ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ…!

 

 

ದೇವರುಗಳಿಗೆ ಭಕ್ತ ಜನರು ಸಲ್ಲಿಸುವ ಪೂಜೆ ಪುನಸ್ಕಾರಗಳಿಗೆ,
ಪೂಜಾರಿಗಳೇ ದರ ನಿಗದಿಮಾಡಿ ಕಿತ್ತುಕೊಳ್ಳುತ್ತಿಹರಲ್ಲಾ ಇಲ್ಲಿ;

ತಮ್ಮ ಪ್ರಿಯ ದೇವರುಗಳು ಇನ್ನೂ ಬಹು ಪ್ರಿಯರಾಗುತಿಹರೆಂಬ,
ಮೂಢನಂಬಿಕೆಯಲ್ಲಿಯೇ ಭಕ್ತ ಜನರು ಇನ್ನೂ ಇದ್ದಿಹರಲ್ಲಾ ಇಲ್ಲಿ;

ಮಧ್ಯವರ್ತಿಗಳ ಜೋಳಿಗೆಗಳ ನಾನು ತುಂಬಿಸಿದರೆ ಆ ದೇವರು,
ಒಲಿಯುವರು ಎಂಬ ಭ್ರಮೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೇ ಇಲ್ಲ ನಿಜದಿ;

ನನ್ನ ನಡೆ ನುಡಿಯ ಸ್ವತಃ ತಾನೇ ಅರಿಯರಾದೊಡೆ ಆ ದೇವರು,
ನನ್ನನ್ನು ಕಾಪಾಡುತಿಹರೆಂಬ ನಂಬಿಕೆ ಹೇಗಿರಬಹುದು ಈ ಮನದಿ;

ನಮ್ಮ ಈ ನಾಡಿನ ಸಾವಿರಾರು ದೇವಾಲಯಗಳ ಹುಂಡಿಗಳಲಿ,
ಅದೆಷ್ಟೋ ಸಂಪತ್ತು ಕೊಳೆತುಬಿದ್ದಿಹುದಲ್ಲಾ ಈ ಪರಿ ವ್ಯರ್ಥವಾಗಿ;

ಆ ಹುಂಡಿಗಳ ಬಗೆದು, ಬಡವರ ಗುಂಡಿಗೆಗಳಿಗೆ ತಂಪನ್ನೀಯುವ,
ಕಾರ್ಯ ನಡೆಸಿದರೆ ಯಾರೂ ಉಳಿಯರೀ ನಾಡಿನಲಿ ಬಡವರಾಗಿ!
***************************

11 Responses to ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ…!

 1. divyashree ಹೇಳುತ್ತಾರೆ:

  ತಮ್ಮ ಚಿಂತನೆ ಬಹಳ ಸೊಗಸಾಗಿದೆ…

 2. ಹೇಮಾ ಹೇಳುತ್ತಾರೆ:

  ತಮ್ಮ ಅಭಿಪ್ರಾಯದಂತೆ ಕೆಲವು ದೇಗುಲಗಳಿವೆ ಹೆಗ್ಡೆಯವರೇ.
  ಆದರೆ ನಮ್ಮ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅಂಥ ಅನುಭವಗಳು ತುಂಬಾ ಕಡಿಮೆ.

  • ಆಸು ಹೆಗ್ಡೆ ಹೇಳುತ್ತಾರೆ:

   ತಮ್ಮ ಮಾತು ನಿಜವಾಗಿರಬಹುದು ಹೇಮಕ್ಕಾ,

   ಆದರೆ, ನನ್ನ ಅನಿಸಿಕೆಗಳು ಒಂದು ಪ್ರಾಂತ್ಯ ಅಥವಾ ಜಿಲ್ಲೆಗೆ ಸೀಮಿತವಾಗಿರದೇ ರಾಷ್ಟ್ರಮಟ್ಟದ್ದಾಗಿರುತ್ತದೆ. ಅಲ್ಲದೆ, ಯಾವುದೇ ಅನಿಸಿಕೆ, ಹೇಳಿಕೆಗಳಿಗೆ ಅಪವಾದಗಳು ಇಲ್ಲವೆಂದಲ್ಲ. ಯಾವ ಅನಿಸಿಕೆಗಳೂ ನೂರಕ್ಕೆ ನೂರು ದಿಟವೂ ಆಗಿರುವುದಿಲ್ಲ. ಹೆಚ್ಚಿನ ಅಂಶಗಳನ್ನು ಪರಿಗಣಿಸಿಯಷ್ಟೇ ಅನಿಸಿಕೆಗಳು ಮೂಡುತ್ತವೆ.

   ತಮ್ಮ ಪ್ರತಿಕ್ರಿಯೆಗಳಿಗಾಗಿ ಕೃತಜ್ಞತೆಗಳು.

 3. Bellala Gopinatha Rao ಹೇಳುತ್ತಾರೆ:

  ನಿಜ
  ಸುಂದರ ಕವನ
  ದೇವಾಲಯಕ್ಕೆ ಹೋದಾಗಲೆಲ್ಲಾ ನನಗೆ ಇದೇ ಭಾವನೆ ಬರುತ್ತಿತ್ತು, ಹೆಗ್ಡೆಯವರೇ

 4. ಮಧುಸೂದನ ಹೇಳುತ್ತಾರೆ:

  ನನಗೆ ಗೊತ್ತಿರುವ ಹಲವು ದೇವಳಗಳಲ್ಲಿ ಹುಂಡಿಯ ಹಣವನ್ನು ವಿವಿಧ ಸಮಾಜೋಪಯೋಗಿ ಕಾರ್ಯಗಳಿಗೆ ಬಳಸುತ್ತಾರೆ. ಶಾಲೆ, ಕಾಲೇಜುಗಳಂತಹ ವಿದ್ಯಾ ಸಂಸ್ಥೆಗಳು, ಸಾಮೂಹಿಕ ಮದುವೆ, ಆರೋಗ್ಯ ಕಾರ್ಯಗಳು, ಆಸ್ಪತ್ರೆಗಳ ನಿರ್ವಹಣೆ, ಇಂಥಹ ಹಲವು ಕಾರ್ಯಗಳಿಗೆ ಬಂದ ಹಣವನ್ನು ಉಪಯೋಗಿಸುವ ದೇವಳಗಳು ಇಲ್ಲವೇ? ಮಧ್ಯಾಹ್ನ, ರಾತ್ರಿ ಅನ್ನ ಸಂತರ್ಪಣೆಯಂತೂ ದಕ್ಷಿಣ ಕನ್ನಡದ ಕಡೆಯ ದೇವಳಗಳಲ್ಲಿ ಸಾಮಾನ್ಯ. ಇನ್ನು ಕೆಲವು ’ಯಾತ್ರೆ’ಗಳಿಗೂ ಈ ಹಣದ ಬಳಕೆಯಾಗುತ್ತದೆ, ’ಬಡವರಿಗಾಗಿ’. ಅಂತೆಯೇ ಹಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ, ದೇಗುಲಗಳಲ್ಲಿ ಕಾಲ ಕಾಲಕ್ಕೆ ನಡೆಯುವ ನೇಮ, ಉತ್ಸವಗಳಿಗೆ ಕಡಿಮೆ ಖರ್ಚೇನೂ ಬರುವುದಿಲ್ಲ. ಅವುಗಳಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ, ಸಾಂತ್ವನ ಪಡೆಯುವ ಮಂದಿಗೆ ಉಪಕಾರವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಹಾಗಾಗಿ ತಮ್ಮ ಆಶಯವು ಈಗಾಗಲೇ ಈಡೇರಿದೆ ಎಂದು ನನ್ನ ಭಾವನೆ.

  ಅಷ್ಟಕ್ಕೂ ಈ ದರ ನಿಗದಿಪಡಿಸುವುದು ಪೂಜಾರಿಗಳೇನೂ ಅಲ್ಲ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಳಗಳಲ್ಲೂ ಸರಕಾರವೇ ದರ ನಿಗದಿಪಡಿಸಿ ಫಲಕ ಹಾಕಿರುತ್ತದೆ. ಇನ್ನು ಮುಜರಾಯಿ ಇಲಾಖೆಯಡಿಯಲ್ಲಿ ಬರದ ದೇವಳಗಳಿಗೆ ಅವುಗಳದೇ ಆದ ಆಡಳಿತ ಮಂಡಳಿ ಇದ್ದು, ದರ ನಿಗದಿ ಅವುಗಳ ಕೆಲಸ.

  ಆದರೆ ಬೆಂಗಳೂರಿನ Footpath ದೇವಳಗಳ ಕಥೆ ಬೇರೆಯದೇ ಅನ್ನುವುದು ನನ್ನ ಅನಿಸಿಕೆ. ಅವುಗಳಿಗೆ ಬಹುಶಃ ನಿಮ್ಮ ಮಾತು ಅನ್ವಯವಾಗುವುದು. ಆದರೂ ಕೊನೆಯಲ್ಲಿ ಉಳಿಯುವ ಪ್ರಶ್ನೆ: ಯಾವ ಧರ್ಮದ ದೇವಳದಲ್ಲೂ ಚಿಕ್ಕಾಸೂ ಹಾಕದೇ ಸುಮ್ಮನೆ ಹೋಗಿ ನಮಸ್ಕರಿಸಿ ತುಸು ಹೊತ್ತು ಕುಳಿತು ಬರುವವರನ್ನು ಎಂದೂ ಹೊರಗೆ ಕಳಿಸಿದ್ದನ್ನು ನಾನು ನೋಡಿಲ್ಲ, ಕೇಳಿಲ್ಲ. ಹಾಗಾಗಿ ಕಾಸು ಕೊಡುವುದು, ಬಿಡುವುದು ಅವರವರಿಗೆ ಬಿಟ್ಟ ವಿಚಾರವಲ್ಲವೇ? ’ದೇವರಿಗೆ’ ಎಂದು ನಿಃಸ್ವಾರ್ಥವಾಗಿ ಹುಂಡಿಗೋ ಇನ್ನೆಲ್ಲಿಗೋ ಯಥಾ ಶಕ್ತಿ ದುಡ್ಡು/ಕಾಣಿಕೆ ಕೊಡುವುದರಲ್ಲೂ, ಸ್ವಸಂತೋಶ/ಸಮಾಧಾನ/ತೃಪ್ತಿಯ ’ಅನುಕೂಲವೇ’ ಇದೆ ಹೊರತು ಇದನ್ನು ವ್ಯರ್ಥವೆನ್ನಲಾಗದು.

  ನಮಗೆ ಇಷ್ಟವಿಲ್ಲದಿದ್ದರೂ, ನಮ್ಮನ್ನು ಕೇಳದೆಯೇ, ತಾವು ತಾವೇ ನಿರ್ಧರಿಸಿ ನಮ್ಮನ್ನಾಳುವವರ್ಯ್ ವ್ಯರ್ಥಮಾಡುವ ದುಡ್ಡನ್ನು ಬಡವರಿಗೆ ಹಂಚುವುದಕ್ಕೆ ನನ್ನ ಸಹಮತವಿದೆ.

  • ಆಸು ಹೆಗ್ಡೆ ಹೇಳುತ್ತಾರೆ:

   ಮಧು,

   ತಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.

   ಇಲ್ಲಿ ನಾನು “ಪೂಜಾರಿ” ಎನ್ನುವ ಪದವನ್ನು, ದೇವರ ಪೂಜೆ ಮಾಡುವ ಅರ್ಚಕರಿಗಷ್ಟೇ ಅಲ್ಲದೆ, ದೇವರು ಮತ್ತು ಭಕ್ತರ ನಡುವೆ ಹಾದುಹೋಗುವ ಎಲ್ಲಾ ಮಧ್ಯವರ್ತಿಗಳಿಗೆ ಬಳಸಿರುತ್ತೇನೆ, “ದೇವರು ಕೊಟ್ರೂ ಪೂಜಾರಿ ಬಿಡ” ಅನ್ನುವ ಮಾತನ್ನು ನೆನಪಿನಲ್ಲಿರಿಸಿಕೊಂಡು.

   ವಿವಿಧ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಖರ್ಚಾಗುತ್ತಿರುವ ಹುಂಡಿಯ ಹಣಕ್ಕಿಂತಲೂ, ಹುಂಡಿಗಳಲ್ಲೇ ಉಳಿದು ಕೊಳೆಯುತ್ತಿರುವ ಮತ್ತು ಅನರ್ಹರ ಪಾಲಾಗುತ್ತಿರುವ ಸಂಪತ್ತು ಇನ್ನೂ ಜಾಸ್ತಿ ಇದೆ ಎಂದು ನನ್ನ ಅನಿಸಿಕೆ.

   ಆ ದೃಷ್ಟಿಕೋನದೊಂದಿಗೇ ಹೊರಬಂದ ಆಸುಮನದ ಮಾತುಗಳಿವು. ಅಷ್ಟೇ.

   ಹಲಾವಾರು ಕಡೆ, ಆಹಾರ ಮತ್ತು ವಸತಿ ವ್ಯವಸ್ಥೆಗಳು ಧರ್ಮಾರ್ಥವಾಗಿವೆ ಅನ್ನುವುದನ್ನು ಒಪ್ಪಬಹುದಾದರೂ, ಹೆಚ್ಚಿನೆಲ್ಲಾ ದೇವಸ್ಥಾನಗಳ ವತಿಯಿಂದ ನಡೆಸಲ್ಪಡುವ ವಿದ್ಯಾಸಂಸ್ಥೆಗಳು ಸಾಕಷ್ಟು ದೇಣಿಗೆ ಹಣ ವಸೂಲಿ ಮಾಡುತ್ತಿವೆ ಅನ್ನುವುದೂ ಗಮನಾರ್ಹ.

 5. bhavaroop ಹೇಳುತ್ತಾರೆ:

  ಇಲ್ಲಿವರೆಗೂ ನನಗೆ ಅರ್ಥ ಆಗಿಲ್ಲ ಯಾವ ದೇವರು ನನಗೆ ಇದೆ ಬೇಕು, ಹೀಗೆ ಬೇಕು ಅಂತಾ ಕೇಳಿದ್ದಾನಾ ಅಥವಾ ಕೇಳ್ತಾನಾ???
  ಅವನೇನಿದ್ರು ಕೇಳೋದು ನಮ್ಮ ನಿಸ್ವಾರ್ಥ ಪ್ರೇಮವನ್ನು,ನಿಸ್ವಾರ್ಥ ಸೇವೆಯನ್ನ,ಮಾನವಿಯತೆಯನ್ನ ಆದ್ರೆ ನಾವು ಮನುಷ್ಯರು ಯಾವ ಮಟ್ಟಿಗೆ ಸ್ವಾರ್ಥಿ ಆಗಿದ್ದಿವಿ ಅಂದ್ರೆ
  ನಿಸ್ವಾರ್ಥ ಪದದ ಅರ್ಥವನ್ನೇ ಕಳೆದು ಕೊಂಡಿದ್ದೇವೆ, ಅದು ಯಾವ ಮಟ್ಟಕ್ಕೆ ಅಂದ್ರೆ ಯಾರದ್ರು ನಿಜ ಅರ್ಥದಲ್ಲಿ ನಿಸ್ವಾರ್ಥವಾಗಿ ಸಹಾಯ ಮಾಡಿದ್ರು ಅಂದರೆ ಅವರನ್ನ ಸಂಶಯ ದೃಷ್ಟಿಯಿಂದ ನೋಡ್ತೇವೆ…
  ಇದು ಮಾನವ ಜನ್ಮದ ವಿಪರ್ಯಾಸವೇ ಸರಿ …

  “ಮನುಷ್ಯ ತಾನು ಮಾಡಿದ ಪಾಪಕ್ಕೆ ಪುಣ್ಯ ಸಿಗಲೆಂದು ದೇವರ ಹುಂಡಿಗೆ ಕೋಟಿ ಕೋಟಿ ಸುರಿಯುವನು..
  ಅಲ್ಲಿಯೂ ಅವನಿಗೆ ಅವನದೇ ಸ್ವಾರ್ಥ , ಹೀಗಿದ್ದ ಮೇಲೆ ಮಾನವಿಯತೆಯ ಬಗ್ಗೆ ಆಗಿತೇ ಅರ್ಥ!!?
  ಯಾವ ದೇವನು ಕೇಳಲಾರನು ನಿನ್ನಿಂದ ಸಂಪತ್ತು..!!
  ಹಾಗು ಒಂದು ವೇಳೆ ಕೇಳಿದನಾದರೆ ಅವನು ನಮ್ಮಂತೆ ಹುಲುಮಾನವನಾಗಿ ತಂದುಕೊಳ್ಳುವನು ತನಗೆ ತಾನೆ ಆಪತ್ತು!!?
  ಕೊಡುವದಾದರೆ ಕೊಟ್ಟುಬಿಡು ಹಸಿದವನಿಗೆ ಹಿಡಿ ಅನ್ನ!!
  ಹಚ್ಚುವದಾದರೆ ಹಚ್ಚಿಬಿಡು ಮನಸ್ಸಿನಿಂದ ಮನಸ್ಸಿಗೆ ಕರಣಾಳು ದೀಪ…
  ಆಗಲಾದರೂ ಕಿಂಚಿತ್ತು ಶಾಂತವಾಗಿ ಮನಸ್ಸು ಅಂದುಕೊಂಡಿತು, ಆಯಿತು ಬದುಕು ಧನ್ಯ!!”

 6. Jayaprasad Rao ಹೇಳುತ್ತಾರೆ:

  ಬಡವರು ಯಾರು ?
  ಬಡವರಿಗೆ ಹಂಚುವ ಕಾರ್ಯ ನಡೆದರೆ, ನಮ್ಮೆಲ್ಲಾ ರಾಜಕಾರಣಿಗಳು ಬಡವರಾಗುತ್ತಾರೆ.

  • ಆಸು ಹೆಗ್ಡೆ ಹೇಳುತ್ತಾರೆ:

   ಎಲ್ಲಾ ಕ್ಷೇತ್ರಗಳಲ್ಲೂ ಈ ರಾಜಕಾರಣಿಗಳು ಅಥವಾ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದಾರೆ.
   ಆದರೂ ಕಿಂಚಿತ್ತು ಆಶಾಭಾವನೆಯನ್ನು ಹೊತ್ತು ಮುನ್ನಡೆಯುವ ಹಂಬಲ ಆಸುಮನಕ್ಕೆ.

   ತಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: