ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ
ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ
ಕವಿ ನನಸಿನಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,
ಭಗ್ನ ಪ್ರೇಮಿಯೋ, ಎಂದರಿತ ನಂತರವಷ್ಟೇ ಹೊರ ಬರುವುದಲ್ಲ
ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ
ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ
ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ
ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ
ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ
ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ
ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ
ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ
ಕವಿತೆ ಮನವ ಮುಟ್ಟಲು ಮನ ಮುದಗೊಂಡರಲ್ಲಿ ಆನಂದದನುಭಾವ
ಭಾವನೆಗಳನ್ನು ಅರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ
ಕವಿತೆ ಓದುವಾಗ ಕವಿ ಯಾರು ಎಂಬುದು ಯಾವಾಗಲೂ ಅಲ್ಲಿ ಗೌಣ
ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!