ರಾತ್ರಿಗೇ “ಶುಭರಾತ್ರಿ”!

24 ಮೇ 10

 

ವಧೂವರರ

ಮೊದಲ ರಾತ್ರಿ

ಕೋಳಿ ಕೂಗಿನ

ಸದ್ದು ಕೇಳಿಸಿದಾಗ,

ರಾತ್ರಿ ಹೇಳಿತು

ಕ್ಷಮಿಸಿ

ನನಗೇಕೋ

ಜೊಂಪೇರುತ್ತಿದೆ

ನಾನಿನ್ನು ನಿದ್ರಿಸುತ್ತೇನೆ,

ಸರಿಯೆಂದ

ವಧೂವರರು,

ರಾತ್ರಿಗೇ

ನುಡಿದರು “ಶುಭರಾತ್ರಿ”!

**********


ಸುಸ್ತಾದ ಹಾದಿ!

24 ಮೇ 10
 
ನಾನು

ನಡೆಯುತ್ತಲೇ ಇದ್ದೆ

ನನ್ನ ಜೊತೆ ಜೊತೆಗೆ

ಸಾಗಿದ್ದ ಹಾದಿ ಕೇಳಿತು

ನಾವೀಗ

ಸ್ವಲ್ಪ ವಿರಮಿಸೋಣವೇ…

ನನಗೇಕೋ

ತುಂಬಾ ಸುಸ್ತಾಗಿದೆ!

******


ನಿರಪರಾಧಿಯಾಗಿದ್ದುದೇ ಅಪರಾಧ!

21 ಮೇ 10

 

ಜೀವನದ ಅರ್ಥ ನನಗಾದಾಗ ಜೀವನದಿಂದಲೇ ದೂರ ಬಂದಾಗಿತ್ತು

 ಸಾವಿನ ಬಯಕೆ ನನಗಾಗಿದ್ದಾಗ ಬದುಕು ಅನಿವಾರ್ಯವಾಗಿ ಬಿಟ್ಟಿತ್ತು

 

ಒಮ್ಮೆಯೂ ಸೊಲ್ಲೆತ್ತದೆ ಶಿಕ್ಷೆಗಳೆಲ್ಲವನ್ನೂ ಶಿರಬಾಗಿ ಸ್ವೀಕರಿಸಿದ್ದಾಗಿತ್ತು

ನನ್ನ ಅಪರಾಧ ಏನೆಂದರೆ ನಾನು ನಿರಪರಾಧಿಯಾಗಿ ಇದ್ದುದೇ ಆಗಿತ್ತು

****


ಭಾಗ್ಯಶಾಲಿ ನಾನಲ್ಲ…!

21 ಮೇ 10

 

ದಿನವೂ ಭೇಟಿಯಾಗುವವರೆಲ್ಲಾ

ಈ ಹೃದಯಕ್ಕೆ ಹತ್ತಿರದವರೆಂದೇನೂ ಅಲ್ಲ

 

ಈ ಹೃದಯಕ್ಕೆ ಹತ್ತಿರವಿರುವ ಹೆಚ್ಚಿನವರು

ಅದ್ಯಾಕೋ ದೂರವೇ ಇರುವರೆಲ್ಲಾ

 

 ಮನದ ಮಾತಿದು ಸಖೀ,

ದಿನಾ ನಿನ್ನನ್ನು ಭೇಟಿಯಾಗುವವರಷ್ಟು

ಭಾಗ್ಯಶಾಲಿ ನಾನಲ್ಲ…!

*****


ಧನ್ಯವಾದದ ಮಾತು ಬೇಡ, ಬಿಡು!

21 ಮೇ 10

 

 

ವಿಶೇಷ ವ್ಯಕ್ತಿಗಳೊಂದಿಗೇ ನನ್ನ ಸ್ನೇಹ ಆಗುವುದಲ್ಲ

ನನ್ನ ಸ್ನೇಹಗಳಿಸಿ ವಿಶೇಷ ವ್ಯಕ್ತಿಗಳಾಗುವರೆಲ್ಲಾ

 

ನೀನೂ ಜನಿಸಿದ್ದೆ ಸಾಮಾನ್ಯ ವ್ಯಕ್ತಿಯಾಗಿ

ವಿಶೇಷ ವ್ಯಕ್ತಿಯಾದೆ ನನ್ನ ಸ್ನೇಹಿತೆಯಾಗಿ

 

ಈಗ ಧನ್ಯವಾದದ ಮಾತಾಡಬೇಡ ಬಿಡು

ನನಗೋ ಇದು ಮಾಮೂಲು ನೀ ನೋಡು!

*****


ದಿಲ್ಲೀ ಸರಕಾರ ಏಕಿರಬೇಕು ಅಧಿಕಾರದಲ್ಲಿ?

21 ಮೇ 10

 

ಅಫ್ಜಲ್ ಗುರುವಿಗೆ ಗಲ್ಲುಶಿಕ್ಷೆ ನೀಡಿದರೆ ಕೋಮು ಗಲಭೆ ಆಗಬಹುದಂತೆ ದಿಲ್ಲಿಯಲ್ಲಿ

ಶೀಲಾ ದೀಕ್ಷಿತ್ ಹೇಳ್ತಾರೆ ಆತನನ್ನು ನೇಣಿಗೇರಿಸದೇ ಜೀವಂತ ಇರಿಸೋಣ ಜೈಲಿನಲ್ಲಿ

 

ಕಾನೂನು ಮತ್ತು ಶಿಸ್ತುಪಾಲನೆ ಮಾಡಲಾಗದ ಸರಕಾರ ಏಕಿರಬೇಕು ಅಧಿಕಾರದಲ್ಲಿ

ರಾಜ್ಯ ಸರ್ಕಾರಕ್ಕೆ ಅಸಾಧ್ಯವೆಂದಾದರೆ ಕೇಂದ್ರ ಸರಕಾರ ನೀಡಲಿ ರಕ್ಷಣೆ ದಿಲ್ಲಿಯಲ್ಲಿ

 

ಗಲಭೆ ಆಗಬಹುದೆಂಬ ಅನುಮಾನ ಇದ್ದರೂ ರಕ್ಷಣೆಕೊಡಲಾಗದೆಂಬುದು ಹುಂಬತನ

ಮುನ್ಸೂಚನೆ ಇಲ್ಲದೇ ಗಲಭೆಯಾದಾಗ ಯಾರಿಗೆ ಮೊರೆಹೋಗಬೇಕು ದೇಶದ ಜನ

 

ಒಂದು ಕೋಮನ್ನು ಓಲೈಸಲು ಭಂಡ ರಾಜಕಾರಣಿಗಳಲ್ಲಿವೆ ನೂರೆಂಟು ಸಬೂಬುಗಳು

ಇಂತಹವರನ್ನು ಕಾಪಾಡಲು ಜೀವತೆತ್ತಿದ್ದರಂದು ಆ ಅಮಾಯಕ ಪೋಲೀಸ ಪೇದೆಗಳು

 

ಜಾತಿ, ಕೋಮು, ಕುಟುಂಬದ ಓಲೈಕೆ, ಇವು ಈ ಪ್ರಜಾಪ್ರಭುತ್ವಕ್ಕೆ ಬಡಿದಿರುವ ಶಾಪ

ಪರಿಹಾರವೇ ಕಾಣುತ್ತಿಲ್ಲ ಜನ ತಮ್ಮ ಮನದೊಳಗೆ ಎಷ್ಟೇ ತುಂಬಿಕೊಂಡಿದ್ದರೂ ಕೋಪ

 

ಪುರೋಹಿತಶಾಹಿಗಳು ನಮ್ಮ ಸಮಾಜವನು ಕೆಡಿಸಿಯಾಗಿತ್ತು ಹಿಂದಿನಿಂದಲೂ ಸಾಕಷ್ಟು

ಭ್ರಷ್ಟ ರಾಜಕಾರಣ ಈಗ ಸತ್ಯನಾಶ ಮಾಡುತ್ತಿದೆ ಇನ್ನೆಂದೂ ದುರಸ್ತಿ ಮಾಡಲಾಗದಷ್ಟು!

*****


ವಾರ್ಷಿಕೋತ್ಸವ!

20 ಮೇ 10

ಸಖೀ,

ಅಂದು ವರುಷಗಳ ಹಿಂದೆ

ಇಂದಿನ ದಿನ, ಅಳುಕು, ಅನುಮಾನ,

ಅಂಜಿಕೆ, ನಾಚಿಕೆಗಳಿಂದ ತಲೆ ತಗ್ಗಿಸಿಕೊಂಡು,

ನನ್ನ ಹಸ್ತದಲಿ, ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು,

ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು,

ನಡೆದ್ದಿದ್ದ ನನ್ನಾಕೆಯೊಂದಿಗೆ ಸಪ್ತಪದಿ

ತುಳಿದುದರ, ಆ ಮದುರ ಕ್ಷಣಗಳ ನೆನಪು,

ಈ ಶುಭದಿನದಂದು ಮರುಕಳಿಸುವಾಗ;

ನಡುವಿನೀ ದಿನಗಳಲಿ ಕಂಡು ಬಂದ

ಸರಸ – ವಿರಸಗಳ ಮರುಳಾಟ,

ಸಿಹಿ – ಕಹಿ ಅನುಭವಗಳ ತಿಕ್ಕಾಟ,

ಸಿಡುಕು – ಬಿಗುಮಾನಗಳ,

ದುಡುಕು – ದುಮ್ಮಾನಗಳ,

ಕಾರ್ಮೋಡಗಳು ಬಾಳ ಆಗಸದಲಿ,

ಕವಿದು ಆಡಿದ ಕಣ್ಣು – ಮುಚ್ಚಾಲೆಯಾಟ,

ಆಗಾಗ ಬಂದು ಮರೆಯಾದ ಅನುಮಾನ,

ನಿಸ್ಸಹಾಯಕತೆಗಳು ತಂದ ಸಂಕಟ,

ಇವೆಲ್ಲ ಎಷ್ಟೊಂದು ಗೌಣ?!

 

ಇಂದು ಮಿಂದು, ಮಡಿಯುಟ್ಟು,

ಕಂಪ ಸೂಸುವ ಮೈಸೂರು ಮಲ್ಲಿಗೆಯ

ಮುಡಿಗೇರಿಸಿಕೊಂಡು, ನನ್ನ ಬಳಿಸಾರಿ,

ನಮಿಸಿ, ನಂತರ ಬಿಸಿಯಪ್ಪುಗೆಯಲಿ,

ನನ್ನಾಕೆ ನೀಡಿದ ಸಿಹಿಮುತ್ತಿನಿಂದ,

ನನ್ನನ್ನು ನಾನೇ ಮರೆತಾಗ,

ನಾನಂದುಕೊಂಡೆ ಸಖೀ,

ಈ ನಾಡಲ್ಲೆಲ್ಲಾ ನಾನೇ ಜಾಣ,

ಅಲ್ಲವೇ, ಈ ಜಗವೊಂದು

ಒಲವಿನ ಸುಂದರ ತಾಣ?

*-*-*-*-*-*-**-*-*-*


ನಡೆಯಬಹುದೇ ಈಸಾರಿ ಯುದ್ಧ?

19 ಮೇ 10

 

ಸಖೀ

ದಿನಪತ್ರಿಕೆ ಓದುತ್ತಿದ್ದ

ನನ್ನಾಕೆ ಕರೆದು ಕೇಳಿದಳು

ರೀ .. ನೀವೇನಂತೀರಿ

ನಡೆದುಬಿಡಬಹುದೇ

ಈಸಾರಿ ಯುದ್ಧ?

ನಾನೆಂದೆ

ಜಾಸ್ತಿ ಮಾತನಾಡದೇ ನಾನು

ಮೌನದ ಮೊರೆಹೋದರೆ

ನಡೆಯದೇ ಇರಬಹುದು

ಕಣೇ ಯುದ್ಧ!

******


ನಿನ್ನ ನೆನಪಾಗುವುದೇಕೆ?

18 ಮೇ 10

 

ಸಖೀ,

ಬೆಟ್ಟದಾ ತಪ್ಪಲಲಿ

ಸಣ್ಣಗೆ ಹುಟ್ಟಿ,

ತಣ್ಣಗೆ ಇರುವವಳು,

ಅದ್ಯಾವುದೋ

ಅವ್ಯಕ್ತ ಸೆಳೆತಕ್ಕೊಳಗಾಗಿ,

ಮುನ್ನುಗ್ಗಿ, ಬಿದ್ದು, ಎದ್ದು,

ಬೆಟ್ಟ ಗುಡ್ಡಗಳ ಸುತ್ತಿ,

ಜಾರಿ ಜಲಪಾತವಾಗಿ,

ಬಯಲಿಗಿಳಿದು,

ಕಾವೇರಿಸಿಕೊಂಡು,

ಮೈ ಹಿಗ್ಗಿಸಿಕೊಂಡು,

ಅತ್ತ ಇತ್ತ ಕೈಚಾಚಿ,

ಸಿಕ್ಕಿದ್ದನ್ನೆಲ್ಲಾ ಬಾಚಿ

ತನ್ನೊಳಗೆ ಸೆಳೆದು,

ಸಮುದ್ರರಾಜನೊಂದಿಗಿನ

ತನ್ನ ಮಧುರ ಮಿಲನಕ್ಕೆ

ಹಾತೊರೆದು, ಅನವರತ

ಮೈನೆರೆತು ಮೈಮರೆತು,

ಹರಿವ ನದಿಯ,

ಕಂಡಾಗಲೆಲ್ಲಾ,

ನನಗೆ ಬಿಡದೆ ನಿನ್ನ

ನೆನಪಾಗುವುದೇಕೆ?

*****


ನೀನಿಂತಾಗೆನಗೆ ದೇವ ದರ್ಶನವಾಯ್ತು!

17 ಮೇ 10

 

ನಿನ್ನ ನಗುವಲ್ಲಿ ಚಂದಿರನ ಚೆಲುವ ನಾ ಕಂಡೆ

ಚಂದಿರನ ಚೆಲುವಲ್ಲಿ ನಿನ್ನ ಮೊಗವ ನಾ ಕಂಡೆ

 

ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು

ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು

 

ನಡೆಯಲ್ಲಿ ಆ ಹಂಸವನೇ ನೀನು ನಾಚಿಸಿದ ಕಂಡೆ

ಹಂಸದ ಆ ನಡೆಯಿಂದ ನಾನಿನ್ನ ನೆನಪಿಸಿಕೊಂಡೆ

 

ನೀನೆನ್ನ ಕೂಗಲು ಕೋಗಿಲೆಯೇ ಕೂಗಿದಂತಾಯ್ತು

ಕೋಗಿಲೆ ಕುಹೂ ಎನಲು ನೀನೇ ಕರೆದಂತಾಯ್ತು

 

ದೇವರ ಧ್ಯಾನದಲ್ಲಿರಲು ಅಲ್ಲಿ ನಿನ್ನ ಕಂಡಂತಾಯ್ತು

ನೀ ಕಣ್ಮುಂದೆ ನಿಂತಾಗೆನಗೆ ದೇವ ದರ್ಶನವಾಯ್ತು

 

ನನ್ನ ಮನದೊಳಗಿಲ್ಲಿ ನಾನಿಲ್ಲ ಬರೀ ನೀನೇ ನೀನು

ನಿನ್ನ ಕಣ್ಣೊಳಗಣ ಬಿಂಬದಲಿ ಬರೀ ನಾನೇ ನಾನು!

*****