ಮುಂಜಾನೆಯೇ ಕರೆಮಾಡಿ ವಿಚಾರಿಸಿದಳು, ದೂರದೂರಿನ ಆ ಅಭಿಮಾನಿ,
“ಯಾಕೆ ಮೊನ್ನೆಯಿಂದ ಏನೂ ಬರೆದೇ ಇಲ್ವಲ್ಲಾ, ನನಗೇನೋ ಗುಮಾನಿ”,
“ಛೇ.. ಗುಮಾನಿ ಯಾಕೆ? ಬರೆಯಲಾಗಿಲ್ಲ, ಹಾಗಾಗಿ ನಾನೇನೂ ಬರೆದಿಲ್ಲ ,
ನಿಜ ಹೇಳಬೇಕೆಂದರೆ ವಾರಾಂತ್ಯದಲಿ ನಾನೆಂದೂ ಹೆಚ್ಚಾಗಿ ಬರೆದೇ ಇಲ್ಲ,
ಇನ್ನು ಇಂದಿನ ಮಾತೇಕೆ ಹೇಳಿ, ಇಂದು ಇನ್ನೂ ಬಾಕಿಯಿದೆ, ಸಂಜೆಯಾಗಿಲ್ಲ,
ಸಂಜೆಯೊಳಗೆ ಏನಾದರೂ ನಾ ಬರೆದೇನು, ನೋಡಿ ನೀವು ಕಾಯ್ತೀರಲ್ಲಾ?”,
“ಹಾಗೇನಿಲ್ಲ, ನಿಮ್ಮ ಕವಿತೆಗಳಿಗೇ ಕಾಯುತ್ತೇನೆಂದು ತಿಳಿದು ಪಡದಿರಿ ಹೆಮ್ಮೆ,
ಸುಮ್ಮನೇ ಅಂತರ್ಜಾಲದಲಿ ಸುತ್ತಾಡುವಾಗ ಕಣ್ಣಾಡಿಸಿದೆ ಆಸುಮನದಲಿ ಒಮ್ಮೆ,
ದಿನಕ್ಕೆರಡರಂತೆ ಬರೆಯುವವರು, ಇಂದೇನೂ ಬರೆದಿಲ್ಲ ಎನ್ನುವ ಪ್ರಶ್ನೆ ಮೂಡಿತು,
ಹಾಗೇ ಕರೆಮಾಡಿದೆ, ನಿಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದಂತೆಯೂ ಆಯಿತು”
“ನಿಮ್ಮೀ ಅಭಿಮಾನ, ಅದುವೇ ನನ್ನಲ್ಲಿ ಮೂಡಿಸುವುದು ಬಿಗುಮಾನ, ಕೃತಜ್ಞ ನಾನು,
ಏನು ಮಾಡುವಿರೋ, ಒಂದೊಮ್ಮೆ ಯಾರಿಗೂ ಹೇಳದೇ ತೆರಳಿ ಬಿಟ್ಟರೆ ನಾನು?
ನಾನಿಲ್ಲದ ದಿನ ಪ್ರಕಟಿಸುವಂತೆ, ಒಂದು ಕವನವ ಬರೆದು ಬಚ್ಚಿಡಲೇ ನಾನು ಇಂದೇ?
ಕಾಯುವ ನನ್ನವರ ಹೆಚ್ಚು ಕಾಯಿಸದಂತೆ ಪ್ರಶ್ನೆಗಳಿಗೆ ಉತ್ತರವ ಕೊಟ್ಟಿಡಲೇ ನಂದೇ?”
“ಛೆ…ಛೆ… ಬಿಡ್ತು ಅನ್ನಿ, ಸಾವಿನ ಮಾತೇಕೆ ಆಡುವಿರಿ, ಮನದಲ್ಲಿ ತುಂಬಿದೆಯೇ ವಿರಸ?
ಮನದಲ್ಲಿದ್ದರೆ ಬೇಸರ, ಆ ಬೇಸರವ ಕಳೆಯಲೆಂದೇ ಬರೆದು ಬಿಡಿ ಕವಿತೆ, ತುಂಬಿ ಸರಸ”
“ಯಾಕೆ ಹೆದರುವಿರೋ ನೀವೆಲ್ಲಾ ಸಾವಿನಾ ಮಾತಿಂದ, ಸಾವೊಂದೇ ಅಲ್ಲವೇ ಖಾತ್ರಿ?
ಯಾರು ಹೇಳುವರು ಮುಂಜಾನೆ ಏಳುವೆನೆಂದು, ಮಲಗುವ ಮೊದಲು ಪ್ರತೀ ರಾತ್ರಿ?”
*********************************
ತುಂಬಾ ಸೊಗಸಾಗಿದೆ.
ಕವನದ ವಿಷಯವನ್ನು ಕಂಡು ನಾನು ಬೆರಗಾದೆ,
ದೊಡ್ಡ ದೊಡ್ಡ ಕವಿಗಳ ಲಕ್ಷಣವನ್ನು ನಿಮ್ಮಲ್ಲಿ ಕಂಡೆ