ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!

 

ಆಸುಮನ ಇಂದು ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂದಿಸಿದಾಗಲೆಲ್ಲಾ, ಆ ಸ್ಪಂದನಗಳು ಆಸುಮನದಲ್ಲಿ ಮಾತುಗಳಾಗಿ ಅಕ್ಷರಗಳ ರೂಪತಾಳುತ್ತಾ ಬಂದಿವೆ.

ಮೊದಲನೇ ವರುಷ ಆಸುಮನದ ಮಾತುಗಳ ೨೦೦ ಪುಟಗಳು ಪ್ರಕಟಗೊಂಡಿದ್ದರೆ ಎರಡನೇ ವರುಷ ೧೮೯ ಪುಟಗಳು ಪ್ರಕಟಗೊಂಡಿವೆ.

ಇದೀಗ ನೀವು ಓದುತ್ತಿರುವುದು ಮೂರನೇ ವರುಷದ ಮೊದಲನೆಯ ಹಾಗೂ ಆಸುಮನದ ಮಾತುಗಳ ಒಟ್ಟಾರೆ ಮುನ್ನೂರ ತೊಂಭತ್ತನೇ ಪುಟ.

ಇದನ್ನು ಒಂದು ಸಾಧನೆಯೆಂದು ದಾಖಲಿಸಬೇಕೋ ಅಥವಾ ಒಂದು ಸಾಮಾನ್ಯ ವಿಷಯವೆಂದು ದಾಖಲಿಸಬೇಕೋ ಅರಿವಾಗುತ್ತಿಲ್ಲ.

ಇವು ಎಣಿಕೆಗಾಗಿ, ಮೂರನ್ನು ನೂರಾಗಿಸಿ, ನೂರನ್ನು ನಾಲ್ಕುನೂರಾಗಿಸಲಷ್ಟೇ ಬರೆದ ಮಾತುಗಳಲ್ಲ.

ನನ್ನ ಮನದ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು, ದಾಖಲಿಸಿ, ತಮ್ಮೊಂದಿಗೆ ಹಂಚಿಕೊಳ್ಳುವುದೊಂದೇ ಈ ಮಾತುಗಳ ಪ್ರಕಟಣೆಯ ಹಿಂದಡಗಿರುವ ಉದ್ದೇಶ.

ಮನುಜ ಸದಾಕಾಲ ಕ್ರಿಯಾಶೀಲನಾಗಿರುತ್ತಾನೆ. ತಾನು ಕೇಳುವ ಮತ್ತು ನೋಡುವ ವಿಷಯಗಳಿಗೆ ಸದಾ ಸ್ಪಂದಿಸುತ್ತಿರುತ್ತಾನೆ.

ಆದರೆ, ಎಲ್ಲರೂ ಆ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು ಬಹಿರಂಗ ಪಡಿಸಲಾರರು.

ನನ್ನ ಮನದೊಳಗಿನ ಸ್ಪಂದನಗಳಿಗೆಲ್ಲಾ ಅಕ್ಷರರೂಪಕೊಟ್ಟು ಬಹಿರಂಗಗೊಳಿಸುವ ಈ ಒಂದು ಹವ್ಯಾಸ ನನ್ನಲ್ಲಿ ರಕ್ತಗತವಾಗಿರುವುದಕ್ಕೆ ನಾನು ನನ್ನ ಅಜ್ಜಯ್ಯ ಮತ್ತು ಅಪ್ಪಯ್ಯನವರಿಗೆ ಸದಾ ಋಣಿಯಾಗಿದ್ದೇನೆ.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಮ್ಮ ಅಜ್ಜಯ್ಯ, ದಿ. ಮುದ್ರಾಡಿ ಕೃಷ್ಣಯ್ಯ ಶೆಟ್ಟಿಯವರು ಕವಿತೆಗಳನ್ನು ಮತ್ತು ನೀಳ್ಗತೆಳನ್ನು ಬರೆಯುತ್ತಿದ್ದವರು.

ಆಯುರ್ವೇದ ತಜ್ಞ, ಪ್ರವಚನಕಾರ, ರಂಗಭೂಮಿ ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಕೃಷಿಕರೂ ಆಗಿದ್ದ ನನ್ನ ಅಪ್ಪಯ್ಯ ಡಾ. ಯು. ಚಂದ್ರಶೇಖರ್  ಅವರೂ ಕವನಗಳನ್ನು, ನುಡಿಮುತ್ತುಗಳನ್ನು  ಮತ್ತು ಲೇಖನಗಳನ್ನು ಬರೆಯುತ್ತಿದ್ದವರು.

ಹಾಗಾಗಿ, ಈ ಹವ್ಯಾಸ ನನಗೆ ಅನುವಂಶೀಯವಾಗಿ ಬಂದಿದೆಯೆಂದೆನ್ನಬಹುದೇನೋ.

ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಯೊಂದು ಘಟನಾವಳಿಗೂ, ಆಯಾ ಸಂದರ್ಭಕ್ಕೆ ಸಂಬಂಧಿಸಿದ ಉಪಕತೆಗಳನ್ನು ಹೇಳಿ ಎಚ್ಚರಿಸುತ್ತಿದ್ದವರು ಮತ್ತು ಜೀವನದ ಪಾಠ ಮಾಡುತ್ತಿದ್ದವರು ನಮ್ಮ ಅಪ್ಪಯ್ಯನವರು.

ಹಾಸ್ಯ ಪ್ರಜ್ಞೆಯನ್ನು ತನ್ನ ಕೊನೆಯುಸಿರು ಇರುವವರೆಗೂ ಜೀವಂತ ಇರಿಸಿಕೊಂಡು ಬಾಳಿದವರು ಅವರು.

ಯಾವುದೇ ಗಂಭೀರ ಸನ್ನಿವೇಶಗಳಲ್ಲೂ ಹಾಸ್ಯಪ್ರಜ್ಞೆಯನ್ನು ಕಾಯ್ದುಕೊಳ್ಳುವ ಜಾಣ್ಮೆಯನ್ನು ಹಾಗೂ ಯಾವುದೇ ಅಪ್ರಮುಖ ಸನ್ನಿವೇಶಗಳಲ್ಲೂ ಗಂಭೀರವಾದ ಜೀವನ ಪಾಠವನ್ನು ಅರಿತುಕೊಳ್ಳುವ ಜಾಣ್ಮೆಯನ್ನೂ ನಮಗೆ ಕಲಿಸಿಕೊಟ್ಟವರು ಅವರು.

ಇಂದು ಆಸುಮನ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಅವರೀರ್ವರನ್ನು ನೆನೆಯುತ್ತಾ  ಮತ್ತು ಅವರೀರ್ವರ ಅಮರಾತ್ಮಗಳಿಗೂ ನಮಿಸಿ, ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಾ  ಮುಂದುವರಿಯುತ್ತಿದ್ದೇನೆ. 

ಅಲ್ಲದೇ, ಅಂತರ್ಜಾಲದಲ್ಲಿ ನಾನು ನನ್ನದೇ ಛಾಪು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದಕ್ಕೆ ಸಹಕಾರಿಯಾದ, ನಾನು ಎಡವಿದಾಗ ತಿದ್ದುವ, ಮಾತುಗಳು ಮೆಚ್ಚುಗೆಯಾದಾಗ ಬಾಯ್ಬಿಟ್ಟು ಪ್ರೋತ್ಸಾಹದ ಮಾತುಗಳನ್ನು ನುಡಿದು, ನನ್ನ ಬೆನ್ನುತಟ್ಟಿ ಸ್ಪೂರ್ತಿ ತುಂಬುವ, ಇನ್ನೆಲ್ಲೋ ಹೋಗಿ, ಇನ್ಯಾರದೋ ಮುಂದೆ, ಆಸುಮನದ ಬಗ್ಗೆ ಒಳ್ಳೆಯ ನಾಲ್ಕು ನಿಸ್ವಾರ್ಥ ಮಾತುಗಳನ್ನು ಆಡುವ ಹಾಗೂ ಸದಾ ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿ ಮುನ್ನಡೆಸುವ, ನನ್ನ ಅಪಾರ ಓದುಗ ಬಳಗಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಹಾಗೆಯೇ ಇನ್ನು ಮುಂದೆಯೂ ತಮ್ಮಿಂದ ಇದೇ ರೀತಿಯ ಪ್ರೋತ್ಸಾಹವನ್ನು ಸದಾ ನಿರೀಕ್ಷಿಸುತ್ತಾ ಇರುತ್ತೇನೆ.

****

16 Responses to ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!

 1. ksraghavendranavada ಹೇಳುತ್ತಾರೆ:

  ಇನ್ನೂ ಮುನ್ನೂರು ವರುಷಗಳವರೆಗೆ ಬರೆಯುತ್ತಿರಿ. ಕನ್ನಡ ಸಾಹಿತ್ಯ ಲೋಕ ಆಸುಮನದ ಮಧುರ ಮಾತುಗಳಿ೦ದ ತು೦ಬಿ ಹೋಗಲಿ..
  ಸ೦ಖ್ಯೆಗಳು ಎ೦ದಿಗೂ ಮುಖ್ಯವಲ್ಲ.. ಎಷ್ಟು ಬರೆದಿದ್ದೇವೆ ಎನ್ನುವುದು ಮುಖ್ಯವಾಗದೆ, ಏನು ಬರೆದಿದ್ದೇವೆನ್ನುವುದೇ ಮುಖ್ಯವಾಗುತ್ತದೆ.. ಆಸುಮನದ ಎಲ್ಲಾ ಮಾತುಗಳು ತನ್ನತನದಿ೦ದ ಹೊಳೆಯುತ್ತಿರುವಾಗ ಬರಹಗಳ ಸ೦ಖ್ಯೆಯು ನಿಮ್ಮ ಲೇಖನಿಯ ಮೇಲೆ ತನ್ನ ಹಿಡಿತವನ್ನು ಸಾಧಿಸಲಿರಲೆ೦ಬುದು ಈ ಕಿರಿಯನ ಅರಿಕೆ. ಧನ್ಯವಾದಗಳು.

  ಹೀಗೆಯೇ ಬರೆಯುತ್ತಿರಿ ಎ೦ದೆ೦ದಿಗೂ
  ದಾರಿ ತೋರುತ್ತಿರಿ ನೀವೆ೦ದಿಗೂ..
  ನಿಮ್ಮ ಛಾಪಿನಲ್ಲಿ ನನ್ನತನವನ್ನು ಉಳಿಸಿಕೊಳ್ಳುವಾಸೆ ನನಗೆ..
  ಹಾದಿ ಸುಲಭದ್ದಲ್ಲ ಎ೦ಬ ಅರಿವೂ ಇದೆಯೆನಗೆ..

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ, ತಮಗೆ ಮತ್ತು ನನ್ನ ಮೇಲಿನ ತಮ್ಮ ಅಭಿಮಾನಕ್ಕೆ ಮನಪೂರ್ವಕವಾಗಿ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇನೆ.
   ತಮ್ಮಂಥ ಸಹೃದಯಿ ಓದುಗರ ಪ್ರೋತ್ಸಾಹವೇ ಶ್ರೀರಕ್ಷೆ ಆಸುಮನದೊಳಗಿನ ಬರಹಗಾರನಿಗೆ.

 2. JP Rao ಹೇಳುತ್ತಾರೆ:

  ಶುಭಾಶಯಗಳು. ೩೯೦ ಪುಟಗಳ ಪ್ರಕಟಣೆ ನಿಜಕ್ಕೂ ಬಹು ದೊಡ್ಡ ಸಾಧನೆ.

 3. Chitra ಹೇಳುತ್ತಾರೆ:

  ಆಸುಮನ ಕಾಲಿಟ್ಟಿದೆ ಎರಡರಿಂದ ಮೂರನೇ ವರುಷ
  ಮೂರನೇ ವರ್ಷದಲಿ ಕೊಡಲಿದೆ ನಮಗೆಲ್ಲ ಮತ್ತೊಂದು ಹರುಷ

  ೨೦೦, ೧೮೯ ಪುಟಗಳ ಸಾಧನೆಯ ದಾಖಲೆ
  ಇನ್ನೂ ಹೆಚ್ಚಾಗಿ ಬರೆದರೆ ನಮಗೆಲ್ಲ ಆನಂದ ಆಗಲೆ

  ನಿರಂತರ ಸಾಗಲಿ ನಿಮ್ಮ ಕವನದ ಬರವಣಿಗೆ
  ಆಗಲಿ ನಮ್ಮ ಕಣ್ಣಿಗೆ ಅದನ್ನೋದುವ ಮೆರವಣಿಗೆ

 4. ಶಾನಿ ಹೇಳುತ್ತಾರೆ:

  ತೃತೀಯ ವರ್ಷಕ್ಕೆ ಅಡಿ ಇಟ್ಟಿರುವ ಆಸುಮನಕ್ಕೆ ಅಭಿನಂದನೆಗಳು,
  ನಿಮ್ಮ ಬ್ಲಾಗ್ ಬರಹಗಳು ಹೀಗೆ ಸಾಗಲಿ ಎಂದರೆ, ಅದು ಊಟ ಮಾಡಿ ಬಂದವನೆಂದು ಗೊತ್ತಿದ್ದರೂ ಊಟ ಆಯ್ತಾ ಎಂದು ಕೇಳಿದಂತೆ ಕ್ಲೀಷೆ. ಎಂದಿನಂತೆ ಲವಲವಿಕೆಯ ಮಾತುಗಳು ಮತ್ತೆಮತ್ತೆ ಉದುರಲಿ.

 5. ಹೇಮಾ ಹೇಳುತ್ತಾರೆ:

  ಹೆಗ್ಡೆಯವರೇ………..EXCELLENT…….ಹೀಗೆಯೇ ಮುಂದುವರೆಸಿರಿ…

 6. shashijois ಹೇಳುತ್ತಾರೆ:

  ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು.

 7. paranjape ಹೇಳುತ್ತಾರೆ:

  ಹೆಗಡೆಯವರಿಗೆ ಆತ್ಮೀಯ ಶುಭಾಶಯ.

 8. Ravi ಹೇಳುತ್ತಾರೆ:

  ಶುಭಾಶಯಗಳು! ವರುಷಕ್ಕೆ ಇನ್ನೂರು ಪುಟ ಸಣ್ಣ ಸಾಧನೆಯೇನಿಲ್ಲ ಹೆಗ್ದೆಯವರೇ. ಅಂದರೆ ವಾರಕ್ಕೆ ಬರೋಬ್ಬರಿ ನಾಲಕ್ಕು ಪುಟ. ನಿಮ್ಮ ಬ್ಲಾಗು ಸಿಕ್ಕಾಪಟ್ಟೆ ಬ್ಯುಸಿ!

  • ಆಸು ಹೆಗ್ಡೆ ಹೇಳುತ್ತಾರೆ:

   ರವಿ,
   ವಾರಕ್ಕೆ ಕಡಿಮೆಯೆಂದರೆ ಬರೋಬ್ಬರಿ ಇಪ್ಪತ್ತೊಂದು ಬಾರಿ ಆಹಾರ ಸೇವಿಸುವ ನಾನು, ವಾರಕ್ಕೆ ಬರೀ ನಾಲ್ಕು ಪುಟಗಳ ಸರಾಸರಿಯಲ್ಲಿ ಬರೆದಿದ್ದೇನೆಂದರೆ, ಅದು ಕಡಿಮೆ ಆಯ್ತೆಂದೇ ನನ್ನೆಣಿಕೆ.
   ಏನಂತೀರಿ? 🙂
   ತಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.
   ತಮ್ಮ ಶುಭಾಶಯಗಳಿಗಾಗಿ ಮತ್ತು ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: