ಕಾದಿರುವವಳ ಪ್ರಶ್ನೆ…!!!

09 ಏಪ್ರಿಲ್ 09
ನಾನು,
ಅಹಲ್ಯೆಯಲ್ಲ, ಆದರೂ,
ಮೈಲಿಗಲ್ಲಿಗೂ ಕಡೆಯಾಗಿ ನಿನ್ನ
ಹಾದಿಯಲಿ ನಿಂತಿರುವೆ ನಾನು,
ಬರೇ ನಿನ್ನ ನಿರೀಕ್ಷೆ,
ದಿನವೂ ನನಗೆ;

ನಾನು,
ಶಬರಿಯಲ್ಲ, ಆದರೂ,
ಹೂವಿಗಿಂತಲೂ ಕೋಮಲವಾದ
ನನ್ನ ಹೃದಯವನು
ನಿನಗಾಗಿ ಕಾದಿರಿಸಿರುವೆ,
ಹಣ್ಣುಗಳಿಗಿಂತಲೂ ಸವಿಯಾದ
ನನ್ನ ಸ್ವಪ್ನಗಳನೆಲ್ಲಾ
ನಿನಗಾಗಿ ಉಳಿಸಿರುವೆ;

ನಾನು,
ಸೀತೆಯಲ್ಲ, ಆದರೂ,
ಈ ಸಮಾಜದ (ಲಂಕೆಯ)
ಕಿರುಕುಳಗಳನೆಲ್ಲಾ ಸಹಿಸಿಕೊಂಡು
ನಿನಗಾಗಿ ಕಾದಿರುವೆ.

ಗೊತ್ತು ನೀನು ರಾಮನಲ್ಲ.
ಆದರೂ, ನನಗೆ ನಂಬಿಕೆ
ನೀ ಬಂದೇ ಬರುವೆ.

ಆದರೆ, ನಲ್ಲಾ,
ನೀ ಎಂದು ಬರುವೆ?


ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ?

08 ಏಪ್ರಿಲ್ 09
ಅಂದು ನಮ್ಮೂರ ಕೇರಿಯಲ್ಲೊಬ್ಬ ಸತ್ತು ಬಿದ್ದಿದ್ದ
ಆತ ತಾನಾಗಿ ಸತ್ತದ್ದಲ್ಲ ಆತನನ್ಯಾರೋ ಕೊಂದಿದ್ದ

ಅದು ಚುನಾವಣೆಯ ಸಮಯವಾಗಿತ್ತು
ಮತದಾನಕ್ಕೆ ಇನ್ನೇನು ಹತ್ತೇ ದಿನವಿತ್ತು

ಆ ಸಮಯವೇ ಈತನ ಬರ್ಬರ ಕೊಲೆಯಾಗಿತ್ತು
ಆದ್ದರಿಂದ ಈ ಕೊಲೆಗೂ ಒಂದು ವಿಶೇಷತೆಯಿತ್ತು

ಸತ್ತ ಆ ಬಡವ ನಿಷ್ಠಾವಂತನಾಗಿದ್ದನಂತೆ
ಕಾಂಗ್ರೇಸ್ ಕಾರ್ಯಕರ್ತನಾಗಿದ್ದನಂತೆ

ಸತ್ತವ ಸತ್ತ ಮೇಲೆ ಕಟ್ಟಾ ಕಾಂಗ್ರೇಸಿಗನಾದ
ಹಾಗಾಗಿಯೇ ಕೊಲೆಗಾರ ಜನತಾದವನಾದ

ಅಲ್ಲಾ, ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ?

ಹಾಗಾದರೆ ಕಾಂಗ್ರೇಸ್ ಸತ್ತವರ ಪಕ್ಷವೇ?
ಕಾಂಗ್ರೇಸಿಗರೆಲ್ಲಾ ಇದ್ದೂ ಸತ್ತಂತೆಯೇ?
ಅಲ್ಲದೆ,
ಜನತಾದವರೆಲ್ಲಾ ಕೊಲೆಗಾರರೇ ಸ್ವಾಮೀ?
***********************

ತುರ್ತು ಪರಿಸ್ಥಿತಿಯ ನಂತರ 1977ರ ಮಾರ್ಚ್ ತಿಂಗಳಲ್ಲಿ ನಡೆದ ಮಹಾಚುನಾವಣೆಯ ಸಮಯದಲ್ಲಿ ನಮ್ಮೂರು ಆತ್ರಾಡಿಯಲ್ಲಿ ಒಂದು ಕೊಲೆಯಾಗಿತ್ತು.
ಆ ಕೊಲೆ ಆಗಿದ್ದು ಆಸ್ತಿ-ಜಮೀನಿನ ಧನಿ-ಒಕ್ಕಲು ವಿವಾದದಿಂದಾಗಿಯಾದರೂ ಅದರಲ್ಲೂ ರಾಜಕೀಯವನ್ನು ತೂರಿದ್ದರು.
ಆಗ ಆ ಘಟನೆಗೆ ಸ್ಪಂದಿಸಿದ ನಾನು ನನ್ನ ಮೊಟ್ಟ ಮೊದಲ ಕವನ ಬರೆದಿದ್ದೆ.
ನಾನಾಗ ಪರ್ಕಳ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದೆ.
ಇಂದು ಇಲ್ಲಿ ನಿಮ್ಮ ಮುಂದಿಡುವ ಇಚ್ಛೆಯಾಯ್ತು.


ಮಣಿಪಾಲದ ಸುಂದರ “ಎಂಡ್ ಪಾಯಿಂಟ್”!!!

08 ಏಪ್ರಿಲ್ 09

park

ಈ ಸುಂದರ “ಪಾರ್ಕ್” ಮಣಿಪಾಲದ “ಎಂಡ್ ಪಾಯಿಂಟ್” ನಲ್ಲಿದೆ.

ಬರೇ ಕಲ್ಲು ಮುಳ್ಳುಗಳಿಂದ ತುಂಬಿದ್ದ ಆ ಗುಡ್ಡೆಯಲ್ಲಿ ಇಷ್ಟೊಂದು ಸುಂದರವಾದ “ಪಾರ್ಕ್” ನಿರ್ಮಾಣವಾಗಬಹುದು ಎಂದು ಯಾರೂ ಊಹಿಸಿರಲೇ ಇಲ್ಲ.

ಅಲ್ಲಿ ಒಂದೂವರೆ ಕಿಲೋಮೀಟರ್ ಉದ್ದದ “ಜಾಗಿಂಗ್ ಟ್ರ್ಯಾಕ್” ಇದೆ. ಮುಂಜಾನೆ ಮತ್ತು ಸಾಯಂಕಾಲ ವಾಯುವಿಹಾರಕ್ಕೆ ಹೋಗಲು ಪ್ರಶಸ್ತವಾದ ಸ್ಥಳ.

ಇಲ್ಲಿಂದ ಸೂರ್ಯಾಸ್ತಮಾನದ ದೃಶ್ಯ ಎಷ್ಟು ರಮಣೀಯವೋ ಸೂರ್ಯೋದಯದ ದೃಶ್ಯವೂ ಅಷ್ಟೇ ಮನಮೋಹಕ. ಈ ನೋಟಗಳನ್ನು ಸವಿಯುವುದಕ್ಕಾಗಿ ಅಲ್ಲಲ್ಲಿ ಕೂರುವ ವ್ಯವಸ್ಥೆಗಳನ್ನು ಮಾಡಲಾಗಿದೆ.

suvarna002

ಇಲ್ಲಿಂದ ಪಶ್ಚಿಮಕ್ಕೆ ನೋಡಿದರೆ ಉಡುಪಿ ನಗರ ಮತ್ತು ಅರಬ್ಬೀ ಸಮುದ್ರದತ್ತ ಕಣ್ಣು ಹಾಯುತ್ತದೆ. ಉತ್ತರದ ಇಳಿಜಾರಿನಲ್ಲಿ ಸುವರ್ಣ ನದಿ ಹರಿಯುತ್ತಿರುತ್ತದೆ.

suvarna003

ಪೂರ್ವದ ಇಳಿಜಾರಿನಲ್ಲಿ ಪರ್ಕಳ ಪೇಟೆ ಇದೆ. ದಕ್ಷಿಣಕ್ಕೆ ಮಣಿಪಾಲದ ಕಟ್ಟಡಗಳು ಕಣ್ಣಿಗೆ ಬೀಳುತ್ತವೆ.

ಇಲ್ಲಿಗೆ ಹೋಗುವ ದಾರಿಯಲ್ಲೇ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣವಾಗುತ್ತಲಿದೆ. ವಿಶಾಲವಾದ ಆಟದ ಮೈದಾನವೂ ಇದೆ.

ಆಟದ ಮೈದಾನಕ್ಕೆ ಹೊನಲು ಬೆಳಕಿನ ವ್ಯಸ್ಥೆಯನ್ನೂ ಒದಗಿಸಲಾಗಿದೆ.
ಮಣಿಪಾಲ ಎನ್ನುವ, ಮುರಕಲ್ಲು ಮತ್ತು ಅಜ್ಜಿಮುಳ್ಳುಗಳಿಂದ ಆವೃತ್ತವಾಗಿದ್ದ ಗುಡ್ಡೆ ಇಂದು ಅಂತರರಾಷ್ಟ್ರೀಯ ಮಟ್ಟದ ನಗರವಾಗಿ ಕಂಗೊಳಿಸುತ್ತಿರುವುದನ್ನು ನೋಡುವಾಗ, ನನ್ನ ಮನಸ್ಸು, ಮಣಿಪಾಲದ ಶಿಲ್ಪಿ ಪದ್ಮಶ್ರೀ ಡಾ. ತೋನ್ಸೆ ಮಾಧವ ಅನಂತ ಪೈಯವರನ್ನು (ಡಾ. ಟಿ. ಎಂ. ಎ. ಪೈ) ನೆನೆಯದೇ ಇರುವುದಿಲ್ಲ. ಅವರಿಗೆ ಅನಂತಾನಂತ ನಮನಗಳು.

ಉಡುಪಿಯತ್ತ ಹೋದರೆ ಇಲ್ಲಿಗೆ ಭೇಟಿ ಕೊಡುವುದನ್ನು ಮರೆಯದಿರಿ.


ಜನರ ಮನವನರಿತು ನಡೆದರೆ ಶಾಂತಿ!!!

07 ಏಪ್ರಿಲ್ 09
ಅಂದು ಮಾಜಿ ಆಗಲಿದ್ದ ಅಮೇರಿಕದ ಅಧ್ಯಕ್ಷರಿಗೆ ಏಟು
ಮಾಜಿ ಆಗಲಿರುವ ನಮ್ಮ ಗೃಹಮಂತ್ರಿಗಳಿಗೆ ಇಲ್ಲೇಟು

ಅಲ್ಲಿ ಆತನಿಗೆ ಅಂದು ಎರಡೇಟು ವಿದೇಶೀ ಬೂಟಿನಿಂದ
ಇಲ್ಲಿ ಈತನಿಗೆ ಇಂದು ಒಂದೇ ಒಂದು ಸ್ವದೇಶಿಯಿಂದ

ಆತ ತಲೆ ತಗ್ಗಿಸಿ ತಪ್ಪಿಸಿಕೊಂಡರು ಬೂಟ ಹೊಡೆತವನು
ಇಂದೀತ ನೆಟ್ಟ ನೋಟದಲೇ ಧಿಕ್ಕರಿಸದರೀ ಎಸೆತವನು

ಅಮೇರಿಕದವರ ಮಟ್ಟಕ್ಕೆ ಇವರೇನೂ ಇಳಿದಿರಲಿಲ್ಲ ಬಿಡಿ
ಆದರೆ ಇವರ ಮೇಲಿನ ಸೇಡೇನೂ ಕಡಿಮೆಯಿಲ್ಲ ನೋಡಿ

ಆಳುವವರು ಜನರ ಮನವನರಿತು ನಡೆದರೆ ಸದಾ ಶಾಂತಿ
ಜನರ ಮರೆತು ಗಳಿಸತೊಡಗಿದರೆ ದೇಶದಲ್ಲೆಲ್ಲಾ ಅಶಾಂತಿ


ನಾನು ಅರಿತದ್ದೇ ನಿಜವೆಂಬ ಭ್ರಮೆ!!!

07 ಏಪ್ರಿಲ್ 09

ಸಖೀ,

ನಾನು ಅರಿತದ್ದೇ ನಿಜವೆಂಬ ಭ್ರಮೆ ಇಹುದೆನ್ನೊಳಗೆ
ಪರಿಪೂರ್ಣ ಅರಿವು ಎಂದಿಗಾಗುವುದು ಇಳೆಯೊಳಗೆ

ನನ್ನ ಕಿಂಚಿತ್ತರಿವಿನ ಪ್ರದರ್ಶನದ ಬಯಕೆ ಸದಾ ನನ್ನಲ್ಲಿ
ಅದನು ಮೆಚ್ಚಿ ನಡೆಯಬೇಕು ನನ್ನವರೆನ್ನ ಜೊತೆಯಲ್ಲಿ

ನನ್ನ ವಾದವನೊಪ್ಪದವರು ಪೆದ್ದರೆಂಬ ನಂಬುಗೆ ನನಗೆ
ಆ ಪೆದ್ದರನು ಜರೆದು ವಿಜಯಿಯಾಗುವ ಹಂಬಲವೆನಗೆ

ನಾನು ಬೆಳಗಿನ ತನಕ ಜಾಗರಣೆ ಮಾಡಿದರೂ ಚಿಂತಿಲ್ಲ
ಜಗದ ಶಾಂತಿಯ ಕೆಡಿಸಿ ಸುಖಿಸುವ ಆನಂದ ಬೇರಿಲ್ಲ

ನನ್ನನ್ನೇ ನಾನಿನ್ನೂ ಅರಿತಿಲ್ಲ ಇದು ನಾನರಿತಿರೋ ಸತ್ಯ
ಸತ್ಯವನು ಬದಿಗಿಟ್ಟು ಸದಾ ಪ್ರದರ್ಶಿಸುತಿರಬೇಕು ಮಿಥ್ಯ

ನಿನಗೂ ಚೆನ್ನಾಗಿ ಗೊತ್ತು ನನ್ನ ಮನದ ಈ ಬಲಹೀನತೆ
ನಾ ಅದಕೇ ಕೋರುವೆ ಸದಾ ನೀನಿರಬೇಕು ನನ್ನ ಜೊತೆ
*************************************


ಆತ ನಗುತಿಹನಲ್ಲಿ!!!

06 ಏಪ್ರಿಲ್ 09
ಸಖೀ,
ಕಣ್ಣು ಕಂಡು ಮೆಚ್ಚಿದ್ದನ್ನೆಲ್ಲ
ಮನ ಮೆಚ್ಚುವುದು ನಿಜ,
ಅವುಗಳ ಪಡೆಯಬೇಕೆಂಬ
ಆಸೆ ಆಗುವುದೂ ಸಹಜ;

ನಮ್ಮ ಹಕ್ಕು ಇದ್ದಲ್ಲೇ ನಾವು
ಕೈಗಳ ಚಾಚಿದರೆ ಒಳಿತು,
ನಮ್ಮದಲ್ಲದ್ದಕ್ಕೆ ಶರಣು
ಆಗಬಾರದೆಂದಿಗೂ ಸೋತು;

ಮನದೊಳಗೆ ನೂರೆಂಟು
ಬಯಕೆಗಳು ಇರಲಂತೆ,
ಬಯಕೆಗಳೆಂದಿಗೂ ನಮ್ಮ
ಹಿಡಿತದೊಳು ಇರಲಂತೆ;

ಎಲ್ಲಾದರೂ ಅವು ಕೊಂಚ
ಹಿಡಿತ ಮೀರಿದರೆ ಸಾಕು,
ಹಾಕಿ ಬಿಡುವನು ನೋಡು
ಆತ ಒಮ್ಮೆಗೇ ಬ್ರೇಕು;

`ನಾನು-ನಾನೇ’ ಎಂಬ
ನಮ್ಮ ಹಾರಾಟ ಇಲ್ಲಿ,
ಸೂತ್ರವನು ಹಿಡಿದಾತ
ಮೇಲೆ ನಗುತಿಹನಲ್ಲಿ !
*-*-*-*-*-*-*-*


ನಾನು ಆಸ್ತಿಕನೋ…ನಾಸ್ತಿಕನೋ..?!

04 ಏಪ್ರಿಲ್ 09

ನಾನು ಇದೆ ಎಂದ ಕೂಡಲೇ

ಇಲ್ಲದ್ದು ಇದೆ ಎಂದಾಗುವುದಿಲ್ಲ

ನಾನು ಇಲ್ಲ ಎಂದ ಕೂಡಲೇ

ಇದ್ದದ್ದು ಇಲ್ಲ ಎಂದಾಗುವುದಿಲ್ಲ

 

ಸತ್ಯವನ್ನು ನೂರು ಮಂದಿ ನೂರು ಬಾರಿ

ಸುಳ್ಳೆಂದರೂ ಅದು ಅಸತ್ಯವಾಗುವುದಿಲ್ಲ

ಅಸತ್ಯವನ್ನು ನೂರು ಮಂದಿ ನೂರು ಬಾರಿ

ಸತ್ಯವೆಂದರೂ ಅದು ಸತ್ಯವಾಗುವುದೇ ಇಲ್ಲ

 

ನನ್ನ ಕಣ್ಣೆದುರು ಇರುವವರಿಗೆ ನನ್ನ ಕಣ್ಣೆದುರು

ಇಲ್ಲದವರ ಹೆಸರಲ್ಲಿ ನೋವುಂಟು ಮಾಡಲಾರೆ

ಯಾವುದೇ ಸೀಮೆ ಇಲ್ಲದೇ ಮನುಷ್ಯತ್ವ ಇರುವ

ಮನುಜರರೆಲ್ಲರೂ ನನ್ನ ದೃಷ್ಟಿಯಲ್ಲಿ ನಮ್ಮವರೇ

ಮನುಷ್ಯತ್ವವೇ ಇಲ್ಲದವರು ನಮ್ಮವರಾದರೂ

ನನ್ನ ಪಾಲಿಗಂತೂ ಅಲ್ಲ ಅವರು ಮನುಜರೇ

 

ನಾನು ಆಸ್ತಿಕನೋ ನಾಸ್ತಿಕನೋ ಎನ್ನುವುದು

ಇದು ನಿಜದಿ ನನ್ನ ತೀರಾ ವೈಯಕ್ತಿಕ ವಿಷಯ

ನನ್ನ ದೃಷ್ಟಿಯಲ್ಲಿ ಪ್ರೀತಿ ಮತ್ತು ಭಕ್ತಿ ಎರಡೂ

ಸದಾ ಆಗಿರಬೇಕು ಜಗದಿ ಖಾಸಗಿ ವಿಷಯ.

 


ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದಿದೆ!!!

04 ಏಪ್ರಿಲ್ 09

ಇದೆ ಎನ್ನುವಷ್ಟು ಹೊತ್ತು ಅದು ನಿಜಕೂ ಇದೆ
ಇಲ್ಲ ಎನ್ನುವಿರಾ ಅಲ್ಲಿ ಇಲ್ಲ ಎನ್ನುವುದು ಇದೆ

ಏನೂ ಇಲ್ಲ ಎಂಬಲ್ಲಿ ಇಲ್ಲ ಎನ್ನುವುದು ಇದೆ
ಹಾಗಾದರೆ ಇದೆ ಎಂಬುದು ಎಲ್ಲಾ ಕಡೆ ಇದೆ

ಇದೆ ಎನ್ನುವುದು ಇದು ಸಾರ್ವಕಾಲಿಕ ಸತ್ಯ
ಇಲ್ಲವೆನ್ನುದು ಏನೇ ಅಂದರೂ ಅದು ಮಿಥ್ಯ

ಇದೆ-ಇಲ್ಲ ಎಂದು ಸದಾ ನಡೆಯುತಿದೆ ವಾದ
ಇಲ್ಲವಾಗಿದ್ದಿದ್ದರೆ ಎಲ್ಲಿ ಇರುತ್ತಿತ್ತು ಈ ಸಂವಾದ


ಅಮ್ಮ ನಾನಿಂದು ಆದೆ ಧನ್ಯ!!!

03 ಏಪ್ರಿಲ್ 09

amma01

ಅಮ್ಮ ನಾನು ನಿಮ್ಮ ಮಗನಾದುದಕೆ
ನಿಮಗೆ ಅನಿಸಿರಬಹುದೇನೋ ಅನ್ಯ
ಆದರೆ ನಾನು ನಿಮ್ಮ ಮಗನಾದುದಕೆ
ನಿಜವಾಗಿಯೂ ನಾನಿಂದು ಆದೆ ಧನ್ಯ

ನಿಮ್ಮ ನೆನಪಾದಾಗ ನಾ ನಿನ್ನೆ ಬರೆದ
ನಾಲ್ಕು ಸಾಲುಗಳು ಕವನವಾಯಿತಮ್ಮ
ಆ ಕವನ ಓದಿದ ಓದುಗರ ಕಣ್ಣುಗಳೂ
ಕೇಳಿ ಅದೋಕೋ ತೇವವಾಯಿತಮ್ಮ

ನನ್ನಿಂದಾಗಿ ಅಲ್ಲ ನಿಮ್ಮ ನನ್ನಿಂದಾಗಿ
ಅವರಿಗವರ ಮಾತಾಪಿತರ ನೆನಪಾಯ್ತು
ನೆನಪಿಸಿದ ನನಗಾಗಿ ತಮ್ಮ ತಲೆಯಲ್ಲೇ
ಇಲ್ಲದ ಟೊಪ್ಪಿಯನವರೆತ್ತುವಂತಾಯ್ತು

ಈ ಎಲ್ಲಾ ಹೊಗಳಿಕೆಗಳು ಮೆಚ್ಚುಗೆಗಳು
ನನಗಾಗಿದ್ದರೂ ನೋಡಿ ಅದು ನಿಮ್ಮದೇ
ನನ್ನದೇನುಂಟು ಈ ಜಗದಿ ನನ್ನದು
ಏನಿದ್ದರೂ ಇರಬಹುದೇ ನಿಮ್ಮದಲ್ಲದೇ
**********************


ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು!!!

02 ಏಪ್ರಿಲ್ 09

amma07

ಅದೇಕೋ ಈ ಬಾರಿ ನಮ್ಮಮ್ಮ
ಮಗುವಿನಂತೆ ಅತ್ತೇ ಬಿಟ್ಟಿದ್ದರು
ಹೊರಟು ನಿಂತವನ ಮೈದಡವಿ
ಕೈ ಹಿಡಿದು ತನ್ನತ್ತಲೇ ಸೆಳೆದರು

ಕಳೆದ ಇಪ್ಪತ್ತೊಂಭತ್ತು ವರುಷಗಳಲ್ಲಿ
ಹೀಗಾಗಿದ್ದು ಇದು ಎರಡನೇ ಬಾರಿ
ಅಂದು ಅಪ್ಪಯ್ಯನವರ ಕ್ರಿಯೆ ಮುಗಿಸಿ
ಬರುವಾಗ ಮತ್ತೆ ಈಗ ಈ ಬಾರಿ

ಮೊನ್ನೆ ತನ್ನ ತಂಗಿಯನು ಕಳೆದುಕೊಂಡು
ಮನ ನೊಂದು ಬಡವಾಗಿದ್ದಿರಬಹುದು
ತನ್ನ ಮಕ್ಕಳೆಲ್ಲಾ ತನ್ನ ಜೊತೆಯಲೇ
ಇರಲೆಂಬಿಚ್ಛೆ ಮನದೊಳಗಿದ್ದಿರಬಹುದು

ಉತ್ತರ ಭಾರತದಲಿದ್ದಷ್ಟೂ ದಿನ ನನ್ನದು
ವರುಷಕ್ಕೊಂದೆ ಸಾರಿ ಊರ ಭೇಟಿ
ಬೆಂಗಳೂರಿಗೆ ಬಂದ ಮೇಲಷ್ಟೆ ಜಾಸ್ತಿ
ಆಯ್ತು ಇಳಿಯುವುದು ಈ ಶಿರಾಡಿ ಘಾಟಿ

ಆದರೂ ಪ್ರತೀ ಸಾರಿ ಹೊರಡುವಾಗಲೂ
ಇನ್ಯಾವಾಗಲೋ ಏನೋ ಎನ್ನುವ ಭಾವ
ನಾ ನೊಂದರೆ ಅಮ್ಮ ಅತ್ತು ಬಿಡುವರೆಂದು
ದುಃಖವನು ಮರೆ ಮಾಚುವ ಹಾವ ಭಾವ

ಹೆತ್ತ ಕರುಳಿನ ಕೂಗು ಇನ್ನೂ ನನ್ನ ಈ
ಕಿವಿಗಳಲಿ ಮಾರ್ದನಿಸುತಿರುವಂತಿದೆ
ಸಾಕು ಮಗೂ ನಿನ್ನ ನೌಕರಿಯ ಹಂಗು
ಬಾ ಊರತ್ತ ಎಂದೆನ್ನ ಕರೆಯುವಂತಿದೆ

ಮೀಸೆ ಹುಟ್ಟುವ ಮೊದಲೇ ವಾಯುಸೇನೆ
ಸೇರಿ ಸೈನಿಕನಾಗಿ ಹೊರಟು ಬಿಟ್ಟೆ ನೀನು
ಕೊನೆಗಾಲದಲ್ಲಾದರೂ ಜೊತೆಗಿರು ಎಂದರೆ
ನೌಕರಿಯ ಸಬೂಬು ನೀಡುತಿರುವೆಯೇನು

ಬಂದು ಬಿಡು ನಮ್ಮೂರಿಗೆ ನೀ ಪರವೂರ
ಆ ನೌಕರಿಯ ಎಲ್ಲ ಹಂಗನ್ನೂ ತೊರೆದು
ಎಂದು ನಮ್ಮಮ್ಮ ಊರ ಮನೆಯಲಿ
ಇಂದೂ ಕೂತಂತಿದೆ ನನಗಾಗಿ ಕಾದು

********************