ಜೀವನದ ಪಯಣದಲಿ ಮತ್ತೊಂದು ವರುಷ!!!

ಜೀವನದ ಪಯಣದಲಿ ಈಗ ಮತ್ತೊಂದು ವರುಷ
ಕಳೆದು ಹೋದುದಕ್ಕಾಗಿ ನಾನು ಪಡಬೇಕೆ ಹರುಷ

ಹುಟ್ಟುವಾಗಿರಲಿಲ್ಲ ಅನ್ಯರಿಗಿಂತ ಭಿನ್ನವಾಗಿ ನಾನು
ಅಳುತ್ತಾ ಹುಟ್ಟಿರಬಹುದು ಎಲ್ಲರಂತೆ ಅಂದು ನಾನು

ನಕ್ಕು ನಲಿದಿರಬಹುದು ಅಲ್ಲಿ ನನ್ನನುಳಿದವರೆಲ್ಲರೂ
ಹುಟ್ಟಿದ ಮಗುವಿನಳುವನ್ನು ಯಾರೂ ಅಲ್ಲಿ ಕೇಳರು

ಬೆಳೆದಂತೆಲ್ಲಾ ನಾನ್ಯಾಕೋ ಅನ್ಯರಿಗಿಂತ ಭಿನ್ನನಾದೆ
ಸಾಕಷ್ಟು ನಕ್ಕು ನಲಿದೆ  ನಡು ನಡುವೆ ನಾ ಖಿನ್ನನಾದೆ

ವಯಸ್ಸಿಗೆ ಮೀರಿದ ಚುರುಕುತನ ನನ್ನಲ್ಲಿತ್ತು ದೈವದತ್ತ
ಹೊಗಳಿಸಿಕೊಂಡುದಕೂ ಜಾಸ್ತಿ ನಾ ಬೈಸಿಕೊಂಡೆನತ್ತ

ಹೊಗಳಿಕೆ ತೆಗಳಿಕೆಗಳಿಗೆ ಯಾವಾಗಲೂ ಇದೆ ಸಮಚಿತ್ತ
ನನ್ನ ಗಮನವಿತ್ತು ಸದಾ ನನ್ನ ಆಂತರಿಕ ಬೆಳವಣಿಗೆಯತ್ತ

ಕಂಡು ಕಂಡದ್ದನೆಲ್ಲಾ ವಿಮರ್ಶಿಸಿ ಅರಿವ ಭಿನ್ನವಾದ ಬುದ್ಧಿ
ಇದೇ ನನ್ನ ಕೆಟ್ಟ ಗುಣ ಅಂತಾಳೆ ಸದಾ ನನ್ನ ಸಖೀ ಪೆದ್ದಿ

ಗಳಿಸಿದ್ದು ಬಹಳಿಲ್ಲ ಸಹೃದಯರ ಸ್ನೇಹವೇ ನನ್ನ ಆಸ್ತಿ
ನಿಸ್ವಾರ್ಥ ಸ್ನೇಹಕ್ಕೆಂದೂ ನಾ ಕೊಡುವೆ ಬೆಲೆ ಜಾಸ್ತಿ

ಚಿಕ್ಕಂದಿನಲಿ ಅಪ್ಪಯ್ಯನವರಿಗೆ ತಕ್ಕ ಮಗನಾಗುವಾಸೆ
ಇಂದು ಇರುವ ಓರ್ವ ಮಗಳ ಭವ್ಯ ಭವಿಶ್ಯದ ಆಸೆ

ಮಗಳ ಭವ್ಯ ಭವಿಷ್ಯವೊಂದೇ ಈಗ ಈ ಮನದ ಕನಸು
ನನ್ನ ಆರೋಗ್ಯ ಇರಲೆಂದೂ ನನಸಾಗುವರೆಗೆ ಆ ಕನಸು

ನನ್ನ ಆತ್ಮೀಯರ ಶುಭ ಹರಕೆಗಳೇ ಸದಾ ನನಗೆ ಶ್ರೀರಕ್ಷೆ
ಆಗಿರಲು ನಾನು ಎದುರಿಸಬಲ್ಲೆ ಧೈರ್ಯದಿ ವಿಧಿಯ ಪರೀಕ್ಷೆ

2 Responses to “ಜೀವನದ ಪಯಣದಲಿ ಮತ್ತೊಂದು ವರುಷ!!!”

  1. Athradi Says:

    ಧನ್ಯವಾದಗಳು ವಿಜಯರಾಜ್.

  2. ವಿಜಯರಾಜ್ ಕನ್ನಂತ Says:

    noorkaala baaLi aanandinda…

Leave a Reply