ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

ಸಖೀ,
ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆ
ಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದು

ದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟ
ಸಿಕ್ಕಿಬಿದ್ದಿಹನಿಂದಾತ ಸಖೀ ನೀನು ಇಲ್ಲದಂದು

ನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆ
ನನ್ನ ಜೊತೆಗಿರುವ ನೀನು ಬರೀ ನನ್ನವಳೆಂದು

ನಿನ್ನ ಮೇಲಧಿಕಾರ ನನಗಷ್ಟೇ ಎಂದು ನಾನು ತಿಳಿದಿದ್ದೆ
ಅರಿತೆ ನಿನ್ನ ಸೌಂದರ್ಯೋಪಾಸಕ ರಜನೀಶನಿರುವನೆಂದು

ಎಷ್ಟೇ ಮುಚ್ಚಿಟ್ಟು ಕೊಂಡರೂ, ಎಲ್ಲೇ ಅಡಗಿ ಕೂತಿದ್ದರೂ
ಆತನ ಕಣ್ಣುಗಳಿಂದ ಮರೆಯಾಗಿ ಇರಲಾರೆವೆಂದೂ

ಎಲ್ಲರದು ಅಧಿಕಾರ, ಎಲ್ಲರ ಮೇಲಿದ್ದರೂ ಏನಾದೀತಿಲ್ಲಿ
ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ
************

6 Responses to ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

 1. H. Anandarama Shastry ಹೇಳುತ್ತಾರೆ:

  ಇಷ್ಟೊಳ್ಳೆ ಕವನಗಳ ಬರೆಯಬಲ್ಲಿರಿ ನೋಡಿ ನೀವು
  ಆದರೆ ಮನಸ್ಸು ಮಾಡುತ್ತಿಲ್ಲವೆಂಬುದೇ ಎನಗೆ ನೋವು
  ನಿಮ್ಮೀ ಕವನಕ್ಕೆ ಮಧುಸೂದನರ ಪ್ರತಿಕವನ
  ಅದೂ ಮುದ ನೀಡುತ್ತದೆ; ಇಂದಿನ ದಿನ ಪಾವನ

  • ಆಸು ಹೆಗ್ಡೆ ಹೇಳುತ್ತಾರೆ:

   ಬರೆಯಲೆಂದೇ ಕೂತಾಗ ಬರೆದವರೆಷ್ಟೋ…
   ಮನತುಂಬಿ ಬಂದಾಗಲಷ್ಟೇ ಬರೆದವರೆಷ್ಟೋ…

   ಮನಸ್ಸು ಮಾಡಿದಾಗಲೆಲ್ಲಾ ಬರೆಯಲಾಗದು
   ಮನಸ್ಸಾದಾಗಲೆಲ್ಲಾ ಬರೆಯದೇ ಇರಲಾಗದು

   ಧನ್ಯವಾದಗಳು ನಿಮ್ಮ ಈ ಮೆಚ್ಚುಗೆಯ ನುಡಿಗಳಿಗೆ
   ನಿಮ್ಮೀ “ಪುಶ್” ಇರಲಿ “ಖುಶ್” ಆಗಿ ಬರೆಯಲೆನಗೆ

 2. ಮಧುಸೂದನ ಹೇಳುತ್ತಾರೆ:

  ಛೆ! ಸಣ್ಣ ವಿಷಯವನ್ನು ದೊಡ್ಡ ಸಮಸ್ಯೆಯಾಗಿಸಿಹಿರಿ
  ಆ ಅಮಾಯಕ ರಜನೀಶನ ಮೇಲೆ ಗೂಬೆ ಕೂರಿಸಿದಿರಿ

  ಕಿಟಕಿಗಳ ಕದ ಮುಚ್ಚಿ ಎಲ್ಲಾ ಪರದೆ ಎಳೆದುಬಿಡಿ
  ನಿಮ್ಮ ಸಖಿಯೊಡನೆ ಹಾಯಾಗಿ ಕೋಣೆಯೊಳಗಿದ್ದುಬಿಡಿ

  ಆ ರಜನೀಶನೂ ನೋಡಲಾರ ಈ ಸುರೇಶನ ಕಾರುಬಾರು
  ಅಧಿಕಾರ ಬಿಡಿ, ಇರದು ಆತನದು ಯಾವುದೇ ತಕರಾರು

  ಅದು ಬೇಡವೆಂದಿರೇ, ಆ ಶಶಾಂಕನಿಗೂ ಇಣುಕಗೊಡಿ
  ಖಂಡಿತವಾಗಿಯೂ ಆತನಲ್ಲ ಅಧಿಕಾರದಾಹಿ ಕೇಡಿ

  ಅದಕೆಂದೇ ಅಲ್ಲವೇ ನಾವನ್ನುವುದು ಮಧು-ಚಂದ್ರ?
  ಪ್ರೇಮಿಗಳ ನಡುವೆ ಮೂಗು ತೂರಿಸಲಾರ ಆ ಮುದ್ದು ಚಂದ್ರ

  ಆತನೇನಿದ್ದರೂ ನೀಡುವ ಸದಾ ತಂಪಾದ ಬೆಳದಿಂಗಳು
  ಸಖ-ಸಖಿಯರ ಪ್ರೇಮದ ಬಾಳು ಸುಂದರವಾಗಿ ಬೆಳಗಲು!

  • ಆಸು ಹೆಗ್ಡೆ ಹೇಳುತ್ತಾರೆ:

   ಮಧು,
   ಜೀವನದ ಸತ್ಯವನರುಹಿದರೆ ನೀವು ಸಮಸ್ಯೆಯೆಂದೆನುವಿರಲ್ಲಾ
   ನಿಜವಾಗಿ ಸತ್ಯಗಳೇ ಈಗೀಗ ಸಮಸ್ಯೆಗಳಾಗಿ ಕಾಣುವುದಲ್ಲಾ?

   ನಿಮ್ಮ ಇನ್ನುಳಿದ ಮಾತುಗಳಿಗೆ ನನ್ನ ಸಹಮತ ಇಲ್ಲವೆಂದೇನಿಲ್ಲ
   ನನ್ನ ಮಾತುಗಳು ಅಂತೆ, ನಿಮ್ಮ ಮಾತುಗಳು ಇಂತೆ ಇರಲಂತೆ

   ಧನ್ಯವಾದಗಳು ಕಾವ್ಯಮಯವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ!

 3. ksraghavendranavada ಹೇಳುತ್ತಾರೆ:

  ಬೆಳಿಗ್ಗೆಯ ಪೋಸ್ಟ್ ನಲ್ಲಿ ಕಾಣೆಯಾಗಿದ್ದ ಅಸುಮನದ ಲಯ ಈ ಪೋಸ್ಟ್ ನಲ್ಲಿ ಹಿ೦ತಿರುಗಿ ಬ೦ದ೦ತಿದೆ. ಮೆಚ್ಚಿಗೆಯಾಯಿತು.
  ಸಖಿಯನ್ನು ಬಳಸಿಕೊ೦ಡು ತಾವು ಹೇಳಿದ ಸ೦ದೇಶ ಮನ ಮುಟ್ಟುವ೦ತಿದೆ.
  ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: