ಮೊದಲ ದಿನವೇ ಮನಸ್ಸು ನೊಂದುಕೊಂಡರೆ!!!

07 ಮೇ 09
ಯಾವ ಸಾಧನೆಗೋ ಏನೋ ಈ ಪ್ರವೇಶ ಪರೀಕ್ಷೆ
ಸಾಮಾನ್ಯ ಎಂದರೂ ಇದು ಅಸಾಮಾನ್ಯ ಪರೀಕ್ಷೆ
 
ಜೀವಶಾಸ್ತ್ರದ ಪ್ರಶ್ನೆಗಳು ಕಹಿ-ಸಿಹಿ ಪಾನಕದಂತೆ
ಗಣಿತಶಾಸ್ತ್ರದವು ಇದ್ದವು ಕಬ್ಬಿಣದ ಕಡಲೆಗಳಂತೆ
 
ಸಮಯದ ಕೊರತೆಯಲಿ ಮನ ಬೇಸರಗೊಂಡಾಗ
ಅರಿತ ಉತ್ತರಗಳೂ ನೆನಪಾಗುವುದಿಲ್ಲ ಅಲ್ಲಿ ಆಗ
 
ಮಗಳ ಮುಖವಾಗಿತ್ತು ಮೋಡದ ಮರೆಯ ಚಂದಿರ
ಆ ಮನದ ದುಗುಡ ತಂದಿದೆ ಹೆತ್ತವರಿಗೂ ಬೇಸರ
 
ಮೊದಲ ದಿನವೇ ಹೀಗೆ ಮನಸ್ಸು ನೊಂದುಕೊಂಡರೆ
ಇಂದು ಎರಡನೆ ದಿನ ಆಗಬಹುದೇನೋ ತೊಂದರೆ
 
ಇಂದು ಎಲ್ಲವೂ ಸುಗಮವಾಗಿ ನಗುನಗುತ್ತಾ ಬಂದರೆ
ನಾಳೆಯಿಂದ ನಿಮಗಿಲ್ಲ ನನ್ನ ಈ ಖಾಸಗಿ ತೊಂದರೆ

ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಂತೆ!!!

06 ಮೇ 09
ಯಾರೋ ಕೂಗಿದಂತಾಯ್ತು ಕುಮಾರನಿಗೆ
ಅಲ್ಲಿ ಹೊರಟಿತ್ತು ತೇಜಸ್ವಿನಿಯ ಮೆರವಣಿಗೆ
 
ಅತ್ತ ತೇಜಸ್ವಿನಿಯ ನಿದ್ದೆಗೂ ಭಂಗ ಬಂತು
ಯೋಗಿಯ ವಿಜಯ ಘೋಷ ಕೇಳಿ ಬಂತು
 
ಬಂಗಾರಪ್ಪ ತೂಕಡಿಸಿ ಬೆಚ್ಚಿ ಬಿದ್ದ ಕೂತಲ್ಲೇ
ರಾಘವೇಂದ್ರನ ಜಪ ಮಾಡುತ್ತಿದ್ದ ಹಗಲಲ್ಲೇ
 
ಸಾಂಗ್ಲಿಯಾನನ ಬಡಬಡಿಕೆ ಅರೆ ನಿದ್ರೆಯಲ್ಲಿ
ಗೋಪಿನಾಥಗೆ ಮಾತ್ರ ಗೊರಕೆ ನಿಶ್ಚಿಂತೆಯಲ್ಲಿ
 
ಅನಂತನಿಗಿಲ್ಲಿ ಹಗಲೆಲ್ಲಾ ಕೃಷ್ಣನದೇ ಧ್ಯಾನ
ಕೃಷ್ಣನಿಗೂ ಈಗ ಅನಂತ ನಾಮದಲೇ ಸ್ನಾನ
 
ಗೌಡರೂ ಚೆನ್ನಮ್ಮನೂ ಮತ್ತೆ ಆಗಿ ತಯಾರು
ಕನಸಲ್ಲೇ ಏರಿದ್ದಾರೆ ಪ್ರಧಾನಮಂತ್ರಿಯ ಕಾರು
 
ಖರ್ಗೆ ಸೋತರೆ ಸಿದ್ರಾಮಯ್ಯನದು ಕುಹಕ ನಗೆ
ಯಾರೇನೆಂದರೂ ವಿರೊಧ ಪಕ್ಷದ ಕುರ್ಚಿ ತನಗೇ
 
ಎಲ್ಲರೊಳಗೂ ಒಂದಲ್ಲ ಒಂದು ರೀತಿಯ ತಳಮಳ
ಏನಾಗುವುದೋ ಫಲಿತಾಂಶ ಎಂದೆನ್ನುವ ಕಳವಳ
 
ಈ ಕಾಯುವಿಕೆ ಬೇಕಿಲ್ಲ ಸೋತರೂ ಇಲ್ಲ ಚಿಂತೆ
ಮನದೊಳಗೀಗ ವಿಚಿತ್ರ ಯೋಚನೆಗಳದೇ ಸಂತೆ
 
ಈ ಒಂದೊಂದು ದಿನವೂ ಒಂದೊಂದು ವರ್ಷದಂತೆ
ಇನ್ನೂ ಹತ್ತು ದಿನ ಹೀಗೆಯೇ ಕಳೆಯಬೇಕಿದೆಯಂತೆ

ನೀ ಕಳ್ಳ ನನಗೆ ಗೊತ್ತು!!!

06 ಮೇ 09

(ಇದೀಗ ನನ್ನ ತಮ್ಮ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ಮೊಬೈಲ್ ಮೂಲಕ ಕಳುಹಿಸಿದ ಕವನ)

ನೀ ಕಳ್ಳ ನನಗೆ ಗೊತ್ತು
ಅದಕ್ಕಾಗಿ ಬರಿದಾಗಿಸಿದ್ದೇನೆ
ನನ್ನ ಹೃದಯ ಶ್ರೀಮಂತಿಕೆಯನ್ನು;

ನೀ ಸುಳ್ಳ ನನಗೆ ಗೊತ್ತು
ಅದಕ್ಕಾಗಿಯೇ ಮುಚ್ಚಿಟ್ಟಿದ್ದೇನೆ
ಮೌನದಲಿ ನನ್ನ ಮನಸ್ಸಾಕ್ಷಿಯನ್ನು;

ನೀ ಮೂರ್ಖ ನನಗೆ ಗೊತ್ತು
ಅದಕ್ಕಾಗಿ ಬದಿಗೊತ್ತಿದ್ದೇನೆ
ನನ್ನ ಔದಾರ್ಯವನ್ನು;

ನಾನೀಗ ಏಕಾಂಗಿ
ವಿರಾಗಿ-ತ್ಯಾಗಿ,
ನಾನೀಗ ನಾನಲ್ಲ
ಎಲ್ಲಾ ನೀನೇ ಆಗಿ!!!

 


ಉತ್ತರ ಹುಡುಕ ಹೊರಟವರಿಂದ ಬೇಜವಾಬ್ದಾರಿತನದ ಪ್ರದರ್ಶನ!!!

06 ಮೇ 09

asu029

ಉಡುಪಿಯಲ್ಲಿ ಸುಗುಣಮಾಲಾ ಧಾರ್ಮಿಕ ಪತ್ರಿಕೆಯ ರಜತ ಮಹೋತ್ಸವ ಸಮಾರಂಭಗಳು ಮೇ ಒಂದನೇ ದಿನಾಂಕದಿಂದ ಮೂರು ದಿನ ನಡೆದವು.

ಕೊನೆಯ ದಿನ ಅಂದರೆ ರವಿವಾರ ಮೇ ಮೂರರಂದು ಶ್ರೀಕೃಷ್ಣ ಮಠದ ಆವರಣದಲ್ಲಿರುವ ರಾಜಾಂಗಣದಲ್ಲಿ ಸಾಯಂಕಾಲ ನಾಲ್ಕೂವರೆ ಘಂಟೆಗೆ “ಪ್ರಸಕ್ತ ರಾಜಕೀಯದ ದುಸ್ಥಿತಿಗೆ ಪರಿಹಾರವೇನು?” ಎನ್ನುವ ವಿಷಯದ ಮೇಲೆ ವಿಚಾರ ಮಂಡನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ಶ್ರೀಮತಿ ಸಂಧ್ಯಾ ಎಸ್. ಪೈಯವರ ಅಧ್ಯಕ್ಷತೆಯ ಆ ಸಭೆಯಲ್ಲಿ ರವಿ ಬೆಳಗರೆ, ವಿಶ್ವೇಶ್ವರ ಭಟ್, ಮಹೇಶ್ ಜೋಷಿ, ಸುಧೀಂದ್ರ, ಗೋಕುಲದಾಸ್ ಪೈ ಹಾಗೂ ಮಾಸ್ಟರ್ ಹಿರಣ್ಣಯ್ಯ ಇವರು ಹಾಜರಿರಬೇಕಿತ್ತು.

ನಾನು ಮತ್ತು ನನ್ನ ತಮ್ಮ , ನಾಲ್ಕು ಘಂಟೆಗೆ ಸರಿಯಾಗಿ ರಾಜಾಂಗಣದಲ್ಲಿ ಹಾಜರಿದ್ದೆವು. ನಮ್ಮಿಬ್ಬರಿಗೂ ರವಿ ಬೆಳಗರೆ ಮತ್ತು ವಿಶ್ವೇಶ್ವರ ಭಟ್ ಇವರ ಮಾತುಗಳನ್ನು ಕೇಳುವ ಮತ್ತು ಮಾಸ್ಟರ್ ಹಿರಣ್ಣಯ್ಯನವರ “ನಡುಬೀದಿ ನಾರಾಯಣ” ನಾಟಕವನ್ನು ವೀಕ್ಷಿಸುವ ಇಚ್ಚೆ ಇತ್ತು.

ನಾನು ನನ್ನ ತಮ್ಮನಿಗೆ ರವಿ ಬೆಳಗರೆ ಅಂದು ಮಂಡ್ಯದಲ್ಲಿ “ಈ ಟಿವಿಯ ಎಂದೂ ಮರೆಯದ ಹಾಡು” ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿರುವುದರಿಂದ ಉಡುಪಿಗೆ ಬರುವುದು ಅನುಮಾನ ಅಂದೆ. ಅಲ್ಲದೆ ರವಿ ಬಾರದೇ ಇದ್ದರೆ ವಿಶ್ವೇಶ್ವರ ಭಟ್ ಕೂಡ ಬಾರದೇ ಉಳಿಯಬಹುದು ಎಂದೆ.

ಆದರೆ ಕಾರ್ಯಕ್ರಮದ ನಿರೂಪಕರು ನಾಲ್ಕೂಕಾಲು ಘಂಟೆಗೊಮ್ಮೆ ಮತ್ತು ನಾಲ್ಕೂವರೆಗೊಮ್ಮೆ, ಈ ಎಲ್ಲಾ ಅತಿಥಿಗಳ ಹೆಸರುಗಳನ್ನು ಒತ್ತಿ ಒತ್ತಿ ಸಾರಿದರು.

ನಾಲ್ಕೂ ಮುಕ್ಕಾಲಕ್ಕೆ ಕಾರ್ಯಕ್ರಮ ಶುರು ಆಯ್ತು.

ರವಿ ಬೆಳಗರೆ, ವಿಶ್ವೇಶ್ವರ ಭಟ್ ಮತ್ತು ಮಹೇಶ್ ಜೋಷಿ ಎಲ್ಲೂ ಕಂಡು ಬರಲಿಲ್ಲ. ಕಾರ್ಯಕ್ರಮ ಮುಂದುವರೆಯಿತು. ಕೊನೆಗೆ ಮುಗಿಯಿತು ಕೂಡ.

ಮಾಸ್ಟರ್ ಹಿರಣ್ಣಯ್ಯ ಮತ್ತು ಸುಧೀಂದ್ರ ಅರ್ಥಗರ್ಭಿತವಾಗಿ ಮಾತನಾಡಿದ್ದರು.

ಸಮಯೋಚಿತ ಮತ್ತು ಮಾರ್ಮಿಕವಾಗಿ ಮಾತನಾಡಿದ ಶ್ರೀಮತಿ ಸಂಧ್ಯಾ ಪೈಯವರ ಮಾತುಗಳನ್ನು ಕೇಳಿದಾಗ, ಇದುವರೆಗೆ ಆಕೆಯನ್ನು ತೀರಾ ವ್ಯಾಪಾರೀ ಮನೋವೃತ್ತಿಯ ಹೆಂಗಸೆಂದೇ ತಿಳಿದಿದ್ದ ನನ್ನ ಅಭಿಪ್ರಾಯಗಳು ಸ್ವಲ್ಪ ಬದಲಾದವು.

ಆದರೆ, ನಾನು ಕಾರ್ಯಕ್ರಮದ ಉದ್ದಕ್ಕೂ, ಗೈರು ಹಾಜರಾದ ಆ ಮೂವರು ಅಂದಿನ ಸಭೆಗೆ ಯಾಕೆ ಬರಲಿಲ್ಲ ಅನ್ನುವುದನ್ನು ಸಭೆಯಲ್ಲಿ ಭಾಗವಹಿಸಿದವರ ಗಮನಕ್ಕೆ ತರುತ್ತಾರೋ ಅಥವಾ ಅವರ ಗೈರುಹಾಜರಿಗೆ ಸಭಿಕರ ಕ್ಷಮೆ ಕೇಳುವ ನೈತಿಯ ಜವಾಬ್ದಾರಿಯ ಪ್ರದರ್ಶನವನ್ನು ಯಾರಾದರೂ ತೊರಿಸಿಯಾರೇ ಎಂದು ಕಾಯುತ್ತಲೇ ಇದ್ದೆ.

ಆದರೆ, ಹಾಗಾಗಲೇ ಇಲ್ಲ.

ರವಿ ಬೆಳಗರೆ ಒಪ್ಪಿಕೊಂಡಿದ್ದು ನಿಜವೇ? ಎರಡೂ ಕಡೆ ಒಂದೇ ಸಮಯದಲ್ಲಿ ಹಾಜರಿರಲು ಆತ ಹೇಗೆ ಒಪ್ಪಿಕೊಂಡಿರಬಹುದು?

ಯಾವುದೇ ಸಭೆಯಲ್ಲಿ ಭಾಗವಹಿಸಬೇಕಾದವರು, ಬಾರದೇ ಇದ್ದಾಗ, ಸಭಿಕರಿಗೆ ಅವರ ಗೈರುಹಾಜರಿಯ ಕಾರಣವನ್ನು ತಿಳಿಯಪಡಿಸಿ ಕ್ಷಮೆ ಕೇಳುವ ನೈತಿಕ ಜವಾಬ್ದಾರಿ ಕಾರ್ಯಕ್ರಮ ಹಮ್ಮಿಕೊಂಡವರಿಗೆ ಇರುವುದಿಲ್ಲವೇ?

“ಪ್ರಸಕ್ತ ರಾಜಕೀಯ ದುಸ್ಥಿತಿಗೆ ಪರಿಹಾರವೇನು?” ಎನ್ನುವ ಪ್ರಶ್ನೆಗೆ ಅಂದು ಆ ಕಾರ್ಯಕ್ರಮ ಹಮ್ಮಿಕೊಂಡವರ “ಆ ಸಾಮಾಜಿಕ ಬೇಜವಾಬ್ದಾರಿತನದ ಪ್ರದರ್ಶನ” ದಿಂದ ನನಗೆ ಉತ್ತರ ಸಿಕ್ಕಿತ್ತು.

ಪ್ರತಿಯೊಬ್ಬ ಪ್ರಜೆಯಲ್ಲೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿದರೆ ಮಾತ್ರ ಈ ದೇಶ ಉದ್ಧಾರ ಆಗಬಹುದೇನೋ.

ನೀವೆನಂತೀರಿ ಓದುಗರೇ?


ನವ ದಂಪತಿಗಳಿಗೆ ಶುಭ ಆಶೀರ್ವಾದ!!!

05 ಮೇ 09
ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ,
ಸದ್ಯ ಉಡುಪಿಯ ಡಾ. ಟಿ.ಎಂ.ಎ. ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿರುವ
ಶ್ರೀಯುತ ನಾಣಯ್ಯ ಡಿ.ಸಿ. ಮತ್ತು ಅವರ ಧರ್ಮಪತ್ನಿ
ಶ್ರೀಮತಿ ಹೇಮಲತ (ಹೇಮಕ್ಕ) ಇವರ  ಸುಪುತ್ರಿ
ಡಾ. ಲಿಖಿತ ಹಾಗೂ ಚಿ. ಭರತ್ ಪ್ರಸಾದರ ವಿವಾಹ, 
೩ ಮೇ ೨೦೦೯, ರವಿವಾರದಂದು ಉಡುಪಿ ಅಲೆವೂರಿನಲ್ಲಿ ನೆರವೇರಿತು.
ನವ ವಧೂವರರಿಗೆ ನನ್ನ ಶುಭ ಆಶೀರ್ವಾದಗಳು.

 

asu016

ನಿನ್ನ ಬಾಲ್ಯದ ನೆನಪು ನನಗೆ ನಿನ್ನೆ ಮೊನ್ನೆಯ ಮಾತು
ನೀನು ವಧುವಾಗಿರುವೆಯೆಂದರೆ ನಂಬಲಾಗದ ಮಾತು
 
ಆದರೂ ನನ್ನ ಕಣ್ಮುಂದೆ ಸಿಂಗರಿಸಿ ನಿಂತ ಸೌಂದರ್ಯ
ಕಂಡು  ನಿಜಕ್ಕೂ ಬೆರಗಾಗಿ ನಾನು ಪಡುತ್ತಿದ್ದೆ ಆಶ್ಚರ್ಯ
 
ಕಳೆದ ದಿನಗಳ ಗಣನೆ ನಮಗೆ ಎಂದಿಗೂ ಸಿಗುವುದಿಲ್ಲ
ಮಕ್ಕಳು ಬೆಳೆದು ನಿಂತರಿವು ನಮಗೆ ಆಗುವುದೇ ಇಲ್ಲ
 
ಅಂದು ಸೇತುಬಂಧಕೆ ಶ್ರೀರಾಮ ತಯಾರಿ ನಡೆಸಿದಂತೆ
ಸಂಬಂಧಗಳ ನಡುವಣ ಸೇತುವೆಗೆ ಈ ತಯಾರಿಯಂತೆ
 
ಅಂದು ಸಹಕರಿಸಿತು ವಾನರ ಸೈನ್ಯ ರಾಮ ಲಕ್ಷ್ಮಣರಿಗೆ
ಹರಸಿದವಿಂದು ಸಾವಿರಾರು ಹೃದಯಗಳು ಇಲ್ಲಿ ನಿಮಗೆ
 
ಗುರು ಹಿರಿಯರ ಎಂದೆಂದೂ ಗೌರವಿಸಿ ಬಾಳಿದರೆ ನೀವು
ನಿಮ್ಮ ಬಾಳಲ್ಲಿ ಬಾರದೆಂದಿಗೂ ಸಹಿಸಲಾಗದ ನೋವು
 
ಒಲವಿರಲಿ, ನಲಿವಿರಲಿ, ಬಾಳು ನಿಮ್ಮಿಷ್ಟದಂತೆ ಇರಲಿ
ನಿಮ್ಮೀ ದಾಂಪತ್ಯ ಜೀವನದ ದಿನಗಳವು ಲಕ್ಷದಷ್ಟಿರಲಿ