ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು?!

03 ಮಾರ್ಚ್ 09
ಏನ ಹೇಳಲಿ ನಾ ಪಾಕಿಸ್ತಾನದ ಇಂದಿನ ಅವಸ್ಥೆಯ ಕಂಡು
ಬೆಳಗಾದರೆ ಕೊಲ್ಲುತ್ತಾರಲ್ಲಿ ಅಮಾಯಕರ ಹೊಡೆದು ಗುಂಡು
 
ಪ್ರಜೆ ಯಾರು ಯಾರ ಸರ್ಕಾರ ಎಂಬುದರ ಅರಿವಾಗುವುದಿಲ್ಲ
ಸೈನಿಕ-ಉಗ್ರವಾದಿಗಳ ನಡುವೆ ಅಂತರವೇ ಕಾಣ ಬರುವುದಿಲ್ಲ
 
ಅಲ್ಲಿನ ಸರ್ಕಾರ ಉಗ್ರವಾದಿಗಳ ಕೈಗೊಂಬೆ ಆಗಿ ಹೋಗಿದೆ
ತಮ್ಮ ಸರ್ಕಾರವನು ಉಳಿಸಿಕೊಳ್ಳುವುದೇ ಸಮಸ್ಯೆಯಾಗಿದೆ
 
ಮುಂಜಾವಿನಲಿ ಸೈನಿಕನಾಗಿದ್ದವನು ಅಪರಾಹ್ನದ ಮೇಲೆ
ಉಗ್ರವಾದಿಯಾಗಿ ಉರುಳಿಸುತ್ತಿರುವನೇನೋ ಜನರ ತಲೆ
 
ಮಂತ್ರಿ ಇಂದು ನುಡಿದ ಮಾತ ಹಳಿಯುವ ಅಧ್ಯಕ್ಷ ನಾಳೆ
ಅಧ್ಯಕ್ಷರ ಮೇಲೆ ಪ್ರತಿ ಪಕ್ಷದವರಿಂದ ಬೈಗುಳದ ಮಾಲೆ
 
ದಿನಕ್ಕೊಂದು ಸುಳ್ಳನಾಡುವ ಆಡಳಿತಗಾರರು ಈಗ ಅಲ್ಲಿ
ಎಂದು ನಿಜವ ನುಡಿಯುವರೋ ಎಂಬ ನಿರೀಕ್ಷೆ ನಮಗಿಲ್ಲಿ
 
ಚುನಾವಣೆಯ ತನಕ ಮುಂದೂಡಬೇಕಾದ ಪ್ರಮೇಯ ಇಲ್ಲಿತ್ತು
ನಮ್ಮವರಿಗೂ ನೋಡಿ ಪಾಕಿಸ್ತಾನದಿಂದ ಹೇಗೆ ಸಹಾಯ ಸಿಕ್ತು
 
ಹೊಸ ಸರ್ಕಾರ ಬಂದ ಮೇಲೆ ನಮ್ಮವರು ಹಳೆಯದನು ಮರೆತು
ಮತ್ತೆ ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು 

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

02 ಮಾರ್ಚ್ 09

ದೇವರು ಇದ್ದಾನೆ ಎನ್ನುವುದು ನಿಜಕೂ ಒಂದು ಭ್ರಾಂತು

ದೇವರು ಇಲ್ಲ ಎನ್ನುವುದದು ಇನ್ನೊಂದು ತೆರನ ಭ್ರಾಂತು

  

ದೇವರಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲಿ ಗೌಣ

ಆದರೆ ದೇವರ ಹೆಸರಲ್ಲಿ ಸಂಪಾದಿಸುತಿಹರಲ್ಲ ಜನರು ಹಣ

 

ದೇವರ ಹೆಸರಲ್ಲಿ ನೂರೆಂಟು ಅನಾಚಾರ ನಡೆಸುವವರೆಲ್ಲ

ಆತ್ಮಸಾಕ್ಷಿಯಾಗಿ ಆ ದುರಾತ್ಮಗಳಿಗೆ ದೇವರೆಂಬುದೇ ಇಲ್ಲ

 

ಯಾವ ಪೂಜೆ ಪುರಸ್ಕಾರಗಳ ಗೋಜಿಗೂ ಹೋಗದೆ ಇದ್ದು

ನಂಬಿಕೊಂಡಿರಬಹುದು ತನ್ನ ಕರ್ತವ್ಯಗಳನೇ ದೇವರೆಂದು

 

ಪ್ರೀತಿಯಿರುವ ಮನವದು ಖಂಡಿತ ಆಗುವುದು ಶ್ರೀನಿವಾಸ

ಪ್ರೀತಿಯಿಲ್ಲದಿರೆ ಅಲ್ಲಿ ಕ್ಷಣಕಾಲ ದೇವರು ಮಾಡಲಾರ ವಾಸ

 

ಕಲ್ಲನ್ನು ದೇವರಾಗಿಸಿ ಪೂಜಿಸುವರು ಈಗ ಊರೆಲ್ಲಾ ಮಂದಿ

ತಮ್ಮ ಮಾತಾಪಿತರ ಮಾಡಿಹರು ತಮ್ಮ ಮನೆಗಳಲಿ ಬಂಧಿ

 

ಕಲ್ಲ ಕಲ್ಲೆಂದೆಣಿಸೆ ಅದುವೇ ಕಲ್ಲಿಗೆ ಸಲ್ಲುವ ನಿಜವಾದ ಪೂಜೆ

ಮನುಜನ ಮನುಜನೆಂದೆಣಿಸುವುದೇ ಆ ಮನುಜನಿಗೆ ಪೂಜೆ

 

ಶಿಲ್ಪ, ಮೂರ್ತಿ, ಚಿತ್ರಗಳೆಲ್ಲಾ ಅಪ್ರಬುದ್ಧ ಮಕ್ಕಳಿಗಷ್ಟೇ ಬೇಕು

ಪ್ರಬುದ್ಧ ತಾನು ಕಣ್ಮುಚ್ಚಿ ಪ್ರಾರ್ಥಿಸುತಿರಲು ಚಿತ್ರಗಳೇಕೆ ಬೇಕು

 

ಒಳಗಿರುವ ದೇವರ ಜನ ಹುಡುಕಾಡುವರು ಅಲೆ ಅಲೆದು ಸಂತೆ

ಮೂಗ ಮೇಲಿರುವ ಕನ್ನಡಕವನು ಮನೆಯಲೆಲ್ಲಾ ಹುಡುಕುವಂತೆ

 

ದೇವರಿದ್ದಾನೆಂದು ನುಡಿದು ಅನಾಚಾರಿಯಾದವಗೆ ದೇವರೆಲ್ಲಿ

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ
*****************************************