ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!

12 ಮೇ 10

  

ತತ್ವ ಆದರ್ಶದ ಹಿತನುಡಿಗಳು

ಗಾದೆಗಳೆಲ್ಲಾ ಬರಿಯ

ದೂರವಾಣಿ ಸಂದೇಶಗಳಾಗಿ

ಉಳಿದುಬಿಟ್ಟಿವೆ

 

ತಮಗೆ ಸಹಕಾರಿಯಾಗಿ

ಇರುವುದಕ್ಕಿಂತಲೂ ಹೆಚ್ಚಾಗಿ

ಮುಂದಿನ ಮನೆಯಂಗಳಕೆ

ತಳ್ಳಿಬಿಡುವ ಸರಕುಗಳಾಗಿ ಬಿಟ್ಟಿವೆ

 

ರಾತ್ರಿ ಬೇಗ ಮಲಗುವುದು

ಒಳ್ಳೆಯದು ಎಂದೆನ್ನುವ

ಸಂದೇಶಗಳೂ ಅಪರಾತ್ರಿಯಲ್ಲಿ

ನಮ್ಮ ನಿದ್ದೆಗೆಡಿಸುತ್ತವೆ!!!

****


ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?

11 ಮೇ 10

 

 

ವಿಶ್ವ ಅಮ್ಮಂದಿರ ದಿನದಂದು ನಾನು

ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ

 

ಅವರದ್ದು “ಯಾವಾಗ ಬರ್ತೀಯಾ?”

ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ

 

ಎಲ್ಲಾ ಮಾತ ಮುಗಿಸಿದರೂ ನನ್ನಿಂದ

“ಇಂದು ನಿಮ್ಮ ದಿನ” ಎಂದು ಹೇಳಲಾಗಲಿಲ್ಲ

 

ನನ್ನ ದಿನಗಳೆಲ್ಲಾ ಆ ಅಮ್ಮನ ದಿನಗಳೇ

ಅನ್ನುವ ಭಾವನೆಯಿಂದ ಹೊರಬರಲಾಗಲಿಲ್ಲ

 

ವರ್ಷಕ್ಕೊಂದೇ ಬಾರಿ ಬರಲೇಕೆ ಹೇಳಿ

ನಮಗೆ ಜನ್ಮ ನೀಡಿರುವ ಅಮ್ಮಂದಿರ ದಿನ

 

ನಮ್ಮ ಅಮ್ಮಂದಿರ ಕೊಡುಗೆಯಲ್ಲದೆ ಬೇರೆ

ಇನ್ನೇನು ನಮ್ಮೀ ಬಾಳಿನ ಪ್ರತಿಯೊಂದು ದಿನ?

*****

 


ಗಲ್ಲು ಶಿಕ್ಷೆ ಸಾಲದು!

06 ಮೇ 10

 

ಕಸಾಯಿಖಾನೆಯಲ್ಲಿನ ಕಟುಕನಂತೆ

ವರ್ತಿಸಿ, ನರ್ತಿಸುತ್ತಿದ್ದ ಕಸಬನಿಗೆ ಗಲ್ಲು ಶಿಕ್ಷೆಯಂತೆ

 

ಅಮಾಯಕರನ್ನೆಲ್ಲಾ ಚಿತ್ರಹಿಂಸೆಕೊಟ್ಟು

ಪೀಡಿಸಿ ಕೊಂದವನಿಗೆ ಆರಾಮದ ಈ ಸಾವಂತೆ

 

ಅಳಿದವರ ನೆನೆಯುವಾಗ ಮರಣದಂಡನೆಯೇ

ಸೂಕ್ತ ಎಂದು ಎಲ್ಲರೂ ಹೇಳಬಹುದು ಅದು ಗೊತ್ತು

 

ಮಾಡಿದ ಪಾಪಕ್ಕೆ ಮರುಗುತ್ತಾ ಜೀವಿಸುವ

ಪರ್ಯಾಯ ವ್ಯವಸ್ಥೆಯ ಅಗತ್ಯ ಇಲ್ಲವೇ ಈ ಹೊತ್ತು?

 

ಸಾವಿಗಿಂತಲೂ ಶೋಚನೀಯ ಬದುಕಿನ

ವ್ಯವಸ್ಥೆಯೊಂದು ಆಗಬೇಕು ಇಂತಹ ಪಾಪಿಗಳಿಗೆ ಇಲ್ಲಿ

 

ತಮ್ಮ ಪಾಪಕರ್ಮಗಳಿಗಾಗಿ ಕ್ಷಣ ಕ್ಷಣವೂ

ಕೊರಗುತ್ತಾ ದಿನಕಳೆಯುವಂತಾಗಬೇಕು ಜೈಲಿನಲ್ಲಿ

 

ಗಲ್ಲು ಶಿಕ್ಷೆ ಒಮ್ಮೆಗೇ ಎಲ್ಲವನೂ ಮುಗಿಸಿ

ಮುಕ್ತಿಯನು ನೀಡಬಹುದು ಆ ಪಾಪಿ ಆತ್ಮಗಳಿಗೆ

 

ಪ್ರತಿ ಗಳಿಗೆಯೂ ಸಾವನ್ನೇ ಬೇಡುವಂತೆ

ರುದ್ರ ಭಯಂಕರ ಶಿಕ್ಷೆಗಳನ್ನು ನೀಡಬೇಕು ಪಾಪಿಗಳಿಗೆ!

 ***********


ವಾಸ್ತವ!

06 ಮೇ 10

 

ಸಖೀ

ಏಕಾಂತದಲ್ಲಿದ್ದಾಗ

ನಮ್ಮ ಮನದಲೇಳುವ

ಭಾವನೆಗಳ ಅಲೆಗಳನು

ಸ್ವತಂತ್ರವಾಗಿರಲು

ಬಿಟ್ಟುಬಿಡೋಣ

ಗರಿಗೆದರಿ ಹಾರಲಿಚ್ಚಿಸುವ

ಬಯಕೆಗಳ ಹಕ್ಕಿಗಳನು

ನಮ್ಮ ಕಲ್ಪನೆಯ ಆಗಸದಲಿ

ಹಾರಬಿಡೋಣ

 

ನಿಜಕ್ಕೂ ಅದರಿಂದೊಂದು

ತೆರನಾದ ಆನಂದವಾಗುತ್ತದೆ

ಯಾವುದೇ ಭಯಾತಂಕಗಳಿಲ್ಲದೇ

ಸ್ವಚ್ಚಂದವಾಗಿ, ಎಲ್ಲೆ ಮೀರಿ

ಸುತ್ತಿ ಬರುವ ಆ ಹಕ್ಕಿಗಳು

ನಮ್ಮ ಮನಕೆ ಮುದ ನೀಡುತ್ತವೆ

 

ನಮ್ಮದೇ ಕಲ್ಪನಾ ಲೋಕ

ನಮಗಿಷ್ಟವಾದ ಜನರೇ

ಅಲ್ಲಿ, ನಮ್ಮ ಸುತ್ತ ಮುತ್ತ

ಅಲ್ಲಿ ಕೇಳಿ ಬರುತ್ತವೆ

ನಮಗಿಷ್ಟವಾದ

ಮಾತುಗಳೇ ಅತ್ತ – ಇತ್ತ

 

ಒಂದೆಡೆ ವಿರಹದ

ನೋವಿದ್ದರೂ ಆಗ

ಅದೆಂತಹ ಆನಂದ

ಆದರೆ ಮಿಲನದಲಿ

ನಮಗೆ ಬರೇ

ಭಯ – ಆತಂಕಗಳಲ್ಲದೇ

ಎಲ್ಲಿದೆ ಆನಂದ?

 

ಮುಖಾಮುಖಿಯಾದಾಗ

ಒಬ್ಬರನ್ನೊಬ್ಬರು ಮನಸಾರೆ

ನೋಡಲಿಚ್ಚಿಸುವ ಕಣ್ಣುಗಳಿಗೆ

ಸದಾ ಇರುತ್ತದೆ ಈ ಸಮಾಜದ

ಹದ್ದು ಕಣ್ಣುಗಳ ಭಯ

ಮನಬಿಚ್ಚಿ ಮಾತನಾಡಲು

ಇಚ್ಚಿಸುವ ನಮ್ಮ

ನಾಲಿಗೆಗಳಿಗೆ, ಕಿವಿಗಳಾಗಿ,

ನಮ್ಮ ಮಾತುಗಳನಾಲಿಸುವ

ಸುತ್ತಲಿನ ಗೋಡೆಗಳ ಭಯ

 

ನಿಜ ನುಡಿಯಲೇ ಸಖೀ

ಇದೇ ವಾಸ್ತವ

ಇದೇ ನಿತ್ಯ ಸತ್ಯ

ಇಂದೂ – ಮುಂದೆಂದೂ!

**************


ಮರುಳುಕವಿ ಎನ್ನುವೆಯಾ ನೀನು?

05 ಮೇ 10

 

 

ಸಖೀ

ಅಳುತ್ತಿದ್ದ ನಿನ್ನನ್ನು

ಸಂತೈಸಲು ಯತ್ನಿಸದೇ

ಸುಮ್ಮನೇ ನಿಂತಿದ್ದ

ನನ್ನನ್ನು ನಿಷ್ಕರುಣಿ

ಎನ್ನುವೆಯಾ ನೀನು?

 

ಅಲ್ಲಾ,

ಅಳುತ್ತಿದ್ದರೂ

ಹೆಚ್ಚುತ್ತಿದ್ದ

ನಿನ್ನ ಅಂದವನು

ಕಣ್ಣುಗಳಿಂದಲೇ

ಸವಿಯುತ್ತಾ

ಬಣ್ಣಿಸಲು

ಮನದಲ್ಲಿ ಶಬ್ದಗಳ

ಹೆಣೆಯುತಿದ್ದ

ನನ್ನನ್ನು

ಮರುಳುಕವಿ

ಎನ್ನುವೆಯಾ ನೀನು?

*****


ನೀ ಪ್ರೀತಿಸುವ ಪರಿ!

04 ಮೇ 10

 

ನಾ ತಿಳಿದಿದ್ದೆ

ನನ್ನ ಪ್ರೀತಿಯಷ್ಟೇ

ಪ್ರೀತಿಯೆಂದು

ನಾ ಪ್ರೀತಿಸುವ

ಪರಿಯೇ ಸರಿಯೆಂದು

ಆದರೆ ಈಗ ನೀನು

ನನ್ನ ಪ್ರೀತಿಸುವ

ಈ ಪರಿಯ ಕಂಡು

ನನಗರಿವಾಗಿದೆ

ನನ್ನ ಪ್ರೀತಿ

ಎಷ್ಟು ಟೊಳ್ಳೆಂದು

 

 ನನ್ನ ಪ್ರೀತಿಯಲೂ

ಸ್ವಾರ್ಥವಿದೆ

ನಾ ಪ್ರೀತಿಸುವವರಿಂದ

ಒಳ್ಳೆಯ ಮಾತು

ಕೇಳುವ ಬಯಕೆ ಇದೆ

ಮನ ನೋಯಿಸಿಕೊಳ್ಳುವ

ಜಾಯಮಾನವೂ ಇದೆ

 

ಆದರೆ ಸಖೀ

ನೀನು ನನ್ನಂತಲ್ಲ

ನಿನ್ನ ಪ್ರೀತಿಯೂ

ನನ್ನ ಪ್ರೀತಿಯಂತಹುದಲ್ಲ

ನಿನ್ನಲ್ಲಿ ಸ್ವಾರ್ಥವನು

ಎಳ್ಳಷ್ಟೂ ಕಂಡಿಲ್ಲ

 

ನನ್ನ ನೀ ಪ್ರೀತಿಸುತಿರುವೆ

ನನ್ನ ಪ್ರೀತಿಯ ಬಯಸದೆಯೇ

ನಿನ್ನ ಪ್ರೀತಿಯ ನನ್ನ ಅರಿವಿಗೆ

ತರುವ ಗೋಜಿಗೆ ಹೋಗದೆಯೇ!

*****

 


ಆಕಾಶ – ಭೂಮಿ!

04 ಮೇ 10

 

ಸಖೀ,

ನೀ ನಿಜವನ್ನೇ ನುಡಿದೆ

ನೀ ಭೂಮಿಯಾದರೆ

ನಾ ಆಕಾಶವೆಂದೆ!

 

 

ಭೂಮಿ ಆಕಾಶವನ್ನು

ಮುಟ್ಟುತ್ತಿದೆಯೆಂದೂ

ಆಕಾಶ ಭೂಮಿಯನ್ನು

ಎಲ್ಲಾ ಕಡೆಯಿಂದಲೂ

ತಬ್ಬಿಕೊಳ್ಳುತ್ತಿದೆಯೆಂದೂ

ಎಲ್ಲರಿಗೂ ಅನ್ನಿಸುತ್ತಿರುವುದು

ಅದು ಬರೀ ಭ್ರಮೆಯಷ್ಟೆ!

 

 

ಭೂಮಿ ಆಕಾಶಗೆಳೆಂದೂ

ಒಂದಾಗುವುದೇ ಇಲ್ಲ

ಅಂತೆಯೇ ನಾವೂ ಕೂಡ

ಇದೂ ಸರಿಯಷ್ಟೆ?

 

 

ಆದರೂ ಸಖೀ,

ಆ ಆಕಾಶದೊಳಗೇ

ಈ ಭೂಮಿಗಿದೆ ನೆಲೆ

ಈ ಭೂಮಿಯಿದ್ದರಷ್ಟೇ

ಆ ಆಕಾಶಕ್ಕೂ ಬೆಲೆ!

*****


ನಿನ್ನ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ನೋಡು!

03 ಮೇ 10

 

ಇಂದಿನ ಶುಭೋದಯದ

ಸಂದೇಶ ಏಕೋ ಸಪ್ಪೆಯೆಂದೆನಿಸಿತು

 

ನಿನ್ನ ಮನದಲ್ಲಿ ನೆಮ್ಮದಿ ಇಲ್ಲ

ಎಂಬ ಭಾವನೆ ನನ್ನನ್ನು ಆವರಿಸಿತು

 

ಅದು ನಿಜವೋ ಸುಳ್ಳೋ

ಎಂಬ ಪ್ರಶ್ನೆ ಮಾಡಿದೆ ನಾನಿನಗೆ

 

ಊಹೆ ನಿಜವಾದ ಸಂತಸದ

ಜೊತೆಗೆ ಈಗ ಬೇಸರವೂ ಇದೆಯೆನಗೆ

 

ನಿನ್ನ ಮನದ ದುಗುಡಕ್ಕೆ

ಕಾರಣ ಏನೆಂದು ನಾ ಕೇಳುವುದಿಲ್ಲ

 

ಯಾರಿಂದಾಗಿ, ಯಾಕಾಗಿ ಎಂಬ

ಪ್ರಶ್ನೆಗಳ ಸುರಿಮಳೆಗೈಯುವುದಿಲ್ಲ

 

ಕೆದಕಿದಷ್ಟೂ ಮನದ ದುಗುಡ

ಹೆಚ್ಚಾಗಬಹುದು ಎಂಬುದ ನಾಬಲ್ಲೆ

 

ಅದಕೇ ನಾ ಬೇರೇನನ್ನೂ

ಕೇಳದೇ ಈಗ ಮೌನವಾಗಿರುವೆನಲ್ಲೇ

 

ಕದಡಿದ ಕೊಳದ ನೀರನ್ನು

ಮುಟ್ಟದೇ ಬಿಟ್ಟರಷ್ಟೇ ತಿಳಿಯಾಗಬಹುದು

 

ಕಾಲದ ಮಾಯೆಯಿಂದ ನೋಡು

ಮನದ ದುಗುಡವೂ ಮರೆಯಾಗಬಹುದು

 

ನಿನಗಿಷ್ಟವಾದಾಗ ಮನದ ಮಾತ

ಹಂಚಿಕೊಂಬ ನಿರ್ಧಾರ ನೀನು ಮಾಡು

 

ನಿನ್ನ ಕಡೆಯಿಂದ ಬರುವ ಮುಂದಿನ

ಸಂದೇಶಕ್ಕಾಗಿ ನಾ ಕಾಯುತ್ತಿದ್ದೇನೆ ನೋಡು!!!

 

****************************


ಹೆಣ್ಣು-ಹೊನ್ನು-ಮಣ್ಣು ಈ ಮೂರಕ್ಕೂ ಸೋಲುತ್ತಿದ್ದಾರೆ ನಾಯಕರು!!

03 ಮೇ 10

 

ಅನುಮಾನಾಸ್ಪದ ರೀತಿಯಲ್ಲಿ ಅಂದು ರಘುಪತಿ ಭಟ್ರ ಪತ್ನಿಯ ಸಾವು

ನರ್ಸ್-ರೇಣುಕಾಚಾರ್ಯರ ಕತೆಯಿಂದ ಎಲ್ಲರಿಗೂ ಬಂತು ತಲೆನೋವು

 

ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದ ಸಂಪಂಗಿಯದು ನಿರ್ಲಜ್ಜ ಕಥೆ

ಮಹಿಳಾ ಮಂತ್ರಿಯ ಕೈಬಿಡಬೇಕಾದುದರ ಹಿಂದೆಯೂ ಇತ್ತಲ್ಲ ವ್ಯಥೆ

 

ರಾಜ್ಯದ ಗಣಿಸಂಪತ್ತನ್ನು ಅಕ್ರಮವಾಗಿ ಸೂರೆಮಾಡೋ ಮಂತ್ರಿಗಳು ಅಲ್ಲಿ

ತನ್ನ ಸ್ನೇಹಿತನ ಪತ್ನಿಯನ್ನೇ ಅತಿಕ್ರಮಿಸಿ ಕೆಡಿಸಿದ ಈ ಮಂತ್ರಿಯ ಕತೆ ಇಲ್ಲಿ

 

ಅಂದು ಎಲ್ಲರಿಗೆ ನೈತಿಕತೆಯ ಪಾಠ ಹೇಳಿಕೊಂಡು ತಿರುಗುತ್ತಿತ್ತು ಆ ಪಕ್ಷ

ಇಂದು ಅದೇ, ಅನೈತಿಕತೆಗೆ ಉದಾಹರಣೆಯಾಗಿ ನಿಂತಿಹ ದೊಡ್ಡ ಪಕ್ಷ

 

ಬಹುತೇಕ ಜನರ ಹಲವು ದಿನಗಳ ಕನಸಾಗಿತ್ತು ಈ ಭಾಜಪ ಸರಕಾರ

ಅದೇ ಜನರ ಕನಸನ್ನು ನುಚ್ಚು ನೂರಾಗಿಸುವಂತಿಹುದು ನಮ್ಮಗ್ರಹಚಾರ

 

ಹೆಣ್ಣು-ಹೊನ್ನು-ಮಣ್ಣು ಇವು ಮೂರಕ್ಕೂ ಸೋಲುತ್ತಿದ್ದಾರೆ ನಮ್ಮೀ ನಾಯಕರು

ತನ್ನದು ಪರರದು ಎನ್ನದೇ, ಅತಿಕ್ರಮಿಸಿ ತಮ್ಮದಾಗಿಸಿಕೊಂಬ ಹುಂಬರು!!!

*********