ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ;

ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ;

ಭಾವನೆಗಳ ಬಾವಿಯೇ
ಬತ್ತಿ ಹೋಗಿರುವಂತಿದೆ
ಹೊಸ ಮಾತೇನೂ ಈ
ಮನದಿಂದ ಬಾರದಂತಿದೆ;

ತೋರುತಿದೆ ನಿರಾಸಕ್ತಿ
ಮನಸ್ಸು ಈಗ ಎಲ್ಲದಕೆ,
ಯಾರೋ ಕೈಯೆತ್ತಿ ಶಾಪ
ನೀಡಿದಂತಿದೆ ಈ ಮನಕೆ;

ಕ್ರಿಯೆಯೂ ಇಲ್ಲ, ಇಲ್ಲಿ
ಯಾವ ಪ್ರತಿಕ್ರಿಯೆಯೂ ಇಲ್ಲ,
ಯಾರು ಏನೆಂದರೂ ಇದು
ಹೊರಡಿಸುವುದೇ ಇಲ್ಲ ಸೊಲ್ಲ;

ಅದು ಯಾವುದೋ ಅವ್ಯಕ್ತ
ನಿರೀಕ್ಷೆ ಈ ಮನದೊಳಗೆ,
ಏನನ್ನೋ ಕೇಳಬಯಸುವ
ಆಸೆ ಇದೆ ನನ್ನೀ ಕಿವಿಗಳಿಗೆ;

ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;

ಹಾರಿ ಬಂದೀತು ಸಂದೇಶವನು
ಹೊತ್ತ ಪಾರಿವಾಳ ಸದ್ಯದಲೇ,
ಮನವ ತೆರೆದು ಸ್ಪಂದಿಸುವಂತೆ
ಮಾಡೀತು ನಾನು ಅರಿಯದಲೇ;

ಕಾಯುತ್ತೇನೆ ಆ ಶುಭಗಳಿಗೆಗೆ
ಚಾತಕ ಪಕ್ಷಿಯಂತೆ ಹಗಲಿರುಳು,
ಮತ್ತೆ ಕೇಳಿ ನೀವೀ ಆಸುಮನದಲ್ಲಿ
ದಿನವೂ ಹೊಸ ಹೊಸ ಮಾತುಗಳು!
*************

13 Responses to ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

 1. Shamala ಹೇಳುತ್ತಾರೆ:

  ಸುರೇಶ್…
  ನಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಕವನ ರೂಪದಲ್ಲೇ ಉತ್ತರ ಕೊಟ್ಟಿರುವ ನಿಮ್ಮ ಮನಕ್ಕೆಲ್ಲಿಯ ಅನಾವೃಷ್ಟಿ…. ನಿಮ್ಮ ಮನದ ಭಾವನೆಗಳ ಪುಷ್ಪ ವೃಷ್ಟಿ… “ಅನಾ” ಅಥವಾ “ಅತಿ” ಯಾವುದಾದರೂ ಸರಿ… ಅಂತೂ ಆಗುತ್ತಿರಲಿ ಸತತ. ನಿಮ್ಮ ಆತ್ಮೀಯರೆಲ್ಲರ ಪ್ರೀತಿಯ ಕಾಳಜಿ, ಮಾತುಗಳೋದಿ ನಿಜಕ್ಕೂ ಸಂತಸವಾಯಿತು…..
  ನಿಮ್ಮ ಹೇಮಕ್ಕ ನನ್ನನ್ನು ಭೇಟಿ ಮಾಡಲಿಚ್ಛಿಸಿರುವುದು ನನ್ನ ಸೌಭಾಗ್ಯ. ಆ ಆಸೆ ನನಗೂ ಇದೆ. ನೋಡೋಣ ನೀವೆಂದಂತೆ ಯಾವಾಗ ಕಾಲ ಕೂಡಿ ಬರುವುದೋ… !!! ಧನ್ಯವಾದಗಳು ನಾ ಬರೆದ ಕವನಕ್ಕೂ…!!! ಉತ್ತಮವಾಗಿಯೇ ಸ್ಪಂದಿಸಿದ ನಿಮಗೆ……

 2. ನಾಣಯ್ಯ ಡಿ.ಸಿ. ಹೇಳುತ್ತಾರೆ:

  ಅನಾವೃಷ್ಟಿಯಲ್ಲೂ ಮಳೆ ಸುರಿಸಿದ ನಿಮ್ಮ ಈ ಕವನ
  ಮಳೆಗೆ ಮೊಳಕೆಯೊಡೆದು ಸ್ಪಂದಿಸಿದ ಓದುಗರ ಮನ
  ಮುದ ನೀಡಿದೆ ಈ ಮಧುರ ಭಾವನೆಗಳ ಸಮ್ಮಿಲನ
  ಶ್ಲಾಘನೀಯರು, ನಿಮಗೆಲ್ಲಾ ನನ್ನ ಆತ್ಮೀಯ ನಮನ!

 3. Ravi ಹೇಳುತ್ತಾರೆ:

  ಉತ್ತಮ… ಅನಾವೃಷ್ಟಿಯಲ್ಲೇ ಅತಿವೃಷ್ಟಿ ಸೃಷ್ಟಿಸಿದ್ದೀರಿ. 😀

 4. ಹೇಮಲತಾ ದೇವಾಡಿಗ ಹೇಳುತ್ತಾರೆ:

  ಹೆಗ್ಡೆಯವರೇ,
  ಇಂತಹ ಅವಸ್ಥೆಯಲ್ಲೂ ಮನದ ಭಾವನೆಗಳು, ಮಾತುಗಳು ಕವನದ ರೂಪತಾಳಿವೆ.
  ನಮ್ಮ ಬಾಳಿನಲ್ಲೂ ಇಂತಹ ಅವಸ್ಥೆ ಹಲವಾರು ಬಾರಿ ಬಂದಿದೆ.
  ಆದರೆ ಕವನ ಮಾತ್ರ ಹೊರಬರಲೇ ಇಲ್ಲ.
  ಹ..ಹ..ಹ..
  ಚೆನ್ನಾಗಿದೆ.
  ಶ್ಯಾಮಲಾರವರ ಪ್ರತಿಕ್ರಿಯೆ ಕವನ ಓದಿ ಅವರನ್ನೊಮ್ಮೆ ಭೇಟಿ ಮಾಡಬೇಕೆಂಬ ಆಸೆ ಈ ಮನದಲ್ಲಿ ಎದ್ದಿದೆ.

  • ಆಸುಮನ ಸ್ವಂದಿಸಿದಾಗಲೆಲ್ಲಾ ಆಸುಮನದಲ್ಲಿನ ಮಾತುಗಳು ಕವನದ ರೂಪ ತಾಳುತ್ತವೆ.
   ಆಸುಮನದಲ್ಲಿನ ಸದ್ಯದ ಅನಾವೃಷ್ಟಿಗೂ ಈ ಆಸುಮನ ಸ್ಪಂದಿಸಿಲ್ಲ ಎನ್ನುತ್ತಲೇ ಒಂದು ರೀತಿಯಲ್ಲಿ ಸ್ಪಂದಿಸಿದ ಬಗೆ ಇದು.
   ನಿಮ್ಮ ಆಶಯಗಳಿಗೆ ಮತ್ತು ಆಸೆಗೆಳಿಗೆ ಕಾಲವೇ ಉತ್ತರ ನೀಡಿತು.
   ಆ ಆಸೆ ನನಗೂ ಇದೆ ಅದು ಸುಳ್ಳಲ್ಲ.
   🙂

 5. Sathya Charana S.M. ಹೇಳುತ್ತಾರೆ:

  ಹೆಗ್ಡೆಯವರೆ,
  ಬಹುಷಃ ಸ್ವಲ್ಪ ಎಲ್ಲಾದರೂ ಸುತ್ತಾಡಿ ಬಂದರೆ, ಸರಿಯಾಗಬಹುದು.
  ಅಂದರೆ, ಏಕತಾನತೆ ಕಾಡುತ್ತಿರಬಹುದು..
  ಯೋಚಿಸಿ ನೋಡಿ.. ಅಲ್ಲೇ ಉತ್ತರ ಸಿಗಬಹುದು..
  ನಿಮ್ಮನ್ನ ಹತ್ತಿರದಿಂದ ಬಲ್ಲವರ ಕೇಳಿ, ಮಾತನಾಡಿಸಿ ನೋಡಿ..
  ಉತ್ತರ ಸಿಗಬಹುದು.. !!

  ನಿಮ್ಮೊಲವಿನ,
  ಸತ್ಯ.. 🙂

  • ಆಸು ಹೆಗ್ಡೆ ಹೇಳುತ್ತಾರೆ:

   ಸತ್ಯ,
   ಈಗಷ್ಟೇ, ಆರು ದಿನ ನನ್ನ ಹುಟ್ಟೂರಿನಲ್ಲಿ ಅಮ್ಮ, ತಮ್ಮ ಮತ್ತು ಸಂಸಾರದ ಇತರ ಸದಸ್ಯರ ಜೊತೆಗಿದ್ದು ಬಂದಿದ್ದೇನೆ.
   ಅದ್ಯಾಕೋ ಗೊತ್ತಿಲ್ಲ. ಮನಸ್ಸನ್ನು ಏನೋ ಬೇಸರ ಕಾಡುತ್ತಿದೆ.
   ಸರಿಯಾಗಬಹುದು ಎನ್ನುವ ನಿರೀಕ್ಷೆ ನನಗೂ ಇದೆ.
   ನಿಮ್ಮ ಕಾಳಜಿಪೂರ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

 6. ಮಧುಸೂದನ ಹೇಳುತ್ತಾರೆ:

  ಸುರೇಶರೇ, ಎಲ್ಲಾ ಕವಿಗಳಿಗೂ ಇಂತಹ ಒಂದು ಅವಧಿ ಬರುವುದು ಸಹಜ ಅನ್ನಿಸುತ್ತದೆ. ಲಕ್ಷ್ಮೀನಾರಾಯಣ ಭಟ್ಟರಂತೆ ಒಂದು ಪ್ರಾರ್ಥನೆ ಸಲ್ಲಿಸಿಬಿಡಿ:
  ’ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ
  ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ’ ಅಂತ.

  ನಿಮ್ಮ ಭಾವಗಳು, ಅಕ್ಕ, ತಂಗಿ, ಅಣ್ಣ, ತಮ್ಮಂದಿರೆಲ್ಲರೂ ಸ್ಪಂದಿಸ್ತಾರೆ 🙂

  • ಆಸು ಹೆಗ್ಡೆ ಹೇಳುತ್ತಾರೆ:

   ಹೂಂ… ನಿಮ್ಮ ಮಾತು ನಿಜ ಮಧು,

   ನಾನು ಕೂಡ ಅದೇ ನಿಟ್ಟಿನಲ್ಲಿ, ಭಟ್ತರನ್ನು ನೆನೆಸಿಕೊಂಡು, ಯೋಚಿಸುತ್ತಿದ್ದೆ.
   🙂
   ನೋಡೋಣ…

   ಕತ್ತಲಳಿದ ಮೇಲೆ ಬರಲೇಬೇಕು ಬೆಳಕು
   ಬಿಸಿಲ್ಗಾಲದ ನಂತರ ಮಳೆ ಸುರಿಯಲೇ ಬೇಕು

 7. Shamala ಹೇಳುತ್ತಾರೆ:

  ಸುರೇಶ್ ಕವನ ಚೆನ್ನಾಗಿದೆ…… ಅದ್ಯಾಕೋ ನಿಮ್ಮ ಮನಸ್ಸು ಉದಾಸವಾಗಿದೆಯಲ್ಲಾ… ನಿಮ್ಮ ಕವನ ಓದಿ ನನಗೆ ಅನ್ನಿಸಿದ್ದು…. ನಿಮ್ಮ ಸಂದೇಶದ ಪಾರಿವಾಳ ಬರುವವರೆಗೂ.. 🙂 ಸ್ವಲ್ಪ morale boost ಮಾಡೋಕ್ಕೆ…..

  ಆಸು ಮನವೇಕೆ ಮೌನದ ಮನೆಯಾಗಿದೆ :

  ಭಾವ ಸೊಲ್ಲೆತ್ತದಿದ್ದಾಗಲೂ
  ಮನ ನಿಲ್ಲಿಸದು ತನ್ನ ರಾಗ
  ಎಂಬ ಮಾತು
  ಸತ್ಯವಾಗಿರುವಾಗ….
  ಅದಾರ ಕೈ ಶಾಪಕೆ
  ಮೌನ ತಟ್ಟಿದೆ
  ಆಸು ಮನಕೆ….

  ಭಾವಕ್ಕಿರುವುದಿಲ್ಲ
  ಯಾವ ನಿರೀಕ್ಷೆಯೂ…
  ಕ್ರಿಯೆ ಇದ್ದರಲ್ಲವೇ
  ಪ್ರತಿಕ್ರಿಯೆಗಳೂ..

  ಕಿವಿ ಕೇಳಬಯಸುವುದು
  ಬರಿಯ ಲೌಕಿಕ..
  ಅಲೌಕಿಕವಲ್ಲ…
  ಸ್ಪಂದಿಸುವ ಹೃದಯಕ್ಕೆ
  ಕಾರಣವೇ ಬೇಕಿಲ್ಲ…

  ಸಂದೇಶದ ಪಾರಿವಾಳ
  ಅಡಗಿದೆ ಆಸು ಮನದಲ್ಲೇ…
  ಆದರೂ ಅದೇಕೋ
  ಕಾಣದಾಗಿದೆಯಲ್ಲಾ
  ಆಸು ಮನ…..
  ಉದಾಸದಲ್ಲೇ…….. ?

  • ಅಬ್ಬಬ್ಬಾ…

   ಆಸುಮನದ ಓದುಗರೆಲ್ಲಾ ಭಾವಯಾನದ ಸಹಪಯಣಿಗರೇ…
   ಆಸುಮನ ಮೌನವಾದರೆ ತಟ್ಟಿ ಎಬ್ಬಿಸಿ ಹುರಿಸುಂಬಿಸುವವರೇ…

   ನಿಮ್ಮ ಈ ಕಾವ್ಯ ಪ್ರತಿಕ್ರಿಯೆ ಮುದನೀಡಿತು ಈ ಆಸುಮನಕೆ
   ಪ್ರೋತ್ಸಾಹದ ಚಿಲುಮೆ ಜೀವಂತವಿರಲು ನನಗಿರದಿನ್ನು ಅಂಜಿಕೆ

   ಧನ್ಯವಾದಗಳು ಶ್ಯಾಮಲಾ…!
   🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: