ನನ್ನೀ ಬಾಳು ನಿನಗಾಗಿ ಕಾಯುತಿದೆ!

 

ನಾನು ಬರುವುದಿಲ್ಲ
ನನಗಾಗುವುದಿಲ್ಲ ಎಂದೆಷ್ಟೇ
ಹೇಳಿದರೂ ನೀ ಕರೆದೊಯ್ದು ಕುಡಿಸಿದ್ದೆ

ತಲೆ ಕೆಟ್ಟಂತಾಗಿ
ಮೈಯೆಲ್ಲಾ ಬಿಸಿಯಾಗಿ
ಹೊಸ ಅನುಭವದಲಿ ನಾ ಮೈಮರೆತಿದ್ದೆ

ಬೇಕು ಬೇಡಗಳನ್ನು
ವಿಂಗಡಿಸಲಾಗದ ನಾನು
ಬೇಡವಿದ್ದರೂ ಬೇಕು ಎನ್ನತೊಡಗಿದ್ದೆ

ಮತ್ತಾವುದೋ ಶುಭದಿನ
ಮತ್ತು ಇಳಿದ ಮುಂಜಾನೆಯಲ್ಲಿ
ಜ್ಞಾನೋದಯವಾದಂತೆ ನಾನೆಚ್ಚೆದ್ದಿದ್ದೆ

ನಿನ್ನ ಪಾಲಿಗೆ ನಾನು
ಆ ಹೊತ್ತಿಗಷ್ಟೇ ಬೇಕೆನಿಸುವ
ಸಂಗಾತಿ ಎಂಬುದ ಅರಿತು ನಾನೆದ್ದಿದ್ದೆ

ಎಂದೂ ಮರಳದಂತೆ
ಗಟ್ಟಿ ಮನಸ್ಸು ಮಾಡಿ ನಾನು
ನಿನ್ನ ಸಹವಾಸವನ್ನೇ ಬಿಟ್ಟಿತ್ತ ಬಂದಿದ್ದೆ

ಈಗ ಅನಿಸುತ್ತಿದೆ ನನ್ನ
ಜೊತೆಗೆ ನಿನ್ನನ್ನೂ ಅಲ್ಲಿಂದೀಚೆಗೆ
ಸೆಳೆವ ಯತ್ನ ಮಾಡದೇ ಯಾಕುಳಿದೆ

ಆ ರಭಸಕ್ಕೆ ಸಿಲುಕಿದ
ನೀನು ಅದ್ಯಾವ ದಡಸೇರಿ
ಇಂದದೆಲ್ಲಿರುವೆಯೋ ಅರಿಯದಾಗಿದೆ

ಕರೆಯ ಕೇಳಿಸಿಕೊಂಡು
ಬಂದು ಬಿಡು ಒಮ್ಮೆ ಮರಳಿ
ನನ್ನೀ ಬಾಳು ನಿನಗಾಗಿ ಕಾಯುತಿದೆ!
******************

7 Responses to ನನ್ನೀ ಬಾಳು ನಿನಗಾಗಿ ಕಾಯುತಿದೆ!

  1. shamala ಹೇಳುತ್ತಾರೆ:

    ಕವನ ಚೆನ್ನಾಗಿದೆ. ಯಾರಿಗಾಗಿಯೂ… ಬಾಳು ಕಾಯುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಅಲ್ಲವೇ ಸುರೇಶ್?

  2. shamala ಹೇಳುತ್ತಾರೆ:

    ನಾವು ಯಾರಿಗೆ ಆದರೂ… ಒಳ್ಳೆಯ ಹಾದಿಯನ್ನು ತೋರಿಸ ಬಹುದೇ ಹೊರತು… ಕೈ ಹಿಡಿದು ನಡೆಸಲಾಗದು ಎಂದು ನನ್ನ ಅಭಿಪ್ರಾಯ. ನಾವು ವಿಫಲವಾಗಿದ್ದೆವೆಂಬ ಭಾವ ನಮಗೇಕೆ ಬರಬೇಕು ಸುರೇಶ್? ಪ್ರಯತ್ನ ಮಾಡುವುದು ಮಾತ್ರ ನಮ್ಮ ಕೈಯಲ್ಲಿ ಅಲ್ಲವೇ…? ಕವನ ಇಷ್ಟವಾಯಿತು… ಚೆನ್ನಾಗಿದೆ.

    • ಆಸು ಹೆಗ್ಡೆ ಹೇಳುತ್ತಾರೆ:

      ಶ್ಯಾಮಲಾ,
      ತಮ್ಮ ಮಾತು ನಿಜ.
      ಆದರೂ ಮನದಲ್ಲಿ ಏಳುವ ಭಾವಗಳಿಗೆ ಕಡಿವಾಣ ಹಾಕಲಾದೀತೇ?
      ಒಂದೊಂದು ಕ್ಷಣ ಒಂದೊಂದು ತೆರನಾದ ಭಾವ ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಕಾಡುತ್ತಿರುತ್ತದೆ.
      ಆ ಒಂದು ಕಾಡುವಿಕೆಯ ಹಿಡಿತದಲ್ಲಿದ್ದಾಗ ಹೊರಬಂದ ಮಾತುಗಳಿವು, ಅಷ್ಟೇ…
      ಅಂದಿಗದು ಸತ್ಯ… ಅದೇ ಸಾರ್ವಕಾಲಿಕ ಸತ್ಯವೋ..? ಗೊತ್ತಿಲ್ಲ.
      ತಮ್ಮ ಪ್ರತಿಕ್ರಿಯೆಗಾಗಿ ಮತ್ತು ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದಗಳು.

  3. ksraghavendranavada ಹೇಳುತ್ತಾರೆ:

    ಹೌದು! ಕವಿಯ ಮನದ ಭಾವನೆಗಳನ್ನು ಅರ್ಥೈಸಿಕೊಳ್ಳಬಹುದು.. ಪ್ರಯತ್ನವನ್ನಾದರೂ ಮಾಡಬೇಕಿತ್ತು..
    ಇರಲಿ.. ಆಗಿ ಹೋಯಿತಲ್ಲಾ.. ಚಿ೦ತೆ ಬೇಡ..

    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

  4. HEMA ಹೇಳುತ್ತಾರೆ:

    ವಾಹ್! ಎಂತಹ ಜ್ಞಾನೋದಯ!
    ಇದು ಮೊದಲೇ ಆಗಿದ್ದಿದ್ದರೆ ಚೆನ್ನಾಗಿರ್ತಿತ್ತು.
    ನಿಮ್ಮ ಇಚ್ಛೆ ಪೂರೈಸಲಿ ಎಂಬುದೇ ನನ್ನ ಹಾರೈಕೆ.
    ಕವನದಲ್ಲಿ ಇಚ್ಛೆ ಪೂರೈಕೆಯ ನಿಜವಾದ ಬಯಕೆ ಎದ್ದು ಕಾಣುತ್ತಿದೆ. ಚೆನ್ನಾಗಿದೆ.

    • ಆಸು ಹೆಗ್ಡೆ ಹೇಳುತ್ತಾರೆ:

      ಜ್ಞಾನೋದಯ ಆಗುವುದು ಮುಖ್ಯ.
      ಜ್ಞಾನೋದಯ ಆದ ಮೇಲೆ ತಡವಾಯ್ತೇಕೆ ಅನ್ನುವುದರಲ್ಲಿ ಅರ್ಥ ಇಲ್ಲ.
      ಅಲ್ಲದೇ, ನನಗದು ತಡವಾಗಿ ಆಯ್ತೆಂದೂ ಅನಿಸುತ್ತಿಲ್ಲ.
      ನಾವು ನಮ್ಮವರನ್ನು ಒಳ್ಳೆಯ ಹಾದಿಯಲ್ಲಿ ನಡೆಸುವತ್ತ ಹೆಚ್ಚಾಗಿ ಪ್ರಯತ್ನ ಮಾಡಿಲ್ಲವೇನೋ, ವಿಫಲವಾಗಿದ್ದೆವೇನೋ ಅನ್ನುವ ಭಾವನೆ ಒಳಗೊಳಗೇ ಕಾಡುತ್ತಿರುತ್ತದೆ! ಅಷ್ಟೇ!
      ತಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು ಹೇಮಕ್ಕಾ!

ತಮ್ಮ ಪ್ರತಿಕ್ರಿಯೆ ನೀಡಿ.