೂಡಬಹುದೆನ್ನುವ ಭಯವೂ ಇತ್ತು ನನ್ನಲ್ಲಿ.

ನಂತರ ಶ್ಯಾಮ್ ಮಾಧ್ಯಮ ಕೇಂದ್ರದತ್ತ ಹೋದರು. ಸುಧೀಂದ್ರ ಮತ್ತು ಜನಾರ್ದನ ಸ್ವಾಮಿಯವರು ಇನ್ನೆತ್ತಲೋ ತೆರಳಿದರು. ಬಹುಶಃ ನಿರ್ಗಮಿಸಿದರೇನೋ. ಜ್ಯೋತಿ ಮಹಾದೇವ ಮತ್ತು ನಾನು ಒಂದರ್ಧ ಘಂಟೆ ಮಾತಾಡುತ್ತ ನಿಂತಿದ್ದೆವು. ತೀರ ಸರಳ ವ್ಯಕ್ತಿತ್ವದ ಜ್ಯೋತಿಯವರ ಪರಿಚಯ ಸಂತಸ ನೀಡಿತ್ತು. ಅಮೇರಿಕಾ ದೇಶದಲ್ಲಿದ್ದು ಮರಳಿ ಈಗ ಉಡೂಪಿ ಸಮೀಪದ ಮಣಿಪಾಲದಲ್ಲಿ ನೆಲೆಸಿರುವ ಅವರದ್ದು, ಮಣಿಪಾಲದಲ್ಲೇ ನೌಕರಿ ಮಾಡುತ್ತಿರುವ ಪತಿ ಮತ್ತು ಸುರತ್ಕಲ್‍ನ  ಕಾಲೇಜಿನಲ್ಲಿ ಕಲಿಯುತ್ತಿರುವ ಮಗನ ಜೊತೆಗಿನ ಮೂರು ಸದಸ್ಯರ ಪುಟ್ಟ ಸಂಸಾರವಂತೆ. ಸಮ್ಮೋಹಿನಿಯ ಮೂಲಕ ಚಿಕಿತ್ಸೆ ನೀಡುವ ಕಲೆಯಲ್ಲಿ (ಹಿಪ್ನೋಥೆರಪಿ) ತರಬೇತಿ ಪಡೆದಿರುವ ಆಕೆ ಸದ್ಯ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರಂತೆ. ತನ್ನ ಭಾವಬಿಂಬ ಎನ್ನುವ ಮುದ್ರಿತ ಕವನ ಸಂಕಲನವನ್ನು ನನಗಾಗಿ ನೀಡಿದರು. ಅದರ ಓದು ಇನ್ನೂ ಬಾಕಿ ಇದೆ.

ಹರಿವ ಲಹರಿ ಮತ್ತು ಸುಪ್ತ ದೀಪ್ತಿ ಎನ್ನುವ ಎರಡು ಬ್ಲಾಗ್ ಗಳಲ್ಲಿ ನಿರಂತರವಾಗಿ ಬರೆಯುತ್ತಿರುವ ಆಕೆಯೊಂದಿಗೆ ಅಂದು ಅಲ್ಲಿ ಕಳೆದ ಆ ಅರೆಗಳಿಗೆ ಬಲು ಸುಂದರವೆನಿಸಿತ್ತು. ಅಷ್ಟರಲ್ಲಿ, ಆಕೆಯ ಅನಿವಾಸಿ ಭಾರತೀಯ ಮಿತ್ರ ತ್ರಯರು ಅಲ್ಲಿಗೆ ಬಂದು ಮಾತಾಡಲು ತೊಡಗಿದ್ದರಾದ್ದರಿಂದ, ನಾನು ಜ್ಯೋತಿಯವರಿಗೆ ನಮಸ್ಕರಿಸಿ “ನಾನಿನ್ನು ಬರುತ್ತೇನೆ” ಅಂದೆ.  ಅಷ್ಟು ಹೊತ್ತು ಒಂಟಿಯಾಗಿದ್ದ ಆಕೆಗೆ ಜೊತೆ ನೀಡಿದುದಕ್ಕಾಗಿ ಆಕೆ ನನಗೆ ಕೃತಜ್ಞತೆ ಸಲ್ಲಿಸಿದರು.  ಅವರಿಂದ ಬೀಳ್ಕೊಂಡು ಮತ್ತು ಆ ಜನ ಜಾತ್ರೆಯಿಂದ ಹೊರಹೊರಟು ನಾನು ಮನೆಯ ದಾರಿ ತುಳಿದೆ.


ಕಸಾಪ ಅಧ್ಯಕ್ಷರು ಸಮ್ಮೇಳನಾಧ್ಯಕ್ಷರ ವಾಹನ ಏರಿದ್ದೇಕೆ?

04 ಫೆಬ್ರ 11

೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ.  ಜಿ. ವೆಂಕಟಸುಬ್ಬಯ್ಯನವರೊಂದಿಗೆ  ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ.

ಜೊತೆಗೆ ನಡೆದುಕೊಂಡು ಹೋಗಲೇನು ಕಷ್ಟ ಆಗಿತ್ತು ಅವರಿಗೆ?

ಸಮ್ಮೇಳನಾಧ್ಯಕ್ಷರಿಗೆ ನೀಡುವ ಗೌರವದಲ್ಲಿ ತಾನೂ ಪಾಲು ಕೇಳುವುದು ಯಾವ ಸೌಜನ್ಯ?

ಅವರಿಗಾದರೆ ೯೮ ವರುಷ ಪ್ರಾಯ. ಇವರಿಗೆ…?

ಸಮಾನತೆ ಪ್ರದರ್ಶಿಸಿ, ಒಂದು ರೀತಿಯಲ್ಲಿ ಅವರಿಗೆ ಅಗೌರವ ಸೂಚಿಸಿದಂತಾಗಿದೆ ಇಂದು.

 

ಚಿತ್ರಕೃಪೆ: ದಟ್ಸ್ ಕನ್ನಡ ಡಾಟ್ ಒನ್ ಇಂಡಿಯಾ ಡಾಟ್ ಇನ್


ತಮ್ಮ ಪಾಪದ ಕೊಡ ತುಂಬಿದೆ, ಕೇಳಿ ಮುಖ್ಯಮಂತ್ರಿಗಳೇ!

03 ಫೆಬ್ರ 11

 

ಸದಾಚಾರವ ಮರೆತು ರೂಢಿಸಿಕೊಂಡರೆ ಬರೀ ಭ್ರಷ್ಟಾಚಾರ
ಕಾಡದಿಹುದೇ ತಮ್ಮನ್ನು ದಿನ ರಾತ್ರಿ ಈ ರೀತಿ ವಾಮಾಚಾರ

ಊರೂರು ಸುತ್ತಿ, ನೂರೆಂಟು ದೇವಸ್ಥಾನಗಳಿಗೆ ದೇಣಿಗೆ ನೀಡಿ
ತನು ಮನ ಧನದ ಸೇವೆ ಮಾಡಿ ಬಂದವರಿಗೂ ಭಯ ನೋಡಿ

ಕಾಡುತಿಲ್ಲ ತಮ್ಮನು ಬಾಹ್ಯ ಲೋಕದ ಅದಾವ ಭೂತ ಪ್ರೇತವೂ
ತಮ್ಮನ್ನು ಕೆಣಕೆಣಕಿ ಕಾಡುತಿಹುದು ತಮ್ಮದೇ ಆ ಅಂತರಾತ್ಮವು

ರೈತರ ಮೇಲೆ ಪ್ರಮಾಣ ಮಾಡಿ ಈ ರೈತರನೇ ಮರೆತವರಲ್ಲವೇ
ಮಗಳ ಸಮಾನ ಎಂದವಳ ಮಾನವ ಹರಾಜು ಹಾಕಿದವರಲ್ಲವೇ

ಭ್ರಷ್ಟನೇಕಾದೆ ಎಂದರೆ ನೀವು ಭ್ರಷ್ಟರಾಗಿರಲಿಲ್ಲವೇ ಎಂದಿರಿ ತಾವು
ರೈತರ ಗೋಳಿಗೆ ಕಿವಿಯಾಗದೆ ಧನಿಕರ ಬಂಧಿಯಾದವರು ತಾವು

ಶಾಲಾ ಮಕ್ಕಳಂತೆ ದಿನ ಪ್ರತಿದಿನ ತೊಡೆತಟ್ಟಿ ಕಿತ್ತಾಡುತ್ತಿದ್ದೀರಲ್ಲಾ
ಆರು ಕೋಟಿಯ ಬೆಂಬಲವಿದೆಯೆಂದರೂ ಅವರ ನೋವನ್ನರಿಯಲಿಲ್ಲ

ಜನರ ಬೇಡಿಕೆ ಕೋರಿಕೆಗಳಿಗೆ ಸ್ಪಂದಿಸದೇ ಕುರ್ಚಿಗಂಟಿ ಕೂತವರು
ಭ್ರಷ್ಟರ ಸದೆ ಬಡಿಯ ಹೊರಟವರ ಕತ್ತಿಗೆ ಪಟ್ಟಿ ಹಾಕಿ ಕೂರಿಸಿದವರು

ತಮ್ಮ ಪಾಪದ ಕೊಡ ತಮ್ಮಿಂದಲೇ ತುಂಬಿದೆ ಕೇಳಿ ಮಹಾನುಭಾವ
ಹಾಗಾಗಿಯೇ ತಮ್ಮಲ್ಲಿ ತುಂಬಿದೆ ಸಾಯಿಸಬಹುದೆಂಬ ಭಯದ ಭಾವ
*************


ಕೋಟು ಕೊಳ್ಳಿರಯ್ಯಾ ಕೋಟು…!

02 ಫೆಬ್ರ 11

ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು

ಅಂಥಿಂಥ ಕೋಟುಗಳಿಲ್ಲ ಇಲ್ಲಿ, ಅದೆಂಥೆಂಥವರ ಕೋಟುಗಳಿವೆಯಯ್ಯಾ

 

ಹಿರಿಯ ಸಾಹಿತಿವರ್ಯರ ಕೋಟು

ಸಾಹಿತ್ಯ ಸಮ್ಮೇಳನದಲ್ಲವರು ಧರಿಸಿದ್ದ ಅತ್ಯಮೂಲ್ಯ ಕೋಟು ಇದಯ್ಯಾ

 

ಬಂಡಾಯಕ್ಕೆ ಹೆಸರಾದವರ ಕೋಟು

ಕಂಡ ಕಂಡವರನ್ನೆಲ್ಲಾ ಬಂಡಾಯವೇಳಲು ಪ್ರೇರೇಪಿಸುವ ಕೋಟಿದಯ್ಯಾ

 

ನವ್ಯ ನವೀನ ಎಂದೇ ಹೆಸರಾದ ಕೋಟು

ಹೋದ ಹೋದಲ್ಲೆಲ್ಲಾ ಹೊಸ ಛಾಪುಗಳ ಮೂಡಿಸಿ ಬಂದಿಹ ಕೋಟಿದಯ್ಯಾ

 

ಗೊಂದಲಮಯವಾಗಿಹ ವಿಚಿತ್ರ ಕೋಟು

ಎತ್ತ ಕೈ, ಎತ್ತ ಕಿಸೆ, ಕತ್ತು ಎಂದರಿಯಲಾಗದ ವಿಚಿತ್ರವಾಗಿಹ ಕೋಟಿದಯ್ಯಾ

 

ರಾಜಕೀಯ ಮುಖಂಡರದೀ ಕೋಟು

ಚುನಾವಣೆಯ ದಿನಗಳಲಿ ಭರವಸೆ ತುಂಬುತ್ತಿದ್ದ ಮಹಾನ್ ಕೋಟಿದಯ್ಯಾ

 

ಎಡ ಪಂಥೀಯ ನಾಯಕರದೀ ಕೋಟು

ಅದ್ಯಾವುದೋ ಚಳುವಳಿಯ ಭಾಗವಾಗಿ ಧೂಳು ತುಂಬಿಸಿದ ಕೋಟಿದಯ್ಯಾ

 

ಇಲ್ಲ ಇಲ್ಲ ನನ್ನ ಸ್ವಂತದ್ದು ಅಲ್ಲವೀ ಕೋಟು

ಅಲ್ಲಿಲ್ಲಿಂದೆತ್ತಿ-ಬಳಸದೇ-ಕೆಡಿಸದೇ ಮುಂದೆ ಸಾಗಹಾಕುವ ಕೋಟುಗಳಿವಯ್ಯಾ

 

ನನ್ನಲ್ಲದೇನಿದ್ದರೂ ಅವರಿವರ ಕೋಟು

ಬೆಲೆ ಅರಿಯದೇ, ಬಲ ತಿಳಿಯದೇ, ಮುಂದಕ್ಕೆ ರವಾನಿಸುವ ಕೋಟುಗಳಯ್ಯಾ

 

ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು

ಅಂಥಿಂಥ ಕೋಟುಗಳಲ್ಲ ಇಲ್ಲಿ ಅದು ಎಂಥೆಂಥವರ ಕೋಟುಗಳಿವೆಯಯ್ಯಾ

********************************

Click here if you want to read this post in English Fonts